ಕಲಬುರಗಿಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅಣ್ಣಾ ಹಜಾರೆ
ಕಲಬುರಗಿ, ಜನವರಿ 30: 'ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗೆ ಸತತವಾಗಿ ಅನ್ಯಾಯ ಮಾಡುತ್ತ ಬಂದಿವೆ. ಮಹಾದಾಯಿ ಸೇರಿದಂತೆ ದೇಶದಲ್ಲಿ ಅನೇಕ ನದಿ ನೀರಿನ ಹಂಚಿಕೆಯ ಸಮಸ್ಯೆಗಳಿವೆ, ಅವುಗಳನ್ನು ಕೂಡಲೆ ಬಗೆ ಹರಿಸಬೇಕೆಂದು ಗಾಂಧಿವಾದಿ ಅಣ್ಣಾ ಹಜಾರೆ ಆಗ್ರಹಿಸಿದರು.
ಕಲಬುರಗಿಯಲ್ಲಿ ಹೈದರಾಬಾದ್ ಕರ್ನಾಟಕ ರೈತ ಸಂಘ, ಅಣ್ಣಾಹಜಾರೆ ರವರ ನೇತೃತ್ವದಲ್ಲಿ ಜ.29 ರಂದು ಆಯೋಜಿಸಿದ್ದ ಬೃಹತ್ ರೈತ ಸಮಾವೇಶದಲ್ಲಿ ಭ್ರಷ್ಟಾಚಾರ ವಿರೋಧಿ ಸಾಮಾಜಿಕ ಕಾರ್ಯಕರ್ತ ಅಣ್ಣಾಹಜಾರೆ ಮಾತನಾಡುತ್ತಿದ್ದರು.

ಕಿಸಾನ್ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು, ಮತ್ತು ರೈತರಿಗೆ ನೀರು, ಗೊಬ್ಬರ, ಬಿತ್ತನೆ ಬೀಜ, ವಿದ್ಯುತ್ ಅನ್ನು ಸಮಯಕ್ಕೆ ಸರಿಯಾಗಿ ನೀಡಬೇಕು. ವೈಜ್ಞಾನಿಕ ಬೆಲೆಯನ್ನು ನಿಗದಿ ಪಡಿಸಬೇಕೆಂದು ಈ ಸಮಯದಲ್ಲಿ ಅವರು ಆಗ್ರಹಿಸಿದರು. ದೇಶದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಸರ್ಕಾರಗಳು ಕೈ ಕಟ್ಟಿ ಕುಳಿತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಿಸಾನ್ ಪಿಂಚಣಿ ಯೋಜನೆಯನ್ನು ಜಾರಿಗೆ ತರುವಂತೆ ಆಗ್ರಹಿಸಿ, ಫೆಬ್ರವರಿ 23ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಧರಣಿ ಕೂರುವುದಾಗಿ ಎಚ್ಚರಿಸಿದರು. ಕಾರ್ಯಕ್ರಮದ ಆಯೋಜಕರಾದ ದಯಾನಂದಪಾಟೀಲ್ ರವರು, ಸಮಾಜಮುಖಿ ಹೋರಾಟಗಾರರಾದ ಲಗ್ಗೆರೆ ನಾರಾಯಣಸ್ವಾಮಿರವರು,ವಿಶ್ವ ವಿದ್ಯಾಲಯದಲ್ಲಿ ಉಪಕುಲಪತಿಗಳು, ಸ್ವಾಮೀಜಿಗಳು, ಹಿರಿಯ ಪತ್ರಕರ್ತರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.











Click it and Unblock the Notifications