ಕರ್ನಾಟಕ ಚುನಾವಣೆ 2023; ರೈತರ ಪ್ರಣಾಳಿಕೆ ಮುಖ್ಯಾಂಶಗಳು
ಬೆಂಗಳೂರು, ಮೇ 6; ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10ರ ಬುಧವಾರ ಮತದಾನ ನಡೆಯಲಿದೆ. ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡಿ ಜನರಿಗೆ ಹಲವಾರು ಭರವಸೆಗಳನ್ನು ನೀಡಿವೆ. ರಾಜ್ಯದ ರೈತರು ಯಾರಿಗೆ ಬೆಂಬಲ ನೀಡಲಿದ್ದಾರೆ?.
ಈ ಬಾರಿಯ ಕರ್ನಾಟಕ ಚುನಾವಣೆಗೆ ರೈತರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. 'ರೈತರ ಚುನಾವಣಾ ಪ್ರಣಾಳಿಕೆ ಒಪ್ಪುವ ಅಭ್ಯರ್ಥಿಗೆ ರೈತರ ಬೆಂಬಲ' ಎಂದು ಘೋಷಣೆ ಮಾಡಲಾಗಿದೆ. ಇದು ರಾಜ್ಯದ ರೈತ ಮುಖಂಡರುಗಳು ಚರ್ಚಿಸಿ ಕೈಗೊಂಡ ಸಮಿತಿಯ ತೀರ್ಮಾನವಾಗಿದೆ ಎಂದು ತಿಳಿಸಲಾಗಿದೆ.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರ ಸಂಘ, ಕರ್ನಾಟಕ ನವ ನಿರ್ಮಾಣ ಸೇನೆ, ಕಬಿನಿ ರೈತ ಹಿತರಕ್ಷಣಾ ಸಮಿತಿ, ರಾಜ್ಯ ಕೃಷಿ ಪಂಪ್ಸೆಟ್ ವಿದ್ಯುತ್ ಬಳಕೆದಾರರ ಸಂಘ, ನೀರು ಬಳಕೆದಾರರ ಸಂಘಗಳ ಮಹಾಮಂಡಲ ಮತ್ತು ಕೃಷಿ ಕೂಲಿ ಕಾರ್ಮಿಕರ ಸಂಘ ಜಂಟಿಯಾಗಿ ಈ ಪ್ರಣಾಳಿಕೆ ಬಿಡುಗಡೆ ಮಾಡಿವೆ.
ಪ್ರಣಾಳಿಕೆಯಲ್ಲಿ ಏನಿದೆ?; ಕರ್ನಾಟಕ ರಾಜ್ಯದ ಚುನಾವಣೆ ಘೋಷಣೆಗೆ ಮುನ್ನವೇ ರಾಜ್ಯದ ರೈತ ಸಂಘಟನೆಗಳ ಮುಖಂಡರುಗಳ ಜೊತೆ ಚರ್ಚಿಸಿ ರೈತರ ಸಮಸ್ಯೆಗಳನ್ನು ಬಿಂಬಿಸುವ 20 ಅಂಶಗಳ ಪ್ರಣಾಳಿಕೆಯನ್ನು ಮಾರ್ಚ್ 12ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಈ ಪ್ರಣಾಳಿಕೆಗಳಿಗೆ ಒಪ್ಪುವ ಬದ್ಧತೆ ತೋರುವ ಪಕ್ಷಕ್ಕೆ ಬಹಿರಂಗವಾಗಿ ಬೆಂಬಲಿಸಲಾಗುವುದು ಎಂದು ರಾಜಕೀಯ ಪಕ್ಷಗಳಿಗೆ ತಿಳಿಸಲಾಯಿತು.

ಪಕ್ಷಗಳ ಕಛೇರಿಗಳಿಗೆ ಪತ್ರ ಬರೆಯಲಾಯಿತು. ಯಾವುದೇ ಪಕ್ಷದಿಂದ ಪ್ರತಿಕ್ರಿಯೆ ಬರಲಿಲ್ಲ. ಮಾರ್ಚ್ 29ರಂದು ಬೆಂಗಳೂರು ಪತ್ರಕರ್ತರ ಕ್ಲಬ್ ಸಹಕಾರದೊಂದಿಗೆ ರಾಜಕೀಯ ಪಕ್ಷದ ಮುಖಂಡರ ಜೊತೆ ಮುಖಾಮುಖಿ ಚರ್ಚೆ ನಡೆಸಲಾಯಿತು. ಈ ಸಭೆಯಲ್ಲಿ ಪಕ್ಷಗಳ ಮುಖಂಡರು ಕಾಲಾವಕಾಶ ಕೇಳಿ ವಾಪಸ್ಸಾದರು. ಹಳ್ಳಿ ಹಳ್ಳಿಗಳಲ್ಲಿ ರೈತ ಪ್ರಣಾಳಿಕೆ ಬಗ್ಗೆ ರೈತರ ನಡೆ ಜಾಗೃತಿ ಕಡೆಗೆ ಅಭಿಯಾನವನ್ನು 22 ಜಿಲ್ಲೆಗಳಲ್ಲಿ ನಡೆಸಲಾಯಿತು ಎಂದು ಹೇಳಿದೆ.
