ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದ ಯುವಕ ನಾಪತ್ತೆ: ಹುಡುಕಿ ಕೊಟ್ಟವರಿಗೆ ₹5,000 ಬಹುಮಾನ
ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದ ಅರಸೀಕೆರೆ ತಾಲೂಕಿನ ಗಂಡಸಿ ಸಮೀಪದ ತಿಮ್ಲಾಪುರ ಗ್ರಾಮದ 22 ವರ್ಷದ ಲವ ಎನ್ನುವಾತ ನಾಪತ್ತೆಯಾಗಿದ್ದು, ಮಗನನ್ನು ಹುಡುಕಿಕೊಟ್ಟವರಿಗೆ ಪೋಷಕರು ₹5,000 ಬಹುಮಾನ ಘೋಷಿಸಿದ್ದಾರೆ.
ಚಿಕ್ಕಮಗಳೂರು, ಫೆಬ್ರವರಿ 20: ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದ ಯುವಕನೋರ್ವ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಗನನ್ನು ಹುಡುಕಿಕೊಟ್ಟವರಿಗೆ ಐದು ಸಾವಿರ ಬಹುಮಾನ ನೀಡುತ್ತೇವೆಂದು ಪೋಷಕರು ತಿಳಿಸಿದ್ದು, ಈವರೆಗೂ ಯುವಕನ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.
ನಾಪತ್ತೆಯಾದ ಯುವಕನನ್ನು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಸಮೀಪದ ತಿಮ್ಲಾಪುರ ಗ್ರಾಮದ 22 ವರ್ಷದ ಲವ ಎಂದು ಗುರುತಿಸಲಾಗಿದೆ. ಮಗ ನಾಪತ್ತೆಯಾಗುತ್ತಿದಂತೆ ಪೋಷಕರು ಆತಂಕದಿಂದ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಬಣಕಲ್ ಸೇರಿದಂತೆ ತೀವ್ರ ಹುಡುಕಾಟ ನಡೆಸಿದ್ದಾರೆ. ಧರ್ಮಸ್ಥಳಕ್ಕೆ ಹೋಗಿ ಬರುವ ವಾಹನಗಳನ್ನು ಚೆಕ್ ಮಾಡಿದ್ದಾರೆ. ಸರ್ಕಾರಿ ಬಸ್‌ಗಳನ್ನು ಪರಿಶಿಲನೆ ನಡೆಸಿದ್ದಾರೆ. ಆದರೆ ಯುವಕ ಪತ್ತೆಯಾಗಿಲ್ಲ.

ಯುವಕ ಲವನ ಬುದ್ಧಿಮಟ್ಟ ಸ್ವಲ್ಪ ಮಟ್ಟಿಗೆ ಕಡಿಮೆ ಇದೆ. ಆದರೆ ಒಂದಷ್ಟು ಜ್ಞಾನ ಇದೆ. ಒಳ್ಳೆದು-ಕೆಟ್ಟದ್ದರ ಅರಿವಿದೆ. ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಈತ ಹಾಸನದಿಂದ ಪೋಷಕರ ಜೊತೆಯೇ ನಡೆದುಕೊಂಡು ಬಂದವನು ಕೊಟ್ಟಿಗೆಹಾರದಲ್ಲಿ ನಾಪತ್ತೆಯಾಗಿದ್ದಾನೆ. ಕೂಡಲೇ ಜೊತೆಯಲ್ಲಿದ್ದವರು ಅಂಗಡಿ-ಮುಂಗಟ್ಟು, ಬಸ್, ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ, ಆತನ ಸುಳಿವು ಸಿಕ್ಕಿಲ್ಲ. ಕೂಡಲೇ ಪೋಷಕರು ಇಲ್ಲೇ ಎಲ್ಲೋ ಸುತ್ತಮುತ್ತಾ ಇರುತ್ತಾನೆ ಎಂದು ಸ್ಥಳೀಯರ ಸಹಾಯ ಪಡೆದಿದ್ದಾರೆ. ಆದರೂ ಸಿಕ್ಕಿಲ್ಲ.

ಮಗ ಕಾಣದೇ ಗಾಬರಿಗೊಂಡಿರುವ ಪೋಷಕರು ಮಗಗನ್ನು ಹುಡುಕಿ ಕೊಟ್ಟರೆ ಐದು ಸಾವಿರ ಹಣ ನೀಡುವುದಾಗಿ ಹೇಳಿದ್ದಾರೆ. ಕೊಟ್ಟಿಗೆಹಾರದ ಸ್ಥಳೀಯ ಯುವಕರಾದ ಸಂತೋಷ್, ತನ್ವೀರ್, ಸಂಜಯ್, ನಂದೀಶ್ ಸೇರಿದಂತೆ ಹಲವು ಯುವಕರು ನಿಮ್ಮ ಹಣ ಬೇಡ. ನಿಮ್ಮ ಮಗ ಸಿಕ್ಕರೆ ಸಾಕು ಎಂದು ತೀವ್ರ ಹುಡುಕಾಟ ನಡೆಸಿದ್ದಾರೆ. ಆತನ ಫೋಟೋವನ್ನು ಮೊಬೈಲ್‌ನಲ್ಲಿ ಬೇರೆಯವರಿಗೂ ಶೇರ್ ಮಾಡಿದ್ದಾರೆ. ಆದರೆ, ಈವರೆಗೆ ಲವನ ಸುಳಿವು ಸಿಕ್ಕಿಲ್ಲ. ಹೀಗಾಗಿ ಪೋಷಕರು ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಯುವಕನ ಹುಡುಕಾಟ ಚುರುಕುಗೊಂಡಿದೆ.












Click it and Unblock the Notifications