ಅಪಘಾತಗಳಿಗೆ ದಾರಿ ಮಾಡಿಕೊಡುತ್ತಿದೆ ರೈತರ ಈ ಕೆಲಸ
ಮೈಸೂರು, ಜನವರಿ 04: ಇದೀಗ ಒಕ್ಕಣೆ ಸಮಯ. ಹೀಗಾಗಿ ಜಿಲ್ಲೆಯ ಹಲವು ರಸ್ತೆಗಳಲ್ಲಿ ರೈತರು ಒಕ್ಕಣೆ ಕಾರ್ಯ ನಡೆಸುತ್ತಿದ್ದಾರೆ. ಅದರೆ ರಸ್ತೆ ಮೇಲೆ ಹೀಗೆ ಒಕ್ಕಣೆ ಕೆಲಸ ಮಾಡುತ್ತಿರುವುದು ದ್ವಿಚಕ್ರವಾಹನ ಸವಾರರು ಮತ್ತು ಇತರೆ ವಾಹನ ಚಾಲಕರಿಗೆ ಕಿರಿಕಿರಿಯಾಗುತ್ತಿರುವುದು ಮಾತ್ರವಲ್ಲದೆ ಅನಾಹುತಕ್ಕೂ ದಾರಿ ಮಾಡಿಕೊಡುತ್ತಿದೆ.
ವಾಹನಗಳು ಓಡಾಡುವ ರಸ್ತೆಗಳಲ್ಲಿ ಒಕ್ಕಣೆ ಮಾಡಬಾರದು ಎಂಬ ಸೂಚನೆಯನ್ನು ರೈತರಿಗೆ ನೀಡಿದ್ದರೂ ಬಹುತೇಕ ಕಡೆ ರೈತರು ತಮ್ಮ ಪಾಡಿಗೆ ತಾವು ರಸ್ತೆಗಳಲ್ಲಿಯೇ ಒಕ್ಕಣೆ ನಡೆಸುವುದು ಮಾಮೂಲಿಯಾಗಿದೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾದರೂ ಅದೇ ಮಾರ್ಗದಲ್ಲಿ ಸಾಗುವುದು ಅನಿವಾರ್ಯವಾಗುತ್ತಿದೆ.
ಇತ್ತೀಚೆಗೆ ಗುಂಡ್ಲುಪೇಟೆ ಬಳಿ ಒಕ್ಕಣೆ ನಡೆಸುತ್ತಿದ್ದ ರಸ್ತೆಯಲ್ಲಿ ಸಾಗಿದ ಓಮ್ನಿ ವ್ಯಾನ್ ಆಕಸ್ಮಿಕ ಬೆಂಕಿಗೆ ಆಹುತಿಯಾಗಿತ್ತು. ಈ ದುರ್ಘಟನೆ ನಡೆದ ಮೇಲೂ ಎಚ್ಚೆತ್ತುಕೊಳ್ಳದೆ ಮತ್ತೆ ಮತ್ತೆ ರಸ್ತೆಗಳಿಗೆ ಭತ್ತ, ರಾಗಿ, ಹುರಳಿ, ಹುಚ್ಚೆಳ್ಳು ಮೊದಲಾದವುಗಳನ್ನು ತಂದು ಹಾಕುತ್ತಿರುವುದು ಕಂಡು ಬರುತ್ತಿದೆ. ಪಿರಿಯಾಪಟ್ಟಣ ತಾಲೂಕಿನ ಹಲವೆಡೆ ಗ್ರಾಮಾಂತರ ಪ್ರದೇಶಗಳಲ್ಲಿ ಹಾದು ಹೋಗಿರುವ ಪ್ರಮುಖ ರಸ್ತೆಗಳಲ್ಲಿ ಒಕ್ಕಣೆ ಮಾಡಲಾಗುತ್ತಿದೆ.

ಈ ನಡುವೆ ಇಲ್ಲಿನ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ನಾಗರಾಜು ಅವರು ಮುನ್ನೆಚ್ಚರಿಕೆ ಕ್ರಮವಾಗಿ ರಸ್ತೆಯಲ್ಲಿ ಯಾವುದೇ ರೀತಿಯ ಒಕ್ಕಣೆ ಮಾಡಬಾರದು ಎಂದು ಎಚ್ಚರಿಕೆಯನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಗಳು ಒಗ್ಗೂಡಿ ಸೂಕ್ತ ಕ್ರಮ ಕೈಗೊಳ್ಳಬೇಕು.












Click it and Unblock the Notifications