ಎಲ್ಲಾ ಹಳ್ಳಿಗಳ ರೈತರು ನಮ್ಮ ಪ್ರಣಾಳಿಕೆಯನ್ನು ಒಪ್ಪಿ ಅಭ್ಯರ್ಥಿಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ. ಇದು ರೈತರ ಜಾಗೃತಿಗೆ ಉತ್ತಮ ಬೆಳವಣಿಗೆಯಾಗಿದೆ. ಅಂತಿಮವಾಗಿ ಮೇ2 ರಂದು ಬೆಂಗಳೂರಿನಲ್ಲಿ ರೈತ ಸಂಘಟನೆಗಳ ಪದಾಧಿಕಾರಿಗಳು ಗಾಂಧಿ ಭವನದಲ್ಲಿ ಸಭೆ ಸೇರಿ ಚರ್ಚಿಸಿದ್ದೇವೆ. ನಮ್ಮ ಪ್ರಣಾಳಿಕೆಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಆದರೆ ರಾಜಕೀಯ ಪಕ್ಷಗಳು ಬದ್ಧತೆ ತೋರದೆ ಪಲಾಯನ ಮಾಡಿದ್ದಾರೆ.
ರಾಜಕೀಯ ಪಕ್ಷಗಳು ಘೋಷಣೆ ಮಾಡಿರುವ ಪ್ರಣಾಳಿಕೆಗಳು ಮೋಸದ, ಪೊಳ್ಳು ಭರವಸೆಗಳಾಗಿವೆ. ರೈತರನ್ನು ವ್ಯವಸ್ಥಿತವಾಗಿ ಪಾಳು ಬಾವಿಗೆ ತಳ್ಳುವ ಹುನ್ನರ ನಡೆಸುತ್ತಿದ್ದಾರೆ ಎಂದು ರೈತ ಸಂಘಟನೆಗಳು ಆರೋಪಿಸಿವೆ.
ಚುನಾವಣೆಗಳ ಹೆಸರಿನಲ್ಲಿ ರೈತರನ್ನ ಬಲಿ ಕೊಡುತ್ತಿದ್ದಾರೆ. ಕೆಲ ರೈತ ಸಂಘಟನೆಗಳ ಮುಖಂಡರು ರಾಜಕೀಯ ಪಕ್ಷದ ಮುಖವಾಡದಂತೆ ವರ್ತಿಸುತ್ತಾ ಸ್ವಾರ್ಥ ಸಾಧನೆಗಾಗಿ ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ರೈತರ ಬದುಕು ಹಸನಗಿಲ್ಲ, ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ, ರೈತ ವಿರೋಧಿ ಕಾನೂನುಗಳು ತರುತ್ತಿದ್ದಾರೆ. ಇದಕ್ಕೆ ಎಲ್ಲ ಪಕ್ಷಗಳ ಕಾರಣವಾಗಿದೆ. ಈ ಬಗ್ಗೆ ರೈತರು ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಲಾಗಿದೆ.
ರೈತರ ಚುನಾವಣಾ ಪ್ರಣಾಳಿಕೆ ಒಪ್ಪುವ ಅಭ್ಯರ್ಥಿಗೆ ರೈತರ ಬೆಂಬಲ
* ರೈತರಿಗೆ ಕನಿಷ್ಠ ಆದಾಯ ಖಾತರಿ ಭದ್ರತೆ ಒದಗಿಸಬೇಕು.
* ಕೃಷಿ ಸಾಲಕ್ಕೆ ಸಿಬಿಲ್ ಸ್ಟೋ ಪರಿಗಣನೆ ಕೈ ಬಿಡುವುದಾಗಿ ಭರವಸೆ ನೀಡಬೇಕು.
* ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಅಗಬೇಕು ಕೃಷಿ ಸಾಲ ನೀತಿ ಬದಲಾಗಬೇಕು.
* ದೇಶದ ಜನರ ಆಹಾರ ಉತ್ಪಾದನೆ ಮಾಡುವ ರೈತನಿಗೆ ಕೃಷಿ ಸಾಲ ಬಡ್ಡಿ ರಹಿತವಾಗಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನೀಡುವಂತ ಯೋಜನೆ ಜಾರಿಗೆ ಬರಬೇಕು.
