ಚಿದಾನಂದಗೌಡರೆಂಬ ಷಣ್ಮುಖ ಪ್ರತಿಭೆ

Written by: * ಶಿಕಾರಿಪುರ ಹರಿಹರೇಶ್ವರ
 
Share this on your social network:
   Facebook Twitter Google+    Comments Mail

ಚಿದಾನಂದಗೌಡರೆಂಬ ಷಣ್ಮುಖ ಪ್ರತಿಭೆ
ಈಗ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಯಾಗಿರುವ ಡಾ.ಕೆ.ಚಿದಾನಂದ ಗೌಡ ಇವರು ಸುಳ್ಯ ತಾಲೂಕಿನ ಚಿಕ್ಕಾಡಿಯಲ್ಲಿ ಹುಟ್ಟಿದವರು; ಬೆಂಗಳೂರಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡಿ (ಬಿ. ಇ. 1964), ಬರೋಡಾ ವಿಶ್ವವಿದ್ಯಾಲಯದಲ್ಲಿ ಅದನ್ನು ಮುಂದುವರಿಸಿ (ಎಂ. ಇ. 1969), ಬೆಂಗಳೂರಿನ ತಾತಾ ವಿಜ್ಞಾನ ಮಂದಿರದಿಂದ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌, 1979) ಪಿಎಚ್‌. ಡಿ. ಪದವಿ ಗಳಿಸಿದರು.

ವಿಶ್ವವಿಖ್ಯಾತ 'ನಾಸಾ" (NASA) ಸಂಸ್ಥೆಯ ನ್ಯೂಯಾರ್ಕ್‌ ಕೇಂದ್ರದಲ್ಲಿ ಎರಡು ವರ್ಷಗಳ ಕಾಲ (1981-83) ಸಂಶೋಧನಾ ವಿಜ್ಞಾನಿಯಾಗಿ, ಮತ್ತು ಫ್ರಾನ್ಸಿನ ಪ್ರತಿಷ್ಠಿತ 'ಇನ್ರಿಯಾ" (INRIA) ಸಂಶೋಧನಾ ಸಂಸ್ಥೆಯಲ್ಲಿ ಒಂದು ವರ್ಷದ ಕಾಲ (1989-90) ಉನ್ನತ ಮಟ್ಟದ ಸಂಶೋಧಕರಾಗಿ ಸೇವೆ ಸಲ್ಲಿಸಿದ್ದಾರೆ.

ಮೂವತ್ತೈದು ವರ್ಷ ಅಧ್ಯಾಪಕರಾಗಿ, ಮತ್ತು ಸುಮಾರು ಇಪ್ಪತ್ತ ಮೂರು ವರ್ಷಗಳ ಕಾಲ ಸಂಶೋಧಕರಾಗಿ ಕೆಲಸ ಮಾಡಿದ ಪ್ರೊಫೆಸರ್‌ ಚಿದಾನಂದ ಅವರು, ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್‌ ಕಾಲೇಜಿನ ಕಂಪ್ಯೂಟರ್‌ ವಿಜ್ಞಾನ ವಿಭಾಗದ ಪ್ರಾಧ್ಯಾಪಕರೂ, ಮುಖ್ಯಸ್ಥರೂ ಆಗಿ ಇಪ್ಪತ್ತೊಂದು ವರ್ಷ ಸೇವೆ ಸಲ್ಲಿಸಿದ್ದಾರೆ. ನಂತರ, ಅದೇ ಕಾಲೇಜಿನ ಉಪಪ್ರಾಂಶುಪಾಲರಾಗಿ ಐದುವರ್ಷ, ಪ್ರಾಂಶುಪಾಲರಾಗಿ ಸುಮಾರು ಒಂದೂವರೆ ವರ್ಷ ಕಾಲ, ಮತ್ತು 'ಏ ಐ ಸಿ ಟಿ ಇ" ಯ ಎಮೆರಿಟಸ್‌ ಪ್ರಾಧ್ಯಾಪಕರು ಮತ್ತು ಮೈಸೂರಿನ ಜೆ ಎಸ್‌ ಎಸ್‌ ಸಂಶೋಧನಾ ಸಂಸ್ಥೆಯ ನಿರ್ದೇಶಕರೂ (2001-02) ಆಗಿದ್ದರು.

ಇವರು ಮೈಸೂರು ವಿಶ್ವವಿದ್ಯಾನಿಲಯದ ಇಂಜನಿಯರಿಂಗ್‌ ವಿಭಾಗದ ಡೀನ್‌ ಮತ್ತು ಸೆನೆಟ್‌ ಮತ್ತು ಅಕಡೆಮಿಕ್‌ ಕೌನ್ಸಿಲ್‌ಗಳ ಸದಸ್ಯರಾಗಿದ್ದರು (1993-94). ಮೈಸೂರು ವಿಶ್ವವಿದ್ಯಾನಿಲಯ(1987-88), ಕುವೆಂಪು ವಿಶ್ವವಿದ್ಯಾನಿಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯಗಳ ಕಂಪ್ಯೂಟರ್‌ ವಿಜ್ಞಾನ ವಿಭಾಗದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಇವರು ಕಲ್ಕತ್ತಾದ ಜಾಧವಪುರ ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ ಸದಸ್ಯರೂ ಕೂಡ ಆಗಿದ್ದರು (2000-2). ಕನ್ನಡ ಗಣಕ ಪರಿಷತ್ತಿನ ಮೈಸೂರು ಶಾಖೆಯ ಅಧ್ಯಕ್ಷರಾಗಿ ಇವರು, ಶಾಖೆ ಪ್ರಾರಂಭವಾದಾಗಿನಿಂದಲೂ (1998) ಗಣಕ ಪರಿಷತ್ತಿನ ಚಟುವಟಿಕೆಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ.

ಚಿದಾನಂದಗೌಡರು ಗಣಕ (ಕಂಪ್ಯೂಟರ್‌) ವಿಜ್ಞಾನ ವಿಭಾಗದಲ್ಲಿ ನೂರಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಂಶೋಧನಾ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಪ್ಯಾರಿಸ್‌, ಟೋಕಿಯೋ, ಜ್ಯೂರಿಚ್‌, ಲುಕ್ಸೆಮ್‌ಬರ್ಗ್‌ಗಳಲ್ಲಿ ನಡೆದ ಅಂತರರಾಷ್ಟ್ರೀಯ ಕಂಪ್ಯೂಟರ್‌ ಸಂಶೋಧನಾ ಸಮಾವೇಶಗಳಲ್ಲಿ ಅಧ್ಯಕ್ಷರಾಗಿ ಭಾಗವಹಿಸಿದ್ದಾರೆ. ಜರ್ಮನಿಯ ಕ್ಲಾಸಿಫಿಕೇಶನ್‌ ವಿಜ್ಞಾನಿಗಳು ಸಂಗ್ರಹಿಸಿದ 'ಯಾರು ಯಾರು?" ('ಹು ಈಸ್‌ ಹು") ಪುಸ್ತಕದಲ್ಲಿ ಇವರ ಸಂಶೋಧನಾ ವಿವರಗಳು ದಾಖಲಾಗಿವೆ. ಹತ್ತು ಮಂದಿ ಪಿ.ಹೆಚ್‌.ಡಿ. ವಿದ್ಯಾರ್ಥಿಗಳಿಗೆ ಇವರು ಸಂಶೋಧನಾ ಮಾರ್ಗದರ್ಶನ ನೀಡಿದ್ದಾರೆ. ಭಾರತ - ಫ್ರಾನ್ಸ್‌ ದೇಶಗಳ ಜಂಟಿ ಸಂಶೋಧನಾ ಯೋಜನೆಗಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಭಾರತದ ಕೇಂದ್ರ ಸರ್ಕಾರದ ರಕ್ಷಣಾ ವಿಭಾಗ (ಡಿ ಆರ್‌ ಡಿ ಓ), ಮಾನವ ಸಂಪನ್ಮೂಲ ವಿಭಾಗ (ಎಂ ಎಚ್‌ ಆರ್‌ ಡಿ), ಅಖಿಲ ಭಾರತ ತಾಂತ್ರಿಕ ವಿದ್ಯಾ ಪರಿಷತ್ತು (ಏ ಐ ಸಿ ಟಿ ಇ) ಇವುಗಳ ಅನೇಕ ಸಂಶೋಧನಾ ಯೋಜನೆಗಳನ್ನು ಸಮರ್ಪಕವಾಗಿ ಮುಗಿಸಿಕೊಟ್ಟಿದ್ದಾರೆ.

ಸನ್ಮಾನ- ಪುರಸ್ಕಾರಗಳು

ಚಿದಾನಂದಗೌಡರು ಬರೆದ ಪುಸ್ತಕಗಳಲ್ಲಿ 'ಇಂಜಿನಿಯರಿಂಗ್‌ ಗೀತೆಗಳು"(1980), 'ಇಂಜಿನಿಯರಿಂಗ್‌ ಲಿರಿಕ್ಸ್‌"(ಇಂಗ್ಲೀಷಿನಲ್ಲಿ) (1981), 'ವಿಜ್ಞಾನ ವಚನಗಳು"(1984), 'ಪುಟಾಣಿಗಳ ವಿಜ್ಞಾನ ಪದ್ಯಗಳು"(ಮಕ್ಕಳಿಗಾಗಿ ಬರೆದ ಪದ್ಯಗಳು) (1985), 'ಕಂಪ್ಯೂಟರ್‌" (ಗಣಕ ಯಂತ್ರದ ಬಗ್ಗೆ ಕನ್ನಡದಲ್ಲಿ ಪುಸ್ತಕ) (1987), 'ಪತ್ತೇದಾರಿ ಪದ್ಯಗಳು"(1989), 'ಕಂಪ್ಯೂಟರ್‌ ಕಲಿಯಿರಿ"(1995), 'ಅಚ್ಚಗನ್ನಡ ನುಡಿಕೋಶ" (ಸಂಪಾದಿತ) (1995), 'ಸಂಪರ್ಕ ಮಾಧ್ಯಮಗಳು"(1999), 'ಟೆಕ್ನೋವಿಷನ್‌" (ಸಂಪಾದಿತ, ಇಂಗ್ಲೀಷಿನಲ್ಲಿ) (1990), 'ಸಿಂಬಾಲಿಕ್‌ ಡೇಟಾ ಅನಲಿಸಿಸ್‌ ಫಾರ್‌ ಇಮೇಜ್‌ ಪ್ರಾಸೆಸಿಂಗ್‌" ('ಸಾಫ್ಟ್‌ ಕಂಪ್ಯೂಟಿಂಗ್‌ ಫಾರ್‌ ಇಮೇಜ್‌ ಪ್ರಾಸೆಸಿಂಗ್‌" ಪುಸ್ತಕದ ಪ್ರಮುಖ ಅಧ್ಯಾಯ) (1999) -ಇವು ಜನಪ್ರಿಯವಾದ ಗ್ರಂಥಗಳು. ಇವರ 'ಪುಟಾಣಿಗಳ ವಿಜ್ಞಾನ ಪದ್ಯಗಳು" ಎಂಬ ಹೊತ್ತಿಗೆಗೆ 'ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ"(1986), ಮತ್ತು ವೈಜ್ಞಾನಿಕ ಬರವಣಿಗೆಗಳಿಗಾಗಿ 'ಸರ್‌. ಎಮ್‌.ವಿಶ್ವೇಶ್ವರಯ್ಯ ತಾಂತ್ರಿಕ ವಿಜ್ಞಾನ ಪ್ರಶಸ್ತಿ"ಗಳ ಗೌರವಗಳು ಲಭಿಸಿವೆ.

ಪ್ರಾಧ್ಯಾಪಕ ಕೆ.ಚಿದಾನಂದ ಗೌಡ ಅವರು ಅಮೇರಿಕಾ ಸಂಸ್ಥಾನ, ಕೆನಡಾ, ಫ್ರಾನ್ಸ್‌ , ಇಂಗ್ಲೆಂಡ್‌ ಮತ್ತಿತರ ಯುರೋಪಿನ ದೇಶಗಳು, ಆಸ್ಟ್ರೇಲಿಯಾ, ಸಿಂಗಾಪುರ್‌, ಜಪಾನ್‌, ಶ್ರೀಲಂಕಾ, ಮೊರೀಶಿಯಸ್‌ ದೇಶಗಳಲ್ಲಿ ಪ್ರವಾಸ ಮಾಡಿದ್ದಾರೆ; ಆಹ್ವಾನಿತರಾಗಿ, ಸಮಾವೇಶಗಳಲ್ಲಿ ಮತ್ತು ವಿಚಾರಸಂಕಿರಣಗಳಲ್ಲಿ ಕಂಪ್ಯೂಟರ್‌ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಉಪನ್ಯಾಸ ನೀಡಿದ್ದಾರೆ.

ಈಗ ಆಗಸ್ಟ್‌ ತಿಂಗಳ ಅಂತ್ಯದಲ್ಲಿ ಮತ್ತು ಸೆಪ್ಟೆಂಬರ್‌ 2003ರಲ್ಲಿ ಇಂಗ್ಲೆಂಡ್‌ ಮತ್ತು ಅಮೆರಿಕಾ ಪ್ರವಾಸ ಕೈಗೊಂಡು, ಕುವೆಂಪು ವಿಶ್ವವಿದ್ಯಾಲಯವು ಮುಂಬರುವ ವರ್ಷಗಳಲ್ಲಿ ಹಮ್ಮಿಕೊಂಡಿರುವ ಮಹತ್ವದ ಶೈಕ್ಷಣಿಕ ಯೋಜನೆಗಳ ಬಗ್ಗೆ ಹೊರನಾಡಿನಲ್ಲಿರುವ ಕನ್ನಡಿಗರ ಮತ್ತು ಭಾರತೀಯರ ಸಹಕಾರದ ಅನ್ವೇಷಣೆಯನ್ನು ನಡೆಸಲಿದ್ದಾರೆ.

ವಿಳಾಸ: ಪ್ರಾಧ್ಯಾಪಕ ಕೆ. ಚಿದಾನಂದ ಗೌಡ, ಕುಲಪತಿ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನಸಹ್ಯಾದ್ರಿ, ಶಂಕರಘಟ್ಟ 577 451, ಶಿವಮೊಗ್ಗ ಜಿಲ್ಲೆ , ಕರ್ನಾಟಕ, ಭಾರತ.

Write a Comment
AIFW autumn winter 2015