Arecanut Price : ಅಡಿಕೆ ಧಾರಣೆ: ಎರಡೇ ತಿಂಗಳ ಅಂತರದಲ್ಲಿ ಇಳಿಕೆ ಆಗಿದೆಷ್ಟು?, ಇಲ್ಲಿದೆ ವಿವರ
ಬೆಂಗಳೂರು, ಡಿಸೆಂಬರ್, 11: ಅಡಿಕೆ ಧಾರಣೆ ಎರಡು ತಿಂಗಳ ಅಂತರದಲ್ಲಿ 15 ಸಾವಿರ ರೂಪಾಯಿನಷ್ಟು ಕುಸಿತ ಕಂಡಿದೆ. ಸತತವಾಗಿ ಮಳೆ ಸುರಿದ ಪರಿಣಾಮ ಕೊಳೆ ರೋಗ, ಹಳದಿ ಎಲೆ ರೋಗ, ಎಲೆಚುಕ್ಕಿ ರೋಗಗಳ ಬಾಧೆಯಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಅಲ್ಲದೇ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಈ ವರ್ಷದ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ರೈತರು ಅಧಿಕ ಪ್ರಮಾಣದಲ್ಲಿ ಬೆಳೆಯುವ ರಾಶಿ ಇಡಿ ಪ್ರಕಾರದ ಅಡಿಕೆ ಬೆಲೆ ಕ್ವಿಂಟಾಲ್‌ಗೆ 58 ಸಾವಿರ ರಾಪಾಯಿ ಇತ್ತು. ಅಕ್ಟೋಬರ್ ತಿಂಗಳಿನಲ್ಲಿ 50 ಸಾವಿರ ರೂಪಾಯಿ ಸಮೀಪದಲ್ಲಿ ಇತ್ತು. ಬಳಿಕ ಪ್ರತಿ ವಾರವೂ ಸಹ ಇಳಿಕೆಯಾಗುತ್ತಾ ಬಂದಿದೆ. ಹಾಗೆಯೇ ಡಿಸೆಂಬರ್ ಎರಡನೇ ವಾರದಲ್ಲಿ 39 ಸಾವಿರಕ್ಕೆ ತಲುಪಿದೆ. 2014-15ನೇ ಸಾಲಿನಲ್ಲಿ ರಾಶಿ ಇಡಿ ಧಾರಣೆ ಒಂದು ಲಕ್ಷ ತಲುಪಿ ಸಾರ್ವಕಾಲಿ ದಾಖಲೆ ಸೃಷ್ಟಿಸಿತ್ತು. ನಂತರ ಮತ್ತೆ ಇಳಿಕೆ ಕಂಡಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ 50 ಸಾವಿರ ಆಸುಪಾಸಿನಲ್ಲೇ ಸ್ಥಿರತೆ ಕಾಯ್ದುಕೊಂಡಿತ್ತು ಎಂದು ಪ್ರಜಾವಾಣಿ ಪತ್ರಿಕೆಯ ವರದಿಯಿಂದ ತಿಳಿದುಬಂದಿದೆ.

ಅಡಿಕೆ ಧಾರಣೆ ಕಡಿಮೆ ಆಗಲು ಕಾರಣ ಏನು?
ರಾಜ್ಯದಲ್ಲಿ ಪ್ರತಿವರ್ಷ ಸರಾಸರಿ 6 ಲಕ್ಷ ಟನ್ ಅಡಿಕೆಯನ್ನು ಬೆಳೆಯಲಾಗುತ್ತಿದ್ದು, ದೇಶದಲ್ಲಿ ಬೆಳೆಯುವ ಅಡಿಕೆಯಲ್ಲಿ ಕರ್ನಾಟಕ ರಾಜ್ಯದ ಪ್ರಮಾಣ ಶೇಕಡಾ 50 ಕ್ಕಿಂತ ಹೆಚ್ಚಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರಾಜ್ಯದಲ್ಲಿ ಪ್ರತಿವರ್ಷ ಸುಮಾರು 30 ಸಾವಿರ ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಹಿವಾಟು ನಡೆಯುತ್ತಲೇ ಇರುತ್ತದೆ. ದಕ್ಷಿಣ ಏಷ್ಯಾದ ರಾಷ್ಟ್ರಗಳ ನಡುವೆ ಇರುವ ಪ್ರಾದೇಶಿಕ ಸಹಕಾರ ಒಪ್ಪಂದಗಳ ಲಾಭ ಪಡೆದು, ಕಂಪನಿಗಳು ಭೂತಾನ್ ಸೇರಿದಂತೆ ಹಲವು ದೇಶಗಳಿಂದ ಅಗ್ಗದ ದರಕ್ಕೆ ಅಡಿಕೆ ಆಮದು ಮಾಡಿಕೊಳ್ಳುತ್ತಿದೆ. ಇದೇ ಅಡಿಕೆ ಧಾರಣೆ ಕುಸಿತಕ್ಕೆ ಕಾರಣ ಎಂದು ಅಡಿಕೆ ಬೆಳೆಗಾರರು ಹೇಳುತ್ತಿದ್ದಾರೆ. ಗುಜರಾತ್, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಉತ್ತರ ಭಾರತದ ಗುಟ್ಕಾ, ಪಾನ್ ಮಸಾಲ ಕಂಪನಿಗಳೇ ರಾಜ್ಯದ ಅಡಿಕೆಗೆ ಪ್ರಮುಖ ಮಾರುಕಟ್ಟೆಗಳು ಆಗಿವೆ. ಅವಶ್ಯಕತೆ ಇರುವಷ್ಟು ದಾಸ್ತಾನು ಸಂಗ್ರಹವಾದ ನಂತರ ಖರೀದಿ ಸ್ಥಗಿತಗೊಳಿಸುತ್ತಾರೆ. ಇದರಿಂದ ಧಾರಣೆ ಕುಸಿತಕ್ಕೆ ಕಾರಣವಾಗಿದೆ ಎಂದು ಅಡಿಕೆ ಮಂಡಿ ವರ್ತಕರು ಹೇಳುತ್ತಿದ್ದಾರೆ.
ರೂಪಾಯಿಗಳ ಲೆಕ್ಕದಲ್ಲಿ ಯಾವ್ಯಾವ ವರ್ಷ ಎಷ್ಟು ಗರಿಷ್ಠ ಅಡಿಕೆ ಧಾರಣೆ ಆಗಿದೆ ಅನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.
2013 - 28,797
2014 - 99,190
2015 - 87,575
2016 - 39,650
2017 - 36,499
2018 - 33,869
2019 - 35,899
2020 - 42,299
2021 - 47,599
2022 - 58,699












Click it and Unblock the Notifications