ಹಾಲು ಕೊಳ್ಳುವ ಭರವಸೆ, ಒಂದು ಕತ್ತೆ 1 ಲಕ್ಷಕ್ಕೆ ಮಾರಾಟ; ಡಿಸಿ ಮೊರೆ ಹೋದ ರೈತರು
ಬಳ್ಳಾರಿ, ಸೆಪ್ಟೆಂಬರ್ 12: ಕತ್ತೆ ಹಾಲಿಗೆ ಬಹಳ ಬೇಡಿಕೆ ಇರುವುದು ತಿಳಿದಿದೆ. ಆದರೆ ಹಳ್ಳಿಗಳಲ್ಲಿ ರೈತರ ಬಳಿ ಕತ್ತೆ ಹಾಲು ಕೊಳ್ಳುತ್ತೇವೆ ಎಂದು ಭರವಸೆ ನೀಡಿ, ಒಂದು ಕತ್ತೆಗೆ ಲಕ್ಷ ರೂ.ಗಳಂತೆ ಹಣ ಪಡೆಯುತ್ತಿರುವುದು ತಿಳಿದುಬಂದಿದೆ. ಈ ಕುರಿತು ಪರಿಶೀಲನೆ ಮಾಡಿ, ರೈತರಿಗೆ ಅನ್ಯಾಯ, ವಂಚನೆ ಆಗದಂತೆ ಕ್ರಮ ಕೈಗೊಳ್ಳಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.
ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯನಗರ ಜಿಲ್ಲಾಧ್ಯಕ್ಷ ಟಿ. ನಾಗರಾಜ್, ವಿಜಯನಗರ ಜಿಲ್ಲಾಧಿಕಾರಿ ಎಂ. ಎಸ್. ದಿವಾಕರ್ ಅವರಿಗೆ ಮನವಿಯನ್ನು ಸಲ್ಲಿಸಿದೆ. ಈ ಮನವಿ ಕತ್ತೆಗಳ ಸಾಕಾಣಿಕೆ ಯೋಜನೆ ಕಂಪನಿಯಾದ ಜೆನ್ನಿಮಿಲ್ಕ್ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ವರದಿ ಕೊಡುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

ಜಿಲ್ಲಾಧಿಕಾರಿಗಳ ಕಛೇರಿ ಫೇಸ್‌ಬುಕ್ ಪೇಜ್‌ನಲ್ಲಿ ದಿನಾಂಕ 11/09/2024 ರಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ರೈತ ಸಂಘದ ಪ್ರತಿನಿಧಿಗಳು ಮನವಿಯನ್ನು ಸಲ್ಲಿಸಿ, ಕೆಲವು ಕಂಪನಿಗಳು ಕತ್ತೆಯ ಹಾಲನ್ನು ಹೆಚ್ಚಿನ ದರಕ್ಕೆ ಖರೀದಿ ಮಾಡುವುದಾಗಿ ಭರವಸೆಯನ್ನು ನೀಡಿ 3 ಲಕ್ಷಕ್ಕೆ 3 ಕತ್ತೆಗಳನ್ನು ಮಾರಾಟ ಮಾಡಿ ರೈತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರಿಂದಾಗಿ ರೈತರು ಆರ್ಥಿಕವಾಗಿ ನಷ್ಟ ಉಂಟು ಮಾಡಿಕೊಳ್ಳುತ್ತಿದ್ದು ರೈತರಿಗೆ ಇದರಿಂದಾಗಿ ಆರ್ಥಿಕವಾಗಿ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಮನವಿಯನ್ನು ಸಲ್ಲಿಸಿರುತ್ತಾರೆ ಎಂದು ಹೇಳಿದೆ.
ರೈತರು ಮಾಡಿರುವ ಮನವಿ ಏನು?; ರೈತರು ತಮ್ಮ ಮನವಿ ಪತ್ರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳಾದ ತಮಗೆ ಮನವಿ ಸಲ್ಲಿಸುವುದೇನೆಂದರೆ, ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ, 10ನೇ ವಾರ್ಡ್, ಹಂಪಿರೋಡ್, ಗೊಲ್ಲರಹಳ್ಳಿ ಏರಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬಿಲ್ಡಿಂಗ್ ಪಕ್ಕದಲ್ಲಿ, ಹೊಸದಾಗಿ ಜೆನ್ನಿಮಿಲ್ಕ್ ಕಂಪನಿ ಆಫೀಸ್ ಮಾಡಿಕೊಂಡಿದ್ದಾರೆ.
