ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ರಂಗೇರಿದ ಕೃಷಿ ಮೇಳ

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ಸೆಪ್ಟೆಂಬರ್‌, 19: ಮಹಾಮಾರಿ ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಕೃಷಿ ಮೇಳ ನಿಂತು ಹೋಗಿತ್ತು. ಇದೀಗ ಪ್ರತಿಷ್ಠಿತ ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಕೃಷಿ ಮೇಳವನ್ನು ಸೆಪ್ಟೆಂಬ 17ರಿಂದ ಆರಂಭಿಸಿದೆ. ಸೆಪ್ಟೆಂಬರ್‌ 20ರವರೆಗೆ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಅದ್ಧೂರಿಯಾಗಿ ಈ ಮೇಳ ನಡೆಯಲಿದೆ.

ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ದೀಪ ಬೆಳಗುವುದರ ಮೂಲಕ‌ ನಾಲ್ಕು ದಿನಗಳವರೆಗೆ ನಡೆಯುವ ಈ ವರ್ಷದ ಕೃಷಿ ಮೇಳಕ್ಕೆ ಚಾಲನೆ ನೀಡಿದ್ದರು. 'ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆಗಳು' ಎನ್ನುವ ಶೀರ್ಷಿಕೆ ಅಡಿಯಲ್ಲಿ ಆಯೋಜಿಸಲಾಗಿದ್ದು, ಬೀಜ ಮೇಳದ ಮೂಲಕ ರೈತರ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ಕಳೆದ 2-3 ವರ್ಷಗಳಿಂದ ನೆರೆ ಹಾವಳಿ, ಕೋವಿಡ್‌ ಹೊಡೆತದಿಂದ ರದ್ದಾಗಿದ್ದ ಕೃಷಿ ಮೇಳಕ್ಕೆ ಈ ಬಾರಿ ಮತ್ತೆ ಕಳೆ ಬಂದಂತಾಗಿದೆ. ಕೃಷಿ ವಿಶ್ವ ವಿದ್ಯಾಲಯದ ಆವರಣದಲ್ಲಿ ಮಳಿಗೆಗಳು ಕಂಗೊಳಿಸುತ್ತಿವೆ.

ನಾಲ್ಕು ದಿನಗಳವರೆಗೂ ನಡೆಯುವ ಈ ಮೇಳದಲ್ಲಿ ಸುಮಾರು 10 ಲಕ್ಷ ರೈತರು ಭಾಗವಹಿಸುವ ನಿರೀಕ್ಷೆಯಿದ್ದು, ಕೃಷಿ ಹಾಗೂ ಕೃಷಿ ಪೂರಕ ತಂತ್ರಜ್ಞಾನಗಳೊಂದಿಗೆ ಬೀಜ ಮೇಳ-ಮತ್ಸ್ಯ ಮೇಳವೂ ಇರಲಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಆವರಣಗಳಲ್ಲಿ ಕೈಗೊಂಡ ಬೋಧನೆ, ಸಂಶೋಧನೆ, ವಿಸ್ತರಣಾ ಚಟುವಟಿಕೆಗಳ ಸಮಗ್ರ ಮಾಹಿತಿ ಮೇಳದಲ್ಲಿ ಸಿಗಲಿದೆ. ಅಲ್ಲದೇ ವಿಶ್ವವಿದ್ಯಾಲಯದಿಂದ ಬಿಡುಗಡೆ ಆದ ಮತ್ತು ಬಿಡುಗಡೆಯ ಹಂತದಲ್ಲಿರುವ ತಂತ್ರಜ್ಞಾನಗಳ ಬಗ್ಗೆ ರೈತರಿಗೆ ಮಾಹಿತಿಯನ್ನು ನೀಡಲಾಗಿದೆ.

