ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್‌ಸೈಡ್ ಸ್ಟೋರಿ: ಗೃಹ ಮಂತ್ರಿ ಇಲಾಖೆ ಸಮಸ್ಯೆಗಳನ್ನು ಸಡಿಪಡಿಸುತ್ತಾರಾ?

|
Google Oneindia Kannada News

ಬೆಂಗಳೂರು, ಆ. 09: ನೂತನ ಗೃಹ ಸಚಿವರಾಗಿ ಆರಗ ಜ್ಞಾನೇಂದ್ರ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ರಾಘವೇಂದ್ರ ಔರಾದ್ಕರ್ ವರದಿಯನ್ನು ಜಾರಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ವಾಸ್ತವದಲ್ಲಿ ಇದೊಂದು ಸಮಸ್ಯೆಯಲ್ಲ, ಜನ ಸ್ನೇಹಿ ಪೊಲೀಸಿಂಗ್ ಮತ್ತು ಪಾರದರ್ಶಕ ಪೊಲೀಸಿಂಗ್ ಜಾರಿ ಮಾಡುವ ಹಾದಿಯಲ್ಲಿ ಸಾಕಷ್ಟು ತೊಡಕುಗಳು ಎದುರಾಗಿವೆ. ಅವನ್ನು ಪರಿಹರಿಸುವ ನಿಟ್ಟಿನಲ್ಲಿ ನೂತನ ಗೃಹ ಸಚಿವರು ಮಹತ್ವದ ತೀರ್ಮಾನ ತೆಗೆದುಕೊಳ್ಳಿದ್ದಾರಾ ಎಂಬ ನಿರೀಕ್ಷೆ ಮೂಡಿಸಿದೆ. ಪೊಲೀಸ್ ಇಲಾಖೆಯಲ್ಲಿರುವ ಅತಿ ತ್ವರಿತವಾಗಿ ಪರಿಹಾರವಾಗಬೇಕಿರುವ ಸಮಸ್ಯೆಗಳನ್ನು ಪೊಲೀಸ್ ಸಿಬ್ಬಂದಿಯೇ ಒನ್ ಇಂಡಿಯಾ ಜತೆ ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ ಪೊಲೀಸ್ ಇಲಾಖೆ ಹೆಸರು ಹಾಳಾಗುತ್ತಿರುವುದೇ ವರ್ಗಾವಣೆ ದಂಧೆಯಿಂದ. ಸಚಿವರು, ಶಾಸಕರು, ಮಾಜಿ ಶಾಸಕರು ತಮ್ಮ ಅಣತಿಯಂತೆ ಕೆಲಸ ಮಾಡುವ ಅಧಿಕಾರಿಗಳನ್ನು ಕ್ಷೇತ್ರಗಳಿಗೆ ಹಾಕಿಸಿಕೊಳ್ಳುವ ನೆಪ ನೀಡಿ ಮಿನಿಟ್ ಮಾರಿಕೊಳ್ಳುವುದು ಗುಟ್ಟಾಗಿ ಉಳಿದಿಲ್ಲ. ವಾಸ್ತವದಲ್ಲಿ ಶಾಸಕರು- ಸಚಿವರು ನೀಡುವ ಮಿನಿಟ್‌ಗಳು ಲಕ್ಷ -ಲಕ್ಷ ಗಳಿಗೆ ಬಿಕರಿಯಾಗುತ್ತವೆ. ಹೀಗಾಗಿ ಪೊಲೀಸ್ ಇಲಾಖೆಯಲ್ಲಿ ಮೊದಲು ವರ್ಗಾವಣೆ ದಂಧೆಗೆ ಬ್ರೇಕ್ ಹಾಕಬೇಕು. ಸಚಿವರು, ಶಾಸಕರು, ಮಾಜಿ ಶಾಸಕರು ನೀಡುವ ಮಿನಿಟ್ ಆಧರಿಸಿ ವರ್ಗಾವಣೆ ಮಾಡುವುದನ್ನು ನಿಲ್ಲಿಸಬೇಕು. ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಬೋರ್ಡ್ ಪಾರದರ್ಶಕವಾಗಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತಾಗಬೇಕು. ವರ್ಗಾವಣೆ ಮಾಡುತ್ತಿರುವ ಕಾರಣವನ್ನು ವರ್ಗಾವಣೆ ಆದೇಶದಲ್ಲಿ ಉಲ್ಲೇಖಿಸಿ ನೀಡುವಂತವಾಗಬೇಕು. ಪೊಲೀಸ್ ಇಲಾಖೆಯಲ್ಲಿ ಹಣ ಕೊಟ್ಟವರಿಗೆ ಉನ್ನತ ಹುದ್ದೆ ನೀಡುವ ಸಂಸ್ಕೃತಿಗೆ ಮೊದಲು ಗೃಹ ಸಚಿವರು ಬ್ರೇಕ್ ಹಾಕಬೇಕಿದೆ.

ವರ್ಗಾವಣೆ ಮಾನದಂಡ ಏನಿರಬೇಕು

ವರ್ಗಾವಣೆ ಮಾನದಂಡ ಏನಿರಬೇಕು

ರಾಜ್ಯದಲ್ಲಿರುವ ಪೊಲೀಸ್ ಠಾಣೆಗಳನ್ನು ಅಲ್ಲಿನ ಕಾನೂನು ಸುವ್ಯವಸ್ಥೆ, ದಾಖಲಾಗುವ ಪ್ರಕರಣಗಳು, ಅವುಗಳ ತನಿಖೆ, ಅಪರಾಧಗಳ ಸ್ವರೂಪ ಆಧರಿಸಿ ಪೊಲೀಸ್ ಠಾಣೆಗಳನ್ನು ಹಾಗೂ ಪೊಲೀಸ್ ಹುದ್ದೆಗಳನ್ನು ಎ.ಬಿ.ಸಿ.ಡಿ. ಎಂದು ವರ್ಗೀಕರಣ ಮಾಡಬೇಕು. ಕಾನೂನು ಸುವ್ಯವಸ್ಥೆ ಸಮಸ್ಯೆ ತೊಡಕು ಇರುವ ಎ ವರ್ಗದ ಠಾಣೆಗಳಿಗೆ ಎ ವರ್ಗದ ಸಮರ್ಥ ಪೊಲೀಸ್ ಅಧಿಕಾರಿಗಳನ್ನು ಒಂದು ರೂಪಾಯಿ ಪಡೆಯದೇ ವರ್ಗಾವಣೆ ಮಾಡಬೇಕು. ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿರುವ, ತನಿಖೆ ಸಮರ್ಥತೆ ಇತರೆ ಮಾನದಂಡ ಆಧರಿಸಿ ಪೊಲೀಸ್ ಅಧಿಕಾರಿಗಳನ್ನು ಕೂಡ ವಿವಿಧ ವರ್ಗಗಳನ್ನಾಗಿ ವರ್ಗೀಕರಣ ಮಾಡಿ, ಅದಕ್ಕೆ ತಕ್ಕಂತೆ ಅಗತ್ಯ ಇರುವ ಕಡೆ ವರ್ಗಾವಣೆ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು. ದೇಶದಲ್ಲಿ ಎಲ್ಲೂ ಈ ರೀತಿಯ ಮಾದರಿ ವರ್ಗೀಕರಣ ಹಾಗೂ ವರ್ಗಾವಣೆ ನೀತಿ ಇಲ್ಲ. ಈ ನೀತಿ ಜಾರಿಗೆ ತಂದು ಪೊಲೀಸ್ ಇನ್ಸ್ಟಾಬ್ಲಿಷ್ ಮೆಂಟ್ ಬೋರ್ಡ್ ನ್ಯಾಯ ಸಮ್ಮತವಾಗಿ ವರ್ಗಾವಣೆ ಮಾಡಬೇಕು. ಹೀಗೆ ಮಾಡುವುದರಿಂದ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ಸಂಪೂರ್ಣ ನಿಂತು ಹೋಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಪೊಲೀಸ್ ವರ್ಗಾವಣೆ ದಂಧೆಯ ಅಸಲಿ ಸತ್ಯ

ಪೊಲೀಸ್ ವರ್ಗಾವಣೆ ದಂಧೆಯ ಅಸಲಿ ಸತ್ಯ

ಸಾಮಾನ್ಯವಾಗಿ ಬೇರೆ ಇಲಾಖೆಗಳಿಗೆ ಸರ್ಕಾರ ಅನುದಾನ ಕೊಡುತ್ತದೆ. ಸರ್ಕಾರಿ ಯೋಜನೆಯಲ್ಲಿ ಲೂಟಿ ಮಾಡಿದ ಹಣವನ್ನು ಆಯಕಟ್ಟಿನ ಹುದ್ದೆಗಾಗಿ ವೆಚ್ಚ ಮಾಡುತ್ತಾರೆ. ಆದರೆ ಪೊಲೀಸ್ ಇಲಾಖೆಗೆ ಯಾವ ಅನುದಾನ ಬರಲ್ಲ. ( ಆಡಳಿತ ವೆಚ್ಚ- ವೇತನ ಬಿಟ್ಟು ) ಪೊಲೀಸ್ ಅಧಿಕಾರಿ ವರ್ಗಾವಣೆಗಾಗಿ ಹಣ ಕೊಡುತ್ತಾನೆ ಎಂದರೆ ಅದನ್ನು ಅಸಹಾಯಕರಿಂದ ಸುಲಿಗೆ ಮಾಡಿ ಕೊಟ್ಟಿರುವ ಹಣವೇ. ಸದ್ಯ ಸಾಲ ಮಾಡಿ ಯಾರೂ ಪೋಸ್ಟಿಂಗ್ ಗೆ ಹಣ ಕೊಡುವುದಿಲ್ಲ. ಒಂದು ವೇಳೆ ಪೊಲೀಸರು ಸಾಲ ಮಾಡಿ ವರ್ಗಾವಣೆ ಮಾಡಿಸಿಕೊಂಡ ದಿನ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆಗಳು ವರದಿಯಾದರೂ ಆಚ್ಚರಿ ಪಡಬೇಕಿಲ್ಲ. ಗೃಹ ಮಂತ್ರಿಗಳು ಇದನ್ನು ಮನಗಂಡು ಪೊಲೀಸ್ ಇಲಾಖೆಯ ವರ್ಗಾವಣೆ ನೀತಿಯಲ್ಲಿ ಪಾರದರ್ಶಕತೆ ತರಬೇಕು.

ಪೊಲೀಸ್ ಠಾಣೆ, ಇತರೆ ಹುದ್ದೆಗಳ ಮಹತ್ವ ಆಧರಿಸಿ ವರ್ಗೀಕರಣ ಮಾಡಬೇಕು. ಅದರ ಜತೆಗೆ ಪೊಲೀಸ್ ಅಧಿಕಾರಿಗಳನ್ನು ಅವರ ಕಾರ್ಯಶೈಲಿ, ತನಿಖೆ ವಿಧಾನ, ಈ ಹಿಂದೆ ಪತ್ತೆ ಮಾಡಿರುವ ಪ್ರಕರಣ ಆಧರಿಸಿ ಅವರಿಗೂ ಗ್ರೇಡಿಂಗ್ ಕೊಡಬೇಕು. ಗ್ರೇಡಿಂಗ್, ಡಾಟಾ ಕ್ರೋಢೀಕರಣ ಮಾಡಿ ಅದಕ್ಕೆ ಅನುಸಾರವಾಗಿ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಬೋರ್ಡ್ ಸಮರ್ಥವಾಗಿ ಕೆಲಸ ಮಾಡುವಂತಾಗಬೇಕು. ಅಜಯ್ ಕುಮಾರ್ ಸಿಂಗ್ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ವೇಳೆ ಸಮರ್ಥ ಪೊಲೀಸ್ ಅಧಿಕಾರಿಗಳಿಗೆ ಉಚಿತವಾಗಿ ಕರೆದು ಪೋಸ್ಟಿಂಗ್ ಕೊಡುತ್ತಿದ್ದರು. ಅಂತಹ ಸಂಸ್ಕೃತಿಗೆ ಮತ್ತೆ ನಾಂದಿ ಹಾಡಬೇಕಿದೆ. ಈ ನಿಟ್ಟಿನಲ್ಲಿ ನೂತನ ಗೃಹ ಸಚಿವರು ಹೊಸ ಮಾನದಂಡ ರೂಪಿಸಿ ವರ್ಗಾವಣೆ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡಬೇಕಿದೆ.

ಆಧಾರ್ ಡಾಟಾ ನಿರ್ವಹಣಾ ಪೊಲೀಸ್ ಸೆಂಟರ್ ನಿರ್ಮಾಣ

ಆಧಾರ್ ಡಾಟಾ ನಿರ್ವಹಣಾ ಪೊಲೀಸ್ ಸೆಂಟರ್ ನಿರ್ಮಾಣ

ಕ್ರಿಮಿನಲ್‌ಗಳು ಪೊಲೀಸರಿಗಿಂತಲೂ ಬುದ್ಧಿವಂತರಾಗಿದ್ದಾರೆ. ಒಂದೊಂದು ಹೆಸರಿನಲ್ಲಿ ಒಂದೊಂದು ಕಡೆ ಅಪರಾಧ ಕೃತ್ಯ ಎಸಗುವ ಪರಿಪಾಠವಿದೆ. ಈಗಿನ ಪರಿಸ್ಥಿತಿಯಲ್ಲಿ ಒಬ್ಬ ಕ್ರಿಮಿನಲ್ ಬಂಧನಕ್ಕೆ ಒಳಗಾದರೆ ಆತನ ಮೇಲೆ ಎಷ್ಟು ಪ್ರಕರಣಗಳು ಬಾಕಿಯಿವೆ. ಯಾವ ನ್ಯಾಯಾಲಯ ವಾರಂಟ್ ಹೊರಡಿಸಿದೆ ಎಂಬುದರ ವಿವರ ಲಭ್ಯವಾಗುವುದಿಲ್ಲ. ಅದರಲ್ಲೂ ನಾನಾ ಹೆಸರಿನಲ್ಲಿ ವಂಚನೆ ಮಾಡುವ ವೈಟ್ ಕಾಲರ್ ಕ್ರಿಮಿನಲ್ ಗಳ ಅಪರಾಧ ಪ್ರಕರಣ ಸಂಗ್ರಹ ಮಾಡಿ ಇಡುವ ಸಂಸ್ಕೃತಿ ಪೊಲೀಸ್ ಇಲಾಖೆ ಇನ್ನೂ ಅಳವಡಿಸಿಕೊಂಡಿಲ್ಲ. ಹೀಗಾಗಿ ರಾಜ್ಯದಲ್ಲಿರುವ ಎಲ್ಲಾ ಕ್ರಿಮಿನಲ್‌ಗಳ ಆಧಾರ್ ಡಾಟಾವನ್ನು ಕ್ರೋಢೀಕರಣ ಮಾಡಬೇಕು. ಅವರು ಮಾಡಿರುವ ಅಪರಾಧ ಕೃತ್ಯಗಳನ್ನು ಆಧಾರ್ ಡಾಟಾ ಆಧರಿಸಿ ವಿವರ ಸಂಗ್ರಹಿಸಿಡಬೇಕು.

