ಕಳಪೆ ಬಿತ್ತನೆ ಬೀಜ; ರೈತರಿಗೆ ಬೆಂಗಳೂರು ಕೃಷಿ ವಿವಿ ಉಪಕುಲಪತಿಗಳ ಉಪಯುಕ್ತ ಸಲಹೆ
ಬಿತ್ತನೆಯ ಕಾಲ. ರೈತರು ಬೀಜ, ಗೊಬ್ಬರ, ಔಷಧಗಳ ಖರೀದಿಗಾಗಿ ಚುರುಕಿನಿಂದ ಓಡಾಡುತ್ತಿದ್ದಾರೆ. ಬರ, ನೆರೆ, ಮಾರುಕಟ್ಟೆಯ ಹೊಡೆತಗಳನ್ನು ಎದುರಿಸಿಕೊಂಡೇ ಕೃಷಿ ಮಾಡುವ ರೈತನಿಗೆ ಇದೀಗ ಕಾಣದ ಜೀವಿಯೊಂದು (ಕೊರೊನಾ ವೈರಸ್) ಹೊಸ ಸವಾಲು ಒಡ್ಡಿತು. ಎಷ್ಟು ಸವಾಲುಗಳು? ರೈತ ಭೂಮಿಯಷ್ಟೇ ಸಹಿಷ್ಣು ಗುಣ ರೂಢಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ.
ಕೃಷಿಗೆ ಬೇಕಾದ ಬೀಜ, ಗೊಬ್ಬರ, ಪರಿಕರಗಳನ್ನು ಕೊಳ್ಳುವ ರೈತನಿಗೆ ಮಾರುಕಟ್ಟೆಯಲ್ಲಿ ಕಳಪೆ ಪದಾರ್ಥಗಳ ಗೋಳು ಬೇರೆ. ಇತ್ತೀಚೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಹಲವು ಕೋಟಿ ರೂಪಾಯಿಗಳ ಮೌಲ್ಯದ ಕಳಪೆ ಬಿತ್ತನೆ ಬೀಜಗಳನ್ನು ಪತ್ತೆ ಹಚ್ಚಿದ್ದ ಸುದ್ದಿಯನ್ನು ನಾವೆಲ್ಲಾ ಮಾಧ್ಯಮಗಳಲ್ಲಿ ಗಮನಿಸಿದ್ದೆವು. "ನೂಲಿನಂತೆ ಬಟ್ಟೆ ಬೀಜದಂತೆ ಗಿಡ/ಮರ" ಎಂಬ ಮಾತಿದೆ. ಬೆಳೆಯ ಮೂಲ ಬೀಜವೇ ಕಳಪೆಯಾದಾಗ ರೈತನ ನೆರವಿಗೆ ಬರುವವರು ಯಾರು?
ಬಿಟಿ ಬಗ್ಗೆ ವಕಾಲತ್ತು ವಹಿಸಿರುವ ರೈತ ಮುಖಂಡರ ಆಸ್ತಿ ಲೆಕ್ಕ ಕೇಳಿ!
ಇಂಥದೊಂದು ಗಂಭೀರ ವಿಷಯವನ್ನಿಟ್ಟುಕೊಂಡು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಗಳು, ಬೀಜ ತಜ್ಞರೂ ಆದ ಡಾ. ಎಸ್. ರಾಜೇಂದ್ರ ಪ್ರಸಾದ್ ಅವರನ್ನು ಒನ್ ಇಂಡಿಯಾ ಸಂದರ್ಶಿಸಿದಾಗ ಹಲವು ಮಹತ್ವದ ವಿಷಯಗಳನ್ನು ರೈತರೊಂದಿಗೆ ಹಂಚಿಕೊಂಡಿದ್ದಾರೆ.