ಕತ್ತೆಗಳ ಸಾಕಾಣಿಕೆ ಮತ್ತು ಹಾಲು ಮಾರಾಟ ಮಾಡುವುದರ ಬಗ್ಗೆ ಪ್ರತಿ ಹಳ್ಳಿಗಳಲ್ಲಿ ರೈತರಿಗೆ ಮಾಹಿತಿ ಇಲ್ಲದೇ ರೈತರ ಮಕ್ಕಳನ್ನು ಮನವೊಲಿಸಿ ಅವರಿಗೆ ಸರಿಯಾದ ಮಾಹಿತಿ ಕೊಡದೇ ಕತ್ತೆಗಳ ಸಾಕಾಣಿಕೆಯನ್ನು ರೈತರ ಮಕ್ಕಳಿಗೆ ತಿಳಿಸುತ್ತಾ ಪ್ರತಿ ಒಂದು ಕತ್ತೆಗೆ ಲಕ್ಷ ದಂತೆ 3 ಕತ್ತೆಗಳಿಗೆ 3 ಲಕ್ಷಗಳನ್ನು ದುಡ್ಡು ಕಟ್ಟಿಸಿಕೊಂಡು ಮೂರು ಕತ್ತೆಗಳನ್ನು ಕೊಡುತ್ತಾರೆ.
ಈ ಕತ್ತೆಗಳ ವಸ್ತುಸ್ಥಿತಿ ಪ್ರತಿ ಕತ್ತೆಗೆ 20-30 ಸಾವಿರ ಇರುತ್ತದೆ. ಆದ್ದರಿಂದ ರೈತರಿಗೆ ಲಾಭವಾದರು ಏನು? ಎನ್ನುವುದನ್ನು ಸಹ ತಿಳಿಯದೇ ಪ್ರತಿಹಳ್ಳಿಯಲ್ಲಿ ರೈತರ ಮಕ್ಕಳಿಂದ ದುಡ್ಡುಕಟ್ಟಿಸಿಕೊಂಡು ತಮ್ಮ ಕಂಪನಿ ಲಾಭ ಮಾಡಿಕೊಂಡು ನಂತರ ಸದರಿ ಆಫೀಸ್ ಮುಚ್ಚಿ ಹೋದರೆ ದುಡ್ಡು ಕಟ್ಟಿದವರ ರೈತರ ಮಕ್ಕಳ ಗತಿಯೇನು?.
ಇಂತಹ ಕಂಪನಿಯು ರೈತರನ್ನು ಮೋಸ ಮಾಡುವ ಕಂಪನಿಯಾಗಿದ್ದು, ಇಂತಹ ಕಂಪನಿಗಳು ಸಾಕಷ್ಟು ಬಂದು ಹೋಗಿರುವ ಉದಾಹರಣೆಗಳಿವೆ. ಈ ಕಂಪನಿಗಳು ರೈತರಿಗೆ ಮೋಸ ಮಾಡುವುದಿಲ್ಲ ಎನ್ನುವ ಗ್ಯಾರಂಟಿ ಆದರೂ ಏನು?.
ಆದ್ದರಿಂದ ಇಂತಹ ಕಂಪನಿಗಳಿಂದ ರೈತರಿಗೆ ವಂಚನೆ ಆಗದಂತೆ ತಪ್ಪಿಸಿ ಇಂತಹ ಕಂಪನಿಗಳನ್ನು ಸಮಗ್ರ ತನಿಖೆ ಮಾಡಿಸಿ ಸರಿ ಇದ್ದರೆ ಮುಂದುವರೆಸಿ, ಇಲ್ಲ ಅಂದರೆ ಈ ಇಂತಹ ಕಂಪನಿಗಳನ್ನು ಮುಚ್ಚಿಸಿ, ವಂಚನೆಗೊಳಗಾದ ರೈತರಿಗೆ ಮರಳಿ ದುಡ್ಡು ಕೊಡಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದು ಮನವಿ ಮಾಡಿದೆ.












Click it and Unblock the Notifications