ಹಾಪ್‌ಕಾಮ್ಸ್: ಮತದಾನದ ಜಾಗೃತಿಗೆ ರಿಯಾಯಿತಿ ಮಾರಾಟ
ಬೆಂಗಳೂರು, ಏಪ್ರಿಲ್ 27: ವಿಧಾನಸಭಾ ಚುನಾವಣೆಗೆ ಮತದಾನದ ಪ್ರಮಾಣ ಹೆಚ್ಚಿಸಲು ರಿಯಾಯಿತಿ ದರದಲ್ಲಿ ಹಣ್ಣು, ತರಕಾರಿ ಮಾರಾಟ ಮೇಳ ಆಯೋಜಿಸಿ ಜಾಗೃತಿ ಮೂಡಿಸಲು ಹಾಪ್‌ಕಾಮ್ಸ್ ಮುಂದಾಗಿದೆ.
ಮೇ ಮೊದಲ ವಾರ ಮೇಳವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು, ಶೇ.5ರ ರಿಯಾಯಿತಿಯಲ್ಲಿ ಮಾರಾಟ ನಡೆಸುವುದರ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆದು ಮತದಾನದ ಮಹತ್ವ ತಿಳಿಸಲು ಹಾಪ್ ಕಾಮ್ಸ್ ತೀರ್ಮಾನಿಸಿದೆ.
ಮತದಾನ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅದಕ್ಕಾಗಿ ಅದರ ಮಹತ್ವವನ್ನು ತಿಳಿಸಿ ಮೇ 12ರಂದು ಮತದಾನ ಪ್ರಮಾಣವನ್ನು ಹೆಚ್ಚಿಸಬೇಕೆಂಬುಸು ನಮ್ಮ ಉದ್ದೇಶ ಎಂದು ಹಾಪ್‌ಕಾಮ್ಸ್ ಎಂಡಿ ವಿಶ್ವನಾಥ್ ತಿಳಿಸಿದ್ದಾರೆ.
ಹಾಪ್‌ಕಾಮ್ಸ್ ನ 224 ಮಳಿಗೆಗಳಲ್ಲಿಯೂ ರಿಯಾಯಿತಿ ದರದ ಮಾರಾಟ ನಡೆಯುವ ಸಾಧ್ಯತೆಯಿದ್ದು, ಖರೀದಿಗೆ ಆಗಮಿಸುವ ಗ್ರಾಹಕರಿಗೆ ಮತದಾನದ ಮಹತ್ವ ತಿಳಿಸುವ ಸಂದೇಶವನ್ನು ರವಾನಿಸಲಾಗುತ್ತದೆ.

ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ಹಾಪ್‌ಕಾಮ್ಸ್ ಮೇಳವನ್ನು ಆಯೋಜಿಸಲಾಗುತ್ತಿತ್ತು. ಅವುಗಳಿಗೆ ಗ್ರಾಹಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮೇಳದ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆದು ಮತದಾನಕ್ಕೆ ಅವರನ್ನು ಪ್ರೋತ್ಸಾಹಿಸಲು ಮೇಳವನ್ನು ಆಯೋಜಿಸಲಾಗುತ್ತದೆ.












Click it and Unblock the Notifications