ಕೃಷಿ ಕಾಯ್ದೆ ಹಿಂಪಡೆಯದ ಕರ್ನಾಟಕ ಸರ್ಕಾರ, ರೈತರ ಆಕ್ರೋಶ
ಬೆಂಗಳೂರು, ಫೆಬ್ರವರಿ 16: ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸು ಪಡೆದಂತೆ ರಾಜ್ಯ ಬಿಜೆಪಿ ಸರ್ಕಾರ ಕೂಡಾ ರೈತ ವಿರೋಧಿಯಾಗಿರುವ ಎಪಿಎಂಸಿ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ ಮತ್ತು ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆಯನ್ನು ತಕ್ಷಣ ವಾಪಾಸು ಪಡೆಯಲಿ ಎಂದು ಆಗ್ರಹಿಸಿದ್ದ ರೈತ ಸಮುದಾಯಕ್ಕೆ ನಿರಾಶೆಯಾಗಿದೆ. ಎಪಿಎಂಸಿ ಕಾಯ್ದೆ ಹಿಂಪಡೆಯುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಸಹಕಾರ ಖಾತೆ ಸಚಿವ ಎಸ್. ಟಿ ಸೋಮಶೇಖರ್ ಅವರು ಸ್ಪಷ್ಟಪಡಿಸಿದ್ದಾರೆ.
ವಿಧಾನಪರಿಷತ್ತಿನ ಮಾತನಾಡಿದ ಸೋಮಶೇಖರ್, ಕಾಂಗ್ರೆಸ್ ಶಾಸಕ ಹರೀಶ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿ, ''ರಾಜ್ಯ ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ, ಸದ್ಯಕ್ಕೆ ಕೃಷಿ ಕಾಯ್ದೆ ಹಿಂಪಡೆಯುವ ಪ್ರಸ್ತಾವ ಇಲ್ಲ, ಕಾಯ್ದೆಗಳ ತಿದ್ದುಪಡಿ ಬಗ್ಗೆ ಪರಿಶೀಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು,'' ಎಂದರು.
ಎಪಿಎಂಸಿಗಳ ನಿಯಂತ್ರಣವಿಲ್ಲದೆ ಸ್ವತಂತ್ರವಾಗಿ ವ್ಯಾಪಾರ ನಡೆಸುವ ಅವಕಾಶಕ್ಕಾಗಿ ಪ್ರಯತ್ನಿಸುತ್ತಲೇ ಬಂದಿರುವ ಖಾಸಗಿ ಕಂಪೆನಿಗಳಿಗೆ ಹೆಬ್ಬಾಗಿಲು ತೆರೆಯುವುದೇ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆಯ ದುರುದ್ದೇಶವಾಗಿದೆ. ಎಪಿಎಂಸಿಯ ಹೊಸ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರಕ್ಕೆ ಎಂಪಿಎಂಸಿಯಿಂದ ಹೊರಗಿರುವ ವರ್ತಕರ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ. ಅವರ ವ್ಯವಹಾರದ ಮೇಲೆ ನಿಗಾ ಇಡುವಂತಿಲ್ಲ, ಶುಲ್ಕ, ಸೆಸ್, ಲೆವಿ ಸಂಗ್ರಹಿಸುವಂತಿಲ್ಲ.ಇದು ಸರ್ಕಾರದ ಸಂಪೂರ್ಣ ಶರಣಾಗತಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಮುಂಚೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದೇ ಅಂಶಗಳನ್ನು ಉಲ್ಲೇಖಿಸಿದ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್, ಕೃಷಿ ಸಂಬಂಧಿಸಿದ ಮೂರು ಕಾಯ್ದೆಗಳನ್ನು ಕೇಂದ್ರ ಸರ್ಕಾರವೇ ಹಿಂಪಡೆದು, ದೇಶದ ಕ್ಷಮೆ ಯಾಚಿಸಿದೆ. ರಾಜ್ಯ ಸರ್ಕಾರವೂ ಕಾಯ್ದೆ ಹಿಂಪಡೆಯಬೇಕು ಅಥವಾ ಕೇಂದ್ರ ಸರ್ಕಾರದ ನಡೆ ತಪ್ಪು ಎಂದು ಅಧಿಕೃತವಾಗಿ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರಧಾನ ಮಂತ್ರಿಗಳು ದೇಶದ ರೈತ- ಕಾರ್ಮಿಕರ ಸಮರ ಶೀಲ ಹೋರಾಟಕ್ಕೆ ಮಣಿದು, ದೇಶ ಹಾಗೂ ಜಗತ್ತಿನ ಮುಂದೆ ತಲೆಬಾಗಿ, ತನ್ನನ್ನು ಕ್ಷಮಿಸಬೇಕೆಂದು ಕೈ ಮುಗಿದು, ತಾವು ತಂದ ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ ಕೃಷಿ ಕಾಯ್ದೆಗಳನ್ನು ಸಂಸತ್‌ನಲ್ಲಿಟ್ಟು ತೀರ್ಮಾನಿಸುವ ಮೂಲಕ ವಾಪಾಸು ಪಡೆದರು. ಅವುಗಳ ಜಾರಿಗಾಗಿ ಕರ್ನಾಟಕ ಸರಕಾರ ರೂಪಿಸಿ ಜಾರಿಗೊಳಿಸಿದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ- 2020, ಎಪಿಎಂಸಿ ತಿದ್ದುಪಡಿ ಕಾಯ್ದೆ- 2020 ಹಾಗು ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ- 2020 ಗಳನ್ನು ಈಗಲೂ ವಾಪಾಸು ಪಡೆಯದಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ ಬಲವಾಗಿ ಖಂಡಿಸುತ್ತದೆ.
ರಾಜ್ಯದ ರೈತಾಪಿ ಜನತೆ ಈ ರೀತಿ ಸಾಲ ಬಾಧಿತರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಕೇಂದ್ರ ಸರಕಾರ ನಿಗದಿಸಿದ ಕೃಷಿ ಉತ್ಪನ್ನಗಳ ಬೆಂಬಲಿತ ಬೆಲೆಗೆ ಪ್ರೋತ್ಸಾಹ ಧನವನ್ನು ನೀಡಿ ಸುಗ್ಗಿ ಪೂರ್ವ ಖರೀದಿಸುವುದನ್ನು ಅಮಾನವೀಯವಾಗಿ ನಿಲ್ಲಿಸಲಾಗಿದೆ ಇಲ್ಲವೇ ಕಡಿತಗೊಳಿಸಲಾಗಿದೆ. ಇದರಿಂದ ಕೋಟ್ಯಾಂತರ ಎಕರೆ ಪ್ರದೇಶದ ಭತ್ತ, ತೊಗರಿ, ಮೆಕ್ಕೆಜೋಳ, ಹತ್ತಿ, ರಾಗಿ, ಜೋಳ, ಶೇಂಗಾ ಮುಂತಾದ ಬೆಳೆಗಾರರು ತೀವ್ರ ನಷ್ಟಕ್ಕೀಡಾಗಿದ್ದಾರೆ. ಕೂಡಲೇ ಹಿಂದಿನಂತೆ ಕನಿಷ್ಠ ಬೆಂಬಲ ಬೆಲೆಗೆ ಪ್ರೋತ್ಸಾಹ ಧನವನ್ನು ಪ್ರಕಟಿಸಿ ಸುಗ್ಗಿ ಪರ‍್ವದಲ್ಲಿ ಖರೀದಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಕ್ರಿಯಿಸಿದೆ. ರೈತ ಸಮುದಾಯದ ಬೇಡಿಕೆಗಳನ್ನು ಕೂಡಲೇ ಪರಿಗಣಿಸಿ ಮುಂಬರುವ ಬಜೆಟ್ ಅಧಿವೇಶನ ಪೂರ್ಣಗೊಳ್ಳುವ ಮುನ್ನವೇ ಜಾರಿಗೊಳಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.












Click it and Unblock the Notifications