ಧಾರವಾಡ ಕೃಷಿ ವಿವಿ ಘಟಿಕೋತ್ಸವ; 53 ಚಿನ್ನದ ಪದಕ ಪ್ರದಾನ

ಧಾರವಾಡ, ಅಕ್ಟೋಬರ್ 18; ಧಾರವಾಡದ ಕೃಷಿ ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವ ಸೋಮವಾರ ನಡೆಯಿತು. 63 ಪಿಎಚ್‍ಡಿ, 247 ಸ್ನಾತಕೋತ್ತರ ಹಾಗೂ 601 ಸ್ನಾತಕ ಪದವಿಗಳು ಸೇರಿ ಒಟ್ಟಾರೆ 911 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಸೋಮವಾರ ಕೋವಿಡ್ ಮಾರ್ಗಸೂಚಿ ಅನ್ವಯ ನಡೆದ ಘಟಿಕೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸೆಲ್ಕೋ ಇಂಡಿಯಾದ ಅಧ್ಯಕ್ಷರಾದ ಡಾ. ಹರೀಶ್ ಹಂದೆ ಘಟಿಕೋತ್ಸವ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಕುಲಪತಿಗಳಾದ ಡಾ. ಮಹಾದೇವ ಬ. ಚೆಟ್ಟಿ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.

53 ಚಿನ್ನದ ಪದಕ ಹಾಗೂ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 9 ನಗದು ಬಹುಮಾನಗಳನ್ನು ವಿತರಣೆ ಮಾಡಲಾಯಿತು. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಮದರಿ ಗ್ರಾಮದ ಬಸವರಾಜ ನಾರಗಲ್ ಎಂಎಸ್ಸಿ ಕೃಷಿ ಹವಾಮಾನಶಾಸ್ತ್ರ ಪದವಿಯಲ್ಲಿ ಸ್ವರ್ಣ ಪದಕ ಪಡೆದರು. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಪದವಿ ಹಾಗೂ ಪದಕ ಪ್ರದಾನ ಮಾಡಿದರು.

ಕೃಷಿ ವಿಶ್ವವಿದ್ಯಾಲಯದ ಆಡಳಿತ ಭವನದ ಎದುರು ಶಿಕ್ಷಕರ ಕಲ್ಯಾಣ ಸಂಘದ ಸದಸ್ಯರು ಮುಷ್ಕರ ನಡೆಸುತ್ತಿದ್ದರು. ಥಾವರ್ ಚಂದ್ ಗೆಹ್ಲೋಟ್ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರ ಬೇಡಿಕೆಗಳನ್ನು ಸಹಾನುಭೂತಿಯಿಂದ ಆಲಿಸಿದರು. ಬೇಡಿಕೆಗಳನ್ನು ಪರಿಗಣಿಸಿ, ಕಾನೂನು ಚೌಕಟ್ಟಿನಲ್ಲಿ ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. 10 ರಿಂದ 12 ದಿನಗಳ ಅವಧಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಈ ಕುರಿತು ಪರಿಹಾರಕ್ಕೆ ಸೂತ್ರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಘಟಿಕೋತ್ಸವ ಭಾಷಣ

ಘಟಿಕೋತ್ಸವ ಭಾಷಣ

ಘಟಿಕೋತ್ಸವ ಭಾಷಣ ಮಾಡಿದ ಸೆಲ್ಕೋ ಇಂಡಿಯಾ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ಹರೀಶ ಹಂದೆ, "ಕೃಷಿ ಕ್ಷೇತ್ರದ ಸಂಶೋಧನೆಗಳು ಅನ್ವೇಷಣಾತ್ಮಕವಾಗಿದ್ದು ರೈತರು ಹಾಗೂ ದೇಶದ ಸುಸ್ಥಿರ ಅಭಿವೃದ್ಧಿಗೆ ಪರಿಣಾಮಕಾರಿಯಾದ ಕೊಡುಗೆಗಳನ್ನು ನೀಡಿದಾಗ ಅವುಗಳ ಮೌಲ್ಯ ಹೆಚ್ಚಾಗುತ್ತದೆ. ವಿಶ್ವಸಂಸ್ಥೆ ಗೊತ್ತುಪಡಿಸಿರುವ ಸಾಮಾಜಿಕ ಹಾಗೂ ಸುಸ್ಥಿರ ಅಭಿವೃದ್ಧಿಯ ಗುರಿ ತಲುಪಲು ಭಾರತ ಸಮರ್ಥವಾಗಿದೆ. ಕೃಷಿ ಕ್ಷೇತ್ರದ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಹೊಸ ಅನ್ವೇಷಣಾತ್ಮಕ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು" ಎಂದು ಕರೆ ನೀಡಿದರು.

