ಹೌದು, ಈ ಬಾರಿ ಸಮ್ಮೇಳನದಲ್ಲಿ ಸನ್ಮಾನಗಳು ಇಲ್ಲ!

ಏನಾಗಿತ್ತೆಂದರೆ... ಆ ಸಮ್ಮೇಳನದಲ್ಲಿ ರಾಷ್ಟ್ರಕವಿ ಕುವೆಂಪು ಅವರು ಪ್ರಧಾನಿ ಸನ್ಮಾನವನ್ನೇ ಬೇಡವೆಂದಿದ್ದರು. ಸನ್ಮಾನಿತರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನಮೂದಿಸಿಲ್ಲ ಎಂದು ಸಾಹಿತಿ ದೇಜಗೌ ಮುನಿದಿದ್ದರು. ಇಂತಹ ಮುಜುಗರ ಪ್ರಸಂಗಗಳು ಮತ್ತೆ ಘಟಿಸದಿರಲಿ ಎಂದು ಸರಕಾರ ಸನ್ಮಾನದಿಂದ ದೂರವಾಗಿದೆ, ಅಷ್ಟೇ! ಆದರೆ ಗಣ್ಯಾತಿಗಣ್ಯರಿಗೆ ಹೂಗುಚ್ಛದ ಜತೆಗೆ ಚಿಕ್ಕ ಧನ್ಯವಾದ ಅರ್ಪಣೆ ನಡೆಯಲಿದೆ.
ಮೈಸೂರಿನಲ್ಲಿ ನಡೆದ ಸಮ್ಮೇಳನದ ಉದ್ಘಾಟನೆಗೆ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಆಹ್ವಾನಿಸಲಾಗಿತ್ತು. ಕಾರಣಾಂತರದಿಂದ ಉದ್ಘಾಟನೆಯ ದಿನ ಅವರಿಗೆ ಬರಲಾಗಲಿಲ್ಲ. ಕುವೆಂಪು ಅವರೇ ಉದ್ಘಾಟಿಸಿದರು. ಶಿವರಾಮ ಕಾರಂತರು ಅಧ್ಯಕ್ಷತೆ ವಹಿಸಿದರು. ಆದರೆ ಮರುದಿನ ರಾಜೀವ್ ಗಾಂಧಿ ಸಮ್ಮೇಳನಕ್ಕೆ ಆಗಮಿಸಿದ್ದರು. ಕುವೆಂಪು ಅವರಿಗೆ ಪ್ರಧಾನಿಯಿಂದಲೇ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆದರೆ ಕುವೆಂಪು ಸಮ್ಮೇಳನದತ್ತ ಸುಳಿಯಲೇ ಇಲ್ಲ. ರಾಜಕೀಯ ವ್ಯಕ್ತಿಗಳಿಂದ ಅಂತರ ಕಾಯ್ದುಕೊಂಡಿದ್ದ ಕುವೆಂಪು ಪ್ರಧಾನಿಯಿಂದ ನಡೆಯುವ ಸನ್ಮಾನ ಬೇಡವೆಂದರು. ಆನಂತರ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರೇ ಕುವೆಂಪು ನಿವಾಸಕ್ಕೆ ತೆರಳಿ ಸನ್ಮಾನ ನೆರವೇರಿಸಿದರು.
ದೇಜಗೌಗೂ ಮನೆಯಲ್ಲೇ ಸನ್ಮಾನ: 1985ರ ನವೆಂಬರ್ 1ರಂದು ಪ್ರದಾನ ಮಾಡಬೇಕಿದ್ದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಥಮ ಬಾರಿಗೆ ವಿಶ್ವ ಕನ್ನಡ ಸಮ್ಮೇಳನ ನಡೆಸುತ್ತಿರುವುದರಿಂದ ಆ ಸಮ್ಮೇಳನದ ವೇದಿಕೆಯಲ್ಲೇ ನೀಡಲು ತೀರ್ಮಾನಿಸಲಾಗಿತ್ತು. ಆ ಸಾಲಿನಲ್ಲಿ ಕರ್ನಾಟಕ ವಿವಿಯ ಅಂದಿನ ಕುಲಪತಿ ಎಸ್.ಎಸ್. ಮಾಳವಾಡ, ಸಾಹಿತಿಗಳಾದ ತ.ಸು. ಶಾಮರಾಯರು, ಎಂ.ವಿ. ಸೀತಾರಾಮಯ್ಯ, ಚಿದಾನಂದ ಮೂರ್ತಿ ಸೇರಿದಂತೆ 30 ಕ್ಕೂ ಹೆಚ್ಚು ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕಿತ್ತು. ಈ ಮಧ್ಯೆ, ಒಂದು ಅಚಾತುರ್ಯ ನಡೆದಿತ್ತು. ದೇಜಗೌ ಅವರ ಹೆಸರು ಯಾವುದೇ ಸನ್ಮಾನ ಪಟ್ಟಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ತಮಗೆ ಪ್ರಧಾನ್ಯತೆ ಸಿಗಲಿಲ್ಲ ಎಂದು ಸ್ವತಃ ದೇಜಗೌ ಬೇಸರಗೊಂಡಿದ್ದರು. ಆಗ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಜೀವರಾಜ್ ಆಳ್ವ ಅವರೇ ದೇಜಗೌ ಮನೆಗೆ ತೆರಳಿ ಸನ್ಮಾನಿಸ ಬೇಕಾಯಿತು.












Click it and Unblock the Notifications