ಭರಮಸಾಗರ-ಚಿತ್ರದುರ್ಗ ರೈಲ್ವೇ ಕಾಮಗಾರಿ ಆರಂಭ ಯಾವಾಗ?-ಇಲ್ಲಿದೆ ಮಹತ್ವದ ಅಪ್ಡೇಟ್
ಚಿತ್ರದುರ್ಗ, ಜುಲೈ, 12: ಚಿತ್ರದುರ್ಗ ಭರಮಸಾಗರ-ಚಿತ್ರದುರ್ಗ ನಡುವೆ ರೈಲ್ವೆ ಭೂಸ್ವಾದೀನ ಪ್ರಕ್ರಿಯೆ ಎಷ್ಟು ಮುಗಿದಿದೆ? ಕಾಮಗಾರಿ ಯಾವಗಾಗಿನಿಂದ ಆರಂಭವಾಗಲಿದೆ ಹಾಗೂ ಇದಕ್ಕೆ ತಗಲುವ ವೆಚ್ಚ ಸೇರಿದಂತೆ ಇನ್ನಿತರ ವಿವರವನ್ನು ಇಲ್ಲಿ ನೀಡಕಾಗಿದೆ ಗಮನಿಸಿ.
ಚಿತ್ರದುರ್ಗ ಭರಮಸಾಗರ-ಚಿತ್ರದುರ್ಗ ಮಧ್ಯದ 29 ಕಿಲೋ ಮೀಟರ್ ಉದ್ದದ ರೈಲ್ವೇ ಭೂಸ್ವಾಧೀನ ಪ್ರಕ್ರಿಯೆ ಶೇಕಡ 90ರಷ್ಟು ಮುಕ್ತಾಯಗೊಂಡಿದ್ದು, ಭೂಮಿ ಹಸ್ತಾಂತರ ಮಾಡಲಾಗಿದೆ. ಕಾಮಗಾರಿಯ ಟೆಂಡೆರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರವೇ ರಾಜ್ಯದವರೇ ಆದ ರೈಲ್ವೇ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಂದ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸಂಸದ ಗೋವಿಂದ ಎಂ ಕಾರಜೋಳ ರೈಲ್ವೇ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈಲ್ವೇ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೇ ಯೋಜನೆ ಜಿಲ್ಲೆ ಅಗತ್ಯವಾಗಿದೆ. ಯೋಜನೆಗೆ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಒಟ್ಟು 1,210 ಹೆಕ್ಟೇರ್ ಭೂಮಿ ಅವಶ್ಯಕವಾಗಿದೆ. ಇದರಲ್ಲಿ 1,053 ಹೆಕ್ಟೇರ್ ಭೂಮಿ ಸ್ವಾಧೀನ ಪಡಿಸಿಕೊಂಡು ರೈಲ್ವೇ ಇಲಾಖೆಗೆ ನೀಡಲಾಗಿದೆ.
ಬಾಕಿ ಇರುವ 145 ಹೆಕ್ಟೇರ್ ಭೂ ಸ್ವಾಧೀನ ಪ್ರಕ್ರಿಯ ಅಂತಿಮ ಹಂತದಲ್ಲಿದೆ. ಯೋಜನೆ ವಿಳಂಭ ಆಗದಂತೆ ರೈಲ್ವೇ ಕಾಮಗಾರಿಗೆ ಅಗತ್ಯ ಇರುವ ಭೂ ಸ್ವಾಧೀನ ಹಾಗೂ ರೈಲ್ವೇ ಇಲಾಖೆಗೆ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಮಾಡುವಂತೆ ಸಂಸದ ಗೋವಿಂದ ಎಂ ಕಾರಜೋಳ ಭೂಸ್ವಾಧೀನಾಧಿಕಾರಿಗಳಿಗೆ ಸೂಚಿಸಿದರು.
