ಕಳಪೆ ಬೀಜ ನೀಡಿದ ಕೃಷಿ ಇಲಾಖೆ ವಿರುದ್ಧ ರೈತರ ಆಕ್ರೋಶ
ಮೈಸೂರು, ನವೆಂಬರ್, 17: ಕಳಪೆ ಭತ್ತದ ಬೀಜದಿಂದ ಬೆಳೆ ನಷ್ಟ ಅನುಭವಿಸಿದ ರೈತನೊಬ್ಬ ಪ್ರತಿಭಟನೆ ವೇಳೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಮೀಪದ ಮಿರ್ಲೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮಿರ್ಲೆ ಗ್ರಾಮದ ಶಿವಪ್ಪ (60 ವರ್ಷ) ಎಂಬಾತ ಆತ್ಮಹತ್ಯೆಗೆ ಯತ್ನಿಸಿದ ರೈತ. ಸರ್ಕಾರ ಕೃಷಿ ಇಲಾಖೆ ಮೂಲಕ ರಿಯಾಯಿತಿ ದರದಲ್ಲಿ ವಿತರಿಸಿದ ಭತ್ತದ ಬಿತ್ತನೆ ಬೀಜ ಕಳಪೆಯಿಂದ ಕೂಡಿದ್ದು, ಇದರಿಂದಾಗಿ ಕೋಟ್ಯಂತರ ನಷ್ಟವಾಗಿದೆ ಎಂದು ಆರೋಪಿಸಿ ರೈತ ಸಂಪರ್ಕ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಲು ನೂರಾರು ರೈತರು ನೆರೆದಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದ್ದು, ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.[ರೈತನ ಪ್ರಾಣ ತೆಗೆಯಿತು ಜೇನು ನೊಣ]

ನೀರಾವರಿ ಪ್ರದೇಶವಾದ ಮಿರ್ಲೆ ಹಾಗೂ ಸುತ್ತಮುತ್ತಲ ಗ್ರಾಮ ವ್ಯಾಪ್ತಿಯ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತಕ್ಕೆ ಕುತ್ತಿಗೆ ರೋಗ ಕಾಣಿಸಿಕೊಂಡಿದೆ. ಭತ್ತ ಕಾಳು ಕಟ್ಟುವ ಹಂತದಲ್ಲಿ ಈ ರೋಗ ಬಾಧಿಸಿದೆ. ಕಟಾವು ವೇಳೆಗೆ ಬೆಳೆ ಫಸಲು ಸಂಪೂರ್ಣ ನೆಲಕಚ್ಚಿ ಮಣ್ಣುಪಾಲಾಗಲಿದ್ದು, ಕೋಟ್ಯಂತರ ನಷ್ಟವಾಗಲಿದೆ. ಇಳುವರಿ ಕುಸಿತಗೊಳ್ಳಲಿದೆ. ಸಾಲ ಮಾಡಿ ಬೆಳೆದಿದ್ದ ಫಸಲು ಕಳಪೆ ಬಿತ್ತನೆ ಬೀಜದಿಂದ ಹಾಳಾಗಿದೆ ಎಂದು ರೈತರು ಅಳಲು ತೋಡಿಕೊಂಡರು.[ಒಣಗುವ ಬೆಳೆಗಳಿಗೆ ಕಾಯಕಲ್ಪ ಕಲ್ಪಿಸಿದ ಕೃಷಿ ಭಾಗ್ಯ]
ಪ್ರತಿಭಟನೆ ನೇತೃತ್ವ ಮಿರ್ಲೆ ಪಿಎಸಿಸಿ ಅಧ್ಯಕ್ಷ ಹನುಮೇಗೌಡ ಮಾತನಾಡಿ, 'ಪ್ರತಿ ಬಾರಿ ಈ ಭಾಗದ ರೈತರು ಉತ್ತಮ ಇಳುವರಿ ಪಡೆಯುತ್ತಿದ್ದರು. ಈಗ ಭತ್ತಕ್ಕೆ ಕುತ್ತಿಗೆ ರೋಗ ಬಾಧಿಸಿರುವುದರಿಂದ ಭಾರೀ ನಷ್ಟ ಅನುಭವಿಸುವಂತಾಗಿದೆ. ಕೃಷಿ ಇಲಾಖೆಯು ನೀಡಿದ ಭತ್ತದ ಬೀಜ ಪಡೆದು ಸಾಲ ಮಾಡಿ ನಾಟಿ ಮಾಡಿದ ಬೆಳೆ ಸಂಪೂರ್ಣ ಹಾಳಾಗಿದೆ. ರೈತರು ಆತ್ಮಹತ್ಯೆ ಹಾದಿ ತುಳಿಯುವಂತಾಗಿದೆ ಎಂದು ದೂರಿದರು. ತಕ್ಷಣವೇ ರೈತರಿಗೆ ಆಗಿರುವ ನಷ್ಟ ಭರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು' ಎಂದು ಎಚ್ಚರಿಕೆ ನೀಡಿದರು.












Click it and Unblock the Notifications