ಚಾಮರಾಜನಗರ: ಹತ್ತು ವರ್ಷಗಳ ಬಳಿಕ ಕೆರೆ ಕೋಡಿಗಳು, ರೈತರ ಬದುಕು ಮೂರಾಬಟ್ಟೆ
ಚಾಮರಾಜನಗರ, ಆಗಸ್ಟ್, 30: ಬಹಳ ವರ್ಷಗಳ ಬಳಿಕ ಚಾಮರಾಜನಗರ ಜಿಲ್ಲೆಯಲ್ಲಿ ಕೆರೆ, ಕಟ್ಟೆಗಳ ಕೋಡಿ ಬೀಳುತ್ತಿದ್ದು, ರೈತರ ಮುಖದಲ್ಲಿ ಸಂತೋಷವನ್ನು ತರಿಸಿದೆ. ಕೆಲವೆಡೆ ಅವಾಂತಗಳು ಉಂಟಾಗಿ ಬೆಳೆಗಳು ಜಲಾವೃತವಾಗಿ ರೈತರು ತತ್ತರಿಸಿ ಹೋಗಿದ್ದಾರೆ.
ಜಿಲ್ಲೆಯಲ್ಲಿ ಕೆರೆಗಳ ಕೋಡಿ ಬಿದ್ದು 10-20 ವರ್ಷಗಳಾಗಿದ್ದವು. ಇದೀಗ ವರುರುಣ ಅಬ್ಬರಿಸಿ ಬೊಬ್ಬೆರೆದಿದ್ದು, ಕೋಡಿ ಬಿದ್ದಿದೆ. ಒಂದೆಡೆ ರೈತರ ಮುಖದಲ್ಲಿ ಸಂತೋಷ ಮೂಡಿಸಿದರೆ, ಮತ್ತೊಂದೆಡೆ ಅವಾಂತರಗಳನ್ನು ಸೃಷ್ಟಿ ಆದ ಪರಿಣಾಮ ಅನ್ನದಾತ ಕಂಗಲಾಗಿದ್ದಾನೆ.
ಸುರಿದ ಭಾರಿ ಮಳೆಯಿಂದ ಯಳಂದೂರು ತಾಲೂಕಿನ ಯರಗಂಬಳ್ಳಿ ಕೆರೆ ಭರ್ತಿಯಾಗಿ ಏರಿ ಒಡೆದಿದೆ. ಕೆರೆಯ ನೀರು ಜಮೀನುಗಳಿಗೆ ನುಗ್ಗಿದ್ದು, ನೀರಿನ ರಭಸಕ್ಕೆ ನಾಟಿ ಮಾಡಿದ ಭತ್ತ, ರಾಗಿ, ಕಬ್ಬು ಹಾಗೂ ತೆಂಗಿನ ಸಸಿಗಳು ನಾಶ ಆಗಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಗಳನ್ನು ಬೆಳೆದಿದ್ದ ಅನ್ನದಾತ ಕಂಗಾಲಾಗಿದ್ದಾನೆ.

ಕೋಡಿ ಬಿದ್ದ ಕೆರೆಗಳು
ಇನ್ನು ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿದ್ದು, ಸಮೀಪದ ಗುಂಡಾಲ್ ಜಲಾಶಯ ಭರ್ತಿ ಆಗಿದೆ. ಎರಡು ದಿನಗಳಿಂದ ಇದರ ಕೋಡಿ ಬಿದ್ದು ಹರಿಯುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ಇದೇ ರೀತಿ ಸಂಪೂರ್ಣ ಭರ್ತಿಯಾಗಿ ಕೋಡಿ ಹರಿದಿತ್ತು. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಮರಗದಕೆರೆ 16 ವರ್ಷಗಳ ಬಳಿಕ ತುಂಬಿ ಕೋಡಿ ಬಿದ್ದಿದೆ. 22 ವರ್ಷಗಳ ಬಳಿಕ ಮರಿಯಾಲ ಸಮೀಪದ ಮಾಲೆಗೆರೆ, ಹೆಚ್ ಮೂಕಳ್ಳಿ ಗ್ರಾಮದ ಕೆರೆ, 30 ವರ್ಷಗಳ ಬಳಿಕ ಅಮ್ಮನಪುರ ಕೆರೆ, 20 ವರ್ಷಗಳ ಬಳಿಕ ಬಿಳಿಗಿರಿರಂಗನ ಬೆಟ್ಟ ತಪ್ಪಲಿನ ಕೃಷ್ಣಯ್ಯನ ಕಟ್ಟೆ ತುಂಬಿ ಕೋಡಿ ಬಿದ್ದಿದೆ.

ಜನರ ಬದುಕು ಬೀದಿಪಾಲು
ಚಾಮರಾಜನಗರದ ಐತಿಹಾಸಿಕ ದೊಡ್ಡರಸನ ಕೊಳ ಭರ್ತಿಯಾಗುವುದಕ್ಕೆ ಇನ್ನು ಒಂದು ಮೆಟ್ಟಿಲಷ್ಟೇ ಬಾಕಿ ಇದೆ. ಐದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೊಳದಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹವಾಗಿದೆ. ಕೊಳದ ಮೇಲ್ಭಾಗದಲ್ಲಿರುವ ಗಣಪತಿ ದೇವಾಲಯದವರೆಗೂ ನೀರು ಬಂದಿದೆ. ಈ ಮೊದಲು 1972ರಲ್ಲಿ ಚಿಕ್ಕ ಹೊಳೆ ಏರಿ ಒಡೆದು ಹೋಗಿ ಕೊಳ ಭರ್ತಿ ಆಗಿತ್ತು. ಇದೀಗ 50 ವರ್ಷಗಳ ನಂತರ ಕೊಳ ಭರ್ತಿ ಆಗುತ್ತಿದೆ. ಅಬ್ಬರದ ಮಳೆಗೆ ಜನರ ಬದುಕು ಅಕ್ಷರಶಃ ಮೂರಾಬಟ್ಟೆ ಅಗಿದೆ. ಹೆಬ್ಬಸೂರಿನಲ್ಲಿ ಸಾವಿರಾರು ತೆಂಗಿನಕಾಯಿ ಕೊಚ್ಚಿ ಹೋಗಿವೆ. ಕಳೆದ ಒಂದು ವಾರದಿಂದ ಸುರಿದ ಮಳೆಗೆ ಜಿಲ್ಲೆಯಲ್ಲಿ 107 ಮನೆಗಳು ಕುಸಿದು ಬಿದ್ದಿದೆ. ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಕೃಷಿ ಬೆಳೆ, 60ಕ್ಕೂ ಹೆಚ್ಚು ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಆಗಿದ್ದು, ರೈತರು ಕಂಗಲಾಗಿದ್ದಾರೆ. ಜಿಲ್ಲೆಯಲ್ಲಿ 23 ಅಂಗನವಾಡಿಗಳು, 57 ಶಾಲೆಗಳು, ಒಂದು ಕೆರೆ, ಒಂದು ಟಿಸಿ, 19 ವಿದ್ಯುತ್ ಕಂಬಗಳಿಗೆ ಹಾನಿ ಆಗಿದೆ ಎಂದು ಎಡಿಸಿ ಕಾತ್ಯಾಯಿನಿದೇವಿ ಮಾಹಿತಿ ನೀಡಿದರು.












Click it and Unblock the Notifications