ಇನ್ನು ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಗಳು ಇದ್ದಾಗ ಆಲಮಟ್ಟಿ-ಕೊಪ್ಪಳ-ಚಿತ್ರದುರ್ಗ ರೈಲು ಮಾರ್ಗ ಯೋಜನೆಯ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. 50:50 ಮಾದರಿಯಲ್ಲಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡುವುದರೊಂದಿಗೆ, ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ಭೂಮಿ ಹಸ್ತಾಂತರ ಮಾಡುವುದಾಗಿ ಪ್ರಸ್ತಾವನೆಯಲ್ಲಿ ತಿಳಿಸಲಾಗಿತ್ತು.
ಈ ಯೋಜನೆಗೆ ಮರುಜೀವ ನೀಡುವ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಮತ್ತೊಮ್ಮೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಚಿತ್ರದುರ್ಗ ಜಿಲ್ಲಾಧಿಕಾರಿಗಳು ಬಾಗಲಕೋಟೆ ಹಾಗೂ ಬಿಜಾಪುರ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಈ ಹಿಂದೆ ಸಲ್ಲಿಸಿದ್ದ ಯೋಜನೆ ಪ್ರಸ್ತಾವನೆ ಪ್ರತಿ ಪಡೆದುಕೊಳ್ಳುವಂತೆ ನಿರ್ದೇಶನ ನೀಡಿದ್ದೇನೆ ಎಂದು ಸಂಸದ ಗೋವಿಂದ ಎಂ ಕಾರಜೋಳ ತಿಳಿಸಿದರು.
ಚಿತ್ರದುರ್ಗ-ಚಳ್ಳಕೆರೆ-ಪಾವಗಡ ರಸ್ತೆ ಮೇಲ್ದರ್ಜೆಗೆ: ಚಿತ್ರದುರ್ಗ-ಚಳ್ಳಕೆರೆ-ಪಾವಗಡ ಮಧ್ಯದ 120 ಕಿಲೋ ಮೀಟರ್ ಉದ್ದದ ರಸ್ತೆಯನ್ನು ರಾಷ್ಟೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ರಸ್ತೆ ಅಭಿವೃದ್ದಿಯಿಂದ ಆಂಧ್ರಪ್ರದೇಶ-ಕರ್ನಾಟಕದ ನಡುವೆ ಸಂಪರ್ಕ ವೃದ್ಧಿಸಲಿದೆ. ಕೇಂದ್ರ ಸರ್ಕಾರದಿಂದ ಈ ಯೋಜನೆಗೆ ಅನುಮೋದನೆ ಪಡೆಯಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು. ಹಾಗಾದರೆ ಇದಕ್ಕೆ ತಗಲುವ ವಚ್ಚ ಎಷ್ಟು ಎಂದು ಇಲ್ಲಿ ತಿಳಿಯಿರಿ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟೀಯ ಹೆದ್ದಾರಿ ವಿಭಾಗ ಹಾಗೂ ರಾಷ್ಟೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಚಳ್ಳಕೆರೆ ತಾಲ್ಲೂಕಿನ 8,000 ಹೆಕ್ಟೇರ್ ಪ್ರದೇಶದಲ್ಲಿ ಐ.ಎಸ್.ಎಸ್.ಸಿ, ಇಸ್ರೋ, ಡಿ.ಆರ್.ಡಿ.ಓ ಸಂಸ್ಥೆಗಳ ಸ್ಥಾಪನೆಯಿಂದ ಚಳ್ಳಕೆರೆ ದೇಶದ ಪ್ರಮುಖ ನಗರವಾಗಿ ಮುನ್ನೆಲೆಗೆ ಬಂದಿದೆ.
ಚಳ್ಳಕೆರೆ ನಗರ ವ್ಯಾಪ್ತಿಯ ರಸ್ತೆಗಳು ಸರಿಯಿಲ್ಲ. ಈ ರಸ್ತೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರವು ಅಭಿವೃದ್ಧಿಪಡಿಸುತ್ತಿಲ್ಲ. ಆದ್ದರಿಂದ ಚಳ್ಳಕೆರೆ ನಗರ ಪ್ರದೇಶದ 5.7 ಕಿಲೋ ಮೀಟರ್ ರಸ್ತೆಯನ್ನು 50 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಬಾರಿಗೆ ಅಭಿವೃದ್ಧಿ ಪಡೆಯಲು ಭಾರತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆದುಕೊಳ್ಳಲಾಗುವುದು ಎಂದು ಸಂಸದ ಗೋವಿಂದ ಎಂ ಕಾರಜೋಳ ಭರವಸೆ ನೀಡಿದರು.
ಬಿ.ಜೆ.ಕೆರೆ ಹೆದ್ದಾರಿ: 1.48 ಕೋಟಿ ರೂಪಾಯಿ ವೆಚ್ಚದ ಫೂಟ್ ಓವರ್ ಬ್ರಿಡ್ಜ್ ನಿರ್ಮಾಣ ಮೊಳಕಾಲ್ಮೂರು ತಾಲ್ಲೂಕು ಬಿ.ಜಿ.ಕೆರೆ ಬಳಿಯ ಹೆದ್ದಾರಿ ಕಾಮಗಾರಿಯಿಂದ ಬಿ.ಜಿ.ಕೆರೆ ಗ್ರಾಮ ಎರಡು ಸೀಳಾಗಿ ಓಳಾಗಿದ್ದು, ಪ್ರತಿನಿತ್ಯ ಜನರು-ಶಾಲಾ ಮಕ್ಕಳು ಓಡಾಟ ಮಾಡಲು ತೊಂದರೆಯಾಗಿರುವ ಕುರಿತು ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿವೆ. ಸಮಸ್ಯೆ ನಿವಾರಣೆಗಾಗಿ 1.48 ಕೋಟಿ ರೂಪಾಯಿ ವೆಚ್ಚದ ಫೂಟ್ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದರಿಂದ ಶಾಲಾ ಮಕ್ಕಳು ಹಾಗೂ ಸ್ಥಳೀಯರಿಗೆ ಉಪಯೋಗವಾಗಲಿದೆ ಎಂದು ತಿಳಿಸಿದರು.
ಹಿರಿಯೂರು-ಹುಳಿಯಾರು ಹೆದ್ದಾರಿಯ 31.3 ಕಿಲೋ ಮೀಟರ್ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ 26 ಕಿಲೋ ಮೀಟರ್ ಹಾಗೂ ಹೊಸದುರ್ಗ-ಹೊಳಲ್ಕೆರೆ ಹೆದ್ದಾರಿಯ 31.72 ಕಿಲೋ ಮೀಟರ್ ರಸ್ತೆ ಕಾಮಗಾರಿಯಲ್ಲಿ 26 ಕಿಲೋ ಮೀಟರ್ ರಸ್ತೆ ನಿರ್ಮಿಸಲಾಗಿದೆ. ಎರಡು ಕಾಮಗಾರಿಗಳ ಪೈಕಿ ಬಾಕಿ ಇರುವ 5 ಕಿಲೋ ಮೀಟರ್ ರಸ್ತೆಗಳನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಕಡೂರು-ಹೊಸದುರ್ಗ ಹೊಸ ಹೆದ್ದಾರಿ ಕಾಮಗಾರಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. 184 ಕೋಟಿ ವೆಚ್ಚದಲ್ಲಿ 48 ಕಿಲೋ ಮೀಟರ್ ಹೆದ್ದಾರಿ ನಿಮಾರ್ಣಕ್ಕೆ ಶೀಘ್ರದಲ್ಲಿ ಪೂಜೆ ಮಾಡಿ ಕೆಲಸ ಪ್ರಾರಂಭಿಸಲಾಗುವುದು. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 353 ಕಿಲೋ ಮೀಟರ್ ಉದ್ದ ರಾಷ್ಟೀಯ ಹೆದ್ದಾರಿ ಹಾದು ಹೋಗಿದೆ.












Click it and Unblock the Notifications