BMW ಕಾರಿಗೆ ಪೆಟ್ರೋಲ್ ಕೊಳ್ಳಲು ಕೋಳಿ ಕದಿಯುತ್ತಿದ್ದ!
ಬೀಜಿಂಗ್, ಜೂನ್ 10: ಆಸೆ ಪಟ್ಟು ಬಿಎಂಡಬ್ಲು ಕಾರು ಕೊಂಡು ಅದಕ್ಕೆ ಪೆಟ್ರೋಲ್ ಹಾಕಿಸಲು ಕಷ್ಟವಾಗಿ ಅದಕ್ಕಾಗಿ ಕೋಳಿ ಕಳ್ಳತನಕ್ಕೆ ಇಳಿದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚೀನಾದ ಸಿಚುವಾನ್ ಪ್ರದೇಶದಲ್ಲಿ ಶ್ರೀಮಂತ ರೈತನೊಬ್ಬ ಕೋಳಿ ಮತ್ತು ಬಾತುಕೋಳಿಗಳನ್ನು ಕದ್ದು ಬಂಧಿತನಾಗಿದ್ದಾನೆ. ಆತನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನಕ್ಕೆ ಅಸಲಿ ಕಾರಣ ಬಿಟ್ಟಿದ್ದಾನೆ.
ಕ್ವಿಂಗ್ ಎಂದು ಕರೆಯಲ್ಪಡುವ ಈತ ಏಪ್ರಿಲ್ ತಿಂಗಳಿನಿಂದಲೂ ಈತ ಕೋಳಿ ಮತ್ತು ಬಾತುಕೋಳಿಗಳನ್ನು ಕದಿಯುತ್ತಿದ್ದನಂತೆ. ಹಾಗೆಂದು ಈತ ಬಡವನೇನಲ್ಲ, ಉತ್ತಮ ಮನೆ ಹೊಂದಿದ ಸ್ಥಿತಿವಂತನೇ, ಐಶಾರಾಮಿ ಬಿಎಂಡಬ್ಲು ಕಾರುಕೊಳ್ಳಬೇಕೆಂಬುದು ಆತನ ಆಸೆಯಾಗಿತ್ತಂತೆ. ಆದರೆ ಕಾರು ಕೊಂಡ ಮೇಲೆ ಅದರ ಹೊಟ್ಟೆ ತುಂಬಿಸಲಾಗದೆ, ಪೆಟ್ರೋಲ್‌ಗಾಗಿ ಕೋಳಿ-ಬಾತುಕೋಳಿ ಕಳ್ಳತನಕ್ಕೆ ಕೈ ಹಾಕಿದ್ದಾನೆ.

ಮೊದಲಿಗೆ ಈತ ಹಣ ಸಂಪಾದನೆಗೆ ಬೇರೆ ಸಣ್ಣ ಪುಟ್ಟ ಅಪರಾಧ ಚಟುವಟಿಕೆಗಳನ್ನೂ ಮಾಡಿದನಂತೆ ಆದರೆ ಅದ್ಯಾವುದೂ ಕೈ ಹಿಡಿಯದಿದ್ದಾಗ ಕೊನೆಗೆ ಕೋಳಿ ಕದ್ದು ಮಾರುವ ಕೆಲಸ ಆರಿಸಿಕೊಂಡಿದ್ದಾನೆ. ಸುತ್ತ-ಮುತ್ತಲ ಹಳ್ಳಿಗಳಲ್ಲಿ ಹಲವು ಕೋಳಿಗಳನ್ನು ಈತ ಕದ್ದಿದ್ದಾನೆ.
ಲಿನ್ಸುಶಿ ಸೇರಿದಂತೆ ಇನ್ನೂ ಹಲವು ಹಳ್ಳಿಗಳಲ್ಲಿ ಈತ ಕಳ್ಳತನ ಮಾಡಿದ್ದ, ವ್ಯಕ್ತಿಯೊಬ್ಬ ಮೊಟರ್‌ಬೈಕ್‌ನಲ್ಲಿ ಬದು ಕೋಳಿಗಳನ್ನು ಕದಿಯುತ್ತಿದ್ದುದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅದರ ಆಧಾರದ ಮೇಲೆಯೇ ಆತನನ್ನು ಪ್ರಶ್ನೆಗೆ ಒಳಪಡಿಸಲು ಪ್ರಯತ್ನಿಸಲಾಗಿದೆ. ಆದರೆ ಆತ ಪೊಲೀಸರ ಕೈಗೆ ಸಿಕ್ಕದೆ ತಲೆ ಮರೆಸಿಕೊಂಡಿದ್ದ, ಆತನ ಮನೆಯ ಮೇಲೆ ದಾಳಿ ಮಾಡಿದಾಗ ಕೆಲವು ಮೊಟರ್ ಬೈಕ್‌ಗಳು ಮತ್ತು ಕೋಳಿ, ಬಾತುಕೊಳಿಗಳು ಸಿಕ್ಕಿವೆ.
ಪ್ರಸ್ತುತ ಕ್ವಿಂಗ್ ಸಹ ಪೊಲೀಸರ ವಶದಲ್ಲಿದ್ದು, ಕಳ್ಳತನ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.












Click it and Unblock the Notifications