1. ಬರುವ ಮುಂಗಾರು ಮಳೆಗೆ ಬಿತ್ತನೆ ಬೀಜಗಳನ್ನು ಕೊಳ್ಳುವಾಗ ರೈತರು ಅನುಸರಿಸಬೇಕಾದ ಮುನ್ನೆಚ್ಚರಿಕೆಗಳೇನು?
* ಬೀಜವನ್ನು ಅಧಿಕೃತ ಅಂಗಡಿಗಳಿಂದಲೇ ಖರೀದಿಸಿ
* ಬೀಜದ ಚೀಲದ ಮೇಲೆ ಬೆಳೆ ಮತ್ತು ತಳಿಯ ಹೆಸರನ್ನು ನಮೂದಿಸಿರಬೇಕು.
* ಚೀಲದ ಮೇಲೆ ಬೀಜದ ವಾಯಿದೆ (expiry date) ದಿನಾಂಕ ಮುದ್ರಿಸಿರಬೇಕು
* ಬೀಜದ ಗುಣಮಟ್ಟವನ್ನು ಚೀಲದ ಮೇಲೆ ಮುದ್ರಿಸಿರಬೇಕು
* ಬೀಜದ ಗುಣಮಟ್ಟ ಪ್ರಮಾಣಿಕರಿಸಿದ ರೀತಿಯಲ್ಲಿ ಇರಬೇಕು
* ಬೀಜ ಗರಿಷ್ಠ ಮೊಳಕೆ ಪ್ರಮಾಣ ಹೊಂದಿದ್ದು ಅನುವಂಶೀಯ ಹಾಗೂ ಭೌತಿಕವಾಗಿ ಶುದ್ಧವಾಗಿರಬೇಕು.
* ಅವಧಿ ಮೀರಿದ ಬೀಜವನ್ನು ಯಾವುದೇ ಕಾರಣಕ್ಕೂ ಖರೀದಿಸಬಾರದು
* ಮುದ್ರೆ ಹರಿದಿರುವ ಚೀಲವನ್ನು ಖರೀದಿಸಬಾರದು
* ಖರೀದಿಸಿದ ರಶೀದಿ ಮತ್ತು ಚೀಲವನ್ನು ಜೋಪಾನವಾಗಿಟ್ಟುಕೊಳ್ಳಬೇಕು.

2. ಸಾಮಾನ್ಯ ರೈತ ನಕಲಿ ಬೀಜಗಳನ್ನು ಪತ್ತೆ ಹಚ್ಚಬಹುದೇ? ಹೌದಾದರೆ ಅದು ಹೇಗೆ?
ಸಾಮಾನ್ಯ ರೈತರು ನಕಲಿ ಬೀಜಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಯಾವ ರೀತಿ ಎಂದರೆ...
* ಬೀಜವನ್ನು ಪೊಟ್ಟಣ ಮಾಡಿ, ಅದರಲ್ಲಿ ಬೀಜದ ಗುಣಮಟ್ಟದ ಖಾತರಿ ಚೀಟಿ (ಟ್ಯಾಗ್) ಹೊಲಿದಿರಬೇಕು. ಅದರಲ್ಲಿ ಬಿತ್ತನೆ ಬೀಜದ ಪರೀಕ್ಷೆ ದಿನಾಂಕ, ಬೀಜದ ಅವಧಿ ಮತ್ತು ಬೀಜದ ಗುಣಮಟ್ಟದ ವಿವರಗಳು ನಮೂದಾಗಿರಬೇಕು.
* ಹೊಲಿದ ಟ್ಯಾಗ್ ಗಳು ಹರಿದಿರಬಾರದು
* ಬೀಜವು ಭೌತಿಕವಾಗಿ ಶುದ್ಧವಾಗಿರಬೇಕು
* ಬೀಜವು ಸಮ ಗಾತ್ರದಲ್ಲಿರಬೇಕು
* ಬೀಜವು ಒಂದೇ ಬಣ್ಣದ್ದಾಗಿರಬೇಕು
* ಬೀಜವು ಕೀಟ ಬಾಧೆಯಿಂದ ಮುಕ್ತವಾಗಿರಬೇಕು
* ಬೀಜಕ್ಕೆ ಬೀಜೋಪಚಾರ ಮಾಡಿರಬೇಕು
ನಕಲಿ ಬಿತ್ತನೆ ಬೀಜದಿಂದ ನಷ್ಟವಾದರೆ ರೈತರಿಗೆ ಪರಿಹಾರವಿಲ್ಲ

3. ಬಿತ್ತನೆ ಬೀಜಗಳು ಮೊಳಕೆ ಬಾರದೆ ಇದ್ದಲ್ಲಿ, ಬೆಳೆ ಕೈಕೊಟ್ಟರೆ ರೈತ ಏನು ಮಾಡಬೇಕು?
* ಬಿತ್ತನೆ ಬೀಜದ ಮೊಳಕೆ ಬಾರದೆ ಇದ್ದಲ್ಲಿ ರೈತರು ಮೊದಲನೆಯದಾಗಿ ಬಿತ್ತನೆ ಮಾಡುವಾಗ ಭೂಮಿಯು ಹದವಾಗಿತ್ತೆಂದು ಖಾತ್ರಿಪಡಿಸಬಹುದು.
* ಬಿತ್ತನೆ ಬೀಜದ ಅವಧಿಯನ್ನು ಪರಿಶೀಲಿಸಬೇಕು.
* ಸಮೀಪದ ರೈತ ಸಂಪರ್ಕ ಕೇಂದ್ರಗಳು/ಕೃಷಿ ಅಧಿಕಾರಿಯ ಕಚೇರಿಗಳಲ್ಲಿ ದೂರು ಸಲ್ಲಿಸುವುದು.

