• search
  • Live TV
keyboard_backspace

ಬಯ್ಯುವ ಕೆಲಸ ಖಾಲಿಯಿದೆ: ಕೈ ತುಂಬಾ ಸಂಬಳ ನಿಮಗೂ ಬೇಕಾ ?

ಬೆಂಗಳೂರು, ಡಿಸೆಂಬರ್ 25: ಪಿಯುಸಿ, ಡಿಗ್ರಿ ಪಾಸ್ ಮಾಡಿದ್ರೆ ಮಾತ್ರ ಕಾಲ್ ಸೆಂಟರ್ ನಲ್ಲಿ ಕೆಲಸ ಸಿಗುತ್ತೆ ಅನ್ನೋ ಕಾಲ ಹೋಯ್ತು. ಕೆಟ್ಟ ಪದಗಳಿಂದ ಬಯ್ಯುವ, ನಿಂದನೆ ಮಾಡುವ ಕಲೆ ಗೊತ್ತಿದ್ದರೆ ಸಾಕು ಕೈ ತುಂಬಾ ಸಂಬಳ ಕೊಟ್ಟು ಕೆಲಸ ನೀಡುವರಿದ್ದಾರೆ. ಗಾಬರಿಯಾಗಬೇಡಿ ಸಿಲಿಕಾನ್ ಸಿಟಿಯಲ್ಲಿ ಅಂದಾಜು 30 ಸಾವಿರ ಮಂದಿ ಬಯ್ಯುವ ಉದ್ಯೋಗ ಮಾಡುತ್ತಿದ್ದಾರಂತೆ ಎಲ್ಲರಂತೆ ಎಂಟು ಗಂಟೆ ಕೆಲಸ ಮಾಡುತ್ತಾರೆ. ಇವರಿಗಾಗಿಯೇ ಕಾಲ್ ಸೆಂಟರ್ ಮಾದರಿ ಕಚೇರಿಗಳಿವೆ.

ಉಚಿತ ಪೋನ್ ಕೊಡ್ತಾರೆ. ಹೇಳಿದವರಿಗೆ ಬಾಯಿತುಂಬ ಕೆಟ್ಟ ಪದಗಳಿಂದ ಬೈಯ್ದು ಮಾನ ಮರ್ಯಾದೆ ತೆಗೆಯುವದಷ್ಟೇ ಕೆಲಸ ! ಇಷ್ಟು ಮಾಡಿದರೆ ಐಟಿ ಉದ್ಯೋಗಿಗಳ ಮಾದರಿಯಲ್ಲಿ ಬಯ್ಗುಳ ನೌಕರ ಬ್ಯಾಂಕ್ ಖಾತೆಗೆ ಸಂಬಳ ಬಂದು ಬೀಳುತ್ತದೆ !

ಆನ್‌ಲೈನ್ ತುರ್ತು ಸಾಲಕ್ಕೆ ಕೈ ಹಾಕಿ ಬದುಕು ತೂತು ಮಾಡಿಕೊಳ್ಳಬೇಡಿ!

ಉಗಿಯುವ ಗುತ್ತಿಗೆ:

ಉಗಿಯುವ ಗುತ್ತಿಗೆ:

ಅವಾಚ್ಯ ಪದಗಳಿಂದ ನಿಂದನೆ ಮಾಡುವರಿಗೆ ಅನ್ನದಾತರಾಗಿರುವರು ಕ್ಷಣಾರ್ಧದಲ್ಲಿ ಸಾಲ ನೀಡುವ ಆನ್‌ಲೈನ್ ಆಪ್‌ಗಳು. ಸಾಲ ಕೊಡಲು ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿ ನಾಯಿ ಕೊಡೆಗಳಂತೆ ತಲೆಯೆತ್ತಿರುವ ಆನ್‌ಲೈನ್ ಲೋನ್ ಆಪ್ ಗಳು ವಸೂಲಿಗೆ ಹೊಸ ಕಾರ್ಯತಂತ್ರವನ್ನೇ ರೂಪಿಸಿಕೊಂಡಿವೆ. ಆನ್‌ಲೈನ್ ನಲ್ಲಿ ಕ್ಷಣಾರ್ಧದಲ್ಲಿ ಸಾಲ ಕೊಡುವ ಆಪ್‌ಗಳು ಮರುಪಾವತಿ ಮಾಡದವರಿಗೆ ಮರ್ಯಾದೆ ತೆಗೆದು ವಸೂಲಿ ಮಾಡುವ ಗುತ್ತಿಗೆಯನ್ನು ಕೆಲ ಸಂಸ್ಥೆಗಳಿಗೆ ನೀಡಿವೆ. ಗುತ್ತಿಗೆ ಪಡೆದ ಸಂಸ್ಥೆಗಳು ಪೋನ್‌ನಲ್ಲಿ ಚೆನ್ನಾಗಿ ಬಯ್ಯುವರನ್ನು, ಧಮ್ಕಿ ಹಾಕುವ ಕಲೆಯುಳ್ಳವರನ್ನು ಸಂಬಳ ಕೊಟ್ಟು ನೇಮಿಸಿಕೊಂಡಿವೆ.

ಕೇವಲ 3 ರಿಂದ 30 ಸಾವಿರ ಸಾಲವನ್ನು ತ್ವರಿತವಾಗಿ ಕೊಡುತ್ತಾರೆ. ಒಂದು ವಾರ ಕಾಲಮಿತಿಯನ್ನು ಕೊಡುತ್ತಾರೆ. ಈ ಅವಧಿಯಲ್ಲಿ ಸಾಲ ಮರುಪಾವತಿ ಮಾಡದವರ ವಿವರಗಳನ್ನುಆಪ್ ಕಂಪನಿಗಳು ಈ ಕಾಲ್ ಸೆಂಟರ್ ಗಳಿಗೆ ಕಳಿಸುತ್ತವೆ. ಡೀಫಾಲ್ಟರ್ ಗಳ ಮೊಬೈಲ್ ಗಳಿಗೆ ಕರೆ ಮಾಡಿ ಬಯ್ಯುವುದು. ಅವರು ಕರೆ ಸ್ವೀಕರಿಸದಿದ್ದರೆ, ಅವರ ಸಂಪರ್ಕದಲ್ಲಿರುವರಿಗೆ ಕರೆ ಮಾಡಿ ಸಾಲ ಕಟ್ಟಿಸುವಂತೆ ಧಮ್ಕಿ ಹಾಕುವುದು ಅಷ್ಟೇ ಕೆಲಸ. ಇದಕ್ಕಾಗಿ ಮಾಸಿಕ ಹದಿನೈದು ಸಾವಿರ ರೂಪಾಯಿ ಸಂಬಳ ಕೊಡುತ್ತಾರೆ. ಯಾವ ಪದವಿ ಸರ್ಟಿಫಿಕೇಟ್ ಬೇಕಿಲ್ಲ. ಕೆಟ್ಟದಾಗಿ ಬಯ್ಯುವ ಕಲೆ ಗೊತ್ತಿದ್ದರೆ ಸಾಕು ಅಂತವರಿಗೆ ಕರೆದು ಕೆಲಸ ನೀಡಲಾಗುತ್ತಿದೆ. ಇಂತಹವರನ್ನು ಹುಡುಕಿ ಉದ್ಯೋಗ ಕೊಡುವರು ಹುಟ್ಟಿಕೊಂಡಿದ್ದಾರೆ.

ಸಿಸಿಬಿ ತನಿಖೆಯಲ್ಲಿ ಬಯಲು:

ಸಿಸಿಬಿ ತನಿಖೆಯಲ್ಲಿ ಬಯಲು:

ಆನ್‌ಲೈನ್ ನಲ್ಲಿ ಕ್ಷಣಾರ್ಧದಲ್ಲಿ ಸಾಲ ಕೊಡುವ ಆಪ್‌ಗಳು ಸಾಲ ಪಡೆಯುವರ ಮೊಬೈಲ್ ನ ಎಲ್ಲಾ ಮಾಹಿತಿ ಕದ್ದು ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅಲ್ಲದೇ ಸಾಲಗಾರ ಭಾವಚಿತ್ರಗಳಿಗೆ ಅಶ್ಲೀಲ ಪದಗಳನ್ನು ಹಾಕಿ ಅವರ ಮೊಬೈಲ್ ಸಂಪರ್ಕ ಸಂಖ್ಯೆಗಳಿಗೆ ಕಳಿಸಿ ಅಕ್ರಮ ಎಸಗುತ್ತಿರುವ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಐದು ಲೋನ್‌ ಆಪ್‌ ಕಚೇರಿಗಳ ಮೇಲೆ ದಾಳಿ ನಡೆಸಿ ಸುಮಾರು 40 ಲ್ಯಾಪ್‌ಟಾಪ್, 25 ಕ್ಕೂ ಹೆಚ್ಚು ಹೊಸ ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪೋನ್ ಜಾಡು ಹಿಡಿದು ತನಿಖೆ ನಡೆಸಿದಾಗ ಸಾಲಗಾರರಿಗೆ ಕಾಟ ಕೊಡಲೆಂದೇ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಆರ್ ಬಿಐ ನಿಯಮ ಉಲ್ಲಂಘನೆ ಮಾಡಿ ಕಾರ್ಯ ನಿರ್ವಹಿಸುತ್ತಿರುವ ಅಕ್ರಮ ಲೋನ್ ಆಪ್‌ಗಳ ವಿರುದ್ಧ ಸಿಸಿಬಿ ಪೊಲೀಸರು ಸಮರ ಸಾರಿದ್ದು, ನಾಲ್ಕು ಆಪ್‌ಗಳಿಗೆ ಸೇರಿದ ಲಕ್ಷಾಂತರ ರೂಪಾಯಿ ಹಣವನ್ನು ಫ್ರೀಜ್ ಮಾಡಿದ್ದಾರೆ. ಇದೇ ವೇಳೆ ಈ ಬಯ್ಯುವ, ಧಮ್ಕಿ ಹಾಕುವ ಹಿಂದಿನ ರಹಸ್ಯ ಬಯಲಾಗಿದೆ.

ಜಂಟಿ ಪೊಲೀಸ್ ಆಯುಕ್ತರ ಕ್ರಮ:

ಜಂಟಿ ಪೊಲೀಸ್ ಆಯುಕ್ತರ ಕ್ರಮ:

ಆನ್‌ಲೈನ್‌ ನಲ್ಲಿ ಮೂರು ಸಾವಿರ ಸಾಲಕ್ಕೆ ಅರ್ಜಿ ಸಲ್ಲಿಸಿದರೆ ಕೊಟ್ಟಿದ್ದು ಬರೀ 1800. ಬಡ್ಡಿ ಮತ್ತು ಸೇವಾ ಶುಲ್ಕ ಹೆಸರಿನಲ್ಲಿ 1200 ರೂ. ಸುಲಿಗೆ ಮಾಡಿದ್ದರು. ಈ ಕುರಿತು ಬಂದ ದೂರಗಳನ್ನು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲು ಸೂಚಿಸಿದ್ದರು. ಈ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿರುವ ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಗಳು ಆನ್‌ಲೈನ್ ಸಾಲ ಕೊಡುವ ಆಪ್‌ಗಳ ನ್ನು ಸಂಪೂರ್ಣ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ದಾಖಲೆಗಳನ್ನು ಕಲೆ ಹಾಕಿದ್ದಾರೆ. ಇದರ ಭಾಗವಾಗಿಯೇ ಆಪ್‌ಗಳು ಸಾಲ ವಸೂಲಿ ಮಾಡುವ ಗುತ್ತಿಗೆಯನ್ನು ಪ್ರತ್ಯೇಕ ಸಂಸ್ಥೆಗಳಿಗೆ ವಹಿಸಿರುವ ಅಂಶ ಬೆಳಕಿಗೆ ಬಂದಿದೆ. ಆಪ್‌ಗಳ ಮೂಲ ಹುಡುಕಿದಾಗ ಹೊರ ದೇಶಗಳಿಗೆ ಸೇರಿದ್ದು ಎಂಬ ಆಘಾತಕಾರಿ ವಿಚಾರ ಹೊರ ಬಿದ್ದಿದೆ.

ಅನಧಿಕೃತ ಸಿಮ್

ಅನಧಿಕೃತ ಸಿಮ್

ಇನ್ನು ಸಾಲ ನೀಡದವರ ಮಾನ ಹರಾಜು ಹಾಕಲು ಬಯ್ಯುವ ಮತ್ತು ಧಮ್ಕಿ ಹಾಕುವರನ್ನು ನೇಮಿಸಿಕೊಳ್ಳಲಾಗುತ್ತದೆ. ಅವರಿಗೆ ಹೊಸ ಮೊಬೈಲ್ ಮತ್ತು ಅನಧಿಕೃತ ಸಿಮ್ ಗಳನ್ನು ನೀಡಲಾಗುತ್ತದೆ. ಈ ಸಿಮ್ ಕೆಲವು ದಿನ ಮಟ್ಟಿಗೆ ಬಳಸಲಾಗುತ್ತದೆ. ಮೊದಲು ಹೆಣ್ಣು ಮಕ್ಕಳಿಂದ ಅಶ್ಲೀಲ ಪದಗಳಿಂದ ಉಗಿಸುತ್ತಾರೆ. ಇದಕ್ಕೂಮಣಿಯಲಿಲ್ಲ ಎಂದರೆ ಹುಡುಗರ ಕೈಯಲ್ಲಿ ಧಮ್ಕಿ ಬಿಡಿಸುತ್ತಾರೆ. ಇದಕ್ಕೂ ಮಣಿಯದ ಪಕ್ಷದಲ್ಲಿ ಮೊಬೈಲ್ ನಲ್ಲಿರುವ ಸಂಪರ್ಕ ಸಂಖ್ಯೆಗಳಿಗೆ " ಇವನೊಬ್ಬ ಫ್ರಾಡ್, ಸಾಲ ತಗೊಂಡು ಕಟ್ಟಿಲ್ಲ' ಎಂಬ ಸಂದೇಶಗಳನ್ನು ಆಪ್ತ ಕೂಟಕ್ಕೆ ಕಳಿಸುತ್ತಾರೆ. ಕೇವಲ ಮೂರು ಸಾವಿರಕ್ಕೆ ಯಾಕೆ ಮರ್ಯಾದೆ ತೆಗೆದುಕೊಳ್ಳಬೇಕು ಎಂದು ಭಯಬಿದ್ದು ಬಹುತೇಕರು ಹಣ ಪಾವತಿ ಮಾಡುತ್ತಾರೆ. ರೀಕವರಿ ಮಾಡುವುದರಿಂದ ವಾರಕ್ಕೆ 36 ಪರ್ಸೆಂಟ್ ಬಡ್ಡಿ ವಸೂಲಿ ಜತೆಗೆ ಲಾಭವೂ ಆಗುತ್ತಿದೆ. ಕರೋನಾ ಅವಧಿಯಲ್ಲಿ ಸಾಕಷ್ಟು ಮಂದಿ ಅನ್ಯ ಮಾರ್ಗವಿಲ್ಲದೇ ಸಾಲ ಪಡೆದು ಮರ್ಯಾದೆ ಕಳೆದುಕೊಂಡಿದ್ದಾರೆ.

ಆರ್‌ಬಿಐ ನಿರ್ಲಕ್ಷ್ಯತೆ:

ಆರ್‌ಬಿಐ ನಿರ್ಲಕ್ಷ್ಯತೆ:

ದೇಶದಲ್ಲಿ ಯಾವುದೇ ಒಂದು ಸಂಸ್ಥೆ ಸಾಲ ನೀಡಬೇಕಾದರೆ, ಅದು ಆರ್‌ ಬಿಐ ನಲ್ಲಿ ಬ್ಯಾಂಕಿಂಗ್ ಅಥವಾ ನಾನ್ ಬ್ಯಾಂಕಿಂಗ್ ವಿಭಾಗದಲ್ಲಿ ನೋಂದಣಿ ಮಾಡಿಸಬೇಕು. ಅವುಗಳಿಗೆ ಬಡ್ಡಿ ಪ್ರಮಾಣವನ್ನು ಸಹ ಆರ್‌ ಬಿಐ ನಿಗಧಿ ಪಡಿಸುತ್ತದೆ. ಇನ್ನು ಫೈನಾನ್ಸ್, ಗಿರವಿ ಸಾಲ ಕೊಡುವುದಿದ್ದರೆ ಆಯಾ ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆದು (ಕರ್ನಾಟಕದಲ್ಲಿ ಸಹಕಾರ ಇಲಾಖೆ) ವಹಿವಾಟು ನಡೆಸಲು ಅವಕಾಶವಿದೆ. ಆದರೆ ಈ ಆನ್‌ಲೈನ್ ಸಾಲ ಕೊಡುವ ಆಪ್‌ಗಳು ಯಾವ ಪರವಾನಗಿಯೂ ಪಡೆಯದೇ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ಬಗ್ಗೆ ಮೊದಲೇ ಆರ್‌ಬಿಐ ಉನ್ನತ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿತ್ತು. ವರ್ಷಗಳಿಂದಲೂ ವಿದೇಶಿ ಮೂಲದ ಆಪ್‌ಗಳು ಕಾರ್ಯ ನಿರ್ವಹಿಸುತ್ತಿದ್ದರೂ ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ದೇಶದ ಅರ್ಥ ವ್ಯವಸ್ಥೆಯನ್ನು ಬುಡಮೇಲು ಮಾಡಲು ಇದೊಂದು ಹಾದಿ ಸಾಕು ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ನಾಗರಾಜು ಕಳವಳ ವ್ಯಕ್ತಪಡಿಸಿದ್ದಾರೆ.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

English summary
Abusing and threatning is profession for around 30 thousand people in Bengaluru, know more..
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X