ಹುಬ್ಬಳ್ಳಿ: ಬರಗಾಲ ಘೋಷಣೆಗೆ ರಾಜ್ಯದ ಸರ್ಕಾರಕ್ಕೆ ರೈತ ಸಂಘ ಆಗ್ರಹ
ಧಾರವಾಡ, ಆಗಸ್ಟ್, 20: ರಾಜ್ಯದಲ್ಲಿ ಮಳೆ ಕೊರತೆಯಿಂದ ರೈತ ಸಮುದಾಯ ಸಂಕಷ್ಟದಲ್ಲಿದ್ದು, ರೈತರ ನೆರವಿಗೆ ಸರ್ಕಾರ ಮುಂದಾಗಬೇಕಿದೆ. ಈ ಕೂಡಲೇ ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡುವ ಮೂಲಕ ಪರಿಹಾರ ನೀಡುವ ಕೆಲಸವನ್ನು ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ ಹುಬ್ಬಳ್ಳಿಯಲ್ಲಿ ಹೇಳಿದರು.
ನಗರದಲ್ಲಿ ಭಾನುವಾರ (ಆಗಸ್ಟ್ 20) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಬರ ಪರಿಸ್ಥಿತಿ ಬಗ್ಗೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮಾಹಿತಿ ಕೊಟ್ಟ ಬಳಿಕ ಕೇಂದ್ರ ತಂಡವು ಆಗಮಿಸಿ, ಬರ ವೀಕ್ಷಣೆ ಮಾಡುತ್ತದೆ. ಬಳಿಕ ಈ ತಂಡವು ಕೇಂದ್ರಕ್ಕೆ ವರದಿ ಸಲ್ಲಿಸಿದ ಮೇಲೆ ಬರಗಾಲದ ಪರಿಹಾರ ಸಿಗುತ್ತದೆ. ಈ ಪ್ರಕ್ರಿಯೆ ಎಲ್ಲವೂ ಮುಗಿದು ಪರಿಹಾರ ಬರುವಷ್ಟರಲ್ಲಿ ರೈತನ ಜೀವವೇ ಹೋಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಇಂತಹ ಸಂಕಷ್ಟದಲ್ಲಿ ನೆರವು ನೀಡುವತ್ತ ಸಹಕಾರಿ ಆಗಲು ಶಾಶ್ವತ ಠೇವಣಿ ಇಡುವಂತಹ ಕೆಲಸ ಸರ್ಕಾರದಿಂದ ಆಗಬೇಕಿದೆ. ಇದರಿಂದ ಬೇಗ ಪರಿಹಾರ ದೊರೆಯಲು ಸಹಕಾರಿ ಆಗಲಿದೆ. ಇನ್ನು ರಾಜ್ಯ ಸರ್ಕಾರವು ರೈತರ ಸಂಕಷ್ಟಕ್ಕೆ ಧಾವಿಸಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಬರ ಪೀಡಿತ ಪ್ರದೇಶಗಳನ್ನು ಘೋಷಣೆ ಮಾಡುವುದರ ಜೊತೆಗೆ ಪರಿಹಾರ ಬೇಗ ಸಿಗುವಂತೆ ಮಾಡಬೇಕು ಎಂದರು.
ಇನ್ನು ಈ ಬಾರಿ ಮುಂಗಾರು ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಬೇಕು. ಜೊತೆಗೆ ಸಾಲ ಮನ್ನಾ ಮಾಡುವ ದಿಟ್ಟ ನಿರ್ಧಾರವನ್ನು ಸರ್ಕಾರ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಮಳೆ-ಬೆಳೆಯಿಲ್ಲದೇ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದು, ರೈತರ ಸಂಕಷ್ಟ ಅರಿಯದ ಬ್ಯಾಂಕ್‌ಗಳು ಸಾಲ ವಸೂಲಾತಿಯಲ್ಲಿ ತೊಡಗಿವೆ. ಹೀಗಾಗಿ ಸಾಲ ಮನ್ನಾ ಮಾಡಬೇಕು. ಅದಕ್ಕೂ ಮುನ್ನ ಬರಪೀಡಿತ ಪ್ರದೇಶದ ರೈತರಿಂದ ಮಾಡುತ್ತಿರುವ ಸಾಲ ವಸೂಲಾತಿಗೆ ತಡೆ ನೀಡಬೇಕು. ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡುವ ಮೂಲಕ ರೈತರಿಗೆ ಪರಿಹಾರ ಒದಗಿಸುವ ಕೆಲಸ ಆಗಬೇಕು ಎಂದರು.
ರಾಜ್ಯದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಮನದಟ್ಟು ಮಾಡಲು ರೈತರ ನಿಯೋಗವು ಆಗಸ್ಟ್ 25ರಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದೆ. ಈ ನಿಯೋಗದಲ್ಲಿ ನಮ್ಮ ಸಂಘದ ಪದಾಧಿಕಾರಿಗಳು ಸೇರಿದಂತೆ ರಾಷ್ಟ್ರಮಟ್ಟದ ರೈತ ಮುಖಂಡರೂ ಪಾಲ್ಗೊಳ್ಳಲಿದ್ದು, ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಿದ್ದಾರೆ. ಜೊತೆಗೆ ರೈತರ ಜೀವನ ಸುಧಾರಣೆಗೆ ಬೇಕಿರುವ ಬೇಡಿಕೆಗಳ ಬಗ್ಗೆ ಸರಕಾರಕ್ಕೆ ಸಲಹೆ ನೀಡಲಾಗುವುದು ಎಂದರು.
ಜಿಲ್ಲಾ ಕಾರ್ಯಕರ್ತರ ಕಾರ್ಯಾಗಾರ
ಇನ್ನು ಈ ಪತ್ರಿಕಾಗೋಷ್ಠಿಯ ಬಳಿಕ ಕರ್ನಾಟಕ ರಾಜ್ಯ ರೈತ ಸಂಘದಿಂದ ಧಾರವಾಡ ಜಿಲ್ಲೆಯಲ್ಲಿ ಸಂಘಟನೆಯನ್ನು ಪುನಶ್ಚೇತನಗೊಳಿಸುವ ದೃಷ್ಠಿಯಿಂದ ಚರ್ಚಿಸಲು ಜಿಲ್ಲಾ ಕಾರ್ಯಕರ್ತರ ಸಭೆ ಹಾಗೂ ಕಾರ್ಯಾಗಾರವು ನಗರದ ಸಮಾಜ ಪರಿವರ್ತನ ಸಮುದಾಯ ಭವನದಲ್ಲಿ ಜರುಗಿತು. ಈ ಕಾರ್ಯಾಗಾರಕ್ಕೆ ಸಂಘದ ಗೌರವಾಧ್ಯಕ್ಷ ಚಾಮರಾಸ ಮಾಲೀಪಾಟೀಲ ಚಾಲನೆ ನೀಡಿದರೆ, ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು, ರೈತ ಚಳುವಳಿಯ ಹುಟ್ಟು, ಬೆಳವಣಿಗೆ ಮತ್ತು ಕಾರ್ಯಕರ್ತರಿಗೆ ಇರಬೇಕಾದ ಸಾಂಘಿಕ ಶಿಸ್ತು, ಬದ್ದತೆ ಕುರಿತು ವಿಷಯ ಮಂಡಿಸಿದರು.
ಪ್ರಧಾನ ಕಾರ್ಯದರ್ಶಿ ರವಿಕಿರಣ ಪುಣಚ ಅವರು ಸಂಘದ ಸಂವಿಧಾನದ ವಿಚಾರ ಕುರಿತು ಮಾತನಾಡಿದರು. ಇದಾದ ಬಳಿಕ ನಡೆದ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲೆಯಲ್ಲಿ ಸಂಘಟನೆಯನ್ನು ಪುನಶ್ಚೇತನಗೊಳಿಸುವ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು. ಜಿಲ್ಲೆಯ ಸಮಸ್ಯೆಗಳ ವಿರುದ್ದ ಹೋರಾಟ ರೂಪಿಸುವ ಬಗ್ಗೆ ಚರ್ಚಿಸಿದ್ದಲ್ಲದೇ, ಜಿಲ್ಲಾ ಸಮಿತಿ ಪುನರ್‌ರಚನೆ ಮತ್ತು ಯುವ ಘಟಕ, ಮಹಿಳಾ ಘಟಕವನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ನಾಗಪ್ಪ ಹುಂಡಿ, ಈರಣ್ಣ ಬಳಿಗೇರ ಸೇರಿದಂತೆ ಜಿಲ್ಲೆ, ತಾಲೂಕಿನ ವಿವಿಧ ರೈತ ಮುಖಂಡರು ಪಾಲ್ಗೊಂಡಿದ್ದರು.












Click it and Unblock the Notifications