Coffee and Pepper Price: ಸಾರ್ವಕಾಲಿಕ ದಾಖಲೆ ಬರೆದ ಕಾಫಿ, ಕಾಳುಮೆಣಸು ದರ
ಕಾಫಿ ಮತ್ತು ಕಾಳುಮೆಣಸು ಬೆಳೆಗಾರರಿಗೆ ಬಂಪರ್ ಲಾಟರಿ ಹೊಡೆದಿದೆ. ಕಾಫಿ ಮತ್ತು ಕಾಳು ಮೆಣಸು ಸಾರ್ವಕಾಲಿಕ ಗರಿಷ್ಠ ದರ ತಲುಪಿದ್ದು, ಬಂಪರ್ ಲಾಭದ ನಿರೀಕ್ಷೆಯಲ್ಲಿದ್ದಾರೆ ಬೆಳೆಗಾರರು.
ಅರೇಬಿಕ ಪಾರ್ಚ್‌ಮೆಂಟ್ ತಳಿಯ ಕಾಫಿಗೆ 50 ಕೆಜಿ ಮೂಟೆ ದರ 16,000 ರುಪಾಯಿಗೆ ಹೆಚ್ಚಾಗಿದ್ದರೆ, ರೊಬಸ್ಟ ಪಾರ್ಚ್‌ಮೆಂಟ್ 50 ಕೆಜಿ ದರ 18 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಕಾಳು ಮೆಣಸು ದರ ಕೆಜಿಗೆ 700 ರೂಪಾಯಿ ತಲುಪಿದ್ದು, ಇದು ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ.

ಬೆಳೆಗಾರರಿಗೆ ನಿರಾಸೆ!
ಕಾಫಿಗೆ ಉತ್ತಮ ಬೆಲೆ ಬಂದರೂ ಬೆಳೆಗಾರರಿಗೆ ಮಾತ್ರ ನಿರಾಸೆಯಾಗಿದೆ. ರಾಜ್ಯದ ಹಲವು ಕಾಫಿ ಬೆಳೆಗಾರರು ಈಗಾಗಲೇ ಕೊಯ್ಲು ಮಾಡಿದ್ದ ಕಾಫಿಯನ್ನು ಮಾರಾಟ ಮಾಡಿದ್ದಾರೆ. ಈಗ ಬೆಲೆ ಹೆಚ್ಚಾಗಿದ್ದು, ರೈತರಿಂದ ಖರೀದಿ ಮಾಡಿಟ್ಟುಕೊಂಡಿದ್ದ ಮಧ್ಯವರ್ತಿಗಳು ಮತ್ತು ಮಾರಾಟಗಾರರು ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.
ನಮ್ಮ ದೇಶದಲ್ಲಿ ಕೃಷಿ ವಲಯ ಇರುವುದೇ ಹೀಗೆ. ಯಾವುದೇ ಬೆಳೆಗೆ ಬೆಲೆ ಕುಸಿತವಾದರೆ ನಷ್ಟ ಅನುಭವಿಸುವುದು ರೈತನಾದರೆ, ಹೆಚ್ಚಿನ ಬೆಲೆ ಬಂದಾಗ ಲಾಭ ಪಡೆಯುವುದು ಮಾತ್ರ ಮಧ್ಯವರ್ತಿಗಳು ಮತ್ತು ಮಾರಾಟಗಾರರೇ ಆಗಿರುತ್ತಾರೆ.
ಕಳೆದ ವರ್ಷ ಮಳೆ ಕಡಿಮೆಯಾದ ಕಾರಣ ಕಾಫಿ ಬೆಳೆಗಾರರು ತೋಟಗಳನ್ನು ಉಳಿಸಿಕೊಳ್ಳಲು ಪರದಾಡಿದ್ದರು. ಮುಂಗಾರು ಆರಂಭಕ್ಕೆ ಮುನ್ನವೇ ಮಳೆಯಾದ ಕಾರಣ ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದರು, ಈಗ ಬೆಲೆ ಏರಿಕೆಯಾಗಿರುವುದು ಸ್ವಲ್ಪ ನೆಮ್ಮದಿ ಮೂಡಿಸಿದೆ.
ದರ ಹೆಚ್ಚಳಕ್ಕೆ ಕಾರಣವೇನು?
ಬ್ರೆಜಿಲ್, ವಿಯೆಟ್ನಾಂ ಸೇರಿದಂತೆ ಜಗತ್ತಿನಲ್ಲಿ ಕಾಫಿ ಬೆಳೆಯುವ ಪ್ರಮುಖ ದೇಶಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆಯಾಗದೇ ಇರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದ ಅದರಲ್ಲೂ ಕರ್ನಾಟಕ ಕಾಫಿಗೆ ಹೆಚ್ಚಿನ ಬೇಡಿಕೆ ಇದ್ದು ಏರಿಕೆಯತ್ತ ಮುಖಮ ಮಾಡಿದೆ. ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳು ರಾಜ್ಯದಲ್ಲಿ ಪ್ರಮುಖ ಕಾಫಿ ಬೆಳೆಯುವ ಪ್ರದೇಶಗಳಾಗಿವೆ. ಅದರಲ್ಲೂ ಚಿಕ್ಕಮಗಳೂರು ಕಾಫಿಗೆ ಭಾರಿ ಬೇಡಿಕೆ ಇದೆ.
ಕಾಳು ಮೆಣಸು ದರ ಕೂಡ ಹೆಚ್ಚಳ
ಕಾಫಿ ದರ ಏರಿಕೆಯಾಗುವ ಜೊತೆಗೆ ಕಾಳು ಮೆಣಸು ದರ ಕೂಡ ಏರಿಕೆಯಾಗುತ್ತಿದ್ದು ಬೆಳೆಗಾರರಿಗೆ ಲಾಭ ತಂದುಕೊಡುವ ಭರವಸೆ ಮೂಡಿಸಿದೆ. ರೋಗ, ಕೀಟಬಾಧೆಯಿಂದ ಇಳುವರಿ ಕಡಿಮೆಯಾಗಿದೆ, ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಇಲ್ಲದೇ ಇದ್ದರೂ ಬೆಲೆ ಹೆಚ್ಚಾಗಿರುವುದರಿಂದ ನಷ್ಟದ ಭೀತಿ ಕಡಿಮೆಯಾಗಿದೆ.
ಮೊದಲ ಬಾರಿಗೆ ಕಾಳು ಮೆಣಸು ಬೆಲೆ ಕ್ವಿಂಟಾಲ್‌ಗೆ 70,000 ರೂಪಾಯಿ ಮುಟ್ಟಿದೆ. ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications