ಮೋದಿ ಸರ್ಕಾರದ ದ್ರೋಹ ರೈತರಿಗೆ ಅರ್ಥವಾಗಿದೆ: ರಾಹುಲ್ ಗಾಂಧಿ
ನವದೆಹಲಿ, ಡಿಸೆಂಬರ್ 9: ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆಯನ್ನು ಬೆಂಬಲಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮಗೆ ಮೋದಿ ಸರ್ಕಾರ ನಂಬಿಕೆದ್ರೋಹ ಎಸಗಿದೆ ಎನ್ನುವುದು ರೈತರಿಗೆ ಅರ್ಥವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
'ಮೋದಿ ಸರ್ಕಾರ ತಮಗೆ ವಿಶ್ವಾಸ ದ್ರೋಹ ಎಸಗಿದೆ ಎಂದು ದೇಶದ ರೈತರಿಗೆ ಈಗ ಅರ್ಥವಾಗಿದೆ. ಈಗ ಅವು ಹಿಂದೆ ಸರಿಯುವುದಿಲ್ಲ. ಏಕೆಂದರೆ ಇಂದು ತಾವು ರಾಜಿಯಾದರೆ ಅವರ ಭವಿಷ್ಯವೇ ಉಳಿಯುವುದಿಲ್ಲ ಎನ್ನುವುದು ಅವರಿಗೆ ತಿಳಿದಿದೆ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ರೈತರ ಸಮಸ್ಯೆಗಳನ್ನು ಬಗೆಹರಿಸುವುದು ಸರ್ಕಾರದ ಕರ್ತವ್ಯ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. 'ಈ ಚಳಿಯಲ್ಲಿ ರೈತರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಬೀದಿಗಿಳಿದು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸುವುದು ಸರ್ಕಾರದ ಕರ್ತವ್ಯ' ಎಂದು ಪವಾರ್ ಹೇಳಿದ್ದಾರೆ.

ಶರದ್ ಪವಾರ್, ರಾಹುಲ್ ಗಾಂಧಿ ಸೇರಿದಂತೆ ವಿರೋಧಪಕ್ಷಗಳ ಮುಖಂಡರು ಬುಧವಾರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ರೈತರ ಪ್ರತಿಭಟನೆಗಳ ಕುರಿತು ಚರ್ಚಿಸಿದರು.












Click it and Unblock the Notifications