ರೈತರ ಭೂಮಿ ಕಬಳಿಸಲು ಬರಲಿದೆ ಪ್ಲಾಸ್ಟಿಕ್ ಬಾಟಲಿ

ರೈತರ ಮತ್ತು ಬಡಜನರ ಪರಿಸ್ಥಿತಿ ಹೀಗಿರುವಾಗ ಮತ್ತೊಂದು ಕಂಟಕ ಬಂದು ರೈತರ ಕೊರಳಿಗೆ ಸುತ್ತಲು ರೆಡಿಯಾಗಿದೆ. ಅದು ಪ್ಲಾಸ್ಟಿಕ್ ಬಾಟಲ್ ತಯಾರಿಕಾ ಘಟಕದ ಸ್ಥಾಪನೆ. ಈ ಯೋಜನೆ ನೇರವಾಗಿ ರೈತರ ಭೂಮಿಗೇ ಕೈ ಹಾಕಲಿದೆ. ಸಂಕಷ್ಟಮಯ ಪರಿಸ್ಥಿತಿಯಲ್ಲಿ ಸ್ವಲ್ಪ ರೊಕ್ಕ ಒಗೆದರೂ ರೈತರು ಅಮೂಲ್ಯವಾದ ಮತ್ತು ಫಲವತ್ತಾದ ಭೂಮಿ ಕೊಡಲು ಸಿದ್ಧರಾಗಿಬಿಡುತ್ತಾರೆ.
ಜಿಲ್ಲೆಯಲ್ಲಿ ಕೈಗಾರಿಕೆ ಘಟಕಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು, ಜಿಲ್ಲೆಯ ಕಡೆಚೂರಿನಲ್ಲಿ ಪ್ಲಾಸ್ಟಿಕ್ ಬಾಟಲ್ ತಯಾರಿಕೆ ಘಟಕ ಸ್ಥಾಪನೆಗೆ ಖಾಸಗಿ ಸಂಸ್ಥೆ ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಜುಗೌಡ ತಿಳಿಸಿದ್ದಾರೆ. ಖಾಸಗಿ ಸಂಸ್ಥೆ 126 ಎಕರೆ ಜಮೀನು ಬೇಕೆಂದು ಆಗ್ರಹಿಸಿದೆ.
ಕೈಗಾರಿಕೆಗಾಗಿ ಭೂಮಿ ಕಳೆದುಕೊಳ್ಳಲಿರುವ ರೈತರು, ಗ್ರಾಮದ ಮುಖಂಡರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ ಸಚಿವರು, ಈ ಕೈಗಾರಿಕೆ ಸ್ಥಾಪನೆಯಿಂದ ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದಿದ್ದಾರೆ. ಆದರೆ, ಪರಿಸರ ನಾಶದ ಬಗ್ಗೆ ಮಂತ್ರಿ ಚಿಂತಿಸಿದ್ದಾರಾ?
ಕಡೆಚೂರಿನಲ್ಲಿ ಕೈಗಾರಿಕೆಗಾಗಿ ಸ್ವಾಧೀನ ಪಡಿಸಿಕೊಳ್ಳಲಿರುವ ಭೂಮಿಗೆ ಹೆಚ್ಚಿನ ದರ ನಿಗದಿ ಪಡಿಸುವ ಕುರಿತಂತೆ ಮುಖ್ಯಮಂತ್ರಿ ಮತ್ತು ಬೃಹತ್ ಕೈಗಾರಿಕೆ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದ್ದು. ದರ ಹೆಚ್ಚಿಸುವ ಭರವಸೆ ನೀಡಿದ್ದಾರೆ. ರೈತರು ಇಂಥ ಸಂದರ್ಭದಲ್ಲಿ ಏನು ಮಾಡಬೇಕು? ಭೂಮಿ ಕೊಡಲು ನಿರಾಕರಿಸಬೇಕೋ? ಹೆಚ್ಚಿನ ರೊಕ್ಕಕ್ಕೆ ಭೂಮಿ ಕೊಟ್ಟು ನಿರುದ್ಯೋಗಿಗಳಾಗಬೇಕೋ?












Click it and Unblock the Notifications