ಉಡುಪಿ ಗೋಷ್ಠಿ: ಕರವೆ ಗೌಡ Vs ಕರವೆ ಶೆಟ್ಟಿ
ಉಡುಪಿ, ಡಿ.14 : ಗೊಂದಲ ಗದ್ದಲವಿಲ್ಲದೇ ತಣ್ಣಗೆ ನಡೆಯುತ್ತಿದ್ದ ಉಡುಪಿ ಸಮ್ಮೇಳನದಲ್ಲಿ ಕಡೆಯ ದಿನವಾದ ಶನಿವಾರ(ಡಿ.15) ತುಸು ಕಾವು ಕಾಣಬಹುದು. ನಾಡುನುಡಿ ವಿಚಾರದಲ್ಲಿ ಇತ್ತೀಚೆಗೆ ಗಮನ ಸೆಳೆದಿದ್ದ ಕರ್ನಾಟಕ ರಕ್ಷಣಾ ವೇದಿಕೆಯಲ್ಲಿನ ಉಭಯ ಗುಂಪುಗಳ ನಡುವೆ ಸಮ್ಮೇಳನದ ಅಂಗಳದಲ್ಲಿ ಘರ್ಷಣೆಗಳಾಗುವ ಸಾಧ್ಯತೆಗಳಿವೆ.
ಶನಿವಾರ ಬೆಳಗ್ಗೆ 9ರಿಂದ 'ಕನ್ನಡ ಚಳವಳಿ ನಿನ್ನೆ ಇಂದು ನಾಳೆ'ಎಂಬ ವಿಚಾರ ಗೋಷ್ಠಿ ನಡೆಯಲಿದ್ದು, ಗೋಷ್ಠಿಗೆ ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರಿಗೆ ಅವಕಾಶ ನೀಡಿರುವುದು ವಿವಾದದ ಮೂಲಬಿಂದು. ನಾರಾಯಣಗೌಡ ಅವರಿಗೆ ಅವಕಾಶ ಕೊಟ್ಟಿರುವುದನ್ನು ಖಂಡಿಸಿರುವ ಕರವೇಯ ಪ್ರವೀಣ್ ಕುಮಾರ್ ಶೆಟ್ಟಿ ಬಣ, ಕಸಾಪ ಧೋರಣೆಯನ್ನು ಟೀಕಿಸಿದೆ.
ಸಾಹಿತ್ಯಕ್ಕೂ ಸಂಸ್ಕೃತಿಗೂ ನಂಟಿಲ್ಲದ ನಾರಾಯಣಗೌಡ ವಿರುದ್ಧ ಅನೇಕ ಕ್ರಿಮಿನಲ್ ದೂರುಗಳಿವೆ. ಈ ವ್ಯಕ್ತಿಯನ್ನು ಸಮ್ಮೇಳನಕ್ಕೆ ಆಹ್ವಾನಿಸಿ, ಸಹೃದಯರಿಗೆ ಮುಜುಗರ ಉಂಟುಮಾಡಲಾಗಿದೆ. ನಾರಾಯಣಗೌಡ ವೇದಿಕೆ ಹತ್ತಲು ನಾವು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಉಡುಪಿ ಭಾಗದ ಕರವೇ ಘಟಕ(ಪ್ರವೀಣ್ ಬಣ)ಎಚ್ಚರಿಸಿದೆ. ಈ ಭಾಗದಲ್ಲಿ ನಾರಾಯಣಗೌಡರ ಬಣವೂ ಕ್ರಿಯಾಶೀಲವಾಗಿದೆ. ಹೀಗಾಗಿ ಉಭಯ ಬಣಗಳ ಕಾರ್ಯಕರ್ತರ ನಡುವೆ ತಿಕ್ಕಾಟ ಮತ್ತು ಸಂಘರ್ಷದ ಅಪಾಯ ಇದ್ದೇ ಇದೆ. ಈ ಹಿನ್ನೆಲೆಯಲ್ಲಿ ಶನಿವಾರದ ಗೋಷ್ಠಿಗೆ ವ್ಯಾಪಕ ಪೊಲೀಸ್ ಬಂದೋಬಸ್ತನ್ನು ಮಾಡಲಾಗಿದೆ.
ಕಳೆದ ಶಿವಮೊಗ್ಗ ಸಮ್ಮೇಳನದಲ್ಲೂ ಇದೇ ರೀತಿ ಗೋಷ್ಠಿಯೊಂದು ಕಾವೇರಿತ್ತು. ಕವಿತಾ ಲಂಕೇಶ್ ಅವರು ನಕ್ಸಲ್ ಪರ ಇದ್ದಾರೆ ಎಂದು ಆರೋಪಿಸಿದ್ದ ಸಂಘ ಪರಿವಾರ ಮತ್ತಿತರರು ಗೋಷ್ಠಿಯಲ್ಲಿ ಭಾಗವಹಿಸಲು ವಿರೋಧಿಸಿದ್ದರು. ಪ್ರತಿರೋಧಗಳ ಮಧ್ಯೆಯೇ ಕಚಪಿಚ ಗೋಷ್ಠಿ ನಡೆದಿತ್ತು.
ಕುಲವೊಂದು ಕವಲೆರಡು : ಕರವೇ ಎಂಬ ತುಂಬಿದ ಮನೆಯಲ್ಲಿ ಅಸಮಾಧಾನದ ಹೊಗೆ ಎದ್ದಾಗ, ಕನ್ನಡಿಗರು ನೊಂದಿದ್ದರು. ನಾಡುನುಡಿ ಕಾಯಲು ನಿಂತ ವೇದಿಕೆಯೊಂದು ಚೂರಾಯಿತಲ್ಲ ಎಂಬ ಆತಂಕ ಎಲ್ಲರದು. ಆದರೆ ಆನಂತರದ ದಿನಗಳಲ್ಲಿ ಎರಡೂ ಬಣಗಳು ತಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದವು. ನಾವು ಬೇರೆಬೇರೆಯಾದರೂ, ಕನ್ನಡ ಹೋರಾಟ ನಿಲ್ಲದು ಎಂದು ಕನ್ನಡ ವಿರೋಧಿಗಳಿಗೆ ಸೂಚನೆ ರವಾನಿಸಿದ್ದವು. ನಾಡುನುಡಿ ರಕ್ಷಣೆಗೆ ಎಷ್ಟು ಬಣಗಳಿದ್ದರೂ ಕಡಿಮೆಯೇ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications