ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟ್ಟೆಯೊಡೆದ ರೈತರ ಆಕ್ರೋಶ, ಕೆಆರ್ ಪೇಟೆಯ ಬೆಳ್ಳಿಬೆಟ್ಟಕ್ಕೆ ಲಗ್ಗೆ

|
Google Oneindia Kannada News

ಮಂಡ್ಯ, ಜನವರಿ 19 : ಗೊರೂರಿನ ಹೇಮಾವತಿ ಜಲಾಶಯ ನಿರ್ಮಾಣ ಮಾಡುವ ವೇಳೆ ತಮ್ಮ ಕೃಷಿ ಭೂಮಿಯನ್ನು ಕಳೆದುಕೊಂಡ ಸಂತ್ರಸ್ತ ರೈತರ ತಾಳ್ಮೆಯ ಕಟ್ಟೆಯೊಡೆದಿದ್ದು, ಸರಕಾರದ ವಿರುದ್ಧ ಭಾರೀ ಪ್ರತಿಭಟನೆಗಿಳಿದಿದ್ದಾರೆ.

ರೈತಸಂಘದ ನೇತೃತ್ವದಲ್ಲಿ ಕೆ.ಆರ್.ಪೇಟೆ ತಾಲೂಕಿನ ಬೆಳ್ಳಿಬೆಟ್ಟದ ಕಾವಲು ಅರಣ್ಯ ಪ್ರದೇಶದಲ್ಲಿ ವಾಸ್ತವ್ಯ ಹೂಡುವ ಮೂಲಕ ನಗರ ನಿರ್ಮಾಣ ಮಾಡುವುದಾಗಿ ಎಚ್ಚರಿಕೆ ನೀಡಿ, ವಿನೂತನ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆಗಳು ಕಂಡು ಬಂದಿವೆ.

ಮಂಡ್ಯದ ಮತದಾರರ ಪಟ್ಟಿ ಅಂತಿಮ, ಜಿಲ್ಲೆಯಲ್ಲಿ 14 ಲಕ್ಷ ಮತದಾರರು ಮಂಡ್ಯದ ಮತದಾರರ ಪಟ್ಟಿ ಅಂತಿಮ, ಜಿಲ್ಲೆಯಲ್ಲಿ 14 ಲಕ್ಷ ಮತದಾರರು

ಹೇಮಾವತಿ ಜಲಾಶಯ ನಿರ್ಮಾಣ ಮಾಡುವ ವೇಳೆ ಸುಮಾರು 118ಕ್ಕೂ ಹೆಚ್ಚು ಕುಟುಂಬಗಳು ಜಮೀನು ಕಳೆದುಕೊಂಡಿದ್ದವು. ಆದರೆ ಈ ಸಂತ್ರಸ್ತರಿಗೆ ಸರ್ಕಾರ ಸಮರ್ಪಕವಾಗಿ ಪುನರ್ವಸತಿ ಕಲ್ಪಿಸದ ಕಾರಣದಿಂದಾಗಿ ಇಂದಿಗೂ ಅವರು ಸಂಕಷ್ಟದಲ್ಲಿ ಜೀವನ ನಿರ್ವಹಿಸುತ್ತಿದ್ದಾರೆ. ಪರಿಹಾರಕ್ಕಾಗಿ ಕಳೆದ ಐವತ್ತು ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದರೂ ಪ್ರಯೋಜನವಾಗಿಲ್ಲ. ಈ ಸಂಬಂಧ ಹಲವು ರೀತಿಯ ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ ಅದು ಆಡಳಿತರೂಢರಿಗೆ ಕಾಣಿಸಲೇ ಇಲ್ಲ.

ಇದೀಗ ಬೇರೆ ದಾರಿ ಕಾಣದ ಸಂತ್ರಸ್ತರು ರಾಜ್ಯರೈತ ಸಂಘದ ನೇತೃತ್ವದಲ್ಲಿ ಕೃಷ್ಣರಾಜಪೇಟೆ ತಾಲೂಕಿನ ಬೆಳ್ಳಿಬೆಟ್ಟದ ಕಾವಲು ಅರಣ್ಯ ಪ್ರದೇಶದಲ್ಲಿ ಸರ್ವೆ ನಂ.1ರಲ್ಲಿ ನೀಡಿರುವ 500 ಎಕರೆ ಭೂಮಿ ಹಾಗೂ 26 ಎಕರೆ ಗ್ರಾಮಠಾಣಾ ಜಮೀನಿನಲ್ಲಿ ನಗರವನ್ನು ಕಟ್ಟುವುದಾಗಿ ಘೋಷಿಸುವ ಮೂಲಕ ಪ್ರತಿಭಟನೆ ಆರಂಭಿಸಿದ್ದು, ಇದಕ್ಕೆ ನಾಡಿನ ವಿವಿಧ ಭಾಗಗಳಿಂದ ಬಂದಿರುವ ನೂರಾರು ರೈತರು ಸಾಥ್ ನೀಡಿದ್ದಾರೆ.