ಒಂದು ಎಫ್ಐಆರ್ ಆದ ಕೂಡಲೇ ಆರೋಪಿಯ ಆಧಾರ್ ಕಾರ್ಡ ಅನುಸಾರ ಅಪರಾಧ ಕೃತ್ಯಗಳ ವಿವರ ದಾಖಲಿಸಿ ದಾಖಲೆಗಳನ್ನು ನಿರ್ವಹಣೆ ಮಾಡಬೇಕು. ಆ ಮಾಹಿತಿ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಆನ್‌ಲೈನ್‌ನಲ್ಲಿ ಲಭ್ಯವಾಗುವಂತಾಗಬೇಕು. ಅಗ ಕ್ರಿಮಿನಲ್ ಗಳ ಮೇಲೆ ಹದ್ದಿನ ಕಣ್ಣಿಡಲು ಸಾಧ್ಯ. ಬೇರೆ ಬೇರೆ ಹೆಸರಿನಲ್ಲಿ ವಂಚನೆ ಮಾಡುವ ಮೋಸಗಾರರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಕೂಲವಾಗುತ್ತದೆ. ಇಲಾಖೆಯಲ್ಲಿ ನೂರಾರು ಕೋಟಿ ಕೆಲಸಕ್ಕೆ ಬಾರದ ಯೋಜನೆಗಳಿಗೆ ವ್ಯಯಿಸುತ್ತಾರೆ. ರಾಜ್ಯದಲ್ಲಿ ಅಪರಾಧ ಕೃತ್ಯಗಳನ್ನು ವರ್ಗವಾರು ಕ್ರಿಮಿನಲ್‌ಗಳ ಡಾಟಾ ಸಂಗ್ರಹ ಮಾಡಿ ಅದಕ್ಕೆ ಆಧಾರ್ ಕಾರ್ಡ್ ಜೋಡಣೆ ಮಾಡಿದ್ದೇ ಆದಲ್ಲಿ, ರಾಜ್ಯದಲ್ಲಿ ಅಪರಾಧ ಕೃತ್ಯಗಳನ್ನು ಸಂಪೂರ್ಣ ನಿಯಂತ್ರಣಕ್ಕೆ ತರಬಹುದು. ಕ್ರಿಮಿನಲ್ ಗಳು ಪ್ರಭಾವಿ ನಾಯಕರಾಗಿ ಹುಟ್ಟಿಕೊಳ್ಳುವ ಸಂಸ್ಕೃತಿಯೂ ನಿಂತು ಹೋಗುತ್ತದೆ. ಕನಿಷ್ಠ 20 ಕೋಟಿ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕ್ರಿಮಿನಲ್ ಗಳ ಡಾಟಾ ಸೆಂಟರ್ ನಿರ್ವಹಣೆ ಮಾಡಬಹುದು. ಇದರ ಬಗ್ಗೆ ಉನ್ನತ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಗೃಹ ಸಚಿವರು ಕೇಳಿದರೆ ಸಂಪೂರ್ಣ ಯೋಜನೆಯನ್ನು ವಿವರಿಸಲು ಸಿದ್ಧನಿದ್ದೇನೆ ಎಂದು ಹೆಸರು ಹೇಳಲು ಇಚ್ಚಿಸದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪೊಲೀಸ್ ಹುದ್ದೆಗಳ ಬಿಕರಿ ಹೇಗೆ ಗೊತ್ತಾ?

ಪೊಲೀಸ್ ಹುದ್ದೆಗಳ ಬಿಕರಿ ಹೇಗೆ ಗೊತ್ತಾ?

ರಾಜ್ಯದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಕಾನ್ ಸ್ಟೇಬಲ್ ಹುದ್ದೆಗಳ ನೇಮಕಾತಿಯಲ್ಲೂ ಭ್ರಷ್ಟಾಚಾರ ಅರೋಪ ಮೊದಲಿನಿಂದಲೂ ಕೇಳಿ ಬರುತ್ತಿವೆ. ಹಣ ಕೊಟ್ಟು ಪೊಲೀಸ್ ಹುದ್ದೆಗೆ ಬರುವರು ಸುಮ್ಮನೆ ಕೂರಲ್ಲ. ಹುದ್ದೆಗಾಗಿ ಕೊಟ್ಟ ಹಣ ಗಳಿಸಲು ಪೊಲೀಸ್ ಸಿಬ್ಬಂದಿ ಕೆಟ್ಟ ಹಾದಿ ಇಳಿಯಬೇಕಾಗುತ್ತದೆ. ಹೀಗಾಗಿ ವರ್ಗಾವಣೆ ದಂಧೆಗೆ ಬ್ರೇಕ್ ಆಗುವ ರೀತಿಯಲ್ಲಿ ಪೊಲೀಸ್ ಇಲಾಖೆಗೆ ನೇಮಕಾತಿ ಪ್ರಕ್ರಿಯೆಗಳು ಕೂಡ ಪಾರದರ್ಶಕವಾಗಿ ನಡೆಯಬೇಕು. ಭ್ರಷ್ಟಾಚಾರಕ್ಕೆ ಮೊದಲು ಕಡಿವಾಣ ಹಾಕಬೇಕು. ಐದು ಪೈಸೆ ವೆಚ್ಚ ಮಾಡದೇ ಇಲಾಖೆಗೆ ಸೇರುವರಿಂದಷ್ಟೇ ಸೇವೆ ನಿರೀಕ್ಷಿಸಲು ಸಾಧ್ಯ. ಇಲ್ಲದಿದ್ದರೆ ಪೊಲೀಸರು ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ. ಇತ್ತೀಚೆಗೆ ಹೊಸ ನೇಮಕಾತಿ ಆದೇಶ ಹೊರಡಸಿದ್ದು, ನೂತನ ಗೃಹ ಸಚಿವರು ಅದನ್ನು ಹತ್ತಿರದಿಂದ ನಿರ್ವಹಣೆ ಮಾಡಬೇಕು. ಭ್ರಷ್ಟಾಚಾರಕ್ಕೆ ಅವಕಾಶ ಕೊಡಬಾರದು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಇಲಾಖೆಯ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದರು.

ಸಂಚಾರ ಉಲ್ಲಂಘನೆ ದಂಡ ಕೋರ್ಟ್ ನಲ್ಲೇ ಪಾವತಿಸಬೇಕು

ಸಂಚಾರ ಉಲ್ಲಂಘನೆ ದಂಡ ಕೋರ್ಟ್ ನಲ್ಲೇ ಪಾವತಿಸಬೇಕು

ಖಾಕಿ ಗಳಿಸುತ್ತಿರುವ ಮಾನವನ್ನು ಬೀದಿಯಲ್ಲಿ ಕಳೆಯುತ್ತಿರುವುದೇ ಬಿಳಿ ಸಮವಸ್ತ್ರ ಧರಿಸುವ ಪೊಲೀಸರು. ಹಿರಿಯ ಅಧಿಕಾರಿಗಳು ದಂಡ ಸಂಗ್ರಹ ಟಾರ್ಗೆಟ್ ಫಿಕ್ಸ್ ಮಾಡುತ್ತಾರೆ. ಅದನ್ನು ವಸೂಲಿ ಮಾಡುವ ನೆಪದಲ್ಲಿ ಸಂಚಾರ ಪೊಲೀಸರು ಅರ್ಧ ಸರ್ಕಾರಕ್ಕೆ ಲೆಕ್ಕ ಕೊಟ್ಟು, ಇನ್ನು ಅರ್ಧ ಮೊತ್ತ ಜೇಬಿಗೆ ಇಳಿಸುತ್ತಾರೆ. ಹೀಗಾಗಿ ಪೊಲೀಸರ ಬಗ್ಗೆ ಸಾರ್ವಜಜನಿಕರಲ್ಲಿ ಗೌರವ ಕಡಿಮೆ ಆಗಿದೆ. ಇದನ್ನು ಮೊದಲು ತಡೆಯಬೇಕು. ಸಂಚಾರ ಪೊಲೀಸರು ದಂಡದ ರಶೀದಿ ಕೊಡಬೇಕು. ದಂಡವನ್ನು ನ್ಯಾಯಾಲಯದಲ್ಲಿ ಪಾವತಿ ಮಾಡಲು ಅವಕಾಶ ಕೊಡಬೇಕು. ಮೂರಕ್ಕೂ ಹೆಚ್ಚು ಪ್ರಕರಣ ದಾಖಲಾದ ಕೂಡಲೇ ಅಂತಹ ವಾಹನವನ್ನು ಜಪ್ತಿ ಮಾಡಬೇಕು. ಆಗ ಮಾತ್ರ ಪೊಲೀಸ್ ಇಲಾಖೆ ಮೇಲಿನ ಕೆಟ್ಟ ಹೆಸರು ಹೋಗುತ್ತದೆ.

ಸಂಚಾರ ಪೊಲೀಸರನ್ನು ನೋಡಿದರೂ ಜನ ಗೌರವದಿಂದ ನಡೆದುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಕೆಲವು ನಿಯಮಗಳಿಗೆ ತಿದ್ದುಪಡಿ ತರುವ ಅಗತ್ಯವಿದೆ. ಅವನ್ನು ತಿದ್ದುಪಡಿ ತಂದು ಗೃಹ ಇಲಾಖೆಯ ನೂತನ ಸಚಿವರು ಜನರಿಗೆ ಅಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು. ನಿಜವಾಗಿಯೂ ಅವರಿಗೆ ಪೊಲೀಸ್ ಇಲಾಖೆಯಲ್ಲಿ ಪಾರದರ್ಶಕತೆ ತರುವ ಆಸಕ್ತಿ ಇದ್ದೆ ಅವರು ಮೊದಲು ಸಂಚಾರ ಪೊಲೀಸರ ದಂಡ ವಸೂಲಿ ನೀತಿಯನ್ನು ಬದಲಿಸಬೇಕು ಎಂಬುದು ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ದಕ್ಷ ಅಧಿಕಾರಿಯ ಮನವಿ. ಹೀಗೆ ಮಾಡುವುದರಿಂದ ಅಕ್ರಮ ವಾಹನಗಳು, ಅವಧಿ ಮುಗಿದ ವಾಹನಗಳು ಸಿಕ್ಕಿ ಬೀಳುತ್ತವೆ. ಅವನ್ನು ಜಪ್ತಿ ಮಾಡಿ ಗುಜರಿಗೆ ಹಾಕಲು ಸಹಾಯವಾಗುತ್ತದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿ.

ಒನ್ ಪಾಯಿಂಟ್ ಸಲ್ಯೂಷನ್ ಸೆಂಟರ್ ಬೇಕು

ಒನ್ ಪಾಯಿಂಟ್ ಸಲ್ಯೂಷನ್ ಸೆಂಟರ್ ಬೇಕು

ಭಾರತದಲ್ಲಿ ಸೈಬರ್ ಅಪರಾಧಗಳು ಜಾಸ್ತಿಯಾಗುತ್ತಿವೆ. ಇವನ್ನು ನಿಯಂತ್ರಣ ಮಾಡಬೇಕಾದರೆ ಪೊಲೀಸ್ ಇಲಾಖೆ ಕೂಡ ಹೊಸ ತಂತ್ರಜ್ಞಾನದ ಮೊರೆ ಹೋಗದೇ ಪರ್ಯಾಯ ಮಾರ್ಗವಿಲ್ಲ. ಟ್ವಿಟ್ಟರ್, ಫೇಸ್ ಬುಕ್, ಇಮೇಲ್ , ಮತ್ತಿತರ ಸಾಮಾಜಿಕ ಜಾಲ ತಾಣಗಳ ಖಾತೆಗಳ ವಿವರಗಳನ್ನು ಪೊಲೀಸರು ಕೇಳಿದ ತಕ್ಷಣ ಮಾಹಿತಿ ಕೊಡುವ ಕೇಂದ್ರ ಇರಬೇಕು. ಇದರ ಜತೆಗೆ ಕ್ರಿಮಿನಲ್‌ಗಳ ಬ್ಯಾಂಕ್ ವಹಿವಾಟು ಸ್ಥಗಿತ, ಬ್ಯಾಂಕ್ ಖಾತೆ ಜಪ್ತಿ ಮಾಡುವ ಸಂಬಂಧ ಪ್ರತ್ಯೇಕ ವಿಭಾಗವನ್ನು ಪೊಲೀಸ್ ಇಲಾಖೆಯಲ್ಲಿ ತೆರೆಯಬೇಕು.

ಒಬ್ಬ ಅಪರಾಧಿಯ ಬ್ಯಾಂಕ್ ಖಾತೆ ಸ್ಥಗಿತಗೊಳಿಸಲು ಸೂಚಿಸಿ ಒಂದು ಪತ್ರ ಬರೆದರೆ ಅದನ್ನೇ ಪರಿಗಣಿಸಿ ಕ್ಷಣಾರ್ಧದಲ್ಲಿ ಬ್ಯಾಂಕ್ ವಹಿವಾಟು ಸ್ಥಗಿತ ಮಾಡಬೇಕು. ಇದಕ್ಕಾಗಿ ಪ್ರತ್ಯೇಕವಾಗಿ ಒಂದು ಪಾಯಿಂಟ್ ಸಲ್ಯೂಷನ್ ಸೆಂಟರ್ ತೆರೆಯಬೇಕು. ಈ ಸೆಂಟರ್ ಬ್ಯಾಂಕುಗಳು ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸಬೇಕು. ಹೀಗೆ ಮಾಡುವುದರ ಮೂಲಕ ಸೈಬರ್ ಅಪರಾಧ ಕತ್ಯಗಳನ್ನು ಹಾಗೂ ಸಾಮಾಜಿಕ ಜಾಲ ತಾಣಗಳ ಮೇಲೆ ನಿಯಂತ್ರಣ ಸಾಧಿಸಬಹುದು. ಕೋಮುಗಲಭೆ ಆನ್‌ಲೈನ್ ವಂಚನೆ ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಮಾಡಿ ಜನ ಸ್ನೇಹಿ ಪೊಲೀಸಿಂಗ್ ಮಾಡಲು ಅವಕಾಶ ಸಿಗುತ್ತದೆ.

ಪೊಲೀಸ್ ಠಾಣೆ ತನಿಖಾ ವೆಚ್ಚದ ರೋಚಕ ಸಂಗತಿ

ಪೊಲೀಸ್ ಠಾಣೆ ತನಿಖಾ ವೆಚ್ಚದ ರೋಚಕ ಸಂಗತಿ

ರಾಜ್ಯದ ಯಾವುದೇ ಠಾಣೆಯ ಪೊಲೀಸ್ ಅಧಿಕಾರಿ ಒಬ್ಬ ಅಪರಾಧಿಯನ್ನು ಪತ್ತೆ ಮಾಡಬೇಕಾದರೆ ಅದಕ್ಕೆ ತಗಲುವ ವೆಚ್ಚವನ್ನು ತನಿಖಾ ವೆಚ್ಚದ ರೂಪದಲ್ಲಿ ಇಲಾಖೆ ನೀಡುತ್ತದೆ. ಆದರೆ, ಈಗಿರುವ ಪದ್ಧತಿ ಪ್ರಕಾರ, ಎ ಅಧಿಕಾರಿ ಪಂಜಾಬ್‌ಗೆ ಹೋಗಿ ಅಲ್ಲಿ ವಾಸ್ತವ್ಯ ಹೂಡಿದರೆ, ಲಾಡ್ಜ್ ನ ಮಾಲೀಕರ ಜಿಎಸ್‌ಟಿ ಅಧಾರಿತ ಬಿಲ್‌ನ್ನು ಇಲಾಖೆಗೆ ನೀಡಬೇಕು. ಇಲಾಖೆ ತನಿಖಾ ವೆಚ್ಚವನ್ನು ಮಂಜೂರು ಮಾಡಿ ಲಾಡ್ಜ್ ಮಾಲೀಕನ ಬ್ಯಾಂಕ್ ಖಾತೆಗೆ ಪಾವತಿಸುತ್ತದೆ. ಈಗಿನ ಈ ಪರಿಸ್ಥಿತಿ ಇದು. ಪೊಲೀಸರೆಂದರೆ ಹೊರ ರಾಜ್ಯದಲ್ಲಿ ಯಾರು ನಮಗೆ ಸಾಲ ಕೊಟ್ಟು ಲಾಡ್ಜ್ ಊಟ ಕೊಡ್ತಾರೆ ? ಹೀಗಾಗಿ ತನಿಖಾ ವೆಚ್ಚ ಪಡೆಯುವ ಗೋಜಿಗೆ ಹೋಗುವುದಿಲ್ಲ.

ಗೃಹ ಇಲಾಖೆ ಪೊಲೀಸ್ ಠಾಣೆಗಳ ತನಿಖಾ ವೆಚ್ಚಕ್ಕಾಗಿ 20 ಕೋಟಿ ರೂ. ವಾರ್ಷಿಕ ಬಿಡುಗಡೆ ಮಾಡುತ್ತದೆ. ವರ್ಷದ ಕೊನೆಯಲ್ಲಿ ಯಾವ್ಯಾವುದೋ ಲೆಕ್ಕ ತೋರಿಸುತ್ತಾರೆ. ವಾಸ್ತವದಲ್ಲಿ ತನಿಖಾ ವೆಚ್ಚವನ್ನು ಪೊಲೀಸ್ ಠಾಣೆಗಳಿಗೆ ನೀಡುವ ವಿಧಾನದಲ್ಲಿ ದೊಡ್ಡ ಸಮಸ್ಯೆಯಿದೆ. ಅಜಯ್ ಕುಮಾರ್ ಸಿಂಗ್ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿದ್ದಾಗ ಪೊಲೀಸ್ ಅಧಿಕಾರಿಗಳ ಭ್ರಷ್ಟಾಚಾರ ಕಡಿವಾಣ ಹಾಕಲೆಂದೇ ತನಿಖಾ ವೆಚ್ಚವನ್ನು ಮಂಜೂರು ಮಾಡಿದ್ದರು. ಒಬ್ಬ ಪ್ರಾಮಾಣಿಕ ಅಧಿಕಾರಿ ತನಿಖಾ ವೆಚ್ಚ ಪಡೆಯಬೇಕಾದರೆ ಇಲಾಖೆ ವಿಧಿಸಿರುವ ಷರತ್ತುಗಳನ್ನು ಪಾಲಿಸಲು ಸಾಧ್ಯವಿಲ್ಲ.

ಪೊಲೀಸ್ ಠಾಣೆಗಳ ಭ್ರಷ್ಟಾಚಾರ ನಿಯಂತ್ರಣ ಮಾಡಬೇಕಾದರೆ, ತನಿಖಾ ವೆಚ್ಚ ಅತ್ಯಗತ್ಯ. ಆದರೆ, ಅದನ್ನು ಕೊಡುವ ವಿಧಾನ ಬದಲಿಸಬೇಕು. ಠಾಣೆವಾರು ನೀಡುವ ತನಿಖಾ ವೆಚ್ಚದ ವಿವರಗಳನ್ನು ಮಾಸಿಕ ಕೇಳಿ ಪಡೆಯುವಂತಾಗಬೇಕು. ಸಲ್ಲಿಸುವ ಬಿಲ್‌ಗಳಲ್ಲಿ ಅನುಮಾನವಿದ್ದರೆ ಅವನ್ನು ಪರಿಶೀಲಿಸುವಂತಾಗಬೇಕು. ಬಳ್ಳಾರಿ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಪೊಲೀಸ್ ಠಾಣೆಗಳಿಗೆ ತನಿಖಾ ವೆಚ್ಚ ಬಿಡುಗಡೆ ಮಾಡಿಯೇ ಇಲ್ಲ. ಹೀಗಾಗಿ ಅನಿವಾರ್ಯವಾಗಿ ಪ್ರಾಮಾಣಿಕ ಅಧಿಕಾರಿಗಳು ಕೂಡ ಭ್ರಷ್ಟಾಚಾರ ಮಾಡುವಂತಹ ಸ್ಥಿತಿ ಇಲಾಖೆಯಲ್ಲಿ ನಿರ್ಮಾಣವಾಗಿದೆ. ಇದಕ್ಕೆ ಕೂಡ ತ್ವರಿತವಾಗಿ ತಿಲಾಂಜಲಿ ನೀಡಬೇಕಿದೆ.

Recommended Video

ದರ್ಶನ್ ಜೊತೆಗೆ ತಿರುಪತಿಯಲ್ಲಿ ಕಾಣಿಸಿಕೊಂಡ ಅಂಬಿ ಕುಟುಂಬ | Oneindia Kannada
ಪೊಲೀಸ್ ಇಲಾಖೆಯಲ್ಲಿ ಹೇಳಿಕೊಳ್ಳಲಾಗದ ಕಷ್ಟಗಳು

ಪೊಲೀಸ್ ಇಲಾಖೆಯಲ್ಲಿ ಹೇಳಿಕೊಳ್ಳಲಾಗದ ಕಷ್ಟಗಳು

ಪೊಲೀಸ್ ಇಲಾಖೆ ಸಮಸ್ಯೆಗಳು ಹೇಳುತ್ತಾ ಹೋದರೆ ಅದರ ದೊಡ್ಡ ಪಟ್ಟಿ ಬೆಳೆದು ನಿಲ್ಲುತ್ತದೆ. ರಾಜ್ಯದಲ್ಲಿ ಹೊರ ರಾಜ್ಯದ ಐಪಿಎಸ್ ಅಧಿಕಾರಿಗಳ ಲಾಬಿಯೇ ದೊಡ್ಡದಿದೆ. ಕನ್ನಡಿಗ ಐಪಿಎಸ್ ಅಧಿಕಾರಿಗಳಿಗೆ ಆದ್ಯತೆ ನೀಡುವುದಿಲ್ಲ ಎಂಬ ಅಪವಾದಗಳಿವೆ. ರಾಜ್ಯ ಪೊಲೀಸ್ ಸೇವೆಯಿಂದ ಆಯ್ಕೆಯಾಗಿರುವ ಪೊಲೀಸ್ ಅಧಿಕಾರಿಗಳಿಗೆ ಕಾಲಕ್ಕೆ ತಕ್ಕಂತೆ ಬಡ್ತಿ, ಐಪಿಎಸ್ ಸೇವೆ ಪಡೆಯುವುದು ಕಷ್ಟವಾಗಿದೆ. ಇನ್ನು ಕೆಲವು ಜಾತಿ ಆಧಾರಿತ ವರ್ಗಾವಣೆ ಮಾಡಿಕೊಂಡು ಆಯಕಟ್ಟಿನ ಜಾಗದಲ್ಲಿ ಅನೇಕ ಅಧಿಕಾರಿಗಳು ಕೂತಿದ್ದು, ಅದರ ಬಗ್ಗೆ ನೂತನ ಗೃಹ ಸಚಿವರು ಕೂಲಂಕುಶವಾಗಿ ಅಧ್ಯಯನ ಮಾಡಿ ಎತ್ತಂಗಡಿ ಮಾಡಬೇಕಾಗಿದೆ. ಮೂಲೆಗುಂಪಾಗಿರುವ ದಕ್ಷ ಪೊಲೀಸ್ ಅಧಿಕಾರಿಗಳನ್ನು ಪತ್ತೆ ಮಾಡಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಇರುವ ಕಡೆ ವರ್ಗಾವಣೆ ಮಾಡಬೇಕಿದೆ.

ಹೌಸಿಂಗ್ ಕಾರ್ಪೋರೇಷನ್, ಭ್ರಷ್ಟಾಚಾರ ನಿಗ್ರಹ ದಳ, ಪೊಲೀಸ್ ಇಲಾಖೆ ವ್ಯಾಪ್ತಿಗೆ ಒಳಪಡುವ ತನಿಖಾ ಸಂಸ್ಥೆಗಳನ್ನು ಬಲಪಡಿಸಬೇಕಿದೆ. ನೂತನ ತಂತ್ರಜ್ಞಾನ ಆಧರಿಸಿ ಪೊಲೀಸ್ ಠಾಣೆಗಳನ್ನು ಜನ ಸ್ನೇಹಿ ಠಾಣೆಗಳನ್ನಾಗಿ ಮಾರ್ಪಡಿಸುವ ಸಾಕಷ್ಟು ಕೆಲಸಗಳು ಪೊಲೀಸ್ ಇಲಾಖೆಯಲ್ಲಿ ವರ್ಷಗಳಿಂದಲೂ ಬಾಕಿ ಇವೆ. ಹಂತ ಹಂತವಾಗಿ ಪೊಲೀಸ್ ವ್ಯವಸ್ಥೆಯನ್ನು ಸರಿ ಪಡಿಸುವ ನಿಟ್ಟಿನಲ್ಲಿ ಯಾವ ಲಾಬಿಗೂ ಮಣಿಯದೇ ನೂತನ ಗೃಹ ಮಂತ್ರಿ ಆರಗ ಜ್ಞಾನೇಂದ್ರ ದಿಟ್ಟ ಹೆಜ್ಜೆ ಇಡುತ್ತಾರಾ ಕಾದು ನೋಡಬೇಕಿದೆ. ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಗೃಹ ಮಂತ್ರಿಗಳಾಗಿದ್ದ ವೇಳೆ ತಿಂಗಳಿಗೊಂದು ವರ್ಗಾವಣೆ ಪಟ್ಟಿ ಬೀಳುತ್ತಿತ್ತು. ಆ ಸಂಸ್ಕೃತಿಗೆ ಬ್ರೇಕ್ ಬೀಳುತ್ತಾ?

English summary
Will the New Home Minister Araga Jnanendra Solves the Problems That Haunt the Police Department? especially the transfer of police officials and other corruption in the dept. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X