ಅಡಕೆ ಕಾರ್ಯಪಡೆಗೆ 10 ಕೋಟಿ ಅನುದಾನ ಕೊಟ್ಟ ಸರ್ಕಾರ
ಬೆಂಗಳೂರು, ನವೆಂಬರ್ 30 : ಅಡಕೆ ಕಾರ್ಯಪಡೆಯ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭರವಸೆ ಕೊಟ್ಟಿದ್ದರು. ಕಾರ್ಯಪಡೆಗೆ ಈಗ 10 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಅಡಕೆ ಸಂಬಂಧಿತ ಸಂಶೋಧನೆ ಮತ್ತು ಇನ್ನಿತರ ಚಟುವಟಿಕೆಗಳಿಗೆ ಸಹಾಯಕವಾಗುವಂತೆ 10 ಕೋಟಿ ಅನುದಾನವನ್ನು ನೀಡಲಾಗಿದೆ. ತೀರ್ಥಹಳ್ಳಿಯ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಕಾರ್ಯಪಡೆಯ ಅಧ್ಯಕ್ಷರಾಗಿದ್ದಾರೆ.
ಕರ್ನಾಟಕ ಸರ್ಕಾರ ಅಡಕೆ ಬೆಳೆಗಾರರ ಹಿತರಕ್ಷಣೆಗಾಗಿ ರಾಜ್ಯಮಟ್ಟದ ಕಾರ್ಯಪಡೆಯನ್ನು ರಚನೆ ಮಾಡಿತ್ತು. ಅಕ್ಟೋಬರ್‌ನಲ್ಲಿ ಆರಗ ಜ್ಞಾನೇಂದ್ರ ನೇತೃತ್ವದ ಕಾರ್ಯಪಡೆ ಹಾಗೂ ಬೆಳೆಗಾರರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮಾತುಕತೆ ನಡೆಸಿತ್ತು.

ಕಾರ್ಯಪಡೆಗೆ ಅನುದಾನ ಬಿಡುಗಡೆಯಾಗಿದ್ದು, ಮುಂದಿನ ಕಾರ್ಯ ಚಟವಟಿಕೆ ಕುರಿತು ಶೀಘ್ರದಲ್ಲಿಯೇ ಸಭೆ ಕರೆದು ಚರ್ಚೆ ನಡೆಸಲಾಗುತ್ತದೆ. ಅಡಕೆಯಿಂದ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ ಎಂಬ ಕುರಿತು ಕ್ಲಿನಿಕಲ್ ವರದಿ ತಯಾರು ಮಾಡುವುದು ಕಾರ್ಯಪಡೆಯ ಮೊದಲ ಆದ್ಯತೆ ಆಗಲಿದೆ.
ಅಡಕೆಯ ಪರ್ಯಾಯ ಉಪಯೋಗದ ಕುರಿತು ಸಂಶೋಧನೆಗಳು ನಡೆಯಬೇಕಿದೆ. ಅಡಕೆ ಬೆಳೆಗಾರರ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣವೊಂದು ದಾಖಲಾಗಿದೆ. ಅಲ್ಲಿ ವಾದ ಮಂಡನೆ ಮಾಡಲು ಹಿರಿಯ ವಕೀಲರನ್ನು ನೇಮಕ ಮಾಡಬೇಕಿದೆ.
ಕೋವಿಡ್ ಸಂದರ್ಭದಲ್ಲಿ ಗುಟ್ಕಾ, ತಂಬಾಕು ನಿಷೇಧದ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಇದರಿಂದಾಗಿ ಅಡಕೆ ಬೆಳೆಯುವ ಜಿಲ್ಲೆಗಳ ರೈತರು ಆತಂಕಗೊಂಡಿದ್ದಾರೆ. ರೈತರ ಹಿತವನ್ನು ಕಾಪಾಡಬೇಕು ಎಂದು ಕಾರ್ಯಪಡೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿತ್ತು.












Click it and Unblock the Notifications