ಕರ್ನಾಟಕ ಅಭ್ಯುದಯದ ಜಪಕ್ಕೆ ಎನ್ಆರ್ಎನ್ ಕರೆ

ಶುಕ್ರವಾರ ಮಧ್ಯಾಹ್ನ ಬೆಂಗಳೂರಿನಿಂದ ಬೆಳಗಾವಿಗೆ ವಿಶೇಷ ವಿಮಾನದಲ್ಲಿ ಬಂದಿಳಿದ ಎನ್ಆರ್ಎನ್ ಮತ್ತು ಅವರ ಪತ್ನಿ ಸುಧಾ ಮೂರ್ತಿ ಕೆಎಲ್ಇ ಕಾಲೇಜ್ ಕ್ಯಾಂಪಸ್ಸಿನ ಸಿಲ್ವರ್ ಜ್ಯುಬಿಲಿ ಗೆಸ್ಟ್ ಹೌಸ್ ನಲ್ಲಿ ದಟ್ಸ್ ಕನ್ನಡದೊಂದಿಗೆ ಮಾತನಾಡುತ್ತ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಳೆದೆರಡು ದಶಕಗಳಲ್ಲಿ ರಾಜಧಾನಿ ಬೆಂಗಳೂರು ವಿಸ್ತೃತವಾಗಿ ಬೆಳೆದಿದೆ. ಔದ್ಯೋಗಿಕವಾಗಿ, ಆರ್ಥಿಕವಾಗಿ ಗಣನೀಯವಾಗಿ ಪ್ರಗತಿ ಸಾಧಿಸಿದ್ದು, ಜಾಗತಿಕ ಭೂಪಟದಲ್ಲಿ ವಿಶೇಷ ಸ್ಥಾನಮಾನ ಸಂಪಾದಿಸಿಕೊಂಡಿದೆ. ಇದಕ್ಕೆ ಕಾರಣರಾದವರನ್ನೆಲ್ಲ ಅಭಿನಂದಿಸುತ್ತ ಮುಂದೇನು? ಪ್ರಗತಿಯ ಹಾದಿಯಲ್ಲಿ ನಾವು ಇಡಬೇಕಾದ ಹೆಜ್ಜೆಗಳೇನು ಎನ್ನುವುದರ ಬಗ್ಗೆ ಗಂಭೀರವಾದ ಚಿಂತನೆಯ ಅಗತ್ಯ ಇಂದು ನನಗೆ ಕಾಣುತ್ತಿದೆ ಎಂದು ಎನ್ಆರ್ಎನ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜ್ಞಾನಿಗಳು, ಬಂಡವಾಳ ಹೂಡಿಕೆದಾರರು, ರಾಜಕಾರಣಿಗಳು, ಚಿಂತಕರು, ಸಾಹಿತಿಗಳು ಮತ್ತು ಪ್ರಗತಿಯ ಓಟದಲ್ಲಿ ಭಾಗವಹಿಸಲಿಚ್ಛಿಸುವ ಎಲ್ಲ ವರ್ಗದ ಜನತೆ ಒಂದೆಡೆ ಕುಳಿತು ಸಮಾಲೋಚನೆ ಮಾಡಬೇಕು. ಬೆಂಗಳೂರು ಬೆಳೆದ ಹಾಗೆ ನಮ್ಮ ರಾಜ್ಯದ ಇತರ ಪಟ್ಟಣಗಳಾದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗುಲಬರ್ಗಾ ಮತ್ತಿತರ ಪಟ್ಟಣಗಳು ಅಭಿವೃದ್ಧಿಯ ತಾಳಕ್ಕೆ ಹೆಜ್ಜೆ ಹಾಕಬೇಕು. ನನ್ನ ಗಮನ ಅತ್ತ ಎಂದರು ಮೂರ್ತಿ.
ನಾವೆಲ್ಲ ಕೂಡಿ ಏನು ಮಾಡಬೇಕು, ಏನು ಮಾಡಬಹುದು ಎಂಬ ಬಗ್ಗೆ ಆಳವಾದ, ಗಂಭೀರವಾದ ಮತ್ತು ದೂರದೃಷ್ಟಿಯ ಒಂದು ಚಿಂತನೆ, ಒಂದು ನೀಲನಕ್ಷೆ ಇಲ್ಲದೆ ಇದ್ದರೆ ಪ್ರಗತಿ ಸುಮ್ಮನೆ ಕೈಗೆಟಕುವುದಿಲ್ಲ. ಕರ್ನಾಟಕ ನಿಜಕ್ಕೂ ಅಭಿವೃದ್ಧಿ ಆಗಬೇಕೆಂಬ ಸದಾಶಯವುಳ್ಳ ಎಲ್ಲರಲ್ಲಿಯೂ ಸಮತಾಭಾವ ಮತ್ತು ನಿರ್ದಿಷ್ಟ ಗುರಿ ಇರಬೇಕೆಂದು ತಾವು ಅಪೇಕ್ಷೆಪಡುವುದಾಗಿ ನಾರಾಯಣ ಮೂರ್ತಿ ಹೇಳಿದರು.
ತಾವು ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಸಂದರ್ಭದಲ್ಲಿ ಕೆಲವಾರು ಅಪಸ್ವರಗಳು, ವಾದವಿವಾದಗಳು ಕೇಳಿಬಂದಿವೆ. ಇದಕ್ಕೆ ತಮ್ಮ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಗೆ ಮೂರ್ತಿ ಹೇಳಿದ್ದಿಷ್ಟು "ಭೇದಭಾವಗಳನ್ನು ಬದಿಗಿಡಬೇಕು, ಒಗ್ಗಟ್ಟಿನ ಮಂತ್ರ ಜಪಿಸಬೇಕು, ಭಿನ್ನಾಭಿಪ್ರಾಯಗಳನ್ನು ಕುಳಿತು ಮಾತನಾಡುವ ಸಮಯ ಇದಲ್ಲ. ಇದು ವಿಶ್ವ ಕನ್ನಡಿಗರು ಆಚರಿಸುತ್ತಿರುವ ವಿಶಿಷ್ಟವಾದ ಮತ್ತು ಮಹತ್ವವಾದ ಕನ್ನಡದ ಹಬ್ಬ. ಇದರಲ್ಲಿ ನಾವೆಲ್ಲರೂ ತನ್ಮಯತೆಯಿಂದ, ಸಂತೋಷದಿಂದ ಪಾಲ್ಗೊಳ್ಳೋಣ."












Click it and Unblock the Notifications