* ಎಲ್ಲಾ ಕೃಷಿ ಉತ್ತನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಶಾಸನ ಜಾರಿ ಮಾಡುವ ಭರವಸೆ ನೀಡಬೇಕು
* ಡಾ. ಎಂ. ಎಸ್. ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು
* ಫಸಲ್ ಭೀಮಾ ಬೆಳೆ ವಿಮೆ ಯೋಜನೆ ತಿದ್ದುಪಡಿ ಮಾಡಬೇಕು, ಎಲ್ಲಾ ಬೆಳೆಗಳಿಗೂ ಅನ್ವಯ ಮಾಡಬೇಕು.
* ಅಭಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಭೂಮಿ ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸಬೇಕು, ಅಗತ್ಯ ಸಂದರ್ಭಗಳಲ್ಲಿ ರೈತರ ಅನುಮತಿ ಪಡೆಯಬೇಕು. ಅಂತಹ ರೈತರಿಗೆ ಜೀವನ ಭದ್ರತೆ ರೂಪಿಸಬೇಕು.
* ಹಗಲು ವೇಳೆಯಲ್ಲಿ ಕೃಷಿ ಪಂಪಸೆಟ್‌ಗಳಿಗೆ 12 ಗಂಟೆಗಳ ನಿರಂತರ ವಿದ್ಯುತ್ ನೀಡುವ ಭರವಸೆ ಬೇಕು.
* ಕಬ್ಬಿನ ಎಫ್. ಆರ್. ಪಿ ದರ ರೈತರ ಹೊಲದಲ್ಲಿನ ದರ ಎಂದು ನಿಗದಿ ಪಡಿಸಬೇಕು.
* ರೈತರು ಅಲೆಮನೆಗಳಲ್ಲಿ ಕಬ್ಬಿನಿಂದ ಎಥೆನಾಲ್ ಉತ್ಪಾದನೆಗೆ ಬಳಕೆಗೆ ರೈತರಿಗೆ ಅವಕಾಶ ನೀಡಬೇಕು.
* ಕಬ್ಬು ಬೆಳೆ ಬೆಳೆಯಲು ಎನ್.ಆರ್.ಇ. ಯೋಜನೆಯನ್ನು ಲಿಂಕ್ ಮಾಡಿ ಸೇರಿಸಬೇಕು.
* ಗ್ರಾಮೀಣ ಯುವಕರನ್ನು ವಲಸೆ ತಪ್ಪಿಸಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು, ಗ್ರಾಮೀಣ ಭಾಗದಲ್ಲಿ ಕೃಷಿ ಪೂರಕ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಭರವಸೆ ಬೇಕು.
* ಗ್ರಾಮೀಣ ಪ್ರದೇಶಲ್ಲಿ ವಾಸಿಸುವ ರೈತರ ಗಂಡು ಮಕ್ಕಳ ಮದುವೆಯಾಗುವ ಹೆಣ್ಣು ಮಕ್ಕಳಿಗೆ ಸರ್ಕಾರಿ ಕೆಲಸದಲ್ಲಿ ಮೀಸಲಾತಿ ನೀಡಬೇಕು.
* ಕೃಷಿ ಉತ್ಪನ್ನ ಹಾಗೂ ಕೃಷಿ ಉಪಕರಣಗಳ ಮೇಲೆ ವಿಧಿಸಿರುವ ಜಿಎಸ್‌ಟಿ ರದ್ದುಗೊಳಿಸಬೇಕು
* ಸಾವಯವ ಉತ್ಪನ್ನಗಳು, ಸಿರಿಧಾನ್ಯಗಳಿಗೆ ಪ್ರತ್ಯೇಕ ಮಾರುಕಟ್ಟೆ, ಪ್ರತ್ಯೇಕ ಹೆಚ್ಚುವರಿ ದರ ನಿಗದಿ ಯೋಜನೆ ಜಾರಿಗೆ ಬರಬೇಕು.
* ವಿದೇಶಿ ಬಹುರಾಷ್ಟ್ರೀಯ ಎಫ್.ಡಿ.ಐ. ಬಂಡವಾಳಶಾಹಿ ಕಂಪನಿಗಳು ಚಿಲ್ಲರೆ ಮಾರಾಟ ವ್ಯವಸ್ಥೆಗೆ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ನಿಷೇಧ ಹೇರಬೇಕು.
* ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕುಟುಂಬಸ್ಥರನ್ನು ಸಚಿವ ಸಂಪುಟಕ್ಕೆ ಸೇರಿಸಿ ಕೊಳ್ಳಬಾರದು.
* ರಾಜ್ಯದಲ್ಲಿ ಜಾರಿಗೆ ತಂಬಿರುವ ಎ.ಪಿ.ಎಂ.ಸಿ.ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವ ಭರವಸೆ ನೀಡಬೇಕು.
* 60 ವರ್ಷ ತುಂಬಿದ ರೈತರಿಗೆ ಪ್ರತಿ ತಿಂಗಳು 5000 ಪಿಂಚಣಿ ಯೋಜನೆ ಜಾರಿಗೆ ತರಬೇಕು.











Click it and Unblock the Notifications