PM Kisan Scheme: ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ರೈತರಿಗೆ ಹೊಸ ಅಪ್‌ಡೇಟ್
ಬೆಂಗಳೂರು, ಜನವರಿ 12: ಕೇಂದ್ರ ಸರ್ಕಾರ ರೈತರಿಗೆ ಆರ್ಥಿಕ ನೆರವು ನೀಡಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಈಗ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಆದೇಶವನ್ನು ಹೊರಡಿಸಲಾಗಿದೆ. ಜನವರಿ 1, 2025ರಿಂದಲೇ ಜಾರಿಗೆ ಬರುವಂತೆ ಯೋಜನೆಯಲ್ಲಿ ಬದಲಾವಣೆಯಾಗಿದೆ. ಯೋಜನೆಗೆ ಹೊಸ ನೋಂದಣಿ ಮಾಡಿಸುವ ರೈತರು 'ಕೃಷಿಕರ ಗುರುತಿನ ಚೀಟಿ' ಹೊಂದಿರುವುದು ಕಡ್ಡಾಯವಾಗಿದೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಕೆಲವು ಮಾನದಂಡಗಳನ್ನು ಹೊರತುಪಡಿಸಿ ದೇಶಾದ್ಯಂತ ಎಲ್ಲಾ ಕೃಷಿಯೋಗ್ಯ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಯೋಜನೆಯಡಿ ರೂ. 6000 ಅನ್ನು ವಾರ್ಷಿಕವಾಗಿ ಮೂರು ಸಮಾನ ಕಂತುಗಳಲ್ಲಿ ರೂ. 2000 ದಂತೆ ನೇರವಾಗಿ ರೈತರ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.

ಕೃಷಿಕರ ಗುರುತಿನ ಚೀಟಿ ಕಡ್ಡಾಯ: ಈಗ ಪಿಎಂ ಕಿಸಾನ್ ಯೋಜನೆಯಡಿ ನೋಂದಣಿಯಾಗಲು ಕೇಂದ್ರ ಸರ್ಕಾರ 'ಕೃಷಿಕರ ಗುರುತಿನ ಚೀಟಿ' ಕಡ್ಡಾಯಗೊಳಿಸಿದೆ. ಈ ಕುರಿತು ಕೇಂದ್ರ ಕೃಷಿ ಮತ್ತು ರೈತರ ಕ್ಷೇಮಾಭಿವೃದ್ಧಿ ಇಲಾಖೆ ಆದೇಶವನ್ನು ಹೊರಡಿಸಿದೆ. ಈ ಗುರುತಿನ ಚೀಟಿ ಅರ್ಜಿ ಸಲ್ಲಿಕೆ ಮಾಡುವವರು ಕೃಷಿ ಭೂಮಿಯನ್ನು ಹೊಂದಿದ್ದಾರೆಯೇ? ಎಂಬುದನ್ನು ಖಚಿತಪಡಿಸುತ್ತದೆ.
ಕೃಷಿಕರ ಗುರುಚಿತ ಚೀಟಿಯನ್ನು ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯ ನೋಂದಣಿಗೆ ಕಡ್ಡಾಯಗೊಳಿಸಿ ಆದೇಶಿಸಲಾಗಿದೆ. ಜನವರಿ 1ರಿಂದಲೇ ಕೆಲವು ರಾಜ್ಯಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ಅಲ್ಲದೇ ಮುಂಬರುವ ದಿನಗಳಲ್ಲಿ ಎಲ್ಲಾ ರಾಜ್ಯಗಳಿಗೂ ಸಹ ಇದನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ರೈತರಿಗೆ ಆಧಾರ್ ಕಾರ್ಡ್‌ನಂತೆಯೇ ಡಿಜಿಟಲ್ ಗುರುತನ್ನು (ರೈತ ಐಡಿ) ನೀಡಲಾಗುತ್ತದೆ. ಇದು ವಿಶ್ವಾಸಾರ್ಹ 'ಕಿಸಾನ್ ಕಿ ಪೆಹಚಾನ್' ಆಗಿರುತ್ತದೆ. ಈ 'ರೈತ ಐಡಿ'ಯನ್ನು ರಾಜ್ಯದ ಭೂ ದಾಖಲೆಗಳು, ಜಾನುವಾರುಗಳ ಮಾಲೀಕತ್ವ, ಬಿತ್ತಿದ ಬೆಳೆಗಳು, ಜನಸಂಖ್ಯಾ ವಿವರಗಳು, ಕುಟುಂಬದ ವಿವರಗಳು, ಯೋಜನೆಗಳು ಮತ್ತು ಪ್ರಯೋಜನಗಳು ಇತ್ಯಾದಿಗಳಿಗೆ ಕ್ರಿಯಾತ್ಮಕವಾಗಿ ಲಿಂಕ್ ಮಾಡಲಾಗುತ್ತದೆ. ರೈತರು ಬಿತ್ತಿದ ಬೆಳೆಗಳನ್ನು ಮೊಬೈಲ್ ಆಧಾರಿತ ಭೂ ಸಮೀಕ್ಷೆ ಮಾಡಲು ಸಹ ಇದನ್ನು ಬಳಕೆ ಮಾಡಲಾಗುತ್ತದೆ.
