ರಾಜ್ಯದಲ್ಲಿ ಶೇ.100 ರಷ್ಟು ಬಿತ್ತನೆಯಾಗುವ ನಿರೀಕ್ಷೆಯಿದೆ ಎಂದ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜುಲೈ 26: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಚುರುಕಾಗಿ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಶೇಕಡಾ 100ರಷ್ಟು ಬಿತ್ತನೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನಲ್ಲಿ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಹುತಾತ್ಮ ಯೋಧರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಮಳೆಯಿಂದಾಗಿ ಕೈ ಮೀರಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಕೆಆರ್‌ಎಸ್, ಕಬಿನಿ, ಹಾರಂಗಿ, ಹೇಮಾವತಿ, ಆಲಮಟ್ಟಿ ಸೇರಿದಂತೆ ಎಲ್ಲಾ ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಬರುತ್ತಿರುವುದು ರೈತರಿಗೆ ಹಾಗೂ ಸರ್ಕಾರಕ್ಕೆ ಸಂತೋಷ ತಂದಿದೆ. ಹಾಗೆಯೇ ಹಾವೇರಿಯಲ್ಲಿ 87% ಬಿತ್ತನೆಯಾಗಿದೆ ಎಂದರು.

ಜುಲೈ 31ಕ್ಕೆ ವಿವಿಧ ಜಿಲ್ಲೆಗಳ ಪ್ರವಾಸ
ಸೋಮವಾರ ಮಂಗಳೂರು, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಲಿದ್ದೇನೆ. ಈ ವೇಳೆ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ಜನರನ್ನು ಭೇಟಿಯಾಗಿ ಅವರ ಕಷ್ಟಗಳನ್ನು ಆಲಿಸಲಾಗುವುದು. ಈಗಾಗಲೇ ಸಚಿವ ಕೃಷ್ಣ ಬೈರೇಗೌಡರು ನಿನ್ನೆ ಕೊಡಗು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ ಎಂದರು.
ಹಾಗೆಯೇ ಎಲ್ಲೆಡೆ ಮಳೆಯಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಕೆಲವು ದಿನಗಳ ಹಿಂದೆ ಟ್ಯಾಂಕರ್ ನೀರಿನ ಸರಬರಾಜು ಮಾಡಲಾಗುತ್ತಿತ್ತು. ಆದರೆ ಈಗ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ ಎಂದರು.
ಬಿಜೆಪಿ ವಿರುದ್ಧ ಸಿಎಂ ಆಕ್ರೋಶ
ಡಿ.ಜೆ.ಹಳ್ಳಿ ಹಾಗೂ ಶಿವಮೊಗ್ಗದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಅಮಾಯಕರ ಮೇಲಿನ ಕೇಸ್ ಹಿಂಪಡೆಯುವ ಬಗ್ಗೆ ಪ್ರತಿಕ್ರಿಯಿಸಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಏಕೆ ಕೇಸ್ ಹಿಂಪಡೆಯಲಿಲ್ಲ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದರು.
ಶಾಸಕರ ಹೆಸರಿನಲ್ಲಿ ನಕಲಿ ಪತ್ರ
ಶಾಸಕರು ಸಚಿವರ ಮೇಲೆ ದೂರು ನೀಡಿ ಮುಖ್ಯ ಮಂತ್ರಿಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಶಾಸಕ ಬಿ.ಆರ್.ಪಾಟೀಲ್ ಅವರೇ ನಕಲಿ ಪತ್ರ ಎಂದು ಹೇಳಿದ್ದಾರೆ. ಆದರೂ ಪತ್ರಿಕೆಗಳಲ್ಲಿ ಪ್ರಚಾರ ಮಾಡಲಾಗಿದೆ. ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಬರೆದಿದ್ದಾರೆ. ಇಂತಹ ಮಂತ್ರಿ ಎಂದು ಹೆಸರಿಸಿಲ್ಲ ಎಂದರು.
ಕಾರ್ಗಿಲ್ ಯೋಧರ ಬದುಕು ಯುವಕರಿಗೆ ಸ್ಫೂರ್ತಿ
ಹಾಗೆಯೇ ಕಾರ್ಗಿಲ್ ಯುದ್ಧದಲ್ಲಿ ಸುಮಾರು 524 ಯೋಧರು ದುರ್ಗಮ ಸ್ಥಳದಲ್ಲಿ ಹೋರಾಡಿ ದೇಶವನ್ನು ರಕ್ಷಣೆ ಮಾಡುವ ಕೆಲಸ ಮಾಡಿದ್ದಾರೆ. ತ್ಯಾಗ, ಬಲಿದಾನ ಮಾಡಿದ ಎಲ್ಲರ ಆತ್ಮಕ್ಕೆ ಶಾಂತಿ ಕೋರಿ ಸ್ಮರಿಸುವುದು ನಮ್ಮ ಕರ್ತವ್ಯ. ಅವರ ಜೀವನ ಇಂದಿನ ಯುವಕರಿಗೆ ಸ್ಫೂರ್ತಿ ಹಾಗೂ ಮಾರ್ಗದರ್ಶನ ನೀಡುವಂತಹದ್ದಾಗಿದೆ ಎಂದರು.












Click it and Unblock the Notifications