ಮೈಸೂರಿನಲ್ಲಿದೆ ಮರಳು ಮ್ಯೂಸಿಯಂ: ಹೇಗಿದೆ..? ಎಲ್ಲಿದೆ..? ಹೆಚ್ಚಿನ ಮಾಹಿತಿ ಇಲ್ಲಿದೆ.
ಮೈಸೂರು, ಮೇ 12 : ಮೈಸೂರು ನಗರಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ನಗರಕ್ಕೆ ಆಗಮಿಸಿದರವರೆಲ್ಲರೂ ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯುವುದು ಮಾಮೂಲಿಯಾಗಿದೆ. ಹೀಗೆ ತೆರಳುವ ಪ್ರವಾಸಿಗರನ್ನು ಚಾಮುಂಡಿಬೆಟ್ಟದ ತಪ್ಪಲಿನಲ್ಲಿಯೇ ಸ್ವಾಗತಿಸಲೇನೋ ಎಂಬಂತೆ ನಿರ್ಮಾಣವಾಗಿರುವುದೇ ಮರಳು ಮ್ಯೂಸಿಯಂ.
ಇದು ಮೈಸೂರು ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರುತ್ತಿದ್ದು, ಪ್ರವಾಸಿಗರು ಇದನ್ನು ನೋಡಿ ಅಚ್ಚರಿ ಪಡುತ್ತಾರೆ. ಇಲ್ಲಿ ಮರಳಿನಲ್ಲಿ ನಿರ್ಮಾಣವಾಗಿರುವ ಶಿಲ್ಪ ಕಲಾಕೃತಿಗಳನ್ನು ನೋಡಿ ಅದರ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಾರೆ. ಮ್ಯೂಸಿಯಂ ತುಂಬಾ ಓಡಾಡಿದ ಮೇಲೆ ಇದನ್ನು ನಿರ್ಮಾಣ ಮಾಡಿದ ಶಿಲ್ಪ ಕಲಾವಿದೆ ಗೌರಿ ಅವರ ಪ್ರತಿಭೆಗೊಂದು ಸೆಲ್ಯೂಟ್ ಹೊಡೆಯ ಬೇಕೆನಿಸುತ್ತದೆ.

ಮೈಸೂರಿಗೆ ತೆರಳುವ ಪ್ರವಾಸಿಗರಿಗೆ ಖುಷಿ ಕೊಡಲೆಂದೇ ಹಲವು ತಾಣಗಳಿವೆ. ಅವುಗಳ ನಡುವೆ ಖಾಸಗಿ ಒಡೆತನದಲ್ಲಿರುವ ಮ್ಯೂಸಿಯಂಗಳು ಆಕರ್ಷಣೀಯವಾಗಿವೆ. ಹೀಗಾಗಿ ನಗರದಲ್ಲಿ ವಾಸ್ತವ್ಯ ಹೂಡುವ ಪ್ರವಾಸಿಗರು ಆರಾಮಾಗಿ ಇಲ್ಲಿರುವ ಪ್ರವಾಸಿ ತಾಣಗಳನ್ನು ನೋಡಿ ಖುಷಿ ಪಡುತ್ತಾ ತಮ್ಮ ಪ್ರವಾಸದ ಮಜಾ ಅನುಭವಿಸಲು ಸಾಧ್ಯನವಾಗಲಿದೆ.
ಮೈಸೂರು ಸ್ಯಾಂಡ್ ಸ್ಕಲ್ಪ್ಚರ್ ಮ್ಯೂಸಿಯಂ
ಇನ್ನು ಶಿಲ್ಪಕಲಾವಿದೆ ಗೌರಿ ಅವರು ವಿಶೇಷ ಸಂದರ್ಭಗಳಲ್ಲಿ ಮರಳಿನ ಶಿಲ್ಪ ರಚಿಸಿ ಗಮನಸೆಳೆಯುತ್ತಲೇ ಬಂದಿದ್ದಾರೆ. ಪ್ರತಿ ವರ್ಷವೂ ಏನಾದರೊಂದು ಶಿಲ್ಪಗಳನ್ನು ವಿಭಿನ್ನ ಮತ್ತು ವಿಶಿಷ್ಟವಾಗಿ ರಚಿಸಿ ಜನಮನವನ್ನು ಸೆಳೆಯುತ್ತಾರೆ. ಈ ಹಿಂದೆ ಯೋಗ ಡೇಗೆ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ ವೇಳೆ ಮೋದಿಯವರ ಶಿಲ್ಪ ರಚಿಸಿ ಭೇಷ್ ಎನಿಸಿಕೊಂಡಿದ್ದರು.
ಚಾಮುಂಡಿಬೆಟ್ಟಕ್ಕೆ ತೆರಳುವ ರಸ್ತೆಯ ಕೆ.ಸಿ.ಲೇಔಟ್ ನಲ್ಲಿ ಮೈಸೂರು ಸ್ಯಾಂಡ್ ಸ್ಕಲ್ಪ್ಚರ್ ಮ್ಯೂಸಿಯಂ ಇದೆ. ಇದು ಮರಳು ಶಿಲ್ಪಕಲಾವಿದೆ ಗೌರಿ ಅವರ ಕನಸು ಎಂದರೆ ತಪ್ಪಾಗಲಾರದು. ಮೈಸೂರಿನಲ್ಲಿ ಮೇಣದ ಶಿಲ್ಪಗಳ ಮ್ಯೂಸಿಯಂ ನಂತೆ ಇದು ಕೂಡ ಎಲ್ಲರ ಗಮನಸೆಳೆಯುತ್ತದೆ. ಪ್ರವಾಸಿಗರ ಮೆಚ್ಚುಗೆಗೂ ಪಾತ್ರವಾಗಿದೆ.

ಕಲಾವಿದೆ ಗೌರಿ ಪರಿಚಯ
ಇನ್ನು ಮರಳು ಶಿಲ್ಪ ಕಲಾವಿದೆ ಎಂ.ಎನ್. ಗೌರಿ ಅವರ ಬಗ್ಗೆ ಹೇಳ ಬೇಕೆಂದರೆ, ಕರ್ನಾಟಕ ವಿಶ್ವವಿದ್ಯಾಲಯದಿಂದ ಮಾಸ್ಟರ್ಸ್ ಇನ್ ಫೈನ್ ಆರ್ಟ್ಸ್ ಡಿಗ್ರಿ ಪಡೆದಿದ್ದು, ಹತ್ತಾರು ವರ್ಷಗಳಿಂದ ಮರಳಿನ ಕಲಾಕೃತಿ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಕಡಲ ತೀರದಲ್ಲಿ ಮರಳಿನ ಶಿಲ್ಪಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅಲ್ಲಿ ಮರಳಿನ ಮ್ಯೂಸಿಯಂ ಕೂಡ ಇರುತ್ತದೆ. ಇದೆಲ್ಲವನ್ನು ನೋಡಿದ್ದ ಅವರು ತಾವೇಕೆ ಒಂದು ಮರಳಿನ ಮ್ಯೂಸಿಯಂನ್ನು ಮೈಸೂರಿನಲ್ಲಿ ನಿರ್ಮಾಣ ಮಾಡಬಾರದು ಎಂದು ಆಲೋಚನೆ ಮಾಡಿದರು.
ಇಲ್ಲಿ ಅವರಿಗೆ ತನ್ನ ಪ್ರತಿಭೆಯನ್ನು ಅನಾವರಣಗೊಳಿಸುವುದು ಬಹುಮುಖ್ಯವಾಗಿತ್ತು. ಜೊತೆಗೆ ಪ್ರವಾಸಿಗರನ್ನು ಸೆಳೆಯುವ ಮೈಸೂರಿನಲ್ಲಿ ಒಂದು ಮರಳಿನ ಮ್ಯೂಸಿಯಂ ಮಾಡಲೇ ಬೇಕೆಂಬ ನಿರ್ಧಾರ ಮಾಡಿದರು. ಅದರ ಫಲವಾಗಿ 2014ರಲ್ಲಿ ಹತ್ತರಿಂದ ಹದಿಮೂರು ಚದರಡಿ ವಿಸ್ತೀರ್ಣದಲ್ಲಿರುವ ಮೈಸೂರು ಸ್ಯಾಂಡ್ ಸ್ಕಲ್ಪ್ಚರ್ ಮ್ಯೂಸಿಯಂ ಆರಂಭಗೊಂಡಿತು.
ಪ್ರವಾಸಿಗರಿಗೆ ಅಭಯ ನೀಡುವ ಗಣಪತಿ
ಇವತ್ತು ಈ ಮರಳಿನ ಮ್ಯೂಸಿಯಂನಲ್ಲಿ ನೂರಾರು ಶಿಲ್ಪಗಳು ಅರಳಿದ್ದು, ತನ್ನದೇ ಆದ ವೈಶಿಷ್ಟ್ಯತೆಯಿಂದ ಗಮನಸೆಳೆಯುತ್ತಿದೆ. ಅಷ್ಟೇ ಅಲ್ಲದೆ ಮೈಸೂರಿಗೊಂದು ಆಕರ್ಷಣೆಯಾಗಿಯೂ, ಪ್ರವಾಸಿ ತಾಣವಾಗಿಯೂ ಗಮನಸೆಳೆಯುತ್ತಿದೆ. ಇಲ್ಲಿಗೆ ಪ್ರವಾಸಿಗರು ಭೇಟಿ ನೀಡಿದ್ದೇ ಆದರೆ ಇಲ್ಲಿ ನಿರ್ಮಾಣಗೊಂಡ ಸುಮಾರು ಹದಿನೈದು ಅಡಿಯ ಸುಂದರ ಗಣಪತಿಯ ಮರಳಿನ ಶಿಲ್ಪ ನಮ್ಮನ್ನು ಸ್ವಾಗತಿಸುತ್ತದೆ.

ಈ ಮರಳಿನ ಶಿಲ್ಪ ನಿರ್ಮಾಣಕ್ಕೆ ನೂರಾರು ಲೋಡ್ ಮರಳನ್ನು ಬಳಸಿದ್ದು, ಎಲ್ಲ ಶಿಲ್ಪಗಳನ್ನು ಶೃದ್ಧೆಯಿಂದ ಮಾಡಿದ್ದು, ವಿಭಿನ್ನ ಮತ್ತು ವೈಶಿಷ್ಟ್ಯ ಪೂರ್ಣವಾಗಿರುವುದು ಎದ್ದು ಕಾಣಿಸುತ್ತದೆ. ಇದರಲ್ಲಿ ಮೈಸೂರು ಮಹಾರಾಜರ ಅಧಿದೇವತೆ ಚಾಮುಂಡೇಶ್ವರಿ, ವಿಶ್ವವಿಖ್ಯಾತ ದಸರಾದ ಜಂಬೂಸವಾರಿ, ಕೃಷ್ಣನ ಗೀತೋಪದೇಶ ಹೀಗೆ ಹಲವು ಕಲಾಕೃತಿಗಳು ಕಣ್ಮನ ಸೆಳೆಯುತ್ತದೆ.
ಏನಾದರೊಂದು ಸಾಧಿಸಬೇಕೆನ್ನುವ ಛಲಗಾತಿ
ಕಲಾವಿದೆ ಗೌರಿ ಅವರು ಸದಾ ಏನಾದರೊಂದು ಸಾಧಿಸಬೇಕೆನ್ನುವ ಛಲಗಾತಿಯಾಗಿದ್ದು, ತನ್ನ ಕಲಾ ಪ್ರತಿಭೆಯ ಮೂಲಕ ಈಗಾಗಲೇ ಹಲವು ರೀತಿಯ ಮರಳಿನ ಶಿಲ್ಪಗಳನ್ನು ನಿರ್ಮಿಸಿದ್ದು ಅದರಲ್ಲಿ ಕೆಲವು ಅವರಿಗೆ ಗೌರವವನ್ನು ತಂದು ಕೊಟ್ಟಿದೆಯಲ್ಲದೆ, ಖ್ಯಾತಿಯನ್ನು ಇಮ್ಮಡಿಸಿದೆ.
ಇದುವರೆಗೆ ಹೊರಗೆ ಹೋಗಿಯೂ ಅವರು ಮರಳಿನ ಕಲಾಕೃತಿಗಳನ್ನು ರಚಿಸಿ ಭೇಷ್ ಎನಿಸಿಕೊಂಡಿದ್ದಾರೆ. ಸುತ್ತೂರಿನ ಅಖಿಲ ಭಾರತ ವೀರಶೈವ ಮಹಾ ಸಭಾದಲ್ಲಿ ಮರಳಿನಿಂದ ಮಾಡಿದ ಪರಮೇಶ್ವರ, ಲಿಂಗ ಹಾಗೂ ಹಾವಿನ ಕೃತಿಗಳು, ಮಡಿಕೇರಿಯ ದಸರಾದಲ್ಲಿ ಕಲಾಕೃತಿ ನಿರ್ಮಿಸಿ ಗೌರವ ಪಡೆದಿದ್ದರೆ, ಎ ಟ್ರಿಬ್ಯೂಟ್ ಟು ಅಬ್ದುಲ್ ಕಲಾಂ ಶಿಲ್ಪ ಮೆಚ್ಚುಗೆಗೆ ಪಾತ್ರವಾಗಿತ್ತು.
ಮರಳಿನಲ್ಲಿಯೇ ಪ್ರತಿಭೆ ಅನಾವರಣ
ಇನ್ನು ತಿರುಚ್ಚಿಯಲ್ಲಿ ಮಾಡಿದ ಮರಳಿನ ಕಲಾ ಕೃತಿ ಇದುವರೆಗೆ ರಚಿಸಿರುವ ಮರಳಿನ ಶಿಲ್ಪಗಳಲ್ಲಿ ಅತಿದೊಡ್ಡದಾಗಿದೆ. ಇದು 12 ಅಡಿ ಎತ್ತರ, 20 ಅಡಿ ಉದ್ದ ಹಾಗೂ 60 ಅಡಿ ಅಗಲದಲ್ಲಿ ನಿರ್ಮಿಸಲಾಗಿತ್ತು. ಸದಾ ಉತ್ಸಾಹಿ ಮತ್ತು ಏನಾದರೊಂದು ಸಾಧಿಸಲೇ ಬೇಕೆಂಬ ಛಲ ತೊಟ್ಟಿರುವ ಕಲಾವಿದೆ ಗೌರಿ ಎಂದರೆ ತಪ್ಪಾಗಲಾರದು.
ಮರಳಿನ ಮೂಲಕವೇ ತನ್ನ ಪ್ರತಿಭೆಯನ್ನು ಶಿಲ್ಪ ಪ್ರೇಮಿಗಳಿಗೆ ಸಂತಸವನ್ನು ಉಣಬಡಿಸುತ್ತಾ ಸಾಗುತ್ತಿದ್ದಾರೆ. ಇವರು ಇನ್ನಷ್ಟು ಸಾಧನೆ ಮಾಡಲಿ ಅಷ್ಟೇ ಅಲ್ಲದೆ ಇವರ ಕನಸಾಗಿರುವ ಮರಳು ಮ್ಯೂಸಿಯಂ ಇನ್ನಷ್ಟು ಖ್ಯಾತಿ ಪಡೆಯಲಿ ಎಂಬುದೇ ನಮ್ಮ ಆಶಯ.












Click it and Unblock the Notifications