Coffe: ಮೊದಲ ಬಾರಿಗೆ ಮಡಿಕೇರಿಯಲ್ಲಿ 'ಕಾಫಿ ದಸರಾ': ಏನಿದು, ರೈತರಿಗೆ ಹೇಗೆ ಉಪಯೋಗ?
ಮಡಿಕೇರಿ, ಸೆಪ್ಟೆಂಬರ್ 28: ಮೈಸೂರು ದಸರಾದಂತೆಯೇ ಮಡಿಕೇರಿ ದಸರಾದ ಸಿದ್ಧತೆಗಳು ನಡೆಯುತ್ತಿವೆ. ಮಡಿಕೇರಿ ದಸರಾ-2024ರ ಉತ್ಸವದಲ್ಲಿ ಅಕ್ಟೋಬರ್ 6 ಮತ್ತು 7ರಂದು 'ಕಾಫಿ ದಸರಾ' ಆಯೋಜನೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಮಡಿಕೇರಿ ದಸರಾದಲ್ಲಿ ರೈತರಿಗೆ ಸಹಾಯಕವಾಗಲು 'ಕಾಫಿ ದಸರಾ' ಆಯೋಜನೆ ಮಾಡಲಾಗಿದೆ. ರೈತರು ಉಪಯೋಗ ಪಡೆದುಕೊಳ್ಳಲು ಕಡೆ ನೀಡಲಾಗಿದೆ.
ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಈ ಕುರಿತು ಕಾಫಿ ಮಂಡಳಿ, ತೋಟಗಾರಿಕೆ, ಚೆಸ್ಕಾಂ, ನಗರಸಭೆ, ಕೃಷಿ ಇಲಾಖೆ, ಕೈಗಾರಿಕಾ ಅಭಿವೃದ್ದಿ ಇಲಾಖೆ, ಸೇರಿದಂತೆ ವಿವಿಧ ಇಲಾಖಾಧಿಕಾರಿಗಳ ಜೊತೆ ಸಭೆಯನ್ನು ನಡೆಸಿದರು. ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಸೇರಿದಂತೆ ಕಾಫಿ ಮತ್ತು ಇತರ ಕೃಷಿ ತಜ್ಞರನ್ನೂ ಕಾಫಿ ದಸರಾಕ್ಕೆ ಆಹ್ವಾನಿಸಿ ಉತ್ತಮ ಮಾಹಿತಿಯನ್ನು ಬೆಳೆಗಾರರಿಗೆ ನೀಡುವಂತೆಯೂ ಯೋಜನೆ ರೂಪಿಸಲಾಗುತ್ತಿದೆ.

ಸಭೆಯಲ್ಲಿ ಮಾತನಾಡಿದ ಶಾಸಕರು, "ಇದೇ ಮೊದಲ ಬಾರಿಗೆ ಮಡಿಕೇರಿ ದಸರಾದಲ್ಲಿ ಆಯೋಜಿತ ಕಾಫಿ ದಸರಾವನ್ನು ಯಶಸ್ವಿಗೊಳಿಸುವುದರೊಂದಿಗೆ ಕೃಷಿಕ ವರ್ಗಕ್ಕೆ ಹೆಚ್ಚಿನ ಮಾಹಿತಿ ದೊರಕುವಂತಾಗಬೇಕೆಂದು. "ಜಿಲ್ಲೆಯಾದ್ಯಂತಲಿನ ಕೃಷಿಕರಿಗೆ ಕಾಫಿ ದಸರಾ ಉತ್ಸವದ ಪ್ರಯೋಜನ ದೊರಕುವಂತಾಗಬೇಕು, ಕಾಫಿಗೆ ಸಂಬಂಧಿಸಿದ ಮಾಹಿತಿ ಮಾತ್ರವಲ್ಲದೇ ತೋಟಗಾರಿಕೆ ಬೆಳೆಗಳು, ಕೃಷಿ ಪದ್ದತಿ, ಜೇನು ಕೃಷಿ, ಬಿದಿರು ಕೃಷಿ, ಹೈನೋದ್ಯಮ, ಸೇರಿದಂತೆ ಪರ್ಯಾಯ ಕೃಷಿ ಮಾಹಿತಿಯೂ ಕಾಫಿ ದಸರಾದಲ್ಲಿ ಮಾಹಿತಿ ದೊರಕಬೇಕು" ಎಂದು ಶಾಸಕರು ಹೇಳಿದರು.
ಮಡಿಕೇರಿ ದಸರಾ ಉತ್ಸವದಲ್ಲಿ ಅಕ್ಟೋಬರ್ 6 ಮತ್ತು 7 ರಂದು ಕಾಫಿ ದಸರಾ ಆಯೋಜಿಸಲಾಗಿದೆ. ಜಿಲ್ಲೆಯ ವಿವಿಧ ಕಾಫಿ ಬೆಳೆಗಾರ ಸಂಘಟನೆಗಳ ಪ್ರಮುಖರು, ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯನ್ನು ನಡೆಸಲಾಗಿದೆ. ಮಕ್ಕಳ ದಸರಾ, ಮಹಿಳಾ ದಸರಾ, ಯುವದಸರಾ, ಜಾನಪದ ದಸರಾದಂತೆಯೇ ಕಾಫಿ ದಸರಾ ಕೂಡ ಜನಾಕರ್ಷಣೆ ಪಡೆಯುವ ನಿರೀಕ್ಷೆ ಇದೆ.