ಕೇಂದ್ರ ಸರ್ಕಾರದ ಮಾಹಿತಿಯಂತೆ ಪಿಎಂ-ಕಿಸಾನ್ ಸಮ್ಮಾನ್ ಯೋಜನೆಗೆ ಪ್ರತಿ ತಿಂಗಳು 2 ಲಕ್ಷಕ್ಕೂ ಅಧಿಕ ಹೊಸ ಅರ್ಜಿಗಳು ಸಲ್ಲಿಕೆಯಾಗುತ್ತಿದೆ. ಇದರಲ್ಲಿ ಅರ್ಹ/ ಅನರ್ಹ ಅರ್ಜಿಗಳು ಸೇರಿವೆ. ಆದ್ದರಿಂದ ಯೋಜನೆಯ ನೋಂದಣಿಗೆ ಕೃಷಿಕರ ಐಡಿಯನ್ನು ಕಡ್ಡಾಯಗೊಳಿಸಲಾಗಿದೆ. ಅರ್ಜಿ ಭರ್ತಿ ಮಾಡುವ ಸಂದರ್ಭದಲ್ಲಿ ಕೃಷಿಕರ ಐಡಿ ನಂಬರ್ ದಾಖಲು ಮಾಡಿದರೆ, ಅವರು ಭೂಮಿ ಹೊಂದಿದ್ದಾರೆಯೇ?, ಇಲ್ಲವೇ? ಎಂಬುದನ್ನು ಖಚಿತಪಡಿಸುತ್ತದೆ.
ಪಿಎಂ-ಕಿಸಾನ್ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡುವ ರೈತರು ನೋಂದಣಿಯ ಸಮಯದಲ್ಲಿ ಕೃಷಿಕರ ಗುರುತಿನ ಚೀಟಿ ಸಂಖ್ಯೆಯನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕಿದೆ. ಸದ್ಯ 10 ರಾಜ್ಯಗಳಲ್ಲಿ ಎಲ್ಲಾ ಹೊಸ ಅರ್ಜಿದಾರರಿಗೆ ಇದನ್ನು ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ನೋಂದಣಿಯಾಗಿರುವ ರೈತರಿಗೆ ಕೃಷಿಕರ ಗುರುತಿನ ಚೀಟಿ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಕೃಷಿಕರ ಗುರುತಿನ ಚೀಟಿ ಕಡ್ಡಾಯಗೊಳಿಸುವ ಕುರಿತು ಈಗಾಗಲೇ ಕೃಷಿ ಸಚಿವಾಲಯವು 10 ರಾಜ್ಯಗಳಿಗೆ ಈ ಕುರಿತು ಮಾಹಿತಿ ನೀಡಿದೆ. ಉಳಿದ ರಾಜ್ಯಗಳಲ್ಲಿ, ಇದನ್ನು ನಂತರದ ದಿನಾಂಕದಲ್ಲಿ ಕಡ್ಡಾಯಗೊಳಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಿಎಂ-ಕಿಸಾನ್ ಅಡಿಯಲ್ಲಿ ಹೊಸ ಅರ್ಜಿ ಸಲ್ಲಿಸುವ ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯದ ರೈತರು ಸದ್ಯ ಕೃಷಿಕರ ಗುರುತಿನ ಚೀಟಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಈ 10 ರಾಜ್ಯಗಳು ಸುಮಾರು 84 ಶೇಕಡಾ (9.25 ಕೋಟಿ) ಪಿಎಂ-ಕಿಸಾನ್ ಸಮ್ಮಾನ್ ಫಲಾನುಭವಿಗಳನ್ನು ಹೊಂದಿದೆ.












Click it and Unblock the Notifications