ಮಳೆ ನಡುವೆಯೇ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ
ಚಾಮರಾಜನಗರ, ಮೇ, 11: ರಣಭೀಕರ ಮಳೆ ನಡುವೆಯೇ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘವು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದ ಘಟನೆ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರದ ಸೋಮವಾರಪೇಟೆ ಬಳಿ ಇಂದು (ಮೇ 11) ನಡೆಯಿತು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

ಈ ವೇಳೆ ಭಾಗ್ಯರಾಜ್ ಮಾತನಾಡಿ, ರೈತರಿಗೆ ಬರ ಪರಿಹಾರ ನೀಡುವಲ್ಲಿ ಸರ್ಕಾರ ವೈಜ್ಞಾನಿಕ ವಿಧಾನವನ್ನು ಅನುಸರಿಸಿಲ್ಲ. ಕಳೆದ ಮೂರು ದಿನಗಳ ಹಿಂದೆ ಬೀಸಿದ ಬಿರುಗಾಳಿಗೆ ಲಕ್ಷಾಂತರ ಹೆಕ್ಟರ್ ಪ್ರದೇಶದ ಬಾಳೆ, ಕಬ್ಬು, ತೆಂಗು, ಮೆಕ್ಕೆಜೋಳ ನಷ್ಟ ನಾಶವಾಗಿದ್ದು, ವೈಜ್ಞಾನಿಕವಾಗಿ ಬೆಳೆ ನಷ್ಟ ಪರಿಹಾರವನ್ನು ಘೋಷಿಸಬೇಕು ಎಂದರು.
ಭೀಕರ ಬಿರುಗಾಳಿಯಿಂದ ನೊಂದಿರುವ ರೈತರ ಸಾಲವನ್ನು ರಾಜ್ಯ ಸರ್ಕಾರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಪ್ರತಿ ಹೆಕ್ಟೇರ್ ಬಾಳೆ ಬೆಳೆ ನಷ್ಟಕ್ಕೆ 1,00,000 ರೂಪಾಯಿಗೂ ಹೆಚ್ಚು ದರ ನೀಡಬೇಕು ಹಾಗೂ ಬರ ಪರಿಹಾರವನ್ನು ತಾರತಮ್ಯ ಇಲ್ಲದೆ, ಎಲ್ಲಾ ರೈತರಿಗೂ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಬ್ಬು ಬೆಳೆಗಾರರಿಗೆ ಕಳೆದ ಸಾಲಿನ ಪ್ರತಿ ಟನ್‌ಗೆ 150 ರೂಪಾಯಿಯ ಸರ್ಕಾರ ಆದೇಶದ ಪ್ರಕಾರ ರಾಜ್ಯದಲ್ಲಿ 950 ಕೋಟಿ ರೂಪಾಯಿ ರೈತರಿಗೆ ಬರಬೇಕು. ಕಳೆದ ಸಾಲಿನ ಕಾರ್ಖಾನೆಗಳಿಂದ ಲಾಭಾಂಶವನ್ನು ಹಂಚಿಕೆ ಮಾಡಿಸಬೇಕು. ಖಾಸಗಿ ಮತ್ತು ಸಾಲ ಪಡೆದ ರೈತರಿಗೆ ಟ್ಯಾಕ್ಟರ್‌ಗಳನ್ನು ಜಪ್ತಿ ಮಾಡಿ ಬೇರೆ ರಾಜ್ಯಗಳಿಗೆ ಪ್ರಕರಣಗಳನ್ನು ದಾಖಲಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಿವೆ.
ಬ್ಯಾಂಕುಗಳು ಬರದಿಂದ ನೊಂದಿರುವ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 10 ರೂಪಾಯಿಯನ್ನು ಕೊಡಿಸುವ ಕ್ರಮ ವಹಿಸಬೇಕು ಹಾಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಇನ್ನು, ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿ ತಡೆದಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.












Click it and Unblock the Notifications