ಕಾಫಿ ದಸರಾದ ಪ್ರಮುಖ ಮಾಹಿತಿ: ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಯೇಷನ್, ಕಾಫಿ ಮಂಡಳಿ, ಸೇರಿದಂತೆ ಕೃಷಿಗೆ ಸಂಬಂಧಿಸಿದ ವಿವಿಧ ಸಂಘಟನೆಗಳೂ ಕಾಫಿ ದಸರಾದಲ್ಲಿ ಪಾಲ್ಗೊಳ್ಳಲಿವೆ. ಕೊಡಗು ಜಿಲ್ಲೆಯ ಕೃಷಿ ಕ್ಷೇತ್ರಕ್ಕೆ ಪ್ರಯೋಜನಕಾರಿಯಾದ ಮಾಹಿತಿ ನೀಡುವಂತೆ ಕಾರ್ಯಕ್ರಮ ರೂಪಿಸಲಾಗಿದೆ. ಉತ್ತಮ ಗುಣಮಟ್ಟದಲ್ಲಿ ಮಳಿಗೆಗಳನ್ನು ನಿರ್ಮಿಸಿ, ಎಲ್ಲಾ ಸೌಲಭ್ಯ ಒದಗಿಸಲಾಗುತ್ತದೆ. ಮಳಿಗೆಗಳಲ್ಲಿ ಕಾಫಿ ಕೆಫೆಯನ್ನು ಕೂಡ ತೆರೆಯುವ ಮೂಲಕ ಕಾಫಿ ಕ್ಷೇತ್ರದ ನವೀನತೆಯ ಪರಿಚಯ ಮಾಡಿಕೊಡಲಾಗುತ್ತದೆ.
ಸಭೆಯಲ್ಲಿ ಮಾತನಾಡಿದ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್. ಟಿ., "32 ಮಳಿಗೆಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ, ಅಕ್ಟೋಬರ್ 6 ರಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಮತ್ತು 7 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮಳಿಗೆಗಳನ್ನು ತೆರೆಯಲಾಗುತ್ತದೆ" ಎಂದರು.
"ವೇದಿಕೆಯಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಮಸ್ಯೆಯಾಗದಂತೆ ಮಳಿಗೆಗಳನ್ನು ನಿರ್ವಹಿಸಲಾಗುತ್ತದೆ. ವೇದಿಕೆಯಲ್ಲಿ ಎರಡೂ ದಿನಗಳ ಕಾಲ ಮಧ್ಯಾಹ್ನ 11 ಗಂಟೆಯಿಂದ 1 ಗಂಟೆಯವರೆಗೂ ಕೃಷಿ ರಂಗಕ್ಕೆ ಸಂಬಂಧಿಸಿದ ವಿಚಾರಸಂಕಿರಣಗಳನ್ನು ಬೆಳೆಗಾರ ಸಂಘಟನೆಗಳ ಪ್ರಮುಖರೊಂದಿಗೆ ಚರ್ಚಿಸಿ ನಿರ್ಧರಿಸಲಾಗಿದೆ. ಭವಿಷ್ಯದಲ್ಲಿ ಕಾಫಿ ಸೇರಿದಂತೆ ಕೃಷಿ ಕ್ಷೇತ್ರದ ಆಗುಹೋಗುಗಳ ಬಗ್ಗೆ ಕೃಷಿಕರಿಗೆ ತಜ್ಞರು ಮಾಹಿತಿ ನೀಡುವಂತೆ ಕಾರ್ಯಕ್ರಮ ರೂಪಿಸಲಾಗಿದೆ. ಕಾಫಿ ದಸರಾಕ್ಕೆ ಸಂಬಂಧಿಸಿದ ಲೋಗೋವನ್ನು ಶೀಘ್ರದಲ್ಲಿಯೇ ಬಿಡುಗಡೆಗೊಳಿಸಲಾಗುತ್ತದೆ" ಎಂದು ಹೇಳಿದರು.
ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದಾ ಬೆಳ್ಯಪ್ಪ ಮಾತನಾಡಿ, "ಕೊಡಗಿನ ಕಾಫಿ ಕೃಷಿಕರಿಗ ವಿವಿಧ ಕೃಷಿ ವಿಚಾರದಲ್ಲಿ ಸೂಕ್ತ ಮಾಹಿತಿ ತಿಳುವಳಿಕೆ ನಿಟ್ಟಿನಲ್ಲಿ ಕಾಫಿ ದಸರಾ ಒಂದು ಉತ್ತಮ ಪ್ರಯತ್ನವಾಗಿದ್ದು ಸಂಘದ ಸದಸ್ಯರೆಲ್ಲರೂ ಸಹಕಾರ ನೀಡಲಿದ್ದೇವೆ ಎಂದರು. ಕಾಫಿ ಜಿಲ್ಲೆಯಾದ ಕೊಡಗಿನ ದಸರಾ ಉತ್ಸವದಲ್ಲಿ ಕಾಫಿ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ಶ್ಲಾಘನೀಯ" ಎಂದು ತಿಳಿಸಿದರು.
ಕಾಫಿ ದಸರಾದಲ್ಲಿ ಪಾಲ್ಗೊಳ್ಳುವ ಕೃಷಿಕ ಸಮುದಾಯದವರು ವಿಷಯ ತಜ್ಞರೊಂದಿಗೆ ಪ್ರಶ್ನೆಗಳನ್ನು ಕೇಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕಾಫಿ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಇದೇ ಮೊದಲ ಬಾರಿಗೆ ದಿನೇಶ್ ಅವರೂ ಕಾಫಿ ದಸರಾದಲ್ಲಿ ಪಾಲ್ಗೊಳ್ಳುತ್ತಿರುವುದು ಕೂಡ ಕಾಫಿ ಕೃಷಿಕರಿಗೆ ಸಂತೋಷದ ವಿಚಾರವಾಗಿದೆ.












Click it and Unblock the Notifications