ರೈತನ ಸಮಗ್ರ ಕಲ್ಯಾಣವಾಗಬೇಕು

ರೈತನ ಸಮಗ್ರ ಕಲ್ಯಾಣವಾಗಬೇಕು

"ಕೃಷಿ ಕ್ಷೇತ್ರದ ಸಂಶೋಧಕರು ಮೂರು ಎಕರೆಗಿಂತಲೂ ಕಡಿಮೆ ಭೂಮಿ ಹೊಂದಿರುವ ರೈತನ ಸಮಗ್ರ ಕಲ್ಯಾಣ ಗಮನದಲ್ಲಿಟ್ಟುಕೊಂಡು ಸಂಶೋಧನೆಗಳನ್ನು ಕೈಗೊಳ್ಳಬೇಕು. ಮುಂಬರುವ 25 ವರ್ಷಗಳ ಅವಧಿಯಲ್ಲಿ ರೈತರ ಬದುಕು ಸಮೃದ್ಧವಾಗಿಸಲು ಕೃಷಿ ಪದವೀಧರರ ಜ್ಞಾನ ಸದ್ಬಳಕೆಯಾಗಬೇಕು. 40 ವರ್ಷಗಳ ಕಾಲ ಕಬ್ಬು ಬೆಳೆದ ಅನುಭವಿ ರೈತನಿಗೆ ಸಿಗದ ಪದವಿಗಳು, ಕೃಷಿ ವಿದ್ಯಾರ್ಥಿಗಳಿಗೆ ದೊರೆಯುತ್ತವೆ. ಅನುಭವಿ ಕೃಷಿಕರ ಸಲಹಾ ಮಂಡಳಿ ಸಕ್ರಿಯವಾಗಿರಬೇಕು" ಎಂದು ಡಾ. ಹರೀಶ ಹಂದೆ ಹೇಳಿದರು.

ಹಲವು ರಾಷ್ಟ್ರಗಳು ಗಮನಿಸುತ್ತಿವೆ

ಹಲವು ರಾಷ್ಟ್ರಗಳು ಗಮನಿಸುತ್ತಿವೆ

"ಕೃಷಿ ಕ್ಷೇತ್ರದ ಸಂಶೋಧಕರು, ಪ್ರಾಧ್ಯಾಪಕರು ಎಷ್ಟು ಉಪನ್ಯಾಸ ಪತ್ರಿಕೆಗಳನ್ನು ಮಂಡಿಸಿದರು ಎಂಬ ಆಧಾರದ ಮೇಲೆ ಪ್ರೋತ್ಸಾಹಕಗಳನ್ನು ನೀಡುವದಕ್ಕಿಂತ, ಆ ಉಪನ್ಯಾಸ, ಪತ್ರಿಕೆಗಳು ಎಷ್ಟು ರೈತರ ಬದುಕಿಗೆ ಬದಲಾವಣೆ ತಂದಿವೆ ಎಂಬುದನ್ನು ಆಧರಿಸಿ ಮೌಲ್ಯಮಾಪನ ಮಾಡುವ ಪರಿಪಾಠ ಪ್ರಾರಂಭವಾಗಬೇಕು. ಭಾರತದ ಸಂಶೋಧನಾ ಕ್ಷೇತ್ರವನ್ನು ಆಫ್ರಿಕಾ, ಲ್ಯಾಟಿನ್ ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳು ಗಂಭೀರವಾಗಿ ಗಮನಿಸುತ್ತಿವೆ" ಎಂದು ಡಾ. ಹರೀಶ ಹಂದೆ ಹೇಳಿದರು.

ಉತ್ತಮ ಶೈಕ್ಷಣಿಕ ಪರಿಸರ

ಉತ್ತಮ ಶೈಕ್ಷಣಿಕ ಪರಿಸರ

"ಧಾರವಾಡ ಕೃಷಿ ವಿಶ್ವವಿದ್ಯಾಲಯವು ಅತ್ಯುತ್ತಮ ಭೌಗೋಳಿಕ, ಶೈಕ್ಷಣಿಕ ಪರಿಸರದಲ್ಲಿದೆ. ಇಂದು ಪದವಿಗಳನ್ನು ಪಡೆದ ಎಲ್ಲರೂ ದೇಶದ 100 ಕೋಟಿ ರೈತರ ಸಮಸ್ಯೆಗಳ ನಿವಾರಣೆಗೆ ಸಮರ್ಥರಾಗಿದ್ದೀರಿ. 2030 ರ ವೇಳೆಗೆ ನಿಮ್ಮಲ್ಲಿನ ಪ್ರತಿಯೊಬ್ಬ ಪದವೀಧರರಿಂದ ಕೋಟ್ಯಂತರ ರೈತರಿಗೆ ಪ್ರಯೋಜನವಾಗಿರಬೇಕು ಅಂತಹ ಮಾಹಿತಿ ನನಗೆ ತಲುಪುವಂತಾಗಬೇಕು" ಎಂದು ಡಾ.ಹರೀಶ ಹಂದೆ ಆಶಯ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+