Good News: ರಾಜ್ಯದಲ್ಲಿ ರೈತರಿಗೆ ಗುಡ್‌ನ್ಯೂಸ್ ಕೊಟ್ಟ ಸರ್ಕಾರ, ಏನದು ?
ರಾಜ್ಯದ ರೈತರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಮಹತ್ವದ ಹಾಗೂ ಸಿಹಿ ಸುದ್ದಿಯೊಂದನ್ನು ನೀಡಿದೆ. ಅದರಲ್ಲೂ ಉತ್ತರ ಕರ್ನಾಟಕದ ರೈತರಿಗೆ ಇದರಿಂದ ಹೆಚ್ಚಿನ ಲಾಭವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ರಾಜ್ಯ ಸರ್ಕಾರವು ಕಬ್ಬು ನುರಿಸುವಿಕೆ (ಕಬ್ಬು ಕ್ರಷಿಂಗ್)ಯ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ. ಈ ಬಾರಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಕಬ್ಬಿನ ಹಂಗಾಮಿನಲ್ಲಿ ವ್ಯತ್ಯಾಸವಾಗಿದೆ.
ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಲ್ಲಿ ಶುಕ್ರವಾರದಿಂದ ಅಂದರೆ ನಾಳೆ (ನವೆಂಬರ್ 8)ರಿಂದ ಕಬ್ಬು ಕ್ರಷಿಂಗ್ (ನುರಿಸುವಿಕೆ) ಆರಂಭಿಸುವುದಾಗಿ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾಹಿತಿ ನೀಡಿದ್ದಾರೆ.

ದಕ್ಷಿಣ ಭಾರತದ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ ಸಭೆಯನ್ನು ಬೆಂಗಳೂರಿನಲ್ಲಿ ಆಗಸ್ಟ್‌ನಲ್ಲಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ನವೆಂಬರ್ 15ರಿಂದ ಕಬ್ಬು ಕ್ರಷಿಂಗ್ ಶುರು ಮಾಡಬೇಕು ಎನ್ನುವ ಎನ್ನುವ ಅತ್ಯಂತ ಮುಖ್ಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಆದರೆ, ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಮನವಿಯ ಮೇಲೆ ಒಂದು ವಾರ ಮುಂಚಿತವಾಗಿ ಆರಂಭಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದಲ್ಲಿ ಕಬ್ಬಿನ ಹಂಗಾಮಿನಲ್ಲಿ ವ್ಯತ್ಯಾಸವಾಗಲಿದೆ. ದಕ್ಷಿಣ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ಈಗಾಗಲೇ ಕ್ರಷಿಂಗ್ ಶುರು ಮಾಡಿವೆ. ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಏಕಕಾಲಕ್ಕೆ ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ಹಿಂದೆ ಮಾಡಿದ್ದ ನಿರ್ಧಾರದ ಬದಲಿಗೆ ನವೆಂಬರ್ 8ರಿಂದಲೇ ಕಬ್ಬು ನುರಿಸುವಿಕೆ ಆರಂಭಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೂ ಮನವಿ ಮಾಡಲಾಗಿತ್ತು ಎಂದಿದ್ದಾರೆ.
ಕರ್ನಾಟಕದ ಮನವಿಗೆ ಅಲ್ಲಿ ಮಾನ್ಯತೆ ಸಿಕ್ಕಿಲ್ಲ. ಯಾಕೆಂದರೆ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತಿದೆ. ಮಹಾರಾಷ್ಟ್ರದ ವಿಧಾನಸಭೆ ಚುಣಾವಣೆಯು ಇದೇ 20ಕ್ಕೆ ಇದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಮೊದಲಿನ ನಿರ್ಧಾರ ಬದಲಿಸಲು ಸಾಧ್ಯವಿಲ್ಲ ಎಂದಿದ್ದಾರೆ. ರಾಜ್ಯದ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ನಾವು ಒಂದು ವಾರ ಮುಂಚಿತವಾಗಿ ಕಬ್ಬು ನುರಿಸುವಿಕೆ ಆರಂಭಿಸುವ ನಿರ್ಧಾರ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳು ಮಧ್ಯ ಕರ್ನಾಟಕದಲ್ಲಿ ಬರುತ್ತವೆ. ಈ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳು ದಕ್ಷಿಣ ಕರ್ನಾಟಕದ ಸಕ್ಕರೆ ಕಾರ್ಖಾನೆಗಳ ಸಮಯದಲ್ಲೇ ಆರಂಭ ಮಾಡಿವೆ. ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಈಗಾಗಲೇ ಕಬ್ಬು ಕಟಾವಿಗೆ ಬಂದಿದೆ. ಹೀಗಾಗಿ, ಅವಧಿ ಪೂರ್ವವೇ ಕ್ರಷಿಂಗ್ ಪ್ರಾರಂಭಿಸುವ ಅವಶ್ಯಕತೆ ಇದೆ ಎಂದು ಮನವಿ ಮಾಡಿದ್ದವು ಎಂದು ಅವರು ಮಾಹಿತಿ ನೀಡಿದರು.
ನವೆಂಬರ್ 12ರವರೆಗೆ ಕ್ರಷಿಂಗ್ ಆರಂಭಿಸಿದ್ದರೆ. ಒಂದು ಎಕರೆಗೆ 50 ರಿಂದ 60 ಟನ್ ಇಳುವರಿ ಬರಲ್ಲ. ಇದರ ಬದಲಾಗಿ ರೈತರಿಗೆ ಕೇವಲ 25 ರಿಂದ 30 ಟನ್ ಇಳುವರಿ ಸಿಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ (ವಾಡಿಕೆಯಂತೆ) ಅಕ್ಟೋಬರ್ ಅಂತ್ಯದೊಳಗೆ ಕ್ರಷಿಂಗ್ ಆರಂಭಿಸಲು ಅನುಮತಿ ನೀಡಬೇಕು ಎಂದು ರೈತರು ಮನವಿ ಮಾಡಿದ್ದರು ಎಂದರು.
ಕರ್ನಾಟಕದಲ್ಲಿ 7.5 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ
ರಾಜ್ಯದಲ್ಲಿ ಒಟ್ಟು 80 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 7.5 ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ 3,400 ರೂಪಾಯಿ ನಿಗದಿ ಮಾಡಲಾಗಿದೆ. ಇದೇ ರೀತಿ ಕಳೆದ ಹಂಗಾಮಿನಲ್ಲಿ ಕಬ್ಬಿಗೆ ಪ್ರತಿ ಟನ್‌ಗೆ 3,150 ರೂಪಾಯಿ ನಿಗದಿ ಮಾಡಲಾಗಿತ್ತು. ಈ ಬಾರಿ ಕಳೆದ ಬಾರಿಗಿಂತಲೂ ಹೆಚ್ಚು ಮಾಡಲಾಗಿದೆ. ಸಕ್ಕರೆ ಇಳುವರಿ ಪ್ರಮಾಣ 9.5 ರಿಂದ 12ರವರೆಗೆ ಬರುತ್ತದೆ. ಉಳಿದಂತೆ ಸರಾಸರಿ ಇಳುವರಿ ಪ್ರಮಾಣ 10.5 ಆಗಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.












Click it and Unblock the Notifications