ಪ್ರಕಾಶ್ ಅಮ್ಮಣ್ಣಾಯರ ಬಜೆಟ್ ಬಜೆಟ್ ಭವಿಷ್ಯ ನಿಜವಾಯಿತೆ? ನೀವೇ ಪರಿಶೀಲಿಸಿ
ಉಡುಪಿಯ ಕಾಪುವಿನ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ಇಂದಿನ ಬಜೆಟ್ ನ ಬಗ್ಗೆ ನುಡಿದಿದ್ದ ಭವಿಷ್ಯದ ಕುರಿತು ಒನ್ಇಂಡಿಯಾದಲ್ಲಿ ಲೇಖನ ಪ್ರಕಟಿಸಲಾಗಿತ್ತು. ಒಂದು ದಿನ ಮೊದಲು ಅಂದರೆ ಜನವರಿ ಮೂವತ್ತೊಂದರಂದೇ ಪ್ರಕಟವಾಗಿತ್ತು. ಅದನ್ನು ನೀವು ಗಮನಿಸಿದರೋ ಇಲ್ಲವೋ!
ಅವರು ಏನು ತಿಳಿಸಿದ್ದರು ಎಂಬುದನ್ನು ಕೇಂದ್ರ ಬಜೆಟ್ ಮಂಡನೆಯಾದ ಮೇಲೆ ಮತ್ತೊಮ್ಮೆ ಗಮನಿಸಿ. ಅವರ ಭವಿಷ್ಯ ಎಷ್ಟರ ಮಟ್ಟಿಗೆ ನಿಜವಾಗಿದೆ ಎಂಬುದನ್ನು ಪರೀಕ್ಷಿಸಬಹುದು. ಕೃಷಿ ಕ್ಷೇತ್ರಕ್ಕೆ ಪೂರಕವಾದ ವಾತಾವರಣವನ್ನು ಕೇಂದ್ರ ಸರಕಾರ ಸೃಷ್ಟಿ ಮಾಡುತ್ತದೆ ಎಂಬುದು ಅವರ ಮುಖ್ಯ ಭವಿಷ್ಯವಾಣಿ ಆಗಿತ್ತು.
ಆ ನಂತರ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ದೊಡ್ಡ ಯೋಜನೆಗಳು ಘೋಷಣೆ ಆಗುತ್ತವೆ. ಈ ಬಜೆಟ್ ಬರೀ ಯೋಜನೆಗಳನ್ನು ಘೋಷಿಸುವಂಥದ್ದಲ್ಲ, ದುಡಿಮೆಗೆ ಪೂರಕವಾದ ಬಜೆಟ್ ಆಗಿರುತ್ತದೆ ಎಂಬುದನ್ನು ಕೂಡ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದರು. ರಫ್ತಿಗೆ ಪ್ರೋತ್ಸಾಹ ಸಿಗುವ ಮಾತನಾಡಿದ್ದರು. ಅವರು ಹೇಳಿದ್ದೇನು, ಆಗಿದ್ದೇನು ಎಂದು ತಿಳಿಯುವುದಕ್ಕೆ ಮುಂದೆ ಓದಿ.

ಕೃಷಿ ವಲಯಕ್ಕೆ ಮನ್ನಣೆ
ಅಮ್ಮಣ್ಣಾಯ ಹೇಳಿದ್ದು: ಕೃಷಿ ಉತ್ಪನ್ನಗಳ ಮಾರುಕಟ್ಟೆ ಬಗ್ಗೆ ಪ್ರಮುಖ ನಿರ್ಧಾರ ಆಗುತ್ತದೆ. ಈ ವರೆಗೆ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು ಏನಿದ್ದವು ಆ ಪೈಕಿ ಬಹುತೇಕ ಪರಿಹಾರ ಕಾಣುತ್ತವೆ. ಇದರರ್ಥ ಕೃಷಿಕರಿಗೆ ಪುಕ್ಕಟೆ ಕೊಡುಗೆಗಳು ಸಿಗುತ್ತವೆ, ಯೋಜನೆಗಳು ಬರುತ್ತವೆ ಅಂತಲ್ಲ. ಆದರೆ ಕೃಷಿ ಚಟುವಟಿಕೆಯನ್ನು ಪ್ರೋತ್ಸಾಹಿಸುವಂಥ ಹಾಗೂ ಕೃಷಿಗೆ ನೆರವಾಗುವಂಥ ಯೋಜನೆಗಳನ್ನು ರೂಪಿಸಲಾಗುತ್ತದೆ.
ಬಜೆಟ್ ನಲ್ಲಿ ಆಗಿದ್ದು: ಬಜೆಟ್ಟಿನಲ್ಲಿ ಕೃಷಿ ಉದ್ಯಮ ಮತ್ತು ಗ್ರಾಮೀಣ ಜನತೆಯನ್ನು ಗಮನದಲ್ಲಿಟ್ಟುಕೊಂಡು ಅರುಣ್ ಜೇಟ್ಲಿಯವರು ಹಲವಾರು ಯೋಜನೆಗಳನ್ನು ಹರಿಯಬಿಟ್ಟಿದ್ದಾರೆ. ಕೃಷಿಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಡೆಗಣಿಸುತ್ತಿದೆ ಎಂದು ವಿರೋಧಿಗಳಿಂದ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು.

