ಸಿಎಂ ತವರಲ್ಲಿ ಮುಂದುವರೆದ ರೈತರ ಆತ್ಮಹತ್ಯೆ
ಮೈಸೂರು, ಫೆಬ್ರವರಿ 17 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪ್ರಿಯ ಬಜೆಟ್ ಮಂಡಿಸಿದ ಬೆನ್ನಲ್ಲೇ ಅವರ ತವರು ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತನೊಬ್ಬ ವಿಷದ ಗುಳಿಗೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕಿನ ಚನ್ನಸೋಗೆ ಗ್ರಾಮದಲ್ಲಿ ನಡೆದಿದೆ.
ಚನ್ನಸೋಗೆ ಗ್ರಾಮದ ನಿವಾಸಿ ದಿವಂಗತ ಚಿಕ್ಕಣ್ಣರವರ ಪುತ್ರ ಚಂದ್ರಪ್ಪ(38) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ರೈತ. ಈತ ಗುರುವಾರ ರಾತ್ರಿ ವಿಷದ ಗುಳಿಗೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ.
ರೈತ ಚಂದ್ರಪ್ಪನಿಗೆ ಗ್ರಾಮದಲ್ಲಿ 2.11 ಎಕರೆ ಜಮೀನಿದ್ದು, ಈ ಜಮೀನಿನಲ್ಲಿ ಕೃಷಿ ಮಾಡುವ ಸಲುವಾಗಿ ಹುಣಸೂರು ಕೆನರಾ ಬ್ಯಾಂಕಿನಿಂದ 4.30 ಲಕ್ಷ ರೂ. ಸಾಲ ಮಾಡಿದ್ದರಲ್ಲದೆ, ಕೈಸಾಲವಾಗಿ ಬೇರೆ, ಬೇರೆ ಕಡೆಗಳಲ್ಲಿ ಸುಮಾರು 2 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ಆದರೆ ಸಮರ್ಪಕವಾಗಿ ಮಳೆಯಾಗದ ಕಾರಣದಿಂದಾಗಿ ಕೃಷಿ ಫಸಲು ಕೈಗೆ ಬಾರದೆ ನಷ್ಟ ಹೊಂದಿದ ಪರಿಣಾಮ ಸಾಲ ತೀರಿಸಲು ಸಾಧ್ಯವಾಗದೆ ಕಂಗಲಾಗಿದ್ದರಲ್ಲದೆ, ಸಾಲಗಾರರ ಕಾಟವೂ ಹೆಚ್ಚಾಗಿತ್ತು ಎನ್ನಲಾಗಿದೆ.
ಈ ನಡುವೆ ಸಾಲಗಾರರ ಕಾಟದಿಂದ ಬೇಸತ್ತಿದ್ದ ಚಂದ್ರಪ್ಪ ಗುರುವಾರ ರಾತ್ರಿ ಕೀಟನಾಶಕ ಗುಳಿಗೆಗಳನ್ನು ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದರು. ಇದನ್ನು ನೋಡಿದ ಮನೆಯವರು ತಕ್ಷಣ ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ.
ಮೃತರಿಗೆ ಪತ್ನಿ ಮತ್ತು ಇಬರು ಮಕ್ಕಳಿದ್ದಾರೆ. ಈ ಸಂಬಂದ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications