ಚಿತ್ರದುರ್ಗ: ರೈತರಿಗೆ ₹99.28 ಕೋಟಿ ಬೆಳೆ ಹಾನಿ ಪರಿಹಾರ ಪಾವತಿ
ಚಿತ್ರದುರ್ಗ, ನವೆಂಬರ್, 05: ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ 71,158 ಹೆಕ್ಟೇರ್ ಕೃಷಿ ಹಾನಿ ಸಂಭವಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ 99.28 ಕೋಟಿ ರೂಪಾಯಿ ಪರಿಹಾರವನ್ನು ರೈತರಿಗೆ ಪಾವತಿಸಲಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು 69 ಸಾವಿರ ಹೆಕ್ಟೇರ್ ಕೃಷಿ ಹಾನಿ ಸಂಭವಿಸಿದ್ದು, ಪರಿಹಾರ್ ತಂತ್ರಾಂಶದಲ್ಲಿ ದಾಖಲಿಸುವ ಕಾರ್ಯ ಆಗಿದೆ. ಇನ್ನು 90 ಕೋಟಿ ರೂಪಾಯಿ ಪರಿಹಾರ ಹಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಂಟಿಕೃಷಿ ನಿರ್ದೇಶಕ ರಮೇಶ್‍ಕುಮಾರ್ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರಿಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸೆಪ್ಟೆಂಬರ್ ಅಂತ್ಯದವರೆಗೆ ಆದ ನಷ್ಟಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಹಣವನ್ನು ತ್ವರಿತವಾಗಿ ಪಾವತಿಸಬೇಕು. ಅಧಿಕಾರಿಗಳಿಗೆ ಈ ಬಗ್ಗೆ ಇಚ್ಛಾಶಕ್ತಿ ಇರಬೇಕು. ಜಿಲ್ಲೆಯಲ್ಲಿ ನಕಲಿ ಜೈವಿಕ ಗೊಬ್ಬರ ಹಾಗೂ ಕೀಟನಾಶಕಗಳು ರೈತರಿಗೆ ಮಾರಾಟ ಆಗುತ್ತಿದ್ದು, ಬೂದಿ ಮಿಶ್ರಣ ಮಾಡಿ ಗೊಬ್ಬರ ಮಾರಾಟ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿವೆ. ನಕಲಿ ಗೊಬ್ಬರ ಮಾರಾಟ ಸಂಬಂಧ ದಾಖಲಾಗಿರುವ ಪ್ರಕರಣವನ್ನು ಈಗಾಗಲೇ ಸಿಒಡಿ ತನಿಖೆಗೆ ಒಪ್ಪಿಸಲಾಗಿದೆ. ಈ ಪ್ರಕರಣದ ತನಿಖೆಯು ಯಾವ ಹಂತದಲ್ಲಿದೆ ಎಂಬ ಕುರಿತು ಮಾಹಿತಿಗಾಗಿ ಸಿಇಡಿಗೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಇನ್ನು ನಕಲಿ ಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರರ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಬೆಳೆ ವಿಮೆ ಪಾವತಿ ವಿಷಯದಲ್ಲಿಯೂ ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡಬೇಕು ಎಂದರು.

ನಕಲಿಗಳ ಪತ್ತೆಗೆ ಸೂಕ್ರ ಕ್ರಮಕ್ಕೆ ನಿರ್ಧಾರ
ನಂತರ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾತನಾಡಿ, ನಕಲಿ ಜೈವಿಕ ಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರರನ್ನು ಪತ್ತೆಹಚ್ಚಲು ವಿಶೇಷ ತಂಡ ರಚನೆ ಮಾಡಬೇಕು. ಅಗತ್ಯವಿದ್ದಲ್ಲಿ, ಇತರೆ ಇಲಾಖೆ ಅಧಿಕಾರಿಗಳನ್ನು ತಂಡಕ್ಕೆ ನೇಮಿಸಲಾಗುವುದು. ರೈತರ ಹಿತ ಕಾಯುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ನಕಲಿ ಬೀಜ, ಗೊಬ್ಬರ ಮುಂತಾದ ಕಾರಣಗಳಿಂದ ರೈತರು ನಷ್ಟಕ್ಕೆ ಒಳಗಾಗಬಾರದು ಎಂದರು. ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಇಂತಹ 36 ಮಾದರಿ ಸಂಗ್ರಹಿಸಿದ್ದು, ಈ ಪೈಕಿ 09- ಗೊಬ್ಬರ ಹಾಗೂ 05- ಕೀಟನಾಶಕ ನಕಲಿ ಪ್ರಕರಣಗಳು ಪತ್ತೆ ಆಗಿವೆ. ಇನ್ನು ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಪ್ರಮುಖ ಎಣ್ಣೆಕಾಳು ಬೆಳೆಯಾದ ಶೇಂಗಾ ಬೆಳೆಯಲ್ಲಿ ಉತ್ಪಾದನೆ ಹೆಚ್ಚಿಸಲು ಕದರಿ ಲೇಪಾಕ್ಷಿ ತಳಿಯನ್ನು ಹೊಸದಾಗಿ ರೈತರಿಗೆ ಪರಿಚಯಿಸಲಾಗಿದೆ. ಈ ಕದರಿ ಲೇಪಾಕ್ಷಿ ತಳಿಗೆ ಜಿಲ್ಲೆಯಲ್ಲಿ ಮಾರುಕಟ್ಟೆ ಸಮಸ್ಯೆ ಎದುರಾಗಿದ್ದು, ಈ ಶೇಂಗಾವನ್ನು ಕೇವಲ ತಿನ್ನುವುದಕ್ಕಾಗಿ ಬಳಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಮಳೆ ಹಾನಿ ಪ್ರಮಾಣ ಎಷ್ಟು?
ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ಸುರಿದ ಹೆಚ್ಚು ಮಳೆಯಿಂದಾಗಿ ಸುಮಾರು 20 ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಈ ಪೈಕಿ 14,980 ಹೆಕ್ಟೇರ್ ಈರುಳ್ಳಿ ಬೆಳೆ ಹಾನಿಯಾಗಿದೆ. ಸೆಪ್ಟೆಂಬರ್‌ವರೆಗಿನ ಹಾನಿಗೆ ಸಂಬಂಧಿಸಿದಂತೆ 35 ಕೋಟಿ ರೂಪಾಯಿ ಪರಿಹಾರವನ್ನು ರೈತರಿಗೆ ಪಾವತಿಸಲಾಗಿದೆ. ವಾಣಿ ವಿಲಾಸ ಸಾಗರ ಹಿನ್ನೀರಿಗೆ ಸಂಬಂಧಿಸಿದಂತೆ 534 ಹೆಕ್ಟೇರ್ ತೆಂಗು ಹಾಗೂ 330 ಹೆಕ್ಟೇರ್ ಅಡಿಕೆ ಬೆಳೆ ಹಾನಿಗೀಡಾಗಿದೆ. ಪರಿಹಾರ ವಿತರಣೆ ಸಂಬಂಧ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕಿ ಸವಿತ ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಪರಿಹಾರ ವಿತರಣೆ ಸಂಬಂಧ ಅಧಿಕಾರಿಗಳು ತ್ವರಿತವಾಗಿ ಕ್ರಮ ವಹಿಸಬೇಕು. ಹಾನಿಗೀಡಾದ ಯಾವುದೇ ರೈತರಿಗೆ ಅನ್ಯಾಯ ಆಗಬಾರದು ಎಂದು ಸೂಚನೆ ನೀಡಿದರು.