ನೀರಿನ ಯೋಜನೆಗಳು
ಅಮ್ಮಣ್ಣಾಯ ಹೇಳಿದ್ದು: ಇನ್ನು ನೀರಿಗೆ ಸಂಬಂಧಿಸಿದಂತೆ ಪ್ರಮುಖ ತೀರ್ಮಾನ ಹೊರಬರುತ್ತದೆ. ಕಾಲುವೆ-ಕೆರೆ ಕಟ್ಟೆ ನಿರ್ಮಾಣ, ಈಗಿರುವ ನದಿ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ಕೃಷಿಗೆ ಪೂರಕವಾಗಿ ನೀರನ್ನು ಒದಗಿಸುವ ಯೋಜನೆಗಳಿಗೆ ಪ್ರಮುಖ ಆದ್ಯತೆ ದೊರೆಯುವ ಸಾಧ್ಯತೆ ಇದೆ.
ಬಜೆಟ್ ನಲ್ಲಿ ಆಗಿದ್ದು: ಸುಮಾರು 500 ನಗರಗಳಲ್ಲಿನ ಮನೆಗಳಿಗೆ ನೀರು ಸೌಲಭ್ಯ ವಿತರಣೆಗಾಗಿ ಅಮೃತ್ ಯೋಜನೆ ಪ್ರಾರಂಭ. ಕೃಷಿಗೆ ಅಗತ್ಯವಾದ ನೀರನ್ನು ಒದಗಿಸಲು ನೀರಾವರಿ ಯೋಜನೆಗಾಗಿ ಅಪಾರ ಪ್ರಮಾಣದಲ್ಲಿ ಹಣ ಮೀಸಲಿಡಲಾಗಿದೆ. ಇನ್ನು ಗ್ರಾಮೀಣ ವಸತಿ ಯೋಜನೆಗೆ ಕೂಡ ದೊಡ್ಡ ಹೆಚ್ಚಿನ ಹಣವನ್ನು ಮೀಸಲಿಡಲಾಗಿದೆ. ಒಟ್ಟಾರೆ ಗ್ರಾಮೀಣ ಭಾರತದಲ್ಲಿ ಉದ್ಯೋಗ ಸೃಷ್ಟಿಯೂ ಸೇರಿದಂತೆ ಕೃಷಿ ಚಟುವಟಿಕೆಯನ್ನು ಪ್ರೋತ್ಸಾಹಿಸುವಂಥ ಹಲವು ಯೋಜನೆ ಘೋಷಣೆ ಮಾಡಲಾಗಿದೆ.

ಭವಿಷ್ಯ ನುಡಿದಿದ್ದು ಯಾವ ಆಧಾರದಲ್ಲಿ?
ಕೃಷಿ ಕಾರಕ ಶನಿ ಧನುಸ್ಸು ರಾಶಿಯಲ್ಲಿ ಊರ್ಧ್ವ ಗತಿಯಲ್ಲಿ ಇದ್ದಾನೆ. ಮತ್ತು ಮೂರನೇ ಮನೆಯ ದೃಷ್ಟಿ ಕುಂಭ ರಾಶಿ ನೋಡುವುದರಿಂದ ಕೃಷಿಯಲ್ಲಿ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನ ಪಡುತ್ತಾನೆ ಎಂದು ಭವಿಷ್ಯ ಹೇಳಿದ್ದೆ. ಅದು ಇಂದು ನಿಜವಾಗಿದೆ. ವಿರೋಧ ಬಂದರೂ ಗುರುವಿನ ಸಹಕಾರ ಇರುವುದರಿಂದ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಗೆ ಬರುತ್ತದೆ ಎನ್ನುತ್ತಾರೆ ಪ್ರಕಾಶ್ ಅಮ್ಮಣ್ಣಾಯ.

ಇತರ ವಿಚಾರಗಳ ಬಗ್ಗೆಯೂ ಭವಿಷ್ಯ
ಚಿನ್ನದ ಬೆಲೆ ಇಳಿಕೆ ಆಗಬಹುದು, ಡೀಸೆಲ್- ಪೆಟ್ರೋಲ್ ಬೆಲೆಯಲ್ಲಿ ಇಳಿಕೆ ನಿರೀಕ್ಷೆ ಮಾಡುವಂತಿಲ್ಲ ಎಂಬುದು ಸೇರಿ ವಿವಿಧ ಭವಿಷ್ಯ ನುಡಿದಿದ್ದರು ಪ್ರಕಾಶ್ ಅಮ್ಮಣ್ಣಾಯ. ಆ ಪೈಕಿ ಎಷ್ಟು ಸರಿ ಮತ್ತು ಯಾವುದು ತಪ್ಪು ಎಂದು ತಿಳಿಯಲು ಅವರು ನುಡಿದಿದ್ದ ಭವಿಷ್ಯವನ್ನು ಓದಿರಿ.











Click it and Unblock the Notifications