4. ದೇಸಿ ತಳಿಗಳು, ಹೈಬ್ರೀಡ್, ಇವುಗಳ ನಡುವಿನ ವ್ಯತ್ಯಾಸವೇನು? ಯಾವ್ಯಾವ ಬೆಳೆಗೆ ಯಾವ ಬೀಜಗಳು ಸೂಕ್ತ ಎಂಬುದನ್ನು ವಿವರಿಸಿ?
ದೇಸಿ ತಳಿಗಳು ಸಾಮಾನ್ಯವಾಗಿ ರೈತರು ಸಂರಕ್ಷಿಸಿ ಬೆಳೆದ ಬಿತ್ತನೆ ಬೀಜಗಳಾಗಿರುತ್ತವೆ. ಈ ಬಿತ್ತನೆ ಬೀಜಗಳು ಬೀಜ ಪ್ರಮಾಣೀಕರಣಕ್ಕೆ ಒಳಪಟ್ಟಿರುವುದಿಲ್ಲ. ಆದರೆ ಇವು ನಂಬಿಕೆ ತಳಿಗಳಾಗಿರುತ್ತವೆ. ದೇಸಿ ತಳಿಗಳಾದ ಭತ್ತ, ರಾಗಿ, ಅವರೆ, ಅಲಸಂದೆ, ತೊಗರಿ, ಹುರುಳಿ ಮುಂತಾದವುಗಳು ಸೂಕ್ತ ತಳಿಗಳಾಗಿವೆ. ಹೈಬ್ರೀಡ್ ತಳಿಗಳು ಸಂಕರಣ ತಳಿಗಳಾಗಿದ್ದು, ಗಂಡು ಮತ್ತು ಹೆಣ್ಣು ತಳಿಗಳ ಪರಾಗ ಸ್ಪರ್ಶದಿಂದ ಉತ್ಪಾದಿಸಲಾಗಿದ್ದು, ಅಧಿಕ ಇಳುವರಿ ಸಾಮರ್ಥ್ಯ ಹೊಂದಿರುತ್ತವೆ. ಹೈಬ್ರೀಡ್ ತಳಿಗಳು, ಹೈಬ್ರೀಡ್ ಭತ್ತ, ಸೂರ್ಯಕಾಂತಿ, ಮೆಕ್ಕೆ ಜೋಳ, ಜೋಳ, ಸಜ್ಜೆ ಮುಂತಾದ ಬೆಳೆಗಳು.
ಮುಂಗಾರು ಹಂಗಾಮಿಗೆ ಸಿದ್ಧತೆ; ರೈತರಿಗೆ ಸಲಹೆಗಳು

5. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಉತ್ಪಾದನೆ ಆಗುತ್ತಿರುವ ಬಿತ್ತನೆ ಬೀಜಗಳು ಹಾಗೂ ಮಾರಾಟ, ಖಾಸಗಿ ಸಂಸ್ಥೆಗಳ ಬಿತ್ತನೆ ಬೀಜ ಹಾಗೂ ಮಾರಾಟದ ಶೇಕಡಾವಾರು ಅಂಕಿ ಸಂಖ್ಯೆಗಳನ್ನು (ನಿಮ್ಮ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ) ತಿಳಿಸಿ?
ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಉತ್ಪಾದನೆ ಆಗುವ ಬೆಳೆಗಳಾದ, ಆಹಾರ ಧಾನ್ಯಗಳಾದ ಭತ್ತ, ರಾಗಿ, ಮೆಕ್ಕೆ ಜೋಳ, ಬಿಳಿಜೋಳ, ಸಿರಿಧಾನ್ಯಗಳು, ಅವರೆ, ಅಲಸಂದೆ ಉದ್ದು, ತೊಗರಿ, ಹೆಸರು, ಶೇಂಗಾ ಸೂರ್ಯಕಾಂತಿ, ಎಳ್ಳು, ಹುಚ್ಚೆಳ್ಳು ಹಾಗೂ ಹರಳು ಬೆಳೆಗಳಲ್ಲಿ ಶೆ. 85-90 ರಷ್ಟು ಬೀಜದ ಉತ್ಪಾದನೆ ಮತ್ತು ಮಾರಾಟವು ಸರ್ಕಾರಿ ಸ್ವಾಮ್ಯದ ಪಾಲಾಗಿದೆ. ಖಾಸಗಿ ಸಂಸ್ಥೆಗಳು, ಹೆಚ್ಚಾಗಿ ತರಕಾರಿ, ಹೂವು, ಹಣ್ಣು ಬೆಳೆಗಳ ಸಂಕರಣ ತಳಿಗಳ ಬೀಜೋತ್ಪಾದನೆ ಕೈಗೊಳ್ಳುತ್ತಿದ್ದು, ಶೇಕಡವಾರು 70-80 ರಷ್ಟು ಪಾಲನ್ನು ಹೊಂದಿದೆ.

