ಕೃಷಿ-ಕೃಷಿ ಸಂಬಂಧಿತ ಉತ್ಪನ್ನಗಳ ರಫ್ತು 2021, 2022ರಲ್ಲಿ ಶೇ.20ರಷ್ಟು ಏರಿಕೆ: ತೋಮರ್
ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೃಷಿ ಉತ್ಪನ್ನಗಳು ಹಾಗೂ ಕೃಷಿ ಸಂಬಂಧಿತ ಉತ್ಪನ್ನಗಳ ರಫ್ತು ಪ್ರಮಾಣ ಹೆಚ್ಚಾಗಿದೆ. ಈ ಬಗ್ಗೆ ಕೇಂದ್ರ ಕೃಷಿ ಸಚಿವರು ಸಂಸತ್ತಿಗೆ ನೀಡಿದ ಅಂಕಿ ಅಂಶಗಳು ಇಲ್ಲಿವೆ.
ಬೆಂಗಳೂರು, ಫೆಬ್ರವರಿ 06: ಭಾರತದಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಕೃಷಿ ಉತ್ಪನ್ನಗಳು ಹಾಗೂ ಕೃಷಿ ಸಂಬಂಧಿತ ಉತ್ಪನ್ನಗಳ ರಫ್ತು ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ ಎಂದು ಕೇಂದ್ರ ಕೃಷಿ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್ ಸಂಸತ್ತಿಗೆ ಮಾಹಿತಿ ವಿವರಿಸಿದ್ದಾರೆ.
ದೇಶದಲ್ಲಿ 2019-20ರ ಅವಧಿಯಲ್ಲಿ ಒಟ್ಟು ಸುಮಾರು 2,52,400 ಕೋಟಿ ರೂಪಾಯಿ ಮೌಲ್ಯದಷ್ಟು ಕೃಷಿ ಹಾಗೂ ಸಂಬಂಧಿತ ಉತ್ಪನ್ನಗಳು ಬೇರೆ ದೇಶಗಳಿಗೆ ರಫ್ತಾಗಿವೆ. ನಂತರದ ವರ್ಷದಲ್ಲಿ 2020-21ರಲ್ಲಿ ಈ ರಫ್ತಿನ ಪ್ರಮಾಣ ಶೇ.22.87 ರಷ್ಟು ಹೆಚ್ಚಳವಾಗಿದೆ. ಅಂದರೆ ಈ ವರ್ಷ 3,10,130 ಕೋಟಿ ರೂಪಾಯಿ ಮೌಲ್ಯದ ಉತ್ಪನ್ನಗಳು ವಿದೇಶಕ್ಕೆ ಭಾರತದಿಂದ ರವಾನೆಯಾಗಿವೆ.
ಇನ್ನೂ ಇತ್ತೀಚನ ವರ್ಷವನ್ನು ನೋಡುವುದಾದರೆ ದೇಶದ ಕೃಷಿ ಮತ್ತು ಕೃಷಿ ಸಂಬಂಧಿತ ಉತ್ಪನ್ನಗಳ ರಫ್ತು 2021-22ರಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಈ ವರ್ಷ ಒಟ್ಟು ಸುಮಾರು 3,74,611 ಕೋಟಿ ರೂಪಾಯಿ ಮೌಲ್ಯದ ಉತ್ಪನ್ನಗಳು ರಫ್ತಾಗಿವೆ. ಇದು ಹಿಂದಿನ ವರ್ಷಕ್ಕಿಂತ ಶೇ.20.79ರಷ್ಟು ಅಧಿಕ ಎಂದು ಅಂದಾಜಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಶುಕ್ರವಾರ ಮಾಹಿತಿ ಬಿಡುಗಡೆ ಮಾಡಿದೆ. ಈ ವರದಿ ಅಂಶಗಳನ್ನು ಸಚಿವರು ಸಂಸತ್ತಿಗೆ ತಿಳಿಸಿದ್ದಾರೆ.

