ಸಾಲಮನ್ನಾ ಕುರಿತ ಸಿಎಂ ನೇತೃತ್ವದ ಮಹತ್ವದ ಸಭೆಗೆ ಬಿಎಸ್‌ವೈಗೆ ಆಹ್ವಾನ
ಬೆಂಗಳೂರು, ಮೇ 29: ರೈತರ ಸಾಲಮನ್ನಾ ಕುರಿತು ನಾಳೆ ಮುಖ್ಯಮಂತ್ರಿಗಳು ನಡೆಸಲಿರುವ ಮಹತ್ವದ ಸಭೆಗೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಲಾಗಿದೆ.
ನಾಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ಕುರಿತು ಮಹತ್ವದ ಸಭೆ ನಡೆಸುತ್ತಿದ್ದು, ಸಭೆಯಲ್ಲಿ ಡಿಸಿಎಂ ಪರಮೇಶ್ವರ್, ರೈತ ಮುಖಂಡರು, ಅಧಿಕಾರಿಗಳು, ಕಾಂಗ್ರೆಸ್ ಹಿರಿಯರು ಭಾಗವಹಿಸಲಿದ್ದಾರೆ. ಇದೇ ಸಭೆಗೆ ಈಗ ಯಡಿಯೂರಪ್ಪ ಅವರಿಗೂ ಆಹ್ವಾನ ನೀಡಲಾಗಿದೆ.
ಕುಮಾರಸ್ವಾಮಿ ಅವರು ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡಿದಂದೇ ಯಡಿಯೂರಪ್ಪ ಅವರು ಸಾಲಮನ್ನಾ ಬಗ್ಗೆ ಪ್ರಸ್ತಾಪ ಮಾಡಿ ಸಾಲಮನ್ನಾ ಮಾಡದಿದ್ದರೆ ಉಗ್ರ ಹೊರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು, ನಿನ್ನೆಯಷ್ಟೆ ಬಿಜೆಪಿಯು ಈ ಕುರಿತು ಪ್ರತಿಭಟನೆಯನ್ನೂ ಮಾಡಿತ್ತು.

ಸರ್ಕಾರ ರಚನೆ ಆದಂದಿನಿಂದಲೂ ಬಿಜೆಪಿಯು ಸಾಲಮನ್ನಾ ವಿಚಾರವನ್ನಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಲೇ ಇದೆ, ಹಾಗಾಗಿ ಮುಖ್ಯಮಂತ್ರಿಗಳು ಸಭೆಗೆ ಯಡಿಯೂರಪ್ಪ ಅವರಿಗೂ ಆಹ್ವಾನ ನೀಡಿದ್ದಾರೆ.
ನಾಳೆ ಬೆಳಿಗ್ಗೆ 11 ಗಂಟೆಗೆ ಸಭೆ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ರೈತರ ಸಾಲಮನ್ನಾ ಕುರಿತು ಸರ್ಕಾರದ ನಿರ್ಧಾರ ಹೊರಬೀಳಲಿದೆ.












Click it and Unblock the Notifications