ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರ: ಸರ್ಕಾರಕ್ಕೆ ಮಂಡ್ಯದಲ್ಲಿ ರೈತ ಸಂಘ ನೀಡಿದ ಎಚ್ಚರಿಕೆ ಏನು?
ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಬೇಜವಾಬ್ದಾರಿ ಹಾಗೂ ಉಡಾಫೆಯಿಂದ ವರ್ತಿಸುತ್ತಿರುವ ಸರ್ಕಾರದ ಭಂಡತನದ ವಿರುದ್ಧ ರಾಜ್ಯ ರೈತಸಂಘ ಫೆಬ್ರವರಿ 23ರಂದು ಜಿಲ್ಲಾಧಿಕಾರಿ ಕಚೇರಿಗೆ ದಿಗ್ಬಂಧನ ವಿಧಿಸಲು ನಿರ್ಧರಿಸಿದೆ.
ಮಂಡ್ಯ, ಫೆಬ್ರವರಿ, 19: ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಬೇಜವಾಬ್ದಾರಿ ಹಾಗೂ ಉಡಾಫೆಯಿಂದ ವರ್ತಿಸುತ್ತಿರುವ ಸರ್ಕಾರದ ಭಂಡತನದ ವಿರುದ್ಧ ರಾಜ್ಯ ರೈತಸಂಘ ಫೆಬ್ರವರಿ 23ರಂದು ಜಿಲ್ಲಾಧಿಕಾರಿ ಕಚೇರಿಗೆ ದಿಗ್ಬಂಧನ ವಿಧಿಸಲು ನಿರ್ಧರಿಸಿದೆ. ಅಂದು ಜನ-ಜಾನುವಾರುಗಳೊಂದಿಗೆ ಐದು ಸಾವಿರಕ್ಕೂ ಹೆಚ್ಚು ರೈತರು ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದಾರೆ. ಹಾಗೆಯೇ ಜಿಲ್ಲಾಧಿಕಾರಿ ಕಚೇರಿಯ ನಾಲ್ಕು ದ್ವಾರಗಳನ್ನು ಬಂದ್ ಮಾಡಿಸುವುದರೊಂದಿಗೆ ಕಚೇರಿ ಕೆಲಸಗಳಿಗೆ ಅಡ್ಡಿಪಡಿಸಲು ತೀರ್ಮಾನಿಸಲಾಗಿದೆ ಎಂದು ಎಚ್ಚರಿಸಿದರು.
ಟನ್ ಕಬ್ಬಿಗೆ 4,500 ರೂಪಾಯಿ ಬೆಲೆ ನಿಗದಿ, ಹಾಲಿಗೆ 40 ರೂಪಾಯಿ ಬೆಲೆ ನಿಗದಿಪಡಿಸುವುದು, ಭತ್ತ, ರಾಗಿಯಂತಹ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ ನೂರು ದಿನ ದಾಟಿದೆ. ಇಷ್ಟಾದರೂ ಸರ್ಕಾರ ರೈತರ ಹೋರಾಟವನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ವಹಿಸಿದೆ. ಬಜೆಟ್‌ನಲ್ಲಿ ರೈತರ ಯಾವುದೇ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸದೆ ಉದಾಸೀನ ಧೋರಣೆ ಪ್ರದರ್ಶಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಜನಪ್ರತಿನಿಧಿಗಳು ರೈತರ ಹೋರಾಟದ ಬಗ್ಗೆ ಸರ್ಕಾರದ ಗಮನಸೆಳೆದು ಪರಿಹಾರ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ರೈತರ ಹೋರಾಟಕ್ಕೆ ಕನಿಷ್ಠ ಪ್ರಮಾಣದ ಬೆಂಬಲ ಸೂಚಿಸದ ಜಿಲ್ಲೆಯ ಶಾಸಕರು ಸರ್ಕಾರದ ಗಮನಸೆಳೆಯುವರೆಂಬ ನಿರೀಕ್ಷೆಯಲ್ಲೂ ನಾವಿಲ್ಲ. ಜನಸಾಮಾನ್ಯರು ಹಾಗೂ ರೈತರ ನೋವಿಗೆ ಸ್ಪಂದಿಸದವರಿಗೆ ಚುನಾವಣೆಯಲ್ಲಿ ಜನರೇ ಉತ್ತರ ಕೊಡುತ್ತಾರೆ ಎಂದು ತಿಳಿಸಿದ್ದಾರೆ.

ಸರ್ಕಾರದ ವಿರುದ್ಧ ಮಧುಚಂದನ್ ಆಕ್ರೋಶ
ರಾಜ್ಯ ರೈತಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಮಾತನಾಡಿ, ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸದೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಆಳುವ ಸರ್ಕಾರದ ವಿರುದ್ಧ ಹೋರಾಟಗಳನ್ನು ಮಾಡಿದ್ದೇವೆ. ಮಂಡ್ಯ ಬಂದ್, ರಸ್ತೆತಡೆ, ರಕ್ತಾಭಿಷೇಕ ಸೇರಿದಂತೆ ವಿನೂತನ ಹೋರಾಟಗಳನ್ನು ನಡೆಸಿದ್ದೇವೆ. ಇದೀಗ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಸರ್ಕಾರ ತನ್ನ ನಿಲುವನ್ನು ಬದಲಿಸಿಯೂ ಇಲ್ಲ. ಬೇಡಿಕೆಗಳಿಗೆ ಸ್ಪಂದಿಸುವ ಭರವಸೆಯನ್ನೂ ಕೊಟ್ಟಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಮನವಿಗೆ ಬಗ್ಗದ ರೈತ ಸಂಘದ ಮುಖಂಡರು
ಆಮರಣಾಂತ ಉಪವಾಸ ಸತ್ಯಾಗ್ರಹ ಸ್ಥಗಿತಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಮಂಡ್ಯ ಉಪವಿಭಾಗಾಧಿಕಾರಿ ಕೀರ್ತನಾ ಅವರು ರೈತ ಮುಖಂಡರಲ್ಲಿ ಮನವಿ ಮಾಡಿದರೂ ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ. ನಾವು ರೈತರ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಹೋರಾಟ ನಡೆಸುತ್ತಿದ್ದೇವೆ. ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸಿದರೆ ಈ ಕ್ಷಣದಿಂದಲೇ ಉಪವಾಸ ಕೈಬಿಡಲು ಸಿದ್ಧರಿದ್ದೇವೆ. ಸರ್ಕಾರದ ಯಾವುದೇ ಸ್ಪಷ್ಟ ಭರವಸೆಯಿಲ್ಲದೆ, ಹೊಣೆಗಾರಿಕೆಯನ್ನು ಪ್ರದರ್ಶಿಸದೆ ಉಪವಾಸ ಕೈಬಿಡುವುದು ಸಾಧ್ಯವಿಲ್ಲದ ಮಾತು ಎಂದು ಸಂಧಾನಕಾರರಾಗಿ ಆಗಮಿಸಿದ್ದ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

ಸರ್ಕಾರಕ್ಕೆ ಎಚ್ಚರಿಕೆ ನೀಡಿದ ರೈತ ಸಂಘ
ರೈತರು ಹೋರಾಟದಿಂದ ದಣಿದಿದ್ದರೂ ಅವರ ಮನೋಸ್ಥೈರ್ಯವಿನ್ನೂ ಕುಗ್ಗಿಲ್ಲ. ಮುಂದೆ ಹೋರಾಟವನ್ನು ತೀವ್ರಸ್ವರೂಪಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. ಇದರಿಂದ ಅನಾಹುತಗಳು ಸಂಭವಿಸಿದರೆ ನಾವು ಹೊಣೆಗಾರರಲ್ಲ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸುವಂತೆಯೂ ರೈತ ಮುಖಂಡರು ತಿಳಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಘೋಷಣೆಯಾದ ಬಳಿಕ ಹೋರಾಟ ಮಾಡುವುದಕ್ಕೆ ಸಾಧ್ಯವಿಲ್ಲ. ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲಾಗುತ್ತಿದೆ. ಈ ಹೋರಾಟಕ್ಕೂ ಎಚ್ಚರಗೊಳ್ಳದಿದ್ದರೆ ಜನರೇ ಬಿಜೆಪಿಗೆ ಬುದ್ದಿ ಕಲಿಸಲಿದ್ದಾರೆ ಎಂದು ಕಠಿಣವಾಗಿ ನುಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರಸನ್ನ ಎನ್.ಗೌಡ, ಲಿಂಗಪ್ಪಾಜಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ಆಸ್ಪತ್ರೆಗೆ ದಾಖಲಾದ ರೈತರು
ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಮರಣಾಂತ ಉಪವಾಸ ಕೈಗೊಂಡಿರುವವರಲ್ಲಿ ಇಬ್ಬರು ರೈತರು ಅಸ್ವಸ್ಥಗೊಂಡಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮದ್ದೂರು ತಾಲೂಕು ಕೆಸ್ತೂರು ಬಳಿಯ ತೂಬಿನಕೆರೆ ಗ್ರಾಮದ ಅಣ್ಣಯ್ಯ, ಗೂಳೂರಿನ ಅಣ್ಣಯ್ಯ ಅವರು ಅಸ್ವಸ್ಥಗೊಂಡಿದ್ದರು. ಇವರಿಬ್ಬರೂ ಊಟ ಸೇವಿಸದೆ ಇದ್ದುದರಿಂದ ನಿತ್ರಾಣಗೊಂಡಿದ್ದರು. ಶನಿವಾರ ಸಂಜೆಯ ವೇಳೆಗೆ ಇಬ್ಬರ ಆರೋಗ್ಯ ಸ್ಥಿತಿ ಕ್ಷೀಣಿಸಿದ್ದರಿಂದ ತಕ್ಷಣವೇ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ರಾತ್ರಿ ಬಿಜೆಪಿ ಮುಖಂಡ ಅಶೋಕ್ ಜಯರಾಂ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡಿದ್ದ ರೈತರ ಆರೋಗ್ಯವನ್ನು ವಿಚಾರಿಸಿದರು.












Click it and Unblock the Notifications