ರೈತ ದಿನಗೂಲಿ ನೌಕರರ ಸಂಕಷ್ಟಕ್ಕೆ ಸರಕಾರ ನೆರವು
ಬೆಂಗಳೂರು, ನ. 14 : ಹವಾಮಾನ ವಲಯಗಳ ಆಧಾರದ ಮೇಲೆ ರೈತರು ಬೆಳೆಯುವ ಬೆಳೆಗಳಿಗೆ ಸೂಕ್ತ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಪೌಷ್ಠಿಕ ನಿರ್ವಹಣೆ ಮಾಡಲು ಸಚಿವ ಸಂಪುಟ ಉಪ ಸಮಿತಿ ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಜರುಗಿದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.
ಅವರು ಬುಧವಾರ ಸಚಿವ ಸಂಪುಟದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಆರ್ಥಿಕ ಸಂಕಷ್ಠ ನಿವಾರಣೆಗೆ ಪಡೆಯುವ 27 ಕೋಟಿ ರೂ.ಗಳ ಸಾಲಕ್ಕೆ ಸರ್ಕಾರದ ಖಾತರಿ ನೀಡಲು ಸಭೆ ನಿರ್ಣಯ ಕೈಗೊಂಡಿದೆ ಎಂದರು.
ರಾಜ್ಯದಲ್ಲಿರುವ ದಿನಗೂಲಿ ನೌಕರರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಅನುವಾಗುವಂತೆ ವಿಶೇಷ ಕಾನೂನು ತರಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿರುವ ವಿವಿಧ ಹಂತದ 216 ಖಜಾನೆ ಕಚೇರಿಗಳ ನವೀಕರಣ, ದುರಸ್ತಿ, ಆಧುನೀಕರಣ ಮಾಡಲು 36.58 ಕೋಟಿ ರೂ. ಮಂಜೂರು ಮಾಡಲಾಗಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರು : ಬೆಂಗಳೂರು ರೈಲು ನಿಲ್ದಾಣಕ್ಕೆ ಬ್ರಿಟಿಷರ ವಿರುದ್ಧ ಹೋರಾಡಿ ಮಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗಾಗಿ ಒಟ್ಟು 11,000 ಮನೆಗಳನ್ನು ಪೊಲೀಸ್ ಗೃಹ ನಿರ್ಮಾಣ ಮಂಡಳಿಯಿಂದ ನಿರ್ಮಿಸಲು ತೀರ್ಮಾನಿಸಿದೆ. ಇದಕ್ಕಾಗಿ ಹುಡ್ಕೋದಿಂದ 1,818 ಕೋಟಿ ರೂ ಆರ್ಥಿಕ ನೆರವು ನೀಡಲಾಗುವುದು. ಕೊಳಚೆ ನಿರ್ಮೂಲನಾ ಅಭಿವೃದ್ಧಿ ಮಂಡಳಿಯನ್ನು ಕೊಳಚೆ ಅಭಿವೃದ್ಧಿ ಮಂಡಳಿ ಎಂದು ಮರು ನಾಮಕರಣ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಪಡಿತರ ಚೀಟಿಗಾಗಿ ಆನ್‌ಲೈನ್ ಮೂಲಕ 30 ಲಕ್ಷ ಅರ್ಜಿಗಳು ಬಂದಿದ್ದು, ಇವುಗಳನ್ನು ತ್ವರಿತವಾಗಿ ಪರಿಶೀಲಿಸಲು ಹಾಗೂ ಏಪಿಎಲ್ ಕಾರ್ಡುದಾರರಿಗೂ ವಾಜಪೇಯಿ ಆರೋಗ್ಯ ಶ್ರೀ ಯೋಜನೆ ವಿಸ್ತರಿಸಲು ಸಭೆ ನಿರ್ಣಯ ಕೈಗೊಂಡಿದೆ.
ಚಾಮರಾಜನಗರ, ಕೊಪ್ಪಳ, ಕೊಡಗು ಗುಲಬರ್ಗ, ಗದಗ ಮತ್ತು ಕಾರವಾರಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ ಈ ಸ್ಥಳಗಳಲ್ಲಿರುವ ಜಿಲ್ಲಾ ಆಸ್ಪತ್ರೆಗಳನ್ನು ವೈದ್ಯಕೀಯ ಕಾಲೇಜುಗಳ ವಿಜ್ಞಾನ ಸ್ವಾಯುತ್ತ ಸಂಸ್ಥೆಗಳಿಗೆ ವರ್ಗಾಯಿಸಲು ತೀರ್ಮಾನಿಸಿತು. ಅದೇ ರೀತಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಮಿತಿ ಮೀರಿ ಬರುವ ಅರ್ಜಿಗಳ ಪರಿಶೀಲನೆಗಾಗಿ ಇರುವ ಸಚಿವ ಸಂಪುಟ ಸಮಿತಿಯನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ. (ಸಚಿವ ಸಂಪುಟ ಸಭೆಯ ಇತರ ನಿರ್ಣಯಗಳು)












Click it and Unblock the Notifications