ಸೊಪ್ಪು, ತರಕಾರಿ ತಗ್ಗಿದ ಬೆಲೆ : ಗ್ರಾಹಕರು ಕೊಂಚ ನಿರಾಳ
ಬೆಂಗಳೂರು ಜನವರಿ 16: ಮೂರು ತಿಂಗಳಿನಿಂದ ತರಕಾರಿ, ಸೊಪ್ಪಿನ ಬೆಲೆ ಏರಿಕೆಯಿಂದಾಗಿ ಜನರು ಕಂಗಾಲಾಗಿದ್ದರು. ಇದೀಗ ತರಕಾರಿ ಹಾಗೂ ಸೊಪ್ಪುಗಳ ಬೆಲೆಯಲ್ಲಿ ಚೇತರಿಕೆ ಕಾಣುತ್ತಿದೆ. ಡಿಸೆಂಬರ್ ಗೆ ಹೋಲಿಸಿದರೆ ಇದೀಗ ಶೇ. 30-40 ರಷ್ಟು ಕಡಿಮೆಯಾಗಿದೆ.
ನವೆಂಬರ್ ನಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ಅದರಲ್ಲೂ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಯಥೇಚ್ಛ ಮಳೆಯಾಯಿತು. ಇದರ ಪರಿಣಾಮ ಬೆಂಗಳೂರು ಸುತ್ತಮುತ್ತ ಕೊಳವೆಬಾವಿಗಳಲ್ಲಿ ಅಂತರ್ಜಲದ ಪ್ರಮಾಣ ಹೆಚ್ಚಾಯಿತು. ಇದೀಗ ತರಕಾರಿ ಬೆಳೆಗಳು ಉತ್ತಮ ಫಸಲು ನೀಡಿದ್ದು, ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ತರಕಾರಿ ಬರುತ್ತಿದೆ. ಹೀಗಾಗಿ, ಬೆಲೆ ಕಡಿಮೆಯಾಗಿದೆ ಎಂದು ಹಾಪ್ಸ್ ಕಾಮ್ಸ್ ನ ವ್ಯವಸ್ಥಾಪಕ ನಿರ್ದೇಶಕ ಬಿ. ವಿಶ್ವನಾಥ್ ಹೇಳಿದ್ದಾರೆ.
ಕಳೆದ ಒಂದೂವರೆ ತಿಂಗಳ ಹಿಂದೆ ಟೊಮೆಟೋ ದರ ಕೆಜಿಗೆ 50 ರೂ ತಲುಪಿತ್ತು. ಇದೀಗ 10 ರೂ ಗೆ ಕೆಲವೆಡೆ 8 ರೂ ಗೆ ಇಳಿಕೆಯಾಗಿದೆ. ಬೀನ್ಸ್ 40 ರೂ ಮೇಲ್ಪಟ್ಟಿತ್ತು. ಇದೀಗ 20 ರೂ ಇದೆ. ಕೆ.ಆರ್ ಮಾರುಕಟ್ಟೆಯ ಸುತ್ತ ಮುತ್ತ ತಳ್ಳುವ ಗಾಡಿ ಮಾರಾಟಗಾರರು ಎಳೇ ಸೌತೇಕಾಯಿಯನ್ನು ಕೆಜಿಗೆ 10-15 ರೂ ಮಾರಾಟ ಮಾಡುತ್ತಿದ್ದಾರೆ. ಹಾಗಲಕಾಯಿ ಕೂಡ 65 ರೂ ಗೆ ಇತ್ತು. ಇದೀಗ ಅದೂ ಕಡಿಮೆ ಯಾಗಿದ್ದು ಕೆಜಿಗೆ 29 ರೂ ಇದೆ.

ಈರುಳ್ಳಿ, ತೆಂಗಿನಕಾಯಿ ದುಬಾರಿ: ಈರುಳ್ಳಿ ಮತ್ತು ತೆಂಗಿನಕಾಯಿ ದರ ಮಾತ್ರ ಇಳಿಕೆಯಾಗಿಲ್ಲ. ಕಳೆದ ಎರಡು ತಿಂಗಳಿನಿಂದ ಈರುಳ್ಳಿ ದರ ಕೆಜಿಗೆ 40-50 ರೂ ಇದೆ ಜನವರಿ ನಂತರ ಹೊಸ ಬೆಳೆ ಬರುವವರೆಗೂ ಬೆಲೆಗಳು ಹಾಗೆಯೇ ಇರುತ್ತದೆ. ಸುಮಾರು ಎರಡು ವರ್ಷಗಳಿಂದ ಒಂದು ಕಾಯಿಗೆ ಬರೋಬ್ಬರಿ 20-30 ರೂವರೆಗಿದೆ. ಹಾಪ್ ಕಾಮ್ಸ್ ನಲ್ಲಿ ಕೂಡ 20 ಅಥವಾ 25 ರೂ ಗೆ ತೆಂಗಿನಕಾಯಿ ಸಿಗುತ್ತಿಲ್ಲ. ಆರಂಭಿಕ ದರವೇ 28 ರೂ ಗಳಾದರೆ ದೊಡ್ಡ ಗಾತ್ರೆದ ಬೆಲೆ 37 ರೂ ಇದೆ. ಇನ್ನೊಂದು ತಿಂಗಳಿಗೆ ತರಕಾರಿ ಬೆಲೆ ಇನ್ನಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.
ಹಾಪ್ ಕಾಮ್ಸ್ ದರಪಟ್ಟಿ
ಬೀಟ್ ರೂಟ್ - 24 ರೂ
ಟೊಮೆಟೋ - 10 ರೂ
ಬೀನ್ಸ್ - 19 ರೂ
ಮೆಂತ್ಯೆ ಸೊಪ್ಪು - 40 ರೂ
ಮೂಲಂಗಿ - 17 ರೂ
ಪಾಲಕ್ ಸೊಪ್ಪು - 40ರೂ
ಕೊತ್ತಂಬರಿ ಸೊಪ್ಪು - 25 ರೂ
ಏಲಕ್ಕಿ ಬಾಳೆಹಣ್ಣು - 60 ರೂ











Click it and Unblock the Notifications