ಸಚಿವರ ಪ್ರಕಾರ, ಈ ಕೃಷಿ ಹಾಗೂ ಸಂಬಂಧಿತ ಉತ್ಪನ್ನಗಳ ರಫ್ತಿ ಮಾಡುವ ದೇಶದ ರಾಜ್ಯಗಳ ಪೈಕಿ ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳು ಅಗ್ರಸ್ಥಾನದಲ್ಲಿವೆ. ಇನ್ನು ದೇಶದ ಪೂರ್ವ ಪ್ರದೇಶದಲ್ಲಿ ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳ, ಉಳಿದಂತೆ ಉತ್ತರ ಪ್ರದೇಶ ಹಾಗೂ ಹರಿಯಾಣ ರಾಜ್ಯಗಳು ಮತ್ತು ದಕ್ಷಿಣ ವಲಯದಲ್ಲಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳು ನಂತರ ಸ್ಥಾನ ಕಾಯ್ದುಕೊಂಡಿವೆ ಎಂದು ಹೇಳಿದರು.
ಲಿಖಿತ ವರದಿಯ ಅಂಕಿ ಅಂಶಗಳು
2021-22 ರಲ್ಲಿ ರಫ್ತು ಮಾಡಲಾದ ಸರಕುಗಳ ಪೈಕಿ ಸಮುದ್ರ ಉತ್ಪನ್ನಗಳ ಒಟ್ಟು 13,734.61 ಕೋಟಿ ರೂಪಾಯಿಗೂ ಹೆಚ್ಚಿದೆ. 13,676.12 ಕೋಟಿ ರೂಪಾಯಿ ಮೌಲ್ಯದ ಸಕ್ಕರೆ ಅದೇ ವರ್ಷ ರಫ್ತಾಗಿದೆ. 2021-22ರ ಅವಧಿಯಲ್ಲಿ 11,672.37 ಕೋಟಿ ರೂ. ನ ಗೋಧಿ ರಫ್ತು ಮಾಡಲಾಗಿದೆ. ಅಕ್ಕಿ, ಬಾಸ್ಮತಿ ಹೊರತುಪಡಿಸಿ ವಿತ್ತೀಯ ವರ್ಷದಲ್ಲಿ 10,168.39 ಕೋಟಿ ರೂ.ಗಳಷ್ಟು ಏರಿಕೆಯಾಗಿದೆ ಎಂದು ಸಚಿವರು ಲಿಖಿತವಾಗಿ ಸಂಸತ್ತಿಗೆ ವಿವರಿಸಿದರು.

ಇನ್ನು ದೇಶದ ತ್ಯಾಜ್ಯ ಸಹಿತ ಕಚ್ಚಾ ಹತ್ತಿಯ ರಫ್ತು ಮೌಲ್ಯದಲ್ಲಿ 7,038.66 ಕೋಟಿ ರೂ.ಗಳಷ್ಟು ಬೆಳೆದರೆ, 2021-22ರಲ್ಲಿ ಇತರ ಧಾನ್ಯಗಳ ಮೌಲ್ಯವು 2911.04 ರೂಪಾಯಿ, 2021-22ರ ಅವಧಿಯಲ್ಲಿ ಹಾಲಿನ ಉತ್ಪನ್ನದ ರಫ್ತು ಮೌಲ್ಯದಲ್ಲಿ 2,352.93 ಕೋಟಿ ರೂಪಾಯಿಯಷ್ಟು ಹೆಚ್ಚಳವಾಗಿದೆ. ರಫ್ತಾದ ಕಾಫಿ ಮೌಲ್ಯದಲ್ಲಿ 2,273.97 ಕೋಟಿ ರೂ. ಏರಿಕೆಯಾಗಿದೆ.
2021-22ರಲ್ಲಿ ಕ್ಯಾಸ್ಟರ್ ಆಯಿಲ್ ರಫ್ತು ಮೌಲ್ಯದಲ್ಲಿ 1,952.36 ಕೋಟಿ ರೂ. ಹೆಚ್ಚಾದರೆ, ಸಂಸ್ಕರಿಸಿದ ವಿವಿಧ ವಸ್ತುಗಳ ರಫ್ತಿನ ಮೌಲ್ಯವು 2,311.86 ಕೋಟಿ ರೂಪಾಯಿಯಷ್ಟು ಏರಿಕೆ ಆಗಿದೆ.












Click it and Unblock the Notifications