ಮೆಕ್ಕೆಜೋಳ ಖರೀದಿ ಬಗ್ಗೆ ಯಡಿಯೂರಪ್ಪ ಕೇಳಿ!
ಕೊಪ್ಪಳ, ಡಿಸೆಂಬರ್. 14 : 'ಮೆಕ್ಕೆಜೋಳ ಖರೀದಿ ಬಗ್ಗೆ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಹಸಿರು ಶಾಲು ಹಾಕಿಕೊಳ್ಳುವ ಯಡಿಯೂರಪ್ಪ ಅವರಿಗೆ ಈ ಬಗ್ಗೆ ಕೇಳಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೊಪ್ಫಳದಲ್ಲಿ ಗುರುವಾರ ಮಾತನಾಡಿದ ಸಿದ್ದರಾಮಯ್ಯ ಅವರು, 'ಕರ್ನಾಟಕ ಸರ್ಕಾರ ರೈತರಿಂದ ಮೆಕ್ಕೆಜೋಳ ಖರೀದಿ ಮಾಡಲು ಸಿದ್ಧವಿದೆ. ಆದರೆ, ಅದನ್ನು ಕೇಂದ್ರ ಖರೀದಿ ಮಾಡುವುದಿಲ್ಲ. ನಾವು ಯಾರಿಗೆ ಅದನ್ನು ಮಾರೋಣ?' ಎಂದು ಪ್ರಶ್ನಿಸಿದರು.

'ಖರೀದಿ ಮಾಡಿದ ಮೆಕ್ಕೆಜೋಳವನ್ನು ಕೇಂದ್ರ ಸರ್ಕಾರ ಖರೀದಿ ಮಾಡಿ ಬೇರೆ ರಾಜ್ಯಗಳಿಗೆ ನೀಡಬೇಕು. ಆದರೆ, ನಾವು ಖರೀದಿ ಮಾಡುವುದಿಲ್ಲ ಎಂದು ಕೇಂದ್ರ ಹೇಳಿದೆ. ಆದ್ದರಿಂದ ಖರೀದಿ ಮಾಡಿಲ್ಲ' ಎಂದರು.
'ಕೃಷಿ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಮಾಡಿದ್ದಾರೆ. ನಾನು ಸಹ ಪತ್ರ ಬರೆದಿದ್ದೇನೆ. ಯಾವುದೇ ಉತ್ತರ ಬಂದಿಲ್ಲ. ಹಸಿರು ಶಾಲು ಹಾಕಿಕೊಳ್ಳುವ ಯಡಿಯೂರಪ್ಪ ಅವರನ್ನು ಈ ಬಗ್ಗೆ ಕೇಳಿ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಕನಿಷ್ಠ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳವನ್ನು ಖರೀದಿ ಮಾಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ಯುವಂತೆ' ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದರು.












Click it and Unblock the Notifications