ಹೊಲದ ಮಧ್ಯದಲ್ಲಿ ಹೈಟೆನ್ಷನ್ ವಿದ್ಯುತ್ ಕಂಬ ನೆಟ್ಟ ಕೆಪಿಟಿಸಿಎಲ್ ಅಧಿಕಾರಿಗಳು: ಕಣ್ಣೀರಿಡುತ್ತಿರುವ ಹುಬ್ಬಳ್ಳಿ ರೈತರು
ಕೆಪಿಟಿಸಿಎಲ್ ಅಧಿಕಾರಿಗಳು ಜಮೀನಿನಲ್ಲಿ ಹೈಟೆನ್ಷನ್ ವಿದ್ಯುತ್ ಕಂಬಗಳನ್ನು ನೆಟ್ಟಿದ್ದು, ಇದರಿಂದ ರೈತರು ಪ್ರತಿನಿತ್ಯ ಕಣ್ಣೀರಿಡುವಂತಾಗಿದೆ.
ಧಾರವಾಡ, ಮಾರ್ಚ್, 14: ಜನರಿಂದ ಆಯ್ಕೆಯಾಗಿ ಬಂದಂತಹ ಪ್ರತಿ ರಾಜಕಾರಣಿ ಕೂಡ ನಮ್ಮದು ರೈತ ಪರ ಸರ್ಕಾರ ಎಂದು ಹೇಳುವುದು ಸಾಮಾನ್ಯವಾಗಿದೆ. ಆದರೆ ರೈತರ ಸಮಸ್ಯೆಗಳನ್ನು ಮಾತ್ರ ಯಾರೂ ಆಲಿಸುವುದಿಲ್ಲ. ಸರ್ಕಾರ ರೈತರಿಗೆ ಅನುಕೂಲ ಆಗುವಂತಹ ಕೆಲಸವನ್ನು ಮಾಡಬೇಕು. ಆದರೆ, ಧಾರವಾಡ ಜಿಲ್ಲೆಯಲ್ಲಿ ರೈತರಿಗೆ ಕಷ್ಟದ ಮೇಲೆ ಕಷ್ಟ ಎದುರಾಗುತ್ತಿವೆ. ಈಗ ಬಂದಿರುವ ಕಷ್ಟ ವಿದ್ಯುತ್ ಹೈಟೆನ್ಷನ್ ಕಂಬಗಳಿಂದ ಆಗಿದೆ.
ಧಾರವಾಡ ತಾಲೂಕಿನ ಮಾರಡಗಿ, ಹೆಬ್ಬಳ್ಳಿ, ಶಿವಳ್ಳಿ ಸೇರಿ ಹಲವು ಗ್ರಾಮದ ರೈತರು ವಿದ್ಯುತ್ ಹೈಟೆನ್ಷನ್ ಕಂಬಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಧಾರವಾಡ ನಗರದ ಅಮ್ಮಿನಬಾವಿ ರಸ್ತೆಯ ಎಲೆಕ್ಟ್ರಿಕ್ ಗ್ರೀಡ್‌ದಿಂದ ಶಿವಳ್ಳಿ ಗ್ರಾಮದವರೆಗೆ ಹೈಟೆನ್ಷನ್ ವಿದ್ಯುತ್ ಕಂಬಗಳನ್ನು ಹಾಕಲಾಗುತ್ತಿದೆ. ಈ ಕಂಬಗಳನ್ನು ರೈತರ ಜಮೀನಿನಲ್ಲೇ ಹಾಕಬೇಕು. ಕೆಪಿಟಿಸಿಎಲ್ ಕಂಬ ಹಾಕುವ ಗುತ್ತಿಗೆ ನೀಡಿ ಕೈ ತೊಳೆದುಕೊಂಡಿದೆ. ಆದರೆ, ರೈತರಿಗೆ ಕಂಬ ಹಾಕುವ ಬಗ್ಗೆ ಕೇಳೇ ಇಲ್ಲ. ಇಲ್ಲಿನ ರೈತರು ತಮ್ಮ ಜಮೀನಿನಲ್ಲಿ ಹೈಟೆನ್ಷನ್ ಕಂಬ ಹಾಕದಂತೆ ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿ ರೈತರ ಕಣ್ಣೀರು
ಮೊದಲು ರೈತರ ಜಮೀನಿನಲ್ಲಿ ಕಂಬ ಹಾಕಬೇಕಾ ಅಥವಾ ಬೇಡವಾ ಎಂದು ಕೇಳಬೇಕು. ಆದರೆ ಇಲ್ಲಿ ಏನೂ ಕೇಳದೇ, ಪರಿಹಾರವನ್ನು ಕೂಡ ಕೊಡದೇ ವಿದ್ಯುತ್ ಕಂಬವನ್ನು ಹಾಕಲಾಗುತ್ತಿದೆ. ಇದರಿಂದ ರೈತರು ಹೊಲದಲ್ಲಿ ಕೆಲಸವನ್ನು ಕೂಡ ಮಾಡುವುದಕ್ಕೆ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಕಂಬ ಹಾಕಿದ ಜಾಗದಲ್ಲಿ ಏನೂ ಬೆಳೆಯುವಂತಿಲ್ಲ. ಅಲ್ಲದೇ ಕಂಬದ ಅಕ್ಕ ಪಕ್ಕ ಕೂಡ ಏನು ಮಾಡುವಂತಿಲ್ಲ. ಹೀಗಾಗಿ ಚಿಕ್ಕ ರೈತರಿಗೆ ಇರುವ ಜಮೀನಿನಲ್ಲೇ ಬೆಳೆ ಬೆಳೆದು ಜೀವನ ಮಾಡಬೇಕು. ಆದರೆ ಕೆಪಿಟಿಸಿಎಲ್ ಇದನ್ನು ಯಾವ ಲೆಕ್ಕಕ್ಕೂ ತೆಗೆದುಕೊಳ್ಳದೇ ಕಂಬ ಹಾಕಿಸುತ್ತಿದೆ.
