ಕೃಷಿ ತ್ಯಾಜ್ಯದಿಂದ ತಕ್ಷಣವೇ ಸಾವಯವ ಗೊಬ್ಬರ ತಯಾರಿ; ನೂತನ ಯಂತ್ರ ಲೋಕಾರ್ಪಣೆ
ಬೆಂಗಳೂರು,
ಡಿಸೆಂಬರ್ 11: ನಮ್ಮ ದೇಶದಲ್ಲಿ ಪ್ರತಿ ವರ್ಷ ಸುಮಾರು 285 ದಶಲಕ್ಷ ಟನ್ ಆಹಾರ ಉತ್ಪಾದನೆಯಾಗುತ್ತದೆ. 305 ದಶಲಕ್ಷ ಟನ್ ತೋಟಗಾರಿಕಾ ಬೆಳೆಗಳ ಉತ್ಪಾದನೆಯಾಗಿ ಈ ಬೆಳೆಗಳಿಂದ ಅಂದಾಜು 500 ದಶಲಕ್ಷ ಟನ್ ಗಳಷ್ಟು ಬೆಳೆ ತ್ಯಾಜ್ಯಗಳು ಉತ್ಪತ್ತಿಯಾಗುತ್ತವೆ. ಇವುಗಳಿಂದ ಉತ್ಕೃಷ್ಟವಾದ ಸಾವಯವ ಗೊಬ್ಬರ ತಯಾರಿಸಬಹುದಾಗಿದ್ದರೂ ರೈತರು ಈ ತ್ಯಾಜ್ಯವನ್ನು ಸುಡುವುದು ವಾಡಿಕೆಯಾಗಿಬಿಟ್ಟಿದೆ. ಆದರೆ ಇವನ್ನು ತಕ್ಷಣವೇ ಗೊಬ್ಬರವಾಗಿ ಪರಿವರ್ತಿಸಿ ಉಪಯೋಗಿಸಲು ಸಾಧ್ಯವಿದೆ. id="toptextpromo"> id='are-slot-1' class='oiad oi-axt oiadv'>ಇದೇ
ನಿಟ್ಟಿನಲ್ಲಿ ಭೂಸಿರಿ ಎಂಬ ಸಂಚಾರಿ ವಾಹನವನ್ನು ಪರಿಚಯಿಸಲಾಗಿದೆ. ಕೃಷಿ ಇಲಾಖೆಯ ವತಿಯಿಂದ ನಾಗರಾಜ್ ಹೆಗಡೆಯವರು ತಯಾರಿಸಿರುವ ಭೂಸಿರಿ ಹಾಗೂ ಭೂಮಿತ್ರ ಯಂತ್ರವನ್ನು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕೃಷಿ ಸಚಿವ ಬಿ.ಸಿ.ಪಾಟೀಲ್ ಲೋಕಾರ್ಪಣೆಗೊಳಿಸಿದರು. ಮುಂದೆ ಓದಿ... id='are-slot-2' class='oiad oi-axt oiadv'>
ಏನಿದು ಭೂಸಿರಿ-ಭೂಮಿತ್ರ ಯಂತ್ರ?
ಸಾಮಾನ್ಯವಾಗಿ ಕೃಷಿ ತ್ಯಾಜ್ಯ ವಸ್ತುಗಳು ಕೊಳೆತು ಸಾವಯವ ಗೊಬ್ಬರವಾಗಲು ಕನಿಷ್ಠ 40 ರಿಂದ 60 ದಿನಗಳು ಬೇಕಾಗುತ್ತವೆ. ಭೂಸಿರಿ ಸಂಚಾರಿ ವಾಹನದಲ್ಲಿ ತಕ್ಷಣವೇ ಗೊಬ್ಬರವನ್ನು ತಯಾರಿಸುವ ತಂತ್ರಜ್ಞಾನ ಅಳವಡಿಸಲಾಗಿದೆ. ರೈತರ ಜಮೀನಿಗೆ ಹೋಗಿ ಅಲ್ಲಿ ಸಂಗ್ರಹ ಮಾಡಿದ ಕೃಷಿ ತ್ಯಾಜ್ಯವನ್ನು ತಕ್ಷಣವೇ ಕತ್ತರಿಸಿ ಭೂಸಿರಿ ಯಂತ್ರದ ಮೂಲಕ ಸಾವಯವ ಗೊಬ್ಬರ ತಯಾರಿಸಬಹುದಾಗಿದೆ.
ಹೈಟೆಕ್ ಅಗ್ರಿಕ್ಯೂಲಮ್ ಸಂಸ್ಥೆಯು ಡಾ. ನಾಗರಾಜ್ ಹೆಗಡೆಯವರ ನೇತೃತ್ವದಲ್ಲಿ ಭೂಸಿರಿ ಎಂಬ ಸಂಚಾರಿ ವಾಹನ ಆಧಾರಿತ ಗೊಬ್ಬರ ತಯಾರಿಕಾ ಯಂತ್ರವನ್ನು ಹಾಗೂ ನ್ಯಾನಾಕ್ಯೂಲಮ್ ಸಂಸ್ಥೆ ಭೂಮಿತ್ರ ಎಂಬ ಅತ್ಯಾಧುನಿಕ ಮಣ್ಣಿನ ಸ್ಪೆಕ್ಟ್ರೋಸ್ಕೋಪಿ ತಂತ್ರಜ್ಞಾನ ಬಳಸಿ ತಕ್ಷಣವೇ ಮಣ್ಣು ಪರೀಕ್ಷೆ ಮಾಡಿ ವರದಿ ನೀಡುವ ಯಂತ್ರ ಪರಿಚಯಿಸಿವೆ.

ಸ್ಥಳದಲ್ಲೇ ಸಾವಯವ ಗೊಬ್ಬರ ತಯಾರಿ
ನಮ್ಮ ರಾಜ್ಯದಲ್ಲಿ ವರ್ಷದ ಮೂರು ಹಂಗಾಮಿನಲ್ಲಿ ಮೆಕ್ಕೆ ಜೋಳವನ್ನು ಸುಮಾರು 20 ಲಕ್ಷಕ್ಕೂ ಹೆಚ್ಚು ಹೆಕ್ಟೇರ್‌ಗಳಷ್ಟು ಬೆಳೆಯಲಾಗುತ್ತದೆ. ಈ ಬೆಳೆಯಿಂದ ಬಂದ ಜೋಳದ ದಂಟನ್ನು ರೈತರು ಬಹುತೇಕ ಬೆಂಕಿ ಹಚ್ಚಿ ಸುಡುವುದು ಇಲ್ಲವೇ ನಿಧಾನಗತಿಯಲ್ಲಿ ಗೊಬ್ಬರವಾಗಲು ಬಿಸಾಡುವುದು ಸಹಜ. ಇದೇ ರೀತಿ ಮಲೆನಾಡಿನಲ್ಲಿಯೂ ಅಡಿಕೆ, ತೆಂಗು ಗಿಡಗಳ ಒಣಗಿದ ಗರಿಗಳು ಹಾಗೂ ಮರಗಳ ಒಣಗಿದ ಎಲೆಗಳು ಜೈವಿಕವಾಗಿ ಕೊಳೆಯಲು ಕನಿಷ್ಠ 3 ರಿಂದ 4 ತಿಂಗಳು ಬೇಕಾಗುತ್ತದೆ. ಆದರೆ ಭೂಸಿರಿ ಯಂತ್ರದಿಂದ ತೊಗರಿ ಕಟ್ಟಿಗೆ, ಕತ್ತಿ ಕಟ್ಟಿಗೆ, ಕಬ್ಬಿನ ರವದಿ, ಗೋವಿನ ಜೋಳದ ದಂಟು, ತೆಂಗು ಅಡಿಕೆಯ ಗರಿಗಳು ಮುಂತಾದ ತ್ಯಾಜ್ಯ ವಸ್ತುಗಳನ್ನು ತಕ್ಷಣವೇ ವಿಘಟನೆ ಮಾಡಿ ಸಾವಯವ ಗೊಬ್ಬರ ತಯಾರಿಸಬಹುದಾಗಿದೆ ಎಂದು ನಾಗರಾಜ್ ತಿಳಿಸಿದ್ದಾರೆ.

ಶೀಘ್ರವೇ ಮಣ್ಣಿನ ವಿಶ್ಲೇಷಣೆ
ಸಾಮಾನ್ಯವಾಗಿ ಪ್ರಯೋಗಾಲಯಗಳಲ್ಲಿ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಯನ್ನು ರಾಸಾಯನಿಕ ವಿಧಾನಗಳಲ್ಲಿ ಮಾಡಿ ವಿಶ್ಲೇಷಣಾ ವರದಿಯನ್ನು ನೀಡಲು ಒಂದು ವಾರ ಸಮಯವಾಗುತ್ತದೆ. ಭೂಮಿತ್ರ ಯಂತ್ರದ ಮೂಲಕ ತಕ್ಷಣವೇ ಬೆಳೆಗೆ ಬೇಕಾಗುವ ಎಲ್ಲಾ 17 ಪೋಷಕಾಂಶಗಳ, ಒಟ್ಟಾರೆ 23 ಪೋಷಕಾಂಶಗಳನ್ನು ತಕ್ಷಣವೇ ವಿಶ್ಲೇಷಣೆ ಮಾಡಿಕೊಡುವ ವ್ಯವಸ್ಥೆ ಮಾಡಲಾಗಿದೆ. ಭೌತಿಕ ರಸಾಯನ ವಿಜ್ಞಾನ ಹಾಗೂ ಗಣಕ ಯಂತ್ರ ವಿಜ್ಞಾನ ಸೇರಿಸಿ ಮಣ್ಣಿನ ಸ್ಪೆಕ್ಟ್ರೋಸ್ಕೋಪಿ ಪದ್ಧತಿಯಿಂದ ಶೀಘ್ರವೇ ಮಣ್ಣಿನ ವಿಶ್ಲೇಷಣೆ ಮಾಡಲಾಗುವುದು.

"ಸಾವಯವ ಕೃಷಿಗೆ 200 ಕೋಟಿ ರೂಪಾಯಿ ಅನುದಾನ"
ಕಳೆದ ವರ್ಷ 200 ಕೋಟಿ ರೂ.ಅನ್ನು ಸಾವಯವ ಕೃಷಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ. ರಾಸಾಯನಿಕಮುಕ್ತ ಸಾವಯವ ಕೃಷಿಗೆ ಸರ್ಕಾರ ಹೆಚ್ಚು ಒತ್ತು ನೀಡಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ತಕ್ಷಣ ತಯಾರಾಗುವ ಭೂಸಿರಿ ಯಂತ್ರವನ್ನು ಮುಖ್ಯಮಂತ್ರಿಗಳು ಹಾಗೂ ಸಭಾಧ್ಯಕ್ಷರು ಲೋಕಾರ್ಪಣೆಗೊಳಿಸಿದ್ದಾರೆ. ಕೃಷಿ ಹಾಗೂ ರೈತನ ಹಿತಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು. ಕಸವನ್ನು ರಸವನ್ನಾಗಿ ಮಾಡುವ ನಾಗರಾಜ್ ಹೆಗಡೆಯವರು ತಮ್ಮ ಈ ಅನ್ವೇಷಣೆಯಿಂದ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ಅಭಿನಂದಿಸಿದರು.












Click it and Unblock the Notifications