ಮಹದಾಯಿ ನೀರಿಗಾಗಿ ಮತ್ತೆ ಸಮರಕ್ಕೆ ಸಜ್ಜಾದ ರೈತರು
ಹುಬ್ಬಳ್ಳಿ, ಆಗಸ್ಟ್, 16: ಮಹದಾಯಿ ನೀರಿಗಾಗಿ 47 ವರ್ಷಗಳಿಂದ ಹೋರಾಟ ನಡೆಯುತ್ತಲೇ ಬಂದಿದೆ. ಪ್ರತಿ ಚುನಾವಣೆ ಬಂದಾಗ ಈ ಹೋರಾಟವನ್ನು ರಾಜಕೀಯ ಪಕ್ಷಗಳು ಎನ್‌ಕ್ಯಾಷ್ ಮಾಡಿಕೊಂಡು ಬಳಸಿಕೊಳ್ಳುತ್ತಕೇ ಬಂದಿವೆ. ಆದರೆ ರೈತರ ಈ ಹೋರಾಟಕ್ಕೆ ಮಾತ್ರ ಕೊನೆ ಕಾಣಲೇ ಇಲ್ಲ. ಈಗ ಮತ್ತೇ ರೈತ ಹೋರಾಟಗಾರರು ಒಂದಾಗಿ ಹೋರಾಟ ಮಾಡಲು ನಿರ್ಧಾರ ಕೈಗೊಂಡಿದ್ದಾರೆ.
ಮಹದಾಯಿ ನೀರಿಗಾಗಿ ಉತ್ತರ ಕರ್ನಾಟಕದ 4 ಜಿಲ್ಲೆಯ 14 ತಾಲೂಕುಗಳ ರೈತ ಹೋರಾಟಗಾರರು ಕಳೆದ 47 ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೆ ಒಂದು ಹನಿ ನೀರು ಕೂಡ ಬರಲಿಲ್ಲ. ಕಳೆದ ವಿಧಾನಸಭೆ ಚುನಾವಣೆ ವೇಳೆ ಇದೆ ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಡಿಪಿಆರ್ ಫೈನಲ್ ಮಾಡಿ ಆದೇಶ ಮಾಡಿತ್ತು. ಆದರೂ ನೀರು ಬರಲಿಲ್ಲ ಎಂದು ರೈತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಗೋವಾ ಸರ್ಕಾರ ಮತ್ತೇ ತಗಾದೆ ತೆಗೆದು ವನ್ಯ ಜೀವಿಗಳಿಗೆ ಹಾನಿ ಆಗಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ಹೋಗಿತ್ತು. ಇದರ ವಿಚಾರಣೆಗೆ ಕೋರ್ಟ್ ಈಗ ಅಸ್ತು ಅಂದಿದೆ. ಹೀಗಾಗಿ ಮಹದಾಯಿ ಪ್ರಕ್ರಿಯೆ ಮತ್ತೇ ಒಂದು ವರ್ಷ ವಿಳಂಬ ಆಗುವುದು ಪಕ್ಕಾ ಆಗಿದೆ. ಇದೇ ರೀತಿ ಕಳೆದ 47 ವರ್ಷಗಳಿಂದ ಒಂದಲ್ಲೊಂದು ತೊಡಕು ಬರುತ್ತಲೇ ಇದೆ. ಆದರೆ ರೈತರ ಜಮೀನಿಗೆ ಹಾಗೂ ಉತ್ತರ ಕರ್ನಾಟಕಕ್ಕೆ ಕುಡಿಯಲು ನೀರು ಮಾತ್ರ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಇದೀಗ ಮಹದಾಯಿ ಹೋರಾಟಗಾರರು ಮತ್ತೊಂದು ಹೋರಾಟಕ್ಕೆ ಸಜ್ಜಾಗಿದ್ದಾರೆ. ತಮ್ಮ ಹಕ್ಕಿನ ನೀರು ಪಡೆಯಲು ರಾಜಕೀಯ ಪಕ್ಷಗಳಿಗೆ ಬಿಸಿ ಮುಟ್ಟಿಸಲು ತಯಾರಿ ನಡೆಸಿದ್ದಾರೆ. ಅನೇಕ ಹೋರಾಟಗಳಿಗೆ ವೇದಿಕೆಯಾಗಿರುವ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿಯೇ ರೈತರು ಸಭೆ ಮಾಡಿ ಪಾಂಚಜನ್ಯ ಮೊಳಗಿಸಿದ್ದಾರೆ.
ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು 4 ಜಿಲ್ಲೆಯ 14 ತಾಲೂಕಿನ ಹೋರಾಟಗಾರರು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮನೆಗೆ ನಿಯೋಗದ ಮೂಲಕ ಭೇಟಿ ಮಾಡಿ ಮಹದಾಯಿ ನೀರು ತರಲು ಮನವಿ ಮಾಡಲಿದ್ದಾರೆ. ಅಲ್ಲದೇ ಮುಂದೆ ನೀರು ಕೊಡದೇ ಇದ್ದರೆ ಹೋರಾಟದ ಹಾದಿ ಹೇಗಿರಲಿದೆ ಎಂದು ಮನವರಿಕೆ ಕೂಡ ಮಾಡಿಕೊಡಲಿದ್ದಾರಂತೆ ಮಹದಾಯಿ ಹೋರಾಟದ ರೂಪುರೇಷೆ ಮಾಡಿದ ಮುಖಂಡ ಶಂಕರ ಅಂಬಲಿ ಅವರು.
ಈ ಹಿಂದೆ 2018ರಲ್ಲಿ ನ್ಯಾಯಾಧಿಕರಣ 13.5 ಟಿಎಂಸಿ ನೀರನ್ನು ರಾಜ್ಯಕ್ಕೆ ನೀಡಲು ಆದೇಶ ನೀಡಿತ್ತು. ಅದರಲ್ಲಿ ಕುಡಿಯಲು 5.5 ಟಿಎಂಸಿ, ವಿದ್ಯುತ್ ಉತ್ಪಾದನೆಗೆ 8.02 ಟಿಎಂಸಿ ನೀರು ಹಂಚಿಕೆಯಾಗಿದೆ. ಆದರೆ ಅದರಲ್ಲಿ ಒಂದು ಹನಿ ನೀರು ಬರಲಿಲ್ಲ. ಇಷ್ಟು ದಿನ ರಾಜಕಾರಣಕ್ಕೆ ಬಳಸಿಕೊಂಡು ಮತಹಾಕಿಸಿಕೊಂಡ ಜನಪ್ರತಿನಿಧಿಗಳಿಗೆ ಹಾಗೂ ರಾಜಕೀಯ ಪಕ್ಷಗಳಿಗೆ ಕೂಡ ಬುದ್ಧಿ ಕಲಿಸಲು ಹೋರಾಟಗಾರರು ಅಣಿಯಾಗಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆ ವೇಳೆಗೆ ನೀರು ಬರದೇ ಇದ್ದರೆ ಇವರಿಗೆ ಹೇಗೆ ಬುದ್ಧಿ ಕಲಿಸಬೇಕು ಎಂದು ಕೂಡ ಚರ್ಚೆ ಮಾಡಿದ್ದಾರೆ. ಸದ್ಯ ಒಂದು ಹೆಜ್ಜೆ ಮುಂದಿಟ್ಟಿರುವ ಹೋರಾಟಗಾರರು, ಚುನಾವಣೆ ವೇಳೆಗೆ ರಾಜಕೀಯ ಪಕ್ಷಗಳಿಗೆ ಒಂದು ಕೈ ತೋರಿಸುವ ನಿರ್ಧಾರ ಮಾಡಿದ ಕುರಿತು ಹೋರಾಟಗಾರ ಲೋಕನಾಥ್ ಹೆಬಸೂರು ಹೇಳುವುದು ಹೀಗೆ.
ಒಟ್ಟಾರೆಯಾಗಿ ಕಳೆದ 5 ವರ್ಷದಿಂದ ತಣ್ಣಗಾಗಿದ್ದ ಮಹದಾಯಿ ಹೋರಾಟ ಈಗ ಮತ್ತೇ ಮುನ್ನಲೆಗೆ ಬಂದಿದೆ. ಕಳೆದ ಲೋಕಸಭೆ ಚುನಾವಣೆ ವೇಳೆಯಲ್ಲೇ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈಗ ಮತ್ತೆ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿದೆ. ಅತ್ತ ಕೇಂದ್ರದಲ್ಲಿ ಬಿಜೆಪಿ, ಇತ್ತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಹೀಗಾಗಿ ಮತ್ತೇ ಈ ಮಹದಾಯಿ ವಿಚಾರ ರಾಜಕೀಯ ಗಾಳವಾಗುತ್ತಾ? ಅಥವಾ ಹೋರಾಟಗಾರರು ರಾಜಕೀಯ ಗಾಳದಿಂದ ತಪ್ಪಿಸಿ ನೀರು ತರುವಲ್ಲಿ ಯಶಸ್ವಿಯಾಗ್ತಾರಾ ಎಂದು ಕಾದುನೋಡಬೇಕಿದೆ.












Click it and Unblock the Notifications