Farmers in Mandya demand their land back, protest

ಈ ವಿನೂತನ ಪ್ರತಿಭಟನೆ ಹೊಸ ಆಯಾಮ ಪಡೆದುಕೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಳುಗಡೆ ಸಂತ್ರಸ್ತ ರೈತರಿಗೆ ನ್ಯಾಯವನ್ನು ದೊರಕಿಸಿಕೊಡಲು ನಾಡಿನ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ರೈತ ಮುಖಂಡರು ಹಾಗೂ ರೈತರು ಆಗಮಿಸುತ್ತಿದ್ದಾರೆ. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಈ ಪ್ರತಿಭಟನೆಗೆ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ನಾರಾಯಣರೆಡ್ಡಿ, ಪ್ರಧಾನ ಕಾರ್ಯದರ್ಶಿ ಮಂಜುನಾಥಗೌಡ, ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ಉಪಾಧ್ಯಕ್ಷೆ ಶಾಹಿನಾಬೇಗಂ, ಸುಷ್ಮಾಗೌಡ, ಸಂತ್ರಸ್ತರ ಹೋರಾಟ ಸಮಿತಿಯ ಅಧ್ಯಕ್ಷ ನಾಗೇಗೌಡ ಸೇರಿದಂತೆ ನೂರಾರು ರೈತರು ಬಿಬಿ ಕಾವಲು ಗ್ರಾಮಠಾಣಾ ಜಮೀನಿನ ಬಳಿ ಜಮಾಯಿಸಿ ಸಂತ್ರಸ್ತರ ನ್ಯಾಯಬದ್ಧ ಹಕ್ಕನ್ನು ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಪ್ರತಿಭಟನೆಯನ್ನು ಹಿಂಪಡೆಯುವಂತೆ ತಹಸೀಲ್ದಾರ್ ಶಿವಮೂರ್ತಿ, ಡಿವೈಎಸ್‌ಪಿ ವಿಶ್ವನಾಥ, ಸರ್ಕಲ್‌ ಇನ್ಸ್‌ಪೆಕ್ಟರ್ ಕೆ.ಎನ್. ಸುಧಾಕರ್, ಗ್ರಾಮಾಂತರ ಪೊಲೀಸ್ ಠಾಣೆಯ ಸಬ್‌ ಇನ್ಸ್‌ಪೆಕ್ಟರ್ ಆನಂದಗೌಡ, ನಾಗಮಂಗಲ ಉಪವಿಭಾಗದ ಸಹಾಯಕ ಸಂರಕ್ಷಣಾಧಿಕಾರಿ ಭೈರಾರೆಡ್ಡಿ, ತಾಲೂಕು ವಲಯ ಅರಣ್ಯಾಧಿಕಾರಿ ಮಧುಸೂದನ್ ಸೇರಿದಂತೆ ನೂರಾರು ಪೊಲೀಸರು, ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದು ಪ್ರತಿಭಟನಾಕಾರರ ಮನವೊಲಿಸುವ ಯತ್ನವನ್ನು ಮುಂದುವರೆಸಿದ್ದಾರೆ.

ಈ ನಡುವೆ ಮಾತನಾಡಿದ ರೈತ ಮುಖಂಡರು, ಜಮೀನು ಮುಳುಗಡೆಯಿಂದ ನಿರಾಶ್ರಿತ ಸಂತ್ರಸ್ತ ರೈತರು ಜಮೀನನ್ನು ಸ್ವಾಧೀನಕ್ಕೆ ಪಡೆಯಲು ಅರಣ್ಯ ಇಲಾಖೆಯು ವಿನಾಕಾರಣ ತೊಂದರೆ ನೀಡುತ್ತಿದೆ. ಬೆಳ್ಳಿಬೆಟ್ಟದ ಕಾವಲು ಸರ್ವೇ ನಂಬರ್ 1ರಲ್ಲಿರುವ ಎರಡೂವರೆ ಸಾವಿರ ಎಕರೆ ಜಾಗದಲ್ಲಿ ಸಂತ್ರಸ್ತ ರೈತರಿಗೆ ಕಳೆದ 50 ವರ್ಷಗಳ ಹಿಂದೆ ರಾಜ್ಯ ಸರ್ಕಾರವು ಮಂಜೂರು ಮಾಡಿರುವ ಕೃಷಿ ಭೂಮಿಯನ್ನು ಕೊಡಿ ಎಂದು ಒತ್ತಾಯಿಸಿದ್ದಾರೆ.

ಜತೆಗೆ ನಮ್ಮ ಹಕ್ಕನ್ನು ಕಿತ್ತುಕೊಳ್ಳಲು ನಿಮಗೇನು ಹಕ್ಕಿದೆ? ರೈತರ ಜೀವನದ ಜೊತೆಯಲ್ಲಿ ಚೆಲ್ಲಾಟವಾಡಬೇಡಿ. ಬಿಬಿ ಕಾವಲು ಗ್ರಾಮಠಾಣಾ ಜಮೀನು ಸಂತ್ರಸ್ತ ರೈತರಿಗೆ ಮಂಜೂರಾಗಿದ್ದು, ಈ ಜಮೀನಿನಲ್ಲಿ ಅರಣ್ಯ ಇಲಾಖೆಯು ಬೆಳೆಸಿರುವ ಗಿಡಗಳನ್ನು ಕಿತ್ತುಹಾಕಿ ಸಂತ್ರಸ್ತರು ವಾಸಮಾಡಲು ಅನುಕೂಲವಾಗುವಂತೆ ರೈತನಾಯಕರಾದ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಹೆಸರಿನಲ್ಲಿ ನಗರವನ್ನು ಕಟ್ಟಿ ಇಲ್ಲಿಯೇ ವಾಸ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಪ್ರತಿಭಟನೆ ಯಾವ ರೀತಿಯ ಆಯಾಮ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

English summary
Farmers in Mandya have been demanding their land to be returned, which was aquired during construction of Gurur Hemavathi dam in Mandya district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X