ವಿಶೇಷ ವರದಿ: ರೇಷ್ಮೆ ಕೃಷಿಯತ್ತ ಚಾಮರಾಜನಗರ ರೈತರ ಒಲವು
ಚಾಮರಾಜನಗರ, ಮಾರ್ಚ್ 5: ಒಂದು ಕಾಲದಲ್ಲಿ ಚಾಮರಾಜನಗರದ ರೈತರು ರೇಷ್ಮೆ ಕೃಷಿಯತ್ತ ಒಲವು ತೋರಿದ ಹಿನ್ನಲೆಯಲ್ಲಿ ರೇಷ್ಮೆ ಕೃಷಿ ಉಚ್ಛ್ರಾಯ ಸ್ಥಿತಿಯನ್ನು ತಲುಪಿತ್ತು. ಆದರೆ ನಂತರದ ದಿನಗಳಲ್ಲಿ ಮಾರುಕಟ್ಟೆಯಲ್ಲಿ ರೇಷ್ಮೆಗೆ ಬೆಲೆ ಕುಸಿತವಾದ ಕಾರಣ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿ ಕೃಷಿಯಿಂದ ವಿಮುಖರಾದರು.
ಇತ್ತೀಚೆಗಿನ ದಿನಗಳಲ್ಲಿ ಮತ್ತೆ ರೇಷ್ಮೆಗೆ ಉತ್ತಮ ಬೆಲೆ ದೊರೆಯುತ್ತಿರುವುದು ರೈತರಲ್ಲಿ ರೇಷ್ಮೆ ಕೃಷಿ ಮಾಡುವ ಬಯಕೆಯನ್ನು ಹುಟ್ಟು ಹಾಕುತ್ತಿದೆ. ಜತೆಗೆ ರೈತರಿಗೆ ನರೇಗಾ ಯೋಜನೆಯಡಿ ಒಂದಷ್ಟು ಸಹಾಯ ಸಿಗುತ್ತಿರುವುದು ಕೂಡ ರೈತರಲ್ಲಿ ಸ್ವಲ್ಪ ಮಟ್ಟಿಗೆ ಆಶಾಭಾವನೆ ಮೂಡಿಸುತ್ತಿದೆ.

ರೇಷ್ಮೆ ಕೃಷಿಗೆ ಸಹಕಾರಿಯಾದ ನರೇಗಾ
ಕರ್ನಾಟಕದ ರೇಷ್ಮೆ ದೇಶ- ವಿದೇಶಗಳಲ್ಲಿ ಉತ್ತಮ ಹೆಸರಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೇಷ್ಮೆಗೆ ಬೇಡಿಕೆ ಬಂದಿರುವುದರಿಂದ ಜತೆಗೆ ಕೆಲವು ದಿನಗಳ ಹಿಂದೆ ರಾಮನಗರ ಮಾರುಕಟ್ಟೆಯಲ್ಲಿ ಕೆಜಿಗೆ ಒಂದು ಸಾವಿರದಷ್ಟು ಬೆಲೆ ದೊರೆತಿರುವುದು ಭವಿಷ್ಯದಲ್ಲಿ ರೇಷ್ಮೆಗೆ ಉತ್ತಮ ಬೆಲೆ ದೊರೆಯಬಹುದೆಂಬ ನಿರೀಕ್ಷೆಯಲ್ಲಿ ಕೃಷಿಯತ್ತ ತೊಡಗುತ್ತಿರುವುದಕ್ಕೆ ಕಾರಣವಾಗಿದೆ. ಕೋವಿಡ್ ಕಾರಣದಿಂದ ನಗರದಿಂದ ಹಳ್ಳಿಗಳಿಗೆ ಮರಳಿದವರು ಕೃಷಿಯತ್ತ ಒಲವು ತೋರುತ್ತಿದ್ದು, ವಾಣಿಜ್ಯ ಬೆಳೆಗಳತ್ತಲೂ ಗಮನ ನೀಡುತ್ತಿರುವುದು ರೇಷ್ಮೆ ಕೃಷಿ ಸುಧಾರಣೆ ಕಾಣಲು ಸಾಧ್ಯವಾಗುತ್ತಿದೆ.
