keyboard_backspace

ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ಉದ್ದೇಶ, ಶಿಕ್ಷೆ ಪ್ರಮಾಣ ಮುಖ್ಯಾಂಶಗಳು

Google Oneindia Kannada News

ಮತಾಂತರ ನಿಷೇಧ ಕಾಯ್ದೆ ಎಂದೇ ಜನಜನಿತವಾಗಿರುವ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ಅನ್ನು ಗುರುವಾರ(ಸೆ.15,2022)ದಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಪರಿಷತ್ತಿನಲ್ಲಿ ಮಂಡನೆಯನ್ನು ಮಾಡಿದರು. ಧ್ವನಿಮತದ ಮೂಲಕ ವಿಧೇಯಕಕ್ಕೆ ಅಂಗೀಕಾರ ಸಿಕ್ಕಿದೆ.

ಮೇ 12, 2022 ರಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಸಮ್ಮತಿಸಲು ಅನುಮೋದನೆ ನೀಡಿತ್ತು. ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಮೂಲಕ ಅಂಗೀಕಾರವಾಗಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತಾಂತರ ನಿಷೇಧ ಕಾಯ್ದೆಗೆ ಅನುಮೋದನೆಯನ್ನು ನೀಡಿದ್ದರು. ಆದರೂ ಸದನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಮಂಡಿಸಿ ಅಂಗೀಕಾರ ಪಡೆಯಲು ಸರ್ಕಾರ ತೀರ್ಮಾನಿಸಿತ್ತು.

Karnataka Assembly Session 2022 live; ಅಧಿವೇಶನದ ಮುಖ್ಯಾಂಶಗಳುKarnataka Assembly Session 2022 live; ಅಧಿವೇಶನದ ಮುಖ್ಯಾಂಶಗಳು

ವಿಧಾನಸಭೆಯಲ್ಲಿ ಅಂಗೀಕಾರ, ಗೊಂದಲ:
ಬೆಳಗಾವಿಯ ಚಳಿಗಾಲದ ವಿಧಾನಸಭೆ ಅಧಿವೇಶನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ಅನ್ನು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿದ್ದರು. ಮತಾಂತರದ ಮೇಲೆ ನಿಷೇಧ ಹೇರುವ ಕಾಯಿದೆ ಬಗ್ಗೆ ಚರ್ಚೆಗೆ ವಿಪಕ್ಷಗಳು ಆಗ್ರಹಿಸಿ, ಬಿರುಸಿನ ಚರ್ಚೆ ನಿರೀಕ್ಷೆಯಿತ್ತು.

ಮಸೂದೆ ಮಂಡನೆ ಮಾಡುವ ವೇಳೆ ಗೌಪ್ಯತೆ ಕಾಯ್ದುಕೊಂಡಿದ್ದು, ವಿಧೇಯಕದ ಪ್ರತಿಯನ್ನು ನೀಡದೆ ತರಾತುರಿಯಲ್ಲಿ ವಿಧೇಯಕ ಮಂಡನೆ ಮಾಡಿದ್ದನ್ನು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧಿಸಿ, ಇದು ಸಂವಿಧಾನದ 21ನೇ ವಿಧಿಗೆ ಮಸೂದೆ ವಿರುದ್ಧವಾಗಿದೆ ಎಂದಿದ್ದರು. ನಂತರ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ವಿಧೇಯಕದ ಪ್ರತಿ ಹರಿದು ಹಾಕಿದ್ದು, ಕಾಂಗ್ರೆಸ್ ಸದಸ್ಯರು ಸದನದಿಂದ ಹೊರ ನಡೆದಿದ್ದು, ಸಭಾತ್ಯಾಗ, ಪ್ರತಿಭಟನೆ ನೆನಪಿರಬಹುದು. ಅಂತೂ ಆರೆಸ್ಸೆಸ್ ಅಣತಿಯಂತೆ ಬಿಜೆಪಿ ಸರ್ಕಾರ ಈ ವಿಧೇಯಕಕ್ಕೆ ಮೇಲ್ಮನೆಯಲ್ಲೂ ಅಂಗೀಕಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಂರಕ್ಷಣೆ ಕಾಯಿದೆಯ ರೂಪು ರೇಷೆಗಳು, ಉದ್ದೇಶ, ತಿದ್ದುಪಡಿ ವಿವರಗಳು ಮುಂದಿದೆ...

ಕಾಯಿದೆಯ ಉದ್ದೇಶ

ಕಾಯಿದೆಯ ಉದ್ದೇಶ

ಉದ್ದೇಶ: ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣೆಗಾಗಿ ಮತ್ತು ತಪ್ಪು ನಿರೂಪಣೆ, ಅನುಚಿತ ಪ್ರಭಾವ, ಒತ್ತಾಯ, ಆಮಿಷದ ಮೂಲಕ ಅಥವಾ ಯಾವುದೇ ವಂಚನೆಯ ವಿಧಾನಗಳ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಕಾನೂನು ಬಾಹಿರ ಮತಾಂತರ ಮಾಡುವುದನ್ನು ನಿಷೇಧಿಸುವುದಕ್ಕೆ ಉಪಬಂಧ ಕಲ್ಪಿಸಲು ಈ ವಿಧೇಯಕ ಜಾರಿಗೆ ತರಲಾಗುತ್ತಿದೆ.

* ಬಲವಂತ, ವಂಚನೆ, ಒತ್ತಾಯ ಹಾಗೂ ಆಮಿಷದ ಮೂಲಕ ಹಾಗೂ ಮದುವೆಯ ಭರವಸೆ ಮೂಲಕ ನಡೆಸುವ ಮತಾಂತರಕ್ಕೆ ನಿಷೇಧ.

* ನಗದು ರೂಪದಲ್ಲಾಗಲೀ ಅಥವಾ ವಸ್ತುವಿನ ರೂಪದಲ್ಲಾಗಲೀ ನೀಡುವ ಯಾವುದೇ ಉಡುಗೊರೆ, ಪ್ರತಿಫಲ, ಸುಲಭ ಹಣ ಅಥವಾ ಭೌತಿಕ ಪ್ರಯೋಜನ ಪಡೆಯುವುದು ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ವಿರುದ್ಧವಾಗಿದೆ.
* ಯಾವುದೇ ಧಾರ್ಮಿಕ ಸಂಸ್ಥೆಯು ನಡೆಸುವ ಶಾಲೆ ಅಥವಾ ಕಾಲೇಜಿನಲ್ಲಿ ಉದ್ಯೋಗ, ಉಚಿತ ಶಿಕ್ಷಣ, ಮದುವೆಯಾಗುವುದಾಗಿ ವಾಗ್ದಾನ, ಉತ್ತಮ ಜೀವನ ಶೈಲಿ, ದೈವಿಕ ಅಸಂತೋಷ ಅಥವಾ ಒಂದು ಧರ್ಮವನ್ನು ಇನ್ನೊಂದು ಧರ್ಮಕ್ಕೆ ವಿರುದ್ಧವಾಗಿ ವೈಭವೀಕರಿಸುವುದು ಮತಾಂತರದ ಭಾಗವಾಗಿರುತ್ತದೆ.
* ತಪ್ಪು ನಿರೂಪಣೆ, ಬಲವಂತ, ವಂಚನೆ, ಅನುಚಿತ ಪ್ರಭಾವ, ಒತ್ತಾಯ, ಆಮಿಷ ಒಡ್ಡುವ ಮೂಲಕ ಅಥವಾ ಮದುವೆಯ ವಾಗ್ದಾನದ ಮೂಲಕ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮಾಡುವ ಮತಾಂತರದ ನಿಷೇಧ.

ಕಾನೂನು ಬಾಹಿರ ಮತಾಂತರ

ಕಾನೂನು ಬಾಹಿರ ಮತಾಂತರ

* ಕಾನೂನು ಬಾಹಿರ ಮತಾಂತರ ಅಥವಾ ವಿಪರ್ಯಯದ ಏಕ ಮಾತ್ರ ಉದ್ದೇಶಕ್ಕಾಗಿ ಮಾಡಿದ ಮದುವೆಯನ್ನು ಅಸಿಂಧುವೆಂದು ಘೋಷಿಸುವುದು.
* ಮತಾಂತರ ಆಗಲು ಬಯಸುವ ವ್ಯಕ್ತಿ 60 ದಿನಗಳ ಮೊದಲು ಫಾರ್ಮ್ 1 ಅನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ ಬಳಿ ಮಾಹಿತಿ ನೀಡತಕ್ಕದ್ದು.

* ಮತಾಂತರ ಮಾಡಿಸುವ ವ್ಯಕ್ತಿಯೂ ಕೂಡ ಒಂದು ತಿಂಗಳ ಮೊದಲು ಈಗಾಗಲೇ ಫಾರ್ಮ್ 2 ಅನ್ನು ಭರ್ತಿಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು.

* ಮತಾಂತರವಾದ ಒಂದು ತಿಂಗಳ ಬಳಿಕ ಡಿಕ್ಲೆರೇಷನ್ ಫಾರ್ಮ್ ಅಥವಾ ಘೋಷಣಾಪತ್ರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಭರ್ತಿ ಮಾಡಿ ನೀಡಬೇಕು.
* ಡಿಕ್ಲರೇಷನ್ ಮಾಡಿದ 21 ದಿನಗಳ ಬಳಿಕ ಮತಾಂತರ ಹೊಂದಿದ ವ್ಯಕ್ತಿ ಖುದ್ದು ಹಾಜರಾಗಿ ಗುರುತು ನೀಡಬೇಕು.
* ಈ ವೇಳೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತಾಂತರೊತ್ತರ ಘಟನೆಯ ಸಂಪೂರ್ಣ ಘಟನೆಯನ್ನು ದಾಖಲಿಸತಕ್ಕದ್ದು.
* ತಕರಾರುಗಳಿದ್ದಲ್ಲಿ ತಕರಾರು ಎತ್ತಿದ ವ್ಯಕ್ತಿ ಹಾಗೂ ತಕರಾರಿನ ಸ್ವರೂಪವನ್ನು ದಾಖಲಿಸಬೇಕು.
* ಮತಾಂತರ ಹೊಂದಿದವರಿಗೆ ಜಿಲ್ಲಾ ದಂಡಾಧಿಕಾರಿಗಳು ದೃಢೀಕರಿಸಿದ ಪ್ರತಿಗಳನ್ನು ನೀಡಬೇಕು.
* ತಕರಾರುಗಳಿದ್ದ ಪಕ್ಷದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಬಂಧ ಪಟ್ಟ ಇಲಾಖೆಗಳಾದ ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸೇರಿದಂತೆ ಇತರ ಸಂಬಂಧ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಬೇಕು.

ಶಿಕ್ಷೆ ಪ್ರಮಾಣವೇನು?

ಶಿಕ್ಷೆ ಪ್ರಮಾಣವೇನು?

* ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಸೇರಿದವರು, ಅಪ್ರಾಪ್ತರು, ಮಹಿಳೆಯರು, ಬುದ್ಧಿಮಾಂದ್ಯರನ್ನು ಮತಾಂತರ ಮಾಡಿದರೆ ಅಂತಹವರಿಗೆ ಕನಿಷ್ಠ 3ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ, ₹ 50,000 ದಂಡ.

* ಇತರೆ ವರ್ಗದವರನ್ನು ಮತಾಂತರ ಮಾಡಿದರೆ ಕನಿಷ್ಠ 3ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹ 25,000 ದಂಡ.

* ಸಾಮೂಹಿಕ ಮತಾಂತರ ಮಾಡಿದ ವ್ಯಕ್ತಿಗೆ 3ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹ 1 ಲಕ್ಷ ದಂಡ.

* ಮತಾಂತರಗೊಂಡ ವ್ಯಕ್ತಿ ತನ್ನ ಹಿಂದಿನ ಧರ್ಮಕ್ಕೆ ಮರು ಮತಾಂತರಗೊಂಡರೆ ಅದನ್ನು ಮತಾಂತರವೆಂದು ಪರಗಣಿಸುವುದಿಲ್ಲ.

* ಸಾಮೂಹಿಕ ಮತಾಂತರ ಮಾಡಿದ ವ್ಯಕ್ತಿಗೆ 3ರಿಂದ 10 ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಜೈಲುಶಿಕ್ಷೆಯಿಂದ, ಇವೆರಡರಲ್ಲಿ ಯಾವುದಾದರ ಒಂದು ಬಗೆಯ ಕಾರಾವಾಸದಿಂದ ದಂಡಿತರಾಗುವರು, ಹಾಗೂ ಅಂತಹವರಿಗೆ ₹ 1 ಲಕ್ಷ ಜುಲ್ಮಾನೆ.

* ಮತಾಂತರಕ್ಕೆ ಬಲಿಯಾದವರಿಗೆ ಆಪಾದಿತನಿಂದ ಸಂದಾಯವಾಗುವಂತೆ ಗರಿಷ್ಠ 5 ಲಕ್ಷ ರೂಪಾಯಿಯವರೆಗೆ ವಿಸ್ತರಿಸಬಹುದಾದ ಯುಕ್ತ ಪರಿಹಾರವನ್ನು ನ್ಯಾಯಾಲಯ ಮಂಜೂರು ಮಾಡತಕ್ಕದ್ದು ಅದು ಜುಲ್ಮಾನೆಗೆ ಹೆಚ್ಚುವರಿಯಾಗಿರತಕ್ಕದ್ದು.

* ಅಪರಾಧ ಪುನರಾವರ್ತನೆಯಾದರೆ ಐದು ವರ್ಷ ಸೆರೆವಾಸ ಹಾಗೂ ಎರಡು ಲಕ್ಷ ದಂಡ ವಸೂಲಿ.

* ಕಾನೂನು ಬಾಹಿರ ಮತಾಂತರ ಅಥವಾ ವಿಪರ್ಯಯದ ಏಕ ಮಾತ್ರ ಉದ್ದೇಶಕ್ಕಾಗಿ ನಡೆದ ವಿವಾಹ ಅಸಿಂಧುವಾಗಲಿದೆ.

* ಮತಾಂತರಗೊಂಡ ವ್ಯಕ್ತಿಯ ಪೋಷಕರು ಒಡಹುಟ್ಟಿದವರು, ಸಹವರ್ತಿಗಳು ಹಾಗೂ ಸಹೋದ್ಯೋಗಿಗಳು ವ್ಯಕ್ತಿ ಮತಾಂತರಗೊಂಡ ಬಗ್ಗೆ ದೂರು ನೀಡಿದರೆ ಎಫ್‌ಐಆರ್‌ ದಾಖಲಿಸಲು ಅವಕಾಶ.

* ಜಾಮೀನು ರಹಿತ, ಸಂಜ್ಞೇಯ ಅಪರಾಧವಾಗಲಿರುವ ಮತಾಂತರ.

ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ವಿವರ ನೀಡಬೇಕು

ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ವಿವರ ನೀಡಬೇಕು

ಯಾವುದೇ ವ್ಯಕ್ತಿ ಧರ್ಮ ಬದಲಿಸುವುದಾದರೆ ಜಿಲ್ಲಾಧಿಕಾರಿಗಳಿಗೆ 30 ದಿನ ಮೊದಲು ನಮೂನೆ 1ರಲ್ಲಿ ಹಾಗೂ ಮತಾಂತರ ಮಾಡುವ ವ್ಯಕ್ತಿ ನಮೂನೆ 2ರಲ್ಲಿ ಅರ್ಜಿ ಸಲ್ಲಿಸಬೇಕು. 30 ದಿನಗಳ ಒಳಗಾಗಿ ಇದಕ್ಕೆ ಆಕ್ಷೇಪಣೆ ಬಂದರೆ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆ ಮೂಲಕ ವಿಚಾರಣೆ ನಡೆಸಬೇಕು. ವಿಚಾರಣೆ ವೇಳೆ ತಪ್ಪು ನಡೆದಿದ್ದರೆ ಕ್ರಿಮಿನಲ್‌ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪೊಲೀಸ್‌ ಇಲಾಖೆಗೆ ಸೂಚಿಸಲು ಅವಕಾಶವಿದೆ.

ಮತಾಂತರಗೊಂಡ ವ್ಯಕ್ತಿ ಮತಾಂತರ ದಿನದಿಂದ ಹಿಡಿದು ಮೂಲ ಧರ್ಮ ಮತಾಂತರಗೊಂಡ ಧರ್ಮ ಇತ್ಯಾದಿ ವಿವರಗಳನ್ನು ಜಿಲ್ಲಾಧಿಕಾರಿಗೆ ನೀಡಬೇಕು. ಮತಾಂತರಗೊಂಡ ವ್ಯಕ್ತಿ ತನ್ನ ಗುರುತು ಸ್ಥಾಪಿಸಲು ಮತ್ತು ಘೋಷಣೆಯ ಅಂಶ ಸ್ವೀಕರಿಸಲು ಘೋಷಣೆ ಕಳಿಸಿರುವ/ಸಲ್ಲಿಸಿದ ದಿನದಿಂದ ಇಪ್ಪತ್ತು ದಿನಗಳ ಒಳಗಾಗಿ ಜಿಲ್ಲಾ ದಂಡಾಧಿಕಾರಿ ಎದುರು ಹಾಜರಾಗಬೇಕು.

ಬಲವಂತದ ಮತಾಂತರ ನಡೆದಿಲ್ಲ ಎಂಬುದನ್ನು ಸಾಬೀತು ಮಾಡುವ ಹೊಣೆ ಮತಾಂತರ ಮಾಡುವ ಮತ್ತು ಮತಾಂತರಕ್ಕೆ ನೆರವು ನೀಡಿದ ವ್ಯಕ್ತಿಗೆ ಸೇರಿದ್ದು.

ಅಪರಾಧಕ್ಕೆ ನೆರವು ಹಾಗೂ ದುಷ್ಪ್ರೇರಣೆ ನೀಡಿ ವ್ಯಕ್ತಿಯನ್ನು ಆರೋಪಿಯನ್ನಾಗಿ ಪರಿಗಣಿಸುವ ಅವಕಾಶವೂ ಇದರ ಅಡಿ ದೊರೆಯಲಿದೆ.

ರಾಜ್ಯ ಸರ್ಕಾರವು ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚನೆ ಮೂಲಕ ನಮೂನೆಗಳಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ನಮೂದುಗಳನ್ನು ಸೇರಿಸಬಹುದು, ವ್ಯತ್ಯಾಸಗೊಳಿಸಬಹುದು ಅಥವಾ ಬಿಟ್ಟುಬಿಡಬಹುದು.

ಏನೆಲ್ಲಾ ಅಪರಾಧಗಳಾಗುತ್ತವೆ

ಏನೆಲ್ಲಾ ಅಪರಾಧಗಳಾಗುತ್ತವೆ

* ನಿಯಮ ಬಾಹಿರವಾಗಿ ಮತಾಂತರ ಮಾಡಿದ್ದು ಸಾಬೀತಾದರೆ 3 ರಿಂದ 5 ವರ್ಷ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು.
* ವಯಸ್ಕರಲ್ಲದವರನ್ನು, ಮಹಿಳೆಯನ್ನು ಹಾಗೂ ಪರಿಶಿಷ್ಟ ವರ್ಗ ಅಥವಾ ಪಂಗಡದವರನ್ನು ನಿಯಮಬಾಹಿರವಾಗಿ ಮತಾಂತರ ಮಾಡಿದರೆ 3ರಿಂದ 10 ವರ್ಷಗಳವರೆಗೆ ಶಿಕ್ಷೆ ಹಾಗೂ 35 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.
* ಅಪ್ರಾಪ್ತರು, ಬುದ್ದಿಮಾಂದ್ಯ ವ್ಯಕ್ತಿಗಳು, ಸೇರಿದ ವ್ಯಕ್ತಿಯ ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಹತ್ತು ವರ್ಷಗಳ ವರೆಗೆ ಜೈಲು ಶಿಕ್ಷೆಗೆ ಕಾಯ್ದೆಯಲ್ಲಿ ಅವಕಾಶವಿದೆ. ಅಷ್ಟೇ ಅಲ್ಲದೆ 50 ಸಾವಿರ ರೂ. ದಂಡ ವಸೂಲಿಗೂ ಅವಕಾಶವಿದೆ.
* ಮತಾಂತರಕ್ಕೆ ಬಲಿಯಾದವರಿಗೆ ಆಪಾದಿತನಿಂದ ಸಂದಾಯವಾಗುವಂತೆ ಗರಿಷ್ಠ ಐದು ಲಕ್ಷ ರೂಪಾಯಿ ಪರಿಹಾರ ಕೊಡಿಸಲು ಅವಕಾಶ ಕಲ್ಪಿಸಲಾಗಿದೆ.
* ಅಪರಾಧ ಪುನರಾವರ್ತನೆ ಆದಲ್ಲಿ ಐದು ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ದಂಡ ವಸೂಲಿಗೂ ಅವಕಾಶವಿದೆ.

English summary
Anti Conversion Bill 2021: Here are the Highlights of the Karnataka Protection of Right to Freedom of Religion Bill, 2021 tabled and passed today(Sep 15) at legislative council.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X