ಹೊಲದ ಮಧ್ಯದಲ್ಲಿ ಕಂಬಗಳನ್ನ ನೆಟ್ಟ ಅಧಿಕಾರಿಗಳು
ಹೊಲದ ಮಧ್ಯದಲ್ಲಿ ಕಂಬಗಳನ್ನು ಹಾಕಲಾಗಿದ್ದು, ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲ ರಾಜಕೀಯ ಬೆಂಬಲಿತರ ಹೊಲ ಹಾಗೂ ಸೈಟ್‌ಗಳಲ್ಲಿ ಅವರು ಹೇಳಿದ ಕಡೆ ಕಂಬ ಹಾಕಿದ್ದಾರೆ. ಆದರೆ ರೈತರಿಗೆ ಮಾತ್ರ ಬರೆ ಎಳೆಯುವಂತೆ ಕಂಬವನ್ನು ಹೊಲದಲ್ಲಿ ಹಾಕಿದ್ದಾರೆ. ಸದ್ಯ ಈ ಬಗ್ಗೆ ಕೆಪಿಟಿಸಿಎಲ್ ಅಧಿಕಾರಿಗಳನ್ನು ಕೇಳಿದರೆ ಈಗಾಗಲೇ ನಾವು ಎಲ್ಲ ರೀತಿಯ ಸರ್ವೇ ಮಾಡಿದ್ದೇವೆ ಎನ್ನುತ್ತಾರೆ.

ರೈತರಿಗೆ ನೋಟಿಸ್ ಮೂಲಕ ತಿಳಿಸಿ ಕೆಲಸವನ್ನು ಆರಂಭಿಸಲಾಗಿದೆ. ಎನ್‌ಎ ಪ್ಲಾಟ್‌ಗಳು ಸೇರಿ ದೇವಸ್ಥಾನ ಹಾಗೂ ಗ್ರಾಮದ ಹೊರಹೊಲಯದಲ್ಲಿ ನಾವು ಈ ಸರ್ವಿಸ್ ಟವರ್‌ಗಳನ್ನು ಹಾಕಲಾಗುತ್ತಿದ್ದು, ರೈತರಿಗೆ ಪರಿಹಾರವನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನೀಡಲಾಗುತ್ತದೆ ಎನ್ನುತ್ತಿದ್ದಾರೆ.
ಒಟ್ಟಾರೆ ರೈತರು ತಮ್ಮ ಅಷ್ಟೋ ಇಷ್ಟೋ ಜಮೀನಿನಲ್ಲಿ ಬೆಳೆ ಬೆಳೆದು ಹೇಗೋ ಜೀವನ ಸಾಗಿಸುತ್ತಿದ್ದರು. ಕಡಿಮೆ ಜಮೀನು ಹೊಂದಿದ ರೈತರ ಸ್ಥಿತಿ ಈ ಟವರ್‌ಗಳಿಂದ ಡೋಲಾಯಮಾನವಾಗಿದೆ. ಇತ್ತ ಪರಿಹಾರವೂ ಇಲ್ಲದಂತಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ರೈತರ ಕಷ್ಟಕ್ಕೆ ನೆರವಾಗಬೇಕಿದೆ ಎನ್ನುವುದು ಇಲ್ಲಿನ ಸ್ಥಳೀಯರ ಆಶಯವಾಗಿದೆ.












Click it and Unblock the Notifications