ಭತ್ತ, ಜೋಳ ಸೇರಿದಂತೆ ಕೆಲವು ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದ ರೈತರು, ನಿರೀಕ್ಷಿತ ಆದಾಯ ಪಡೆಯಲಾಗದೆ ನಷ್ಟ ಅನುಭವಿಸುತ್ತಾ ಬಂದಿದ್ದರು. ಬೇರೆ ಕೃಷಿ ಮಾಡಲು ಆರ್ಥಿಕ ಸಹಾಯ ದೊರೆಯದ ಕಾರಣದಿಂದಾಗಿ ಹಿಂದೇಟು ಹಾಕಿದ್ದರು. ಕೋವಿಡ್ ಕಾಲದಲ್ಲಿ ಕೆಲವೊಂದು ಯೋಜನೆಗಳು ರೈತರ ಕೈಹಿಡಿದಿದ್ದು ಅದರಲ್ಲೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ ಬಹಳಷ್ಟು ಜನರ ಪಾಲಿಗೆ ಸಹಾಯವಾಗಿದ್ದು, ಜಿಲ್ಲಾಡಳಿತದ ಮುತುವರ್ಜಿ, ಅಧಿಕಾರಿಗಳ ಶ್ರಮದಿಂದಾಗಿ ರೈತರು ರೇಷ್ಮೆ ಕೃಷಿ ಮಾಡಲು ಸಾಧ್ಯವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ರೇಷ್ಮೆ ಬೆಳೆದವರು ಹೇಳುವುದೇನು?
ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಕುಂತೂರು ಗ್ರಾಮದ ರೈತ ವಂಸತರಾಜೇ ಅರಸ್, "ನಾವು ಈ ಹಿಂದೆ ಭತ್ತ, ರಾಗಿ, ಜೋಳ ಬೆಳೆಯುತ್ತಿದ್ದೆವು. ಇದರಿಂದ ಲಾಭ ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ನೆರವಿನಿಂದ ಒಂದೂವರೆ ಎಕರೆ ಜಮೀನಿನಲ್ಲಿ ಹಿಪ್ಪುನೇರಳೆ ಬೆಳೆಯುತ್ತಿದ್ದು, ರೇಷ್ಮೆಹುಳು ಸಾಕಣೆಯನ್ನು ಮಾಡುತ್ತಿದ್ದೇನೆ. ರೇಷ್ಮೆಗೂಡು ಮಾರಾಟದಿಂದ ವಾರ್ಷಿಕ 3 ರಿಂದ 4 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದು, ಇತರೆ ಬೆಳೆಗಳಿಗೆ ಹೋಲಿಸಿದರೆ ಇದರಲ್ಲಿ ಲಾಭವೂ ಹೆಚ್ಚಾಗಿರುವುದಾಗಿ,'' ಹೇಳಿದ್ದಾರೆ.
ಇನ್ನೊಬ್ಬ ಮಣಗಳ್ಳಿಯ ರೈತ ಸ್ವಾಮಿ, "ನರೇಗಾ ಯೋಜನೆಯು ರೈತರ ಸ್ವಾವಲಂಬನೆಯ ಬದುಕಿಗೆ ಆಸರೆಯಾಗಿದ್ದು, ರೈತರು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಹಿಪ್ಪುನೇರಳೆ ಬೆಳೆಯುವುದರೊಂದಿಗೆ ರೇಷ್ಮೆ ಹುಳು ಸಾಕಣೆಯನ್ನು ಮಾಡಿದ್ದೇ ಆದರೆ ಒಂದಷ್ಟು ಆದಾಯಕ್ಕೆ ದಾರಿಯಾಗುತ್ತದೆ,'' ಎಂದು ತಿಳಿಸಿದ್ದಾರೆ.

ರೈತರಿಗೆ ಜಿಪಂ ಸಿಇಒ ಸಲಹೆ
ಚಾಮರಾಜನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, "ಜಿಲ್ಲೆಯು ಈ ಹಿಂದೆ ರೇಷ್ಮೆ ಕೃಷಿಗೆ ಹೆಸರುವಾಸಿಯಾಗಿತ್ತು, ಪ್ರಸ್ತುತ ರೇಷ್ಮೆ ಬೆಳೆಗಾರರ ಸಂಖ್ಯೆ ಕಡಿಮೆಯಾಗುತ್ತಿದೆ. ರೇಷ್ಮೆ ಬೆಳೆಯಲು ಆಸಕ್ತಿ ಹೊಂದಿರುವ ರೈತರು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಡಿ ಲಭ್ಯವಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು,'' ಸಲಹೆ ನೀಡಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿದ ಅವರು, ಹಿಪ್ಪುನೇರಳೆ ಬೆಳೆಯಲು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅವಕಾಶವಿದೆ. ಒಂದು ಎಕರೆ ಹಿಪ್ಪುನೇರಳೆ ಪ್ರದೇಶ ವಿಸ್ತರಣೆಗೆ ಗರಿಷ್ಠ 80 ಸಾವಿರ ರೂ.ವರಗೆ ಆರ್ಥಿಕ ನೆರವು ದೊರೆಯಲಿದ್ದು, ಎರಡು ವರ್ಷಗಳ ನಿರ್ವಹಣೆಗೂ ಅವಕಾಶವಿದೆ.

ಮರಳುತ್ತಾ ರೇಷ್ಮೆಯ ವೈಭವ
ಇನ್ನು ರೈತರು ವೈಜ್ಞಾನಿಕ ಪದ್ದತಿ ಅಳವಡಿಸಿಕೊಳ್ಳಲು ಮುಂದಾದರೆ ರೇಷ್ಮೆ ಕೃಷಿಗೆ ಅಗತ್ಯವಿರುವ ಎಲ್ಲ ಬಗೆಯ ನೆರವುಗಳನ್ನು ನೀಡಲು ರೇಷ್ಮೆ ಇಲಾಖೆಗೆ ನಿರ್ದೇಶನ ನೀಡಲಾಗಿದ್ದು, ರೈತರು ಈ ಯೋಜನೆಯನ್ನು ಬಳಸುವುದರ ಮೂಲಕ ಆರ್ಥಿಕ ಪ್ರಗತಿ ಹೊಂದಬಹುದು. ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ರೇಷ್ಮೆ ಇಲಾಖೆಯ ಒಗ್ಗೂಡಿಸುವಿಕೆಯಡಿ ಈಗಾಗಲೇ ಹಲವಾರು ರೈತರು ಪ್ರಯೋಜನ ಪಡೆದುಕೊಂಡಿದ್ದು, ರೇಷ್ಮೆ ಕೃಷಿ ಅವಲಂಬನೆಯು ರೈತರ ನೆಮ್ಮದಿಯ ಬದುಕಿಗೆ ಆಧಾರವಾಗಿದೆ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಇತ್ತೀಚೆಗೆ ರೇಷ್ಮೆ ಕೃಷಿಗೆ ಉತ್ತೇಜನ ನೀಡುವ ಕಾರ್ಯ ಜಿಲ್ಲೆಯಲ್ಲಿ ಪ್ರಗತಿಯಲ್ಲಿದ್ದು, ರೈತರಿಗೆ ಉತ್ತಮ ಅವಕಾಶ ಸಿಕ್ಕು, ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇ ಆದರೆ ಚಾಮರಾಜನಗರ ಜಿಲ್ಲೆಯಲ್ಲಿ ಹಿಂದಿನ ರೇಷ್ಮೆಯ ಆ ವೈಭವ ಮರಳಿ ಬರುವ ಸಾಧ್ಯತೆಯಂತು ಇದ್ದೇ ಇದೆ.












Click it and Unblock the Notifications