grand krishi mela at Dharwad University campus

ಮೇಳದಲ್ಲಿ ಹೈಟೆಕ್‌ ಮಳಿಗೆಗಳು ಸಿದ್ಧ
ಕೃಷಿ ವಸ್ತು ಪ್ರದರ್ಶನದಲ್ಲಿ 184 ಹೈಟೆಕ್‌ ಮಳಿಗೆಗಳು, 364 ಸಾಮಾನ್ಯ ಮಳಿಗೆಗಳು, 21 ಯಂತ್ರೋಪಕರಣ ಮಳಿಗೆಗಳು, 27 ಆಹಾರ ಮಳಿಗೆಗಳು, 54 ಜಾನುವಾರು ಪ್ರದರ್ಶನ ಮಳಿಗೆಗಳು, 9 ಕ್ಷೇತ್ರ ಮಳಿಗೆಗಳ ವ್ಯವಸ್ಥೆಯನ್ನು ಮಾಡಲಾಗಿದೆ. ರೈತರಿಗೆ ಕ್ಷೇತ್ರ ವೀಕ್ಷಣೆಗಾಗಿ ಕೃಷಿ ಮಹಾವಿದ್ಯಾಲಯ ಮುಖ್ಯ ಕಟ್ಟಡದಿಂದ ಪ್ರತಿ 15 ನಿಮಿಷಕ್ಕೆ ವಾಹನದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ವಿಮಾ ವ್ಯಾಪ್ತಿಗೆ ಕೃಷಿ ಮೇಳದ ಆವರಣ ಒಳಪಡಿಸಲಾಗಿದ್ದು, ಸನ್ನದ್ಧ ಸ್ಥಿತಿಯಲ್ಲಿರುವ ಅಗ್ನಿಶಾಮಕ ವಾಹನ ಇರಲಿದೆ. ಮೊಬೈಲ್‌ ಎಟಿಎಂ ವಾಹನಗಳು, ಕ್ಷೇತ್ರ ಪ್ರಾತ್ಯಕ್ಷಿಕೆಗಳಿಗೆ ಭೇಟಿ, ಉಚಿತ ವೈದ್ಯಕೀಯ ಸಲಹಾ ಕೇಂದ್ರ, ಸಾರಿಗೆ ನಿರ್ವಹಣಾ ವ್ಯವಸ್ಥೆ, ಪೊಲೀಸ್‌ ಸಹಾಯ ಕೇಂದ್ರಗಳು ಇರಲಿವೆ.

ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ, ಅಧಿಕ ಇಳುವರಿ ಮತ್ತು ನೀರಿನ ಉಳಿತಾಯಕ್ಕಾಗಿ ಸುಧಾರಿತ ನೀರಾವರಿ ಪದ್ಧತಿಗಳು, ಸಂಪನ್ಮೂಲ ಸಂರಕ್ಷಣೆಗಾಗಿ ಸಮಗ್ರ ಜಲಾನಯನ ಅಭಿವೃದ್ಧಿ, ಸಮಗ್ರ ಬೆಳೆ, ಪೋಷಕಾಂಶ, ಪೀಡೆಗಳ ನಿರ್ವಹಣೆ, ಕೃಷಿಯಲ್ಲಿ ಜೈವಿಕ ಹಾಗೂ ನ್ಯಾನೋ ತಂತ್ರಜ್ಞಾನಗಳ ಬಳಕೆ, ದ್ವಿದಳ ಧಾನ್ಯಗಳ ಉತ್ಪಾದನೆ, ಮೌಲ್ಯವರ್ಧನೆ, ಹೈಟೆಕ್‌ ತೋಟಗಾರಿಕೆ, ಮಣ್ಣು ರಹಿತ ಬೇಸಾಯ, ಸುಗಂಧ ಮತ್ತು ಔಷಧ ಬೆಳೆಗಳು, ಫಲ-ಪುಷ್ಪಗಳ ಪ್ರದರ್ಶನ, ಅಲಂಕಾರಿಕ ಮೀನು ಸಾಕಾಣಿಕೆ, ಮತ್ಸ್ಯ ಸಸ್ಯ ಸಂಗಮ, ಮೀನು ಮತ್ತು ಸಿಗಡಿ ಸಾಕಣೆ ಹಾಗೂ ಅಲಂಕಾರಿಕ ಮೀನುಗಳ ಪ್ರದರ್ಶನ ಮೇಳದಲ್ಲಿ ಗಮನ ಸೆಳೆಯಲಿವೆ.

grand krishi mela at Dharwad University campus

ಬೀಜಗಳ ಜೊತೆಗೆ ಜೈವಿಕ ಗೊಬ್ಬರ ಮಾರಾಟ
ಮೇಳದಲ್ಲಿ 333 ಕ್ವಿಂಟಲ್‌ ಜೋಳ, 344 ಕ್ವಿಂಟಲ್‌ ಗೋಧಿ, 1,445 ಕ್ವಿಂಟಲ್‌ ಕಡಲೆ, 39 ಕ್ವಿಂಟಲ್‌ ಕುಸುಮೆ ಮತ್ತು 1 ಕ್ವಿಂಟಲ್‌ ಸಾಸಿವೆ ಒಟ್ಟು 2,161 ಕ್ವಿಂಟಲ್‌ ಬೀಜ ಪ್ರಸಕ್ತ ಕೃಷಿ ಮೇಳದಲ್ಲಿ ಮಾರಾಟಕ್ಕೆ ಲಭ್ಯವಿದೆ. ವಿಶ್ವವಿದ್ಯಾಲಯಕ್ಕೆ ಪ್ರಪ್ರಥಮ ಬಾರಿಗೆ ಜೈವಿಕ ಕೃಷಿ ಪರಿಕರಗಳ ಉತ್ಪನ್ನ ಹಾಗೂ ಮಾರಾಟಕ್ಕೆ ಪರವಾನಿಗೆ ಪತ್ರ ದೊರೆತಿದೆ. ಈ ಹಿನ್ನೆಲೆಯಲ್ಲಿ 847 ಕೆ.ಜಿ. ವಿವಿಧ ಪ್ರಕಾರದ ಜೈವಿಕ ಗೊಬ್ಬರಗಳ ಪುಡಿ, 410 ಲೀಟರ್‌ ವಿವಿಧ ಪ್ರಕಾರದ ಜೈವಿಕ ಗೊಬ್ಬರದ ದ್ರವಗಳು ಪ್ರಸಕ್ತ ಕೃಷಿ ಮೇಳದಲ್ಲಿ ಮಾರಾಟಕ್ಕೆ ಲಭ್ಯವಿದೆ.

ಮೇಳದಲ್ಲಿ ಈ ಬಾರಿ ದನಕರುಗಳಿಗಳಿಲ್ಲ ಅವಕಾಶ
ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ 7 ಜಿಲ್ಲೆಗಳಿಂದ 2021-22ನೇ ಸಾಲಿಗೆ ಆಯ್ಕೆ ಆದ ಶ್ರೇಷ್ಠ ಕೃಷಿಕ ಮತ್ತು ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಇದೇ ಮೊದಲ ಬಾರಿ ಮೇಳದಲ್ಲಿ ನೀಡುತ್ತಿದ್ದ ತಾಲೂಕುವಾರು ಯುವ ಕೃಷಿಕ ಹಾಗೂ ಮಹಿಳೆ ಪ್ರಶಸ್ತಿಯನ್ನು ಕೈಬಿಡಲಾಗಿದೆ. ಇನ್ನು ಇದೇ ಮೊದಲ ಬಾರಿಗೆ ಸಾಂಕ್ರಾಮಿಕ ರೋಗ ಹಿನ್ನೆಲೆ ಜಾನುವಾರು ಪ್ರದರ್ಶನದಲ್ಲಿ ದನಕರುಗಳಿಗೆ ಅವಕಾಶ ನೀಡಿಲ್ಲ. ಶ್ವಾನ ಸೇರಿದಂತೆ ಬರೀ ಸಾಕು ಪ್ರಾಣಿಗಳಿಗಷ್ಟೇ ಅವಕಾಶ ನೀಡಲಾಗಿದೆ.

English summary
Krishi Mela organized by Dharwad agriculture university, will grandly countinue till September 20, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X