ಕಬ್ಬಿಗೆ ಬೆಲೆ ನಿಗದಿ ಮಾಡದ ಸರ್ಕಾರ: ಮಂಡ್ಯದಲ್ಲಿ ಸಚಿವ ಕೆ.ಗೋಪಾಲಯ್ಯಗೆ ರೈತರಿಂದ ತರಾಟೆ
ಮಂಡ್ಯ, ಡಿಸೆಂಬರ್, 15: ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ರಾಜ್ಯದೆಲ್ಲೆಡೆ ಪ್ರತಿಭಟನೆ ಮಾಡುತ್ತಲೇ ಬಂದಿದ್ದಾರೆ. ಹಾಗೆಯೇ ಕರ್ನಾಟಕ ರಾಜ್ಯ ರೈತ ಸಂಘದಿಂದ ಡಿಸೆಂಬರ್ 19ರಂದು ಕರೆ ನೀಡಿರುವ ಬಂದ್ ಹಿಂಪಡೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಮಂಡ್ಯದ ಪ್ರತಿಭಟನಾ ನಿರತರಲ್ಲಿ ಮನವಿ ಮಾಡಿದರು.
ನಗರದ ಸರ್‌ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ರೈತ ಸಂಘದಿಂದ ನಡೆಸುತ್ತಿರುವ ಅನಿರ್ಧಿಷ್ಟಾವದಿ ಧರಣಿಯು 38ನೇ ದಿನಕ್ಕೆ ಕಾಲಿಟ್ಟಿದೆ. ಸಚಿವ ಕೆ.ಗೋಪಾಲಯ್ಯ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ನಿರತರ ಮನವೊಲಿಸಲು ಮುಂದಾದರು. ರೈತ ಸಂಘದ ಕಾರ್ಯಕರ್ತರು ಹಮ್ಮಿಕೊಂಡಿರುವ ಮಂಡ್ಯ ಬಂದ್ ಹಿಂಪಡೆದುಕೊಳ್ಳಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ರೈತರ ಸಮಸ್ಯೆ ಬಗ್ಗೆ ಚರ್ಚಿಸಿದ್ದೇನೆ. ಮತ್ತೊಮ್ಮೆ ಧರಣಿಯ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುತ್ತೇನೆ. ನಿಮ್ಮ ಸಮಸ್ಯೆಗೆ ಅವರು ಸ್ಪಂದಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ತಿಳಿಸಿದರು.

ಮನವಿ ತಿರಸ್ಕರಿಸಿದ ರೈತ ಮುಖಂಡರು
ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಸೇರಿದಂತೆ ಮುಖಂಡರು ಸಚಿವ ಗೋಪಾಲಯ್ಯ ಅವರ ಮನವಿಯನ್ನು ತಿರಸ್ಕಸಿದರು. ನಂತರ ಅವರ ಮುಂದೆಯೇ ಬಂದ್ ಮಾಡುವ ಬಗ್ಗೆ ಘೋಷಣೆಗಳನ್ನು ಕೂಗಿದರು. ಜಿಲ್ಲೆಯ ಪಾಂಡವುರದಲ್ಲಿ ಡಿಸೆಂಬರ್ 19ರಂದು ಬಿಜೆಪಿ ಸಂಕಲ್ಪ ಯಾತ್ರೆ ನಡೆಯಲಿದೆ. ಆಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾತ್ರೆಗೆ ಮಂಡ್ಯದ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಲಿದ್ದಾರೆ. ಅಂದು ಅವರಿಗೆ ಅಡ್ಡಹಾಕಿ ಘೇರಾವ್ ಹಾಕಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.

ನೀವು ಕೊಟ್ಟ ಭರವಸೆಗಳು ಏನಾದ್ವು?
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಮೊದಲು ಭೇಟಿ ನೀಡಿದಾಗಲೂ ಭರವಸೆ ನೀಡಿದ್ದೀರಿ. ನೀವು ಭರವಸೆ ನೀಡಿ ಎಂಟು ದಿನಗಳು ಕಳೆದಿವೆ. ಈ ಹಿಂದೆ ನೀವು ಕೇವಲ ಮೂರೇ ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿಯೂ ಹೇಳಿದ್ದೀರಿ. ಆದರೆ ನೀವು ಕೊಟ್ಟ ಭರವಸೆಗಳು ಇನ್ನುಈಡೇರಿಲ್ಲ. ಇನ್ನು ನಿಮ್ಮ ಮಾತುಗಳನ್ನು ಕೇಳಲು ನಾವು ತಯಾರಿಲ್ಲ. ಮತ್ತೆ ಬಂದ್ ಕೈಬಿಡುವಂತೆ ಮನ ಪರಿಚರ್ತನೆ ಮಾಡಲು ಬಂದಿರುವಿರಾ? ನಿಮ್ಮ ಕೈಲಿ ಏನೂ ಕಿಸಿಯಲು ಆಗುವುದಿಲ್ಲ. ಬಂದ ದಾರಿಯಲ್ಲಿ ಸುಮ್ಮನೆ ಇಲ್ಲಿಂದ ಹೊರಡಿ ಎಂದು ಸಚಿವರ ಮುಂದೆಯೇ ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯಲ್ಲಿ ಮುಖಂಡರಾದ ವಿಜಯ್ ಕುಮಾರ್, ನಾಗರಾಜು, ಪಿ.ಡಿ.ರಮೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.












Click it and Unblock the Notifications