6. ಪ್ರತಿ ವರ್ಷ ಬಿತ್ತನೆ ಬೀಜಗಳಿಗೆ ಬರುವ ಬೇಡಿಕೆಯ ಪ್ರಮಾಣ ಯಾವ ಮಟ್ಟದಲ್ಲಿ ಹೆಚ್ಚುತ್ತಿದೆ ಅಥವಾ ಕುಸಿಯುತ್ತಿದೆ ತಿಳಿಸಿ?
ಪ್ರತಿ ವರ್ಷ ಬಿತ್ತನೆ ಬೀಜಗಳಿಗೆ ಬರುವ ಬೇಡಿಕೆಯು ವಾರ್ಷಿಕವಾಗಿ ಶೇ. 3-5 ರಷ್ಟು ಹೆಚ್ಚಾಗುತ್ತಿದ್ದು, ಇದು ಆಯಾ ಪ್ರದೇಶದ ಮಳೆಯ ಪ್ರಮಾಣದ ಮೇಲೆ ಅವಲಂಬಿಸಿರುತ್ತದೆ.

7. ಬೀಜ ತಳಿಗಳ ತಜ್ಞರಾದ ನೀವು ರೈತರಿಗೆ ನೀಡುವ ಸಂದೇಶವೇನು?
ಬೀಜ ತಳಿಯ ತಜ್ಞರಾಗಿ ರೈತರಿಗೆ ನೀಡುವ ಸಂದೇಶವೇನೆಂದರೆ, ರೈತ ಭಾಂಧವರು ಪ್ರತಿ ವರ್ಷವು ಸಹ ಗುಣಮಟ್ಟದ ಅಧಿಕ ಇಳುವರಿ ಕೊಡುವ ಪ್ರಮಾಣಿತ ಬೀಜವನ್ನು ಬೆಳೆ ಬೆಳೆಯಲು ಉಪಯೋಗಿಸುವುದು ಸೂಕ್ತ. ಏಕೆಂದರೆ...
* ಉತ್ತಮ ಬೀಜವು ಗರಿಷ್ಠ ಮೊಳಕೆ ಪ್ರಮಾಣ ಹೊಂದಿರುತ್ತದೆ
* ಅನುವಂಶೀಯವಾಗಿ ಶುದ್ಧವಾಗಿದ್ದು, ಬೆರಕೆ ಬೀಜಗಳಿಂದ ಮುಕ್ತವಾಗಿರುತ್ತದೆ
* ಕಳೆ ಬೀಜಗಳಿಂದ ಮುಕ್ತವಾಗಿರುತ್ತದೆ
* ರೋಗ ಮತ್ತು ಕೀಟಗಳ ಬಾಧೆಗಳಿಂದ ಮುಕ್ತವಾಗಿರುತ್ತದೆ
* ಬೀಜಗಳ ಮೊಳಕೆಯು ಒಂದೇ ಸಮನಾಗಿದ್ದು, ತಾಕಿನಲ್ಲಿ ಎಲ್ಲಾ ಗಿಡಗಳು ಉತ್ತಮವಾಗಿ ಬೆಳೆದು ಒಂದೇ ಬಾರಿಗೆ ಕೊಯ್ಲಿಗೆ ಬರುತ್ತವೆ
* ಗಿಡಗಳು ಹೆಚ್ಚು ಬಲಿಷ್ಠವಾಗಿ ಬೆಳೆದು ಉತ್ತಮ ಫಸಲನ್ನು ಕೊಡುತ್ತವೆ
* ಗುಣಮಟ್ಟದ ಬೀಜವು ಶೇ.20ರಷ್ಟು ಅಧಿಕ ಇಳುವರಿ ಕೊಡುತ್ತದೆ