ತುಂಬಿ ಹರಿಯುತ್ತಿರುವ ಜಲಮೂಲಗಳು
ಶಾಸಕರುಗಳಾದ ಜಿ.ಹೆಚ್. ತಿಪ್ಪಾರೆಡ್ಡಿ ಹಾಗೂ ರಘುಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದು, ಎಲ್ಲ ಕೆರೆಕಟ್ಟೆಗಳು ತುಂಬಿವೆ. ಅಲ್ಲದೆ ಅಂತರ್ಜಲ ಹೆಚ್ಚಾಗಿದೆ. ಆದರೆ ಅಡಿಕೆ ಬೆಳೆಗೆ ಜಿಲ್ಲೆಯಲ್ಲಿ ಹನಿ ನೀರಾವರಿಗೆ ಸಬ್ಸಿಡಿ ನೀಡಲು ಅವಕಾಶವಿಲ್ಲ. ಹೀಗಾಗಿ ಜಿಲ್ಲೆಗೂ ಇದನ್ನು ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವ ಬಿ.ಸಿ. ಪಾಟೀಲ್, ಜಿಲ್ಲೆಯಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ, ಹಾಗೂ ರೈತರ ಬೇಡಿಕೆಯನ್ನು ಪರಿಶೀಲಿಸಲಾಗುವುದು. ತೋಟಗಾರಿಕೆ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

15 ದಿನಗಳಿಗೊಮ್ಮೆ ಸಭೆ ಮಾಡಲು ಸೂಚನೆ
ಕೆ.ಡಿ.ಪಿ. ಸಭೆಯಲ್ಲಿ ಚರ್ಚಿಸುವ ವಿಷಯಗಳು ಹಾಗೂ ನೀಡುವ ಸೂಚನೆಗಳ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗಳು 15 ದಿನಗಳಿಗೊಮ್ಮೆ ಅನುಪಾಲನಾ ಸಭೆಯನ್ನು ಜರುಗಿಸಬೇಕು. ಸಭೆಯಲ್ಲಿ ಶಾಸಕರು ಪ್ರಸ್ತಾಪಿಸುವ ವಿಷಯಗಳ ಕುರಿತು, ಆಯಾ ತಾಲೂಕುವಾರು ಮಾಹಿತಿ ಸಂಗ್ರಹಿಸಿ ಶಾಸಕರಿಗೆ ನೀಡಬೇಕು. ಲೋಕೋಪಯೋಗಿ, ನಗರೋತ್ಥಾನ, ಜಿಲ್ಲಾ ಪಂಚಾಯತ್ ಹಾಗೂ ಪಂಚಾಯತ್ ರಾಜ್ ಮತ್ತು ಇಂಜಿನಿಯರಿಂಗ್ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಗಳನ್ನು ತಿಂಗಳ ಒಳಗೆ ಪೂರ್ಣಗೊಳಿಸಬೇಕು. ಗುಣಮಟ್ಟದ ರಸ್ತೆ ನಿರ್ಮಿಸಬೇಕು. 3 ತಿಂಗಳಲ್ಲಿ ರಸ್ತೆಯಲ್ಲಿ ಗುಂಡಿ ಬಿದ್ದು, ಸಾರ್ವಜನಿಕರು ಜನಪ್ರತಿನಿಧಿಗಳನ್ನು ಶಪಿಸುವಂತಾಗವಾರದು ಎಂದರು.
ಸಭೆಯಲ್ಲಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಗೂಳಿಹಟ್ಟಿ ಡಿ.ಶೇಖರ್, ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಸ್.ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.












Click it and Unblock the Notifications