Agriculture Department Tips: ಬಿತ್ತನೆಯಾದ ಬೆಳೆಗಳ ಸಂರಕ್ಷಣೆ ಮಾಡೋದು ಹೇಗೆ..?: ಕೃಷಿ ಇಲಾಖೆಯ ಸಲಹೆಗಳು ಇಲ್ಲಿವೆ
ಧಾರವಾಡ, ಜೂನ್. 14: ರಾಜ್ಯದಲ್ಲಿ ಮುಂಗಾರು ಜೋರಾಗಿದೆ. ಸಿಲಿಕಾನ್ ಸಿಟಿಯಲ್ಲಿ ಮಳೆ ಎಡಬಿಡದೆ ಸುರಿಯುತ್ತಿದೆ. ಇದರ ಜೊತೆಗೆ ಕೃಷಿ ಕೆಲಸಗಳು ಆರಂಭವಾಗಿದ್ದು ಹಲವು ದ್ವಿದಳ ಧಾನ್ಯಗಳನ್ನು ರೈತರು ಭೂಮಿಗೆ ಬಿತ್ತಿದ್ದಾರೆ. ಆದರೆ, ಹೆಚ್ಚಿನ ಮಳೆಗೆ ಅವುಗಳಿಗೆ ರೋಗ ತಗುಲುವ ಸಾಧ್ಯತೆಯಿದೆ.
ರಾಜ್ಯಾದ್ಯಂತ ಜೂನ್ ತಿಂಗಳ ಮೊದಲ ಪಾಕ್ಷಿಕದಲ್ಲಿ ಮಳೆಯಾಗುತ್ತಿದ್ದು, ಮುಂಚಿತವಾಗಿ ಬಿತ್ತಿದ ಹೆಸರು, ಉದ್ದು, ಸೋಯಾ, ಅವರೆ, ಶೇಂಗಾ ಮುಂತಾದ ಬೆಳೆಗಳಿಗೆ ಅನುಕೂಲವಾಗಿದೆಯಾದರೂ, ಭೂಮಿಯ ತೇವಾಂಶ ಹೆಚ್ಚಿಗೆ ಆಗಿರುವ ಕಾರಣ ಈಗಾಗಲೇ ಹುಟ್ಟಿರುವ ಸೋಯಾಅವರೆ, ಹೆಸರು ಹಾಗೂ ಉದ್ದಿನ ಬೆಳೆಗಳು ಹಳದಿ ವರ್ಣಕ್ಕೆ ತಿರುಗುವ ಸಾಧ್ಯತೆ ಇರುವುದರಿಂದ ರೈತರು ಮುನ್ನೆಚ್ಚರಿಕೆ ವಹಿಸಬೇಕು.

ಹಳದಿ ನಂಜಾಣು ರೋಗ
ಹಳದಿ ನಂಜಾಣು ರೋಗ ಕಂಡುಬಂದಲ್ಲಿ ರೈತರು ಈ ಕ್ರಮಗಳನ್ನು ಪಾಲಿಸಬೇಕು. ಹೊಲದಲ್ಲಿ, ಒಡ್ಡುಗಳಲ್ಲಿ ನಿಂತಿರುವ ಹೆಚ್ಚುವರಿ ನೀರನ್ನು ಹರಿ ಮಾಡುವುದರ ಮೂಲಕ ನೀರನ್ನು ಹೊರಹಾಕಬೇಕು. ಹೆಸರು, ಉದ್ದು, ಅಲಸಂದಿ, ಸೋಯಾಅವರೆ, ಶೇಂಗಾ ಇತ್ಯಾದಿ ಬೆಳೆಗಳು ಹಳದಿ ವರ್ಣಕ್ಕೆ ತಿರುಗುತ್ತಿದ್ದಲ್ಲಿ, ಎಲೆಗಳ ಮೂಲಕ ನೀರಿನಲ್ಲಿ ಕರಗುವ ರಸಗೊಬ್ಬರಗಳನ್ನು ಬಳಸಬೇಕು.
ನೀರಿನಲ್ಲಿ ಕರಗುವ ರಸಗೊಬ್ಬರಗಳೆಂದರೆ 12:61:00, 0:0:50, 13:00:45, 00:52:34, 19:19:19, ಇವುಗಳಲ್ಲಿ ಯಾವುದಾದರೂ ಒಂದನ್ನು ಪ್ರತಿ ಲೀಟರ್ ನೀರಿಗೆ 5 ರಿಂದ 10 ಗ್ರಾಂ. ಬೆರೆಸಿ ಬೆಳೆಗಳ ಮೇಲೆ ಸಿಂಪಡಿಸಬೇಕು. ಆಗ ಹಳದಿ ವರ್ಣಕ್ಕೆ ತಿರುಗುವ ಎಲೆಗಳಲ್ಲಿ ರೀಗ ಕಡಿಮೆಯಾಗಲಿದೆ.

ಹಳದಿ ನಂಜಾಣು ರೋಗ ಕಂಡುಬಂದಲ್ಲಿ ಅಂತಹ ಬಾಧಿತ ಸಸಿಗಳನ್ನು ಕಿತ್ತು ಒಂದು ಚೀಲದಲ್ಲಿ ತುಂಬಿ ಹೊಲದಿಂದ ಹೊರಗೆ ಹೋಗಿ ಸುಟ್ಟು ಹಾಕಬೇಕು. ಇಲ್ಲದಿದ್ದರೇ ಸಸಿಗಳನ್ನು ಕಿತ್ತು ಮಣ್ಣಿನಲ್ಲಿ ಗುಂಡಿ ತೋಡಿ ಹೂಳಬೇಕು. ನೀರು ನಿಂತು ಬೆಳೆ ಹಾನಿಯಾಗುತ್ತಿದ್ದರೆ ಯೂರಿಯಾ ಗೊಬ್ಬರ ಬಳಕೆ ಮಾಡಬಾರದು.
ಈ ಸಮಯದಲ್ಲಿ ಯೂರಿಯಾ ಗೊಬ್ಬರ ಬಳಕೆ ಮಾಡುವುದರಿಂದ ಸಮಸ್ಯೆ ಹೆಚ್ಚಾಗಲಿದೆ. ಇದರಿಂದ ರೋಗಗಳ ಬಾಧೆ ಹೆಚ್ಚಾಗುವುದು. ಹದ ಬಂದ ಕೂಡಲೆ ಅಂತರ್ ಬೇಸಾಯ ಕೈಗೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಸಂಪರ್ಕಿಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications