ಕೇಂದ್ರ ಸಚಿವ ಅಜಯ್ ಮಿಶ್ರಾ ಬಂಧನಕ್ಕೆ ಒತ್ತಾಯಿಸಿ ಚಳವಳಿ
ಅಕ್ಟೋಬರ್ 26ರಂದು ಲಕ್ನೋದಲ್ಲಿ ನಡೆಯಬೇಕಿದ್ದ ಕಿಸಾನ್ ಮಹಾಪಂಚಾಯತ್ ಮುಂದೂಡಲಾಗಿದೆ. ಇದೇ ಅಕ್ಟೋಬರ್ 26ಕ್ಕೆ ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿಯಲ್ಲಿ ರೈತ ಚಳವಳಿ ಆರಂಭವಾಗಿ ಹನ್ನೊಂದು ತಿಂಗಳು ಪೂರೈಸುತ್ತಿದೆ.
ಈ ಚಳವಳಿಯನ್ನು ದೇಶಾದ್ಯಂತ ಗಟ್ಟಿಗೊಳಿಸುವುದೂ ಸೇರಿದಂತೆ ಉತ್ತರ ಪ್ರದೇಶದ ಲಿಖೀಂಪುರ್ ಖೇರಿಯಲ್ಲಿ ನಡೆದ ರೈತರ ಹತ್ಯಾಕಾಂಡದ ಹೊಣೆ ಹೊರಬೇಕಾದ ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ಅವರನ್ನು ವಜಾಗೊಳಿಸಬೇಕು ಮತ್ತು ಹುತಾತ್ಮ ರೈತರಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿ ಇಡೀ ದೇಶದಾದ್ಯಂತ ರೈತರು ಧರಣಿ ಸತ್ಯಾಗ್ರಹ, ಜಾಥಾ ಇನ್ನಿತರ ಹೋರಾಟಗಳನ್ನು ರೂಪಿಸಬೇಕೆಂದು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ.
ಅದಕ್ಕಾಗಿ ಲಕ್ನೋದಲ್ಲಿ ನಡೆಯಬೇಕಿದ್ದ ಕಿಸಾನ್ ಮಹಾಪಂಚಾಯತ್ ಅನ್ನು ನವೆಂಬರ್ 22ಕ್ಕೆ ಮುಂದೂಡಲಾಗಿದೆ. ದೇಶದ ಎಲ್ಲಾ ರೈತ ಸಂಘಟನೆಗಳು ಅಕ್ಟೋಬರ್ 26ನೇ ತಾರೀಖಿನಂದು ಅಜಯ್ ಮಿಶ್ರಾ ತೇನಿರನ್ನು ಬಂಧಿಸಬೇಕು ಮತ್ತು ಅವರನ್ನು ಸರ್ಕಾರದ ಜವಾಬ್ದಾರಿಯುತ ಸ್ಥಾನದಿಂದ ವಜಾಗೊಳಿಸಲು ಒತ್ತಾಯಿಸಿ ಹೋರಾಟ ರೂಪಿಸಬೇಕೆಂದು ಎಸ್. ಕೆ. ಎಂ ಸಂಘಟನೆಗಳಿಗೆ ತಿಳಿಸಿದೆ.

ಅಕ್ಟೋಬರ್ 26ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಏಕಕಾಲದಲ್ಲಿ ದೇಶಾದ್ಯಂತ ಚಳವಳಿಗಳು ನಡೆಯಲಿವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ. ಕೃಷಿಯಲ್ಲಿ ತರಲಾಗಿರುವ ಮೂರು ಕರಾಳ ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕು. ರೈತರು ಬೆಳೆವ ಎಲ್ಲಾ ಬೆಳೆಗಳಿಗೂ ಕನಿಷ್ಟ ಬೆಂಬಲ ಬೆಲೆ ಶಾಸನ ಬದ್ಧಗೊಳಿಸಬೇಕು ಮತ್ತು ಅಜಯ್ ಮಿಶ್ರಾ ತೇನಿರನ್ನು ಬಂಧಿಸಬೇಕು ಎಂದು ಮತ್ತೊಮ್ಮೆ ಸರ್ಕಾರವನ್ನು ಸಂಯುಕ್ತ ಕಿಸಾನ್ ಮೋರ್ಚಾ ಒತ್ತಾಯಿಸಿದೆ.
ಯೋಗೆಂದ್ರ ಯಾದವ್ ಅಮಾನತು
ಲಿಖೀಂಪುರ್ ಖೇರಿಯ ಹತ್ಯಾಕಾಂಡದಲ್ಲಿ ಸಾವನ್ನಪ್ಪಿದ ಭಾಜಪ ಕಾರ್ಯಕರ್ತನ ಮನೆಗೆ ಭೇಟಿ ಕೊಟ್ಟ ಕಾರಣ ಯೋಗೆಂದ್ರ ಯಾದವ್‌ರನ್ನು ಒಂದು ತಿಂಗಳ ಕಾಲ ಅಮಾನತುಗೊಳಿಸುವ ತೀರ್ಮಾನವನ್ನು ಮೊನ್ನೆ ನಡೆದ ಸಭೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ತೆಗೆದುಕೊಂಡಿದೆ. ಈ ಭೇಟಿಯು ಯೋಗೆಂದ್ರ ಯಾದವ್ ವೈಯಕ್ತಿಕ ನಿರ್ಧಾರವೇ ಹೊರತು ಸಂಯುಕ್ತ ಕಿಸಾನ್ ಮೋರ್ಚಾದಲ್ಲ.
ಇದರಿಂದ ಈಗಾಗಲೇ ನೊಂದು ಲಿಖೀಂಪುರ್ ಖೇರಿ ರೈತರಿಗೆ ಘಾಸಿಯಾಗಿದೆ. ಅಮಾನತುಗೊಂಡಿರುವ ಯೋಗೆಂದ್ರ ಯಾದವ್ ತಮ್ಮ ಈ ಭೇಟಿ ವೈಯಕ್ತಿಕ ನಿರ್ಧಾರ ಮತ್ತು ಇದರಿಂದ ರೈತರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ. ಅದೇ ರೀತಿ ಕೋಆರ್ಡಿನೇಷನ್ ಕಮಿಟಿಯ ಗಮನಕ್ಕೆ ಬಾರದಂತೆ ಭಾಜಪ ಕಾರ್ಯಕರ್ತನ ಮನೆಗೆ ಹೋದ ಬಗ್ಗೆಯೂ ಅವರು ಕ್ಷಮೆ ಕೋರಿದ್ದಾರೆ.
ಅದೇ ರೀತಿ ಜಸ್ಬೀರ್ ಸಿಂಗ್ ವಿರ್ಕ್ ನೇತೃತ್ವದ ಭಾರತೀಯ ಸಿಖ್ ಸಂಘಟನೆಯು ಹಿಂದೆಂದೂ, ಈಗಲೂ ಮತ್ತು ಮುಂದೆಂದೂ ಸಂಯುಕ್ತ ಕಿಸಾನ್ ಮೋರ್ಚಾದ ಭಾಗವಾಗಿರಲಿಲ್ಲ, ಭಾಗವಾಗಿರುವುದಿಲ್ಲ ಎಂದು ಪುನರುಚ್ಛರಿಸಿದೆ.